ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ-ಮಂಗಳೂರು ರೈಲು ಮಾರ್ಗದಲ್ಲಿರಾಜಕಾರಣಿಗಳ ರೈಲು

By Staff
|
Google Oneindia Kannada News

ಮಂಗಳೂರು : ಆರು ವರ್ಷಗಳ ಹಿಂದೆ ಆರಂಭವಾದ ಹಾಸನ -ಮಂಗಳೂರು ರೈಲು ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸುವ ಕಾರ್ಯ ಸದ್ಯದಲ್ಲಿಯೇ ಪೂರ್ಣವಾಗಲಿದೆ ಎಂಬ ರಾಜಕಾರಣಿಗಳ ಭರವಸೆಯ ಹೊರತಾಗಿಯೂ ರೈಲು ಮಾರ್ಗದ ಕಾರ್ಯ ಪೂರ್ಣವಾಗುವ ಬಗ್ಗೆ ಯಾರಲ್ಲಿಯೂ ನಂಬಿಕೆ ಉಳಿದಿಲ್ಲ.

ಮಂಗಳೂರು ಮತ್ತು ಕೊಡಗನ್ನು ಪ್ರತಿನಿಧಿಸುವ ಸಂಸದ ಧನಂಜಯ ಕುಮಾರ್‌ ಅವರಿಗೆ ಈ ರೈಲ್ವೇ ಕಾಮಗಾರಿ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ಹೇಳುವುದು ಪ್ರತಿಯಾಂದು ಸಭೆಯಲ್ಲಿಯೂ ಭಾಷಣದ ವಸ್ತುವಾಗಿದೆ. ಕಳೆದ ವರ್ಷ , 2000ನೇ ಇಸವಿಯ ಅಂತ್ಯಕ್ಕೆ ರೈಲು ಮಾರ್ಗದ ಪರಿವರ್ತನಾ ಕಾರ್ಯ ಪೂರ್ತಿಯಾಗುತ್ತದೆ ಎಂಬ ಭರವಸೆಗಳು ಕೇಳಿ ಬರುತ್ತಿದ್ದವು. ನಂತರ 2001ನೇ ಇಸವಿಯ ಅಂತ್ಯದೊಳಗೆ ಯೋಜನೆ ಪೂರ್ಣವಾಗುತ್ತದೆ ಎಂಬ ಭರವಸೆ ಬಂತು. ಈಗ ಡಿಸೆಂಬರ್‌ ಬಂದಿದೆ.

ಧನಂಜಯಕುಮಾರ್‌ ಈ ಖಾಯಂ ಭರವಸೆಯನ್ನು ಮರೆತಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಕೇಂದ್ರ ರಾಜ್ಯ ರೈಲ್ವೇ ಮಂತ್ರಿ ರಾಜಗೋಪಾಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ರೈಲ್ವೇ ಗೇಜ್‌ಪರಿವರ್ತನಾ ಕಾರ್ಯ ಪೂರ್ಣವಾಗದಿದ್ದರೆ ಪ್ರತಿಭಟನಾ ಅಭಿಯಾನ ಹಮ್ಮಿಕೊಳ್ಳುವುದಾಗಿ ಬೆದರಿಸಿದ್ದರು.

ಆದರೆ ಸ್ಥಳೀಯ ಕಾಂಗ್ರೆಸ್‌ ನಾಯಕರ ಪ್ರಕಾರ, ಒಂದಿಲ್ಲೊಂದು ರೀತಿಯಲ್ಲಿ ಧನಂಜಯಕುಮಾರ್‌ ಈ ರೈಲ್ವೇ ಯೋಜನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆಯೇ ಹೊರತು ನಿಜವಾದ ಆಸಕ್ತಿಯಿಂದ ಆ ಕಡೆಗೆ ಗಮನ ಹರಿಸುತ್ತಿಲ್ಲ. 285 ಕೋಟಿ ರೂಪಾಯಿಯ ಈ ಯೋಜನೆಯಿಂದ ಮಂಗಳೂರು, ಉಡುಪಿ ತಾಲ್ಲೂಕುಗಳಿಗೆ ಲಾಭವಿದೆ. ನವ ಮಂಗಳೂರು ಬಂದರು ಸೇರಿದಂತೆ ಹಲವು ಉದ್ಯಮ ಸಂಸ್ಥೆಗಳು ರೈಲ್ವೇ ಯೋಜನೆ ಬೇಗನೇ ಪೂರ್ತಿಯಾಗಬೇಕು ಎಂದು ಕೇಂದ್ರವನ್ನು ಆಗ್ರಹಿಸುತ್ತಿದ್ದಾರೆ. ಈಗ ಆಗ್ರಹಿಸುತ್ತಿರುವವರ ಸಾಲಿನಲ್ಲಿ ಕೇಂದ್ರಮಂತ್ರಿ ಧನಂಜಯ ಕುಮಾರ್‌ ಕೂಡ ನಿಂತುಬಿಟ್ಟಿದ್ದಾರೆ.

ರಾಜಕೀಯದತ್ತ ಮುಖಮಾಡಿದರೆ, ಇದೇ ಯೋಜನೆಯಡಿ ಬರುವ, ಹೊಳೆ ನರಸೀಪುರ ರೈಲ್ವೇ ಕಾಮಗಾರಿಗಾಗಿ ಸಾಕಷ್ಟು ಹಣವನ್ನು ದೇವೇಗೌಡರು ಪ್ರಧಾನಿ ಪಟ್ಟ ತಮ್ಮಲ್ಲಿದ್ದಾಗ ಒದಗಿಸಿಕೊಂಡಿದ್ದಾರೆ. ಯೋಜನೆಯ ಉಳಿದ ಭಾಗಕ್ಕೆ ಹಣ ಇಲ್ಲ. ಮಂಜೂರಾದ 16 ಕೋಟಿ ರೂಪಾಯಿ ಸಾಕಾಗುತ್ತಿಲ್ಲ. ಯೋಜನೆಯನ್ನು ನಿರ್ವಹಿಸುತ್ತಿರುವ ಅಧಿಕಾರಿಗಳು ಕೊನೇ ಪಕ್ಷ 30 ಕೋಟಿ ರೂಪಾಯಿಯನ್ನಾದರೂ ಹೊಂದಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

185 ಕಿಮೀ ಉದ್ದದ ಯೋಜನೆಯಲ್ಲಿ 47 ಕೋಟಿ ರೂಪಾಯಿ ವೆಚ್ಚದಲ್ಲಿ ಅರಸೀಕರೆ- ಹಾಸನ (46.66), 1996ರ ಆಗಸ್ಟ್‌ನಲ್ಲಿ ಪೂರ್ತಿಯಾಗಿದೆ. ಹಾಸನ- ಸಕಲೇಶಪುರ(42.6ಕಿಮೀ) ಮಾರ್ಗದ ಕೆಲಸವೂ 1998ರಲ್ಲಿ ಮುಗಿದಿದೆ. ಆದರೆ ಸಕಲೇಶಪುರ- ಮಂಗಳೂರು (95ಕಿಮೀ) ರೈಲು ಮಾರ್ಗ ದ ಕೆಲಸ ಮಾತ್ರ ಹಣವಿಲ್ಲದೆ ನಿಂತು ಬಿಟ್ಟಿದೆ. ಹುಡ್ಕೋ ನೆರವಿನಿಂದ ಮತ್ತು ರಾಜ್ಯ ರೈಲ್ವೇ ನಿಗಮದ ನೆರವಿನಿಂದ ಯೋಜನೆ ಪೂರ್ತಿಯಾಗುತ್ತದೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಧನಂಜಯಕುಮಾರರ ಭರವಸೆ ಗಾಳಿಯ ಗುಳ್ಳೆಯಾಗಿದೆ. ಯೋಜನೆಯ ಹಿಂದೆ ಲಾಬಿ ನಡೆಯುತ್ತಿದೆ ಎಂಬ ವಿಚಾರವನ್ನು ಉಡುಪಿಯ ಎಂಪಿ ವಿನಯ ಕುಮಾರ್‌ ಸೊರಕೆ ಅವರೂ ತಳ್ಳಿ ಹಾಕುವುದಿಲ್ಲ. ನೀವೇನು ಹೇಳುತ್ತೀರಿ ?

(ಇನ್ಫೋ ಇನ್‌ಸೈಟ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X