ಚಿನ್ಮಯ ಮಿಷನ್‌ನಲ್ಲಿ ನಾರಾಯಣ ಹೃದಯಾಲಯದ 3ನೇ ಘಟಕ
ಬೆಂಗಳೂರು : ಹೃದಯಾಘಾತಕ್ಕೆ ಈಡಾದ ರೋಗಿಗಳಿಗೆ ತತ್‌ಕ್ಷಣವೇ ಚಿಕಿತ್ಸೆ ಒದಗಿಸುವ ದೃಷ್ಟಿಯಿಂದ ನಾರಾಯಣ ಹೃದಯಾಲಯವು ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ಶನಿವಾರ ತನ್ನ ಮೂರನೇ ಹೃದ್ರೋಗ ಚಿಕಿತ್ಸಾ ಘಟಕ ಆರಂಭಿಸಿತು.
ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳಿಂದ ಸುಸಜ್ಜಿತವಾದ ಈ ಹೃದ್ರೋಗ ಚಿಕಿತ್ಸಾ ಘಟಕ 8 ಹಾಸಿಗೆಗಳ ಸಾಮರ್ಥ್ಯದ್ದಾಗಿದೆ. ಈ ಘಟಕದಲ್ಲಿ ದಿನದ 24 ಗಂಟೆಯೂ ತಜ್ಞ ವೈದ್ಯರ ಸೇವೆ ದೊರಕಲಿದೆ ಎಂದು ಹೃದಯಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ. ದೇವಿಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ಮಹಾನಗರದಲ್ಲಿ ಇಂತಹ ಇನ್ನೂ ನೂರು ಹೃದ್ರೋಗ ಚಿಕಿತ್ಸಾ ಘಟಕ ತೆರೆಯುವ ಅಗತ್ಯ ಇದ್ದು, ಸಂಸ್ಥೆಯು ಈಗಾಗಲೇ ಬೆಂಗಳೂರು ದಂಡು ಪ್ರದೇಶದ ಇಎಸ್‌ಐ ಆಸ್ಪತ್ರೆ, ಪದ್ಮನಾಭನಗರದ ರಾಜಾ ಅಗ್ರಸೇನ ಆಸ್ಪತ್ರೆಗಳಲ್ಲಿ ಘಟಕ ಆರಂಭಿಸಿದೆ ಎಂದರು.
ರಾಜ್ಯ ಸರಕಾರ ಅನುಮತಿ ನೀಡಿದಲ್ಲಿ ರಾಜ್ಯದ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ತೆರೆಯಲು ಹೃದಯಾಲಯ ಸಿದ್ಧವಿದೆ ಎಂದು ಅವರು ತಿಳಿಸಿದರು. ಬಡ ಗ್ರಾಮೀಣ ರೋಗಿಗಳ ನೆರವಿಗಾಗಿ, ಸ್ಥಳೀಯ ಖಾಸಗಿ ವೈದ್ಯರಿಗೆ ಇಸಿಜಿ ಯಂತ್ರೋಪಕರಣ ನೀಡಿ, ಅಲ್ಲಿಯೇ ಹೃದ್ರೋಗಿಗಳಿಗೆ ಪ್ರಥಮ ಚಿಕಿತ್ಸೆ ದೊರಕಿಸಿಕೊಡಲು ಸಂಸ್ಥೆ ಉದ್ದೇಶಿಸಿದೆ ಎಂದು ಡಾ. ಶೆಟ್ಟಿ ಹೇಳಿದರು.
ಬೀದರ್, ಚಾಮರಾಜನಗರ, ಮಂಗಳೂರು, ಕೆಂಚನಹಳ್ಳಿ, ಕುಂದಾಪುರಗಳಲ್ಲಿ ಕೂಡ ಸದ್ಯದಲ್ಲೇ ಹೃದ್ರೋಗ ಚಿಕಿತ್ಸಾ ಘಟಕ ಆರಂಭಿಸಲು ಸಂಸ್ಥೆ ಸಿದ್ಧತೆ ನಡೆಸಿದೆ ಎಂದೂ ಅವರು ತಿಳಿಸಿದರು.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications