ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯದ ಭವಿಷ್ಯ?

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

ಜ್ಯೋತಿಷ್ಯ ಶಾಸ್ತ್ರ ಎಂದ ಕೂಡಲೇ, ಶಿಕ್ಷಣದ ಕೇಸರೀಕರಣ, ಗಲಾಟೆಗಳದ್ದೇ ನೆನಪಾಗುತ್ತದೆ. ವಿದ್ಯಾರ್ಥಿಗಳು ಬಯಸಿದರೆ ಜ್ಯೋತಿಷ್ಯ ಶಾಸ್ತ್ರವನ್ನು ಅಳವಡಿಸಿಕೊಳ್ಳುವುದಾಗಿ ವಿವಿಯ ಉಪಕುಲಪತಿಗಳು ಮೆತ್ತಗೆ ಹೇಳಿದರೂ ಎಸ್‌ಎಫ್‌ಐ, ಎನ್‌ಎಸ್‌ಯುಐ ವಿದ್ಯಾರ್ಥಿಸಂಘಗಳು ಮುಷ್ಕರ ಹೂಡಿ, ಕಾಲೇಜಿಗೆ ರಜೆ ದಯಪಾಲಿಸುತ್ತಾರೆ. ಎಬಿವಿಪಿ ಸಂಘಟನೆಯ ಬೃಹತ್‌ ಕಾರ್ಯಕ್ರಮದ ಅಧ್ಯಕ್ಷಗಿರಿಗೆ ವಿಸಿಗೆ ಬುಲಾವ್‌ ಬರುತ್ತದೆ.

ಈ ಎಲ್ಲ ಪರವಿರೋಧದ ಕೋಳಿ ಜಗಳದ ನಡುವೆಯೇ ಜ್ಯೋತಿಷ್ಯ ಶಾಸ್ತ್ರದ ಬೋಧನೆಯನ್ನು ದೇಶದ ಏಳು ವಿಶ್ವ ವಿದ್ಯಾಲಯಗಳು ಈಗಾಗಲೇ ಆರಂಭಿಸಿವೆ. ಈ ವಿಷಯವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದ ಅಧ್ಯಕ್ಷ ಡಾ. ಹರಿ ಗೌತಮ್‌ ಅವರೇ ಹೇಳಿದ್ದಾರೆ.

ಜ್ಯೋತಿಷ್ಯ ಗಂಭೀರ ವಿಷಯವೇ ?

ಸಮಾರಂಭಗಳಿಗೆ ಹೋದಾಗಲೆಲ್ಲ ರಸ್ತೆ ಹೊಂಡ ಮುಚ್ಚುವುದಾಗಿ ಭಾಷಣ ಮಾಡಿ ಮಾಡಿ ಬೋರಾಗಿರುವ ಊರಿನ ರಾಜಕಾರಣಿಗಳಿಗೆ ಜ್ಯೋತಿಷ್ಯ ಒಂದು ಹೊಸ ವಿಷಯ ಸಿಕ್ಕ ಹಾಗೆ. ಅಸಲಿಗೆ, ಜ್ಯೋತಿಷ್ಯ ಶಾಸ್ತ್ರ ಕಲಿಯುವುದು ಲಾಭದಾಯಕವೇ ಎಂಬ ಬಗ್ಗೆ ಭಾಷಣಗಳಾಗಿವೆ. ಅಧ್ಯಯನ ನಡೆದಿಲ್ಲ. ಭಾಷಣ ಹೊಡೆಯುವವರಿಗೆ ಜ್ಯೋತಿಷ್ಯದ ಜ್ಞಾನ, ಲಾಭಗಳು ಗಂಭೀರ ವಿಷಯವಲ್ಲ.

ವಾಸ್ತವಕ್ಕೆ ಮಣ್ಣು ಹಾಕಿ, ಈಗಿನ ಟ್ರೆಂಡ್‌ ಹೇಗಿದೆ ಅಂತ ಒಂದು ಸುತ್ತು ನೋಡಿದರೆ ಆಶ್ಚರ್ಯವಾಗುತ್ತದೆ. ಉದಾಹರಣೆಗೆ ಜ್ಯೋತಿಷ್ಯದ ಹಾಗೆಯೇ ವಿವಿಯಲ್ಲಿ ವಾಸ್ತು ಅಧ್ಯಯನ ಅವಕಾಶವನ್ನು ಒದಗಿಸುವ ಬಗ್ಗೆ ಕೇಂದ್ರ ಸರಕಾರ ಪಿಸು ಮಾತನಾಡಿದರೂ ಸಿಕ್ಕಾಪಟ್ಟೆ ಗಲಾಟೆ, ಪ್ರತಿಭಟನೆಗಳು ನಡೆಯಬಹುದು. ಆದರೆ, ಪುಸ್ತಕ ಮಳಿಗೆಗಳಲ್ಲಿ ಪುಸ್ತಕಗಳು ಚಕಚಕನೆ ಖರ್ಚಾಗುತ್ತಿವೆ ಅಂತ ಪುಸ್ತಕ ವ್ಯಾಪಾರಿಗಳು ಹೇಳುತ್ತಾರೆ. ಇದು ಜ್ಯೋತಿಷ್ಯಕ್ಕೂ ಹೊರತಲ್ಲ. ಆರಂಭ ಜ್ಯೋತಿಷ್ಯ ಪುಸ್ತಕ ಹಿಡಿದುಕೊಂಡು ತನ್ನ ಭವಿಷ್ಯವನ್ನು ಅಂಗೈಯಲ್ಲಿ ನೋಡಲು ಸಾಕಷ್ಟು ಮಂದಿ ಹೆಣಗುತ್ತಾರೆ.

ಏಳು ವಿವಿಗಳಲ್ಲಿ ಜ್ಯೋತಿಷ್ಯ ಪಾಠ ನಡೀತಿದೆ

ಹರಿ ಗೌತಮ್‌ ಒದಗಿಸುವ ಅಂಕಿ ಅಂಶದ ಪ್ರಕಾರ ಈಗಾಗಲೇ 41 ವಿಶ್ವ ವಿದ್ಯಾಲಯಗಳು ಜ್ಯೋತಿಷ್ಯ ಶಾಸ್ತ್ರ ಬೋಧನೆಗೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿವೆ. ಅದರಲ್ಲಿ ಈಗಾಗಲೇ 19ವಿವಿಗಳಿಗೆ ಅನುಮತಿ ನೀಡಲಾಗಿದೆ. ಗೌತಮ್‌ ಮಾಡುವ ಪುಟ್ಟ ಭಾಷಣದ ತಿರುಳು ಹೇಳುವುದಿದ್ದರೆ :

  • ದೇಶದ ಯುವಜನಾಂಗಕ್ಕೆ ಭಾರತದ ಪೂರ್ವಿಕರು, ವಿಜ್ಞಾನಿಗಳು, ಈ ಹಿಂದೆ ಸಾಧಿಸಿರುವುದನ್ನು , ಪಠ್ಯ ಕ್ರಮದಲ್ಲಿ ಅಥವಾ,ಇನ್ಯಾವುದೋ ಕ್ರಮದಲ್ಲಾದರೂ ಬೋಧಿಸಬೇಕು.
  • ಇಂದಿನ ನಮ್ಮ ಶಿಕ್ಷಣ ಪಾಶ್ಚಿಮಾತ್ಯರ ಅನುಕರಣೆ. ಭಾರತದ ವಿಜ್ಞಾನಿಗಳ ಸಾಧನೆ ನಮ್ಮ ಯುವ ಜನಾಂಗಕ್ಕೆ ಗೊತ್ತೇ ಇಲ್ಲ.
  • ಇಂತಹದ್ದೇ ವಿಷಯವನ್ನು ವಿವಿಯಲ್ಲಿ ಬೋಧಿಸಬೇಕು ಎಂದು ಯುಜಿಸಿ ಯಾವುದೇ ಒತ್ತಡ ಹೇರುತ್ತಿಲ್ಲ. ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮವನ್ನು ರೂಪಿಸಬಹುದು.
ಜ್ಯೋತಿಷ್ಯ ಕಲಿಕೆ ಸಮಗ್ರ ಅಧ್ಯಯನ ರೂಪದಲ್ಲಿ ಸಾಗಬೇಕು ಎಂಬುದು ಈ ಪಠ್ಯವನ್ನು ಸಮರ್ಥಿಸುವ ಎಲ್ಲ ಮಹಾನುಭಾವರ ಅನಿಸಿಕೆ. ಶಲ್ಯ, ಕುಂಕುಮಾಲಂಕೃತ ಕೇಂದ್ರ ಸಚಿವ ಮುರಳೀ ಮನೋಹರ್‌ ಜೋಶಿಯವರಿಂದ ಹಿಡಿದು ನಿಷ್ಠುರವಾದಿ ಟಿಎನ್‌ಶೇಷನ್‌ವರೆಗೆ ಈ ಸಮಗ್ರಅಧ್ಯಯನದ ಆಶಯಗಳು ಹರಿದಿವೆ. ಆದರೆ ವಿಶ್ವವಿದ್ಯಾಲಯಗಳು ಅಳವಡಿಸುವ ಜ್ಯೋತಿಷ್ಯ ಪಠ್ಯದ ಬಗೆಗೆ ಎಲ್ಲಿಯೂ ಚರ್ಚೆಯಾಗಿಲ್ಲ.

ಜ್ಯೋತಿಷ್ಯವನ್ನು ಬೆಂಬಲಿಸುವ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಕೃಪಾ ವ್ಯಾಪ್ತಿಯಲ್ಲಿ ಬರುವ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಈಗಾಗಲೇ ಜ್ಯೋತಿಷ್ಯ ಪಠ್ಯವನ್ನು ಅಳವಡಿಸಲಾಗಿದೆ. ಮೂರು ತಿಂಗಳ ಸರ್ಟಿಫಿಕೇಟ್‌ ರೂಪದಲ್ಲಿ ಅಲ್ಲಿ ಜ್ಯೋತಿಷ್ಯ ಕಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿವಿಗಳಿಗೂ, ಟೀಕಾಕಾರರಿಗೂ ಅನ್ವಯಿಸುವ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

  1. ಮೂರು ತಿಂಗಳ ಸರ್ಟಿಫಿಕೇಟ್‌ ಕೋರ್ಸ್‌ನಲ್ಲಿ ಜ್ಯೋತಿಷ್ಯ ಅಧ್ಯಯನ ಸಾಧ್ಯವೇ ?
  2. ಜ್ಯೋತಿಷ್ಯ ಶಾಸ್ತ್ರ ಬೋಧಕರ ಆಯ್ಕೆ ಮಾನದಂಡಗಳು ಹೇಗಿರಬೇಕು ?
  3. ನಮ್ಮಲ್ಲಿ ಎಲ್ಲ ಡಿಗ್ರಿಗಳು ಒಂದು ಉದ್ಯೋಗವನ್ನು ಅವಲಂಬಿಸಿಯೇ ರೂಪಿತವಾಗಿರುವುದರಿಂದ, ಜ್ಯೋತಿಷ್ಯ ಅಧ್ಯಯನದ ಬಳಿಕ ಮುಂದೇನು ?
  4. ಆನ್ವಯಿಕ ಜ್ಯೋತಿಷ್ಯಶಾಸ್ತ್ರ ( applied astrology )ಬಗೆಗೆ ಸರಕಾರ, ಯುಜಿಸಿ ಏನು ಹೇಳುತ್ತದೆ ?

    ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X