ಕೆರೆಯ ನೀರನು ಕೆರೆಗೆ ಚೆಲ್ಲಿ , ಅದಕ್ಕಾಗಿ ಮೀನುಗಾರಿಕೆ ನಡೆಸಿ
ಶಿವಮೊಗ್ಗ : ಕೆರೆಗಳಲ್ಲಿ ಮೀನುಗಾರಿಕೆ ನಡೆಸಿ, ಅದರಿಂದ ಬರುವ ಆದಾಯವನ್ನು ಜೀರ್ಣೋದ್ಧಾರಗೊಳ್ಳುವ ಕೆರೆಗಳ ನಿರ್ವಹಣೆಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಉದ್ದೇಶಿಸಿದೆ.
ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಮ್ಮಿ ಕೊಂಡಿರುವ ರೈತ ಕಾಯಕ ಕೆರೆ ಯೋಜನೆಯನ್ನು ಶುಕ್ರವಾರ ಶಿವಮೊಗ್ಗೆಗೆ ಸಮೀಪದ ಸವಳಂಗದ ಹೊಸಕೆರೆ ಅಂಗಳದಲ್ಲಿ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈ ವಿಷಯ ತಿಳಿಸಿದರು. ಮೀನುಗಾರಿಕೆಯಿಂದ ಬರುವ ಆದಾಯವನ್ನು ಕೆರೆಗಳ ನಿರ್ವಹಣೆಗಾಗಿ ಬಳಸಲು ಸಹಕಾರ ಸಂಘಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಕೃಷ್ಣ ಪ್ರಕಟಿಸಿದರು.
ಕೆರೆಗಳ ಹೂಳೆತ್ತಲು ವಿಶ್ವಬ್ಯಾಂಕ್ ನೆರವು ನೀಡಲು ಒಪ್ಪಿದೆ. 2 ಸಾವಿರ ಕೆರೆಗಳ ಹೂಳೆತ್ತಲು ವಿಶ್ವಬ್ಯಾಂಕ್ ಹೇಳುತ್ತಿದ್ದರೂ, 3 ಸಾವಿರ ಕೆರೆಗಳ ಹೂಳೆತ್ತುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಈ ಬಗ್ಗೆ ವಿಶ್ವಬ್ಯಾಂಕ್ ಅಧಿಕಾರಿಗಳೊಂದಿಗೆ ಸದ್ಯದಲ್ಲಿಯೇ ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ನಿರ್ಲಕ್ಷ್ಯವೇ ನಮ್ಮ ಪರಂಪರೆ
ಕೆರೆ ಕಟ್ಟೆಗಳ ನಿರ್ವಹಣೆಯಲ್ಲಿ ಪರಂಪರಾಗತ ನಿರ್ಲಕ್ಷ್ಯಕ್ಕೆ ಹೆಸರಾದವರು ನಾವು. ಇದರಿಂದಾಗಿಯೇ ಕೆರೆಗಳಿಂದು ದುಸ್ಥಿತಿಯಲ್ಲಿವೆ. ಈ ಕೆಟ್ಟ ಸಂಪ್ರದಾಯಕ್ಕೆ ವಿದಾಯ ಹೇಳಲು ರಾಜ್ಯ ಸರ್ಕಾರ ನಿಶ್ಚಯಿಸಿದೆ ಎಂದು ಕೃಷ್ಣ ಹೇಳಿದರು. ರೈತ ಕಾಯಕ ಕೆರೆ ಯೋಜನೆಯನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯದ ರೈತರು ದೇಶಕ್ಕೆ ಮಾದರಿಯಾಗಬೇಕು ಎಂದು ಕಿರು ನೀರಾವರಿ ಸಚಿವ ಕುಮಾರ್ ಬಂಗಾರಪ್ಪ ಆಶಿಸಿದರು. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ನೀರು ಬಳಕೆದಾರರ ಸಹಕಾರ ಸಂಘಕ್ಕೆ ಚಾಲನೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ , ಕೃಷಿ ಸಚಿವ ಟಿ.ಬಿ.ಜಯಚಂದ್ರ, ಕ್ರೀಡಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದ ಐ.ಜಿ. ಸನದಿ, ಶಾಸಕರಾದ ಕರಿಯಣ್ಣ, ಎಚ್.ಎಂ.ಚಂದ್ರಶೇಖರಪ್ಪ , ವಡ್ನಾಳ್ ರಾಜಣ್ಣ ಹಾಗೂ ಡಾ।ವೈ.ನಾಗಪ್ಪ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications