ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರಾಜ್ಯದ 33 ದಶಲಕ್ಷ ಕಿಲೋ ವರ್ಜಿನಿಯಾ ತಂಬಾಕು ಬಿಕರಿಯಾಗಿಲ್ಲ’

By Staff
|
Google Oneindia Kannada News

ಬೆಂಗಳೂರು : ಬೆಂಬಲ ಬೆಲೆ ಕುಸಿತ ಮತ್ತು ಕುಂದಿದ ಬೇಡಿಕೆಯಿಂದ ರಾಜ್ಯದಲ್ಲಿ ಬೆಳೆದಿರುವ 3 ಕೋಟಿ 30 ಲಕ್ಷ ಕಿಲೋನಷ್ಟು ವರ್ಜಿನಿಯಾ ತಂಬಾಕು (ಎಫ್‌ಸಿವಿ) ಮಾರಾಟವಾಗದೆ ಹಾಗೇ ಉಳಿದಿದೆ. ಇದರಿಂದ ತಂಬಾಕು ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕರ್ನಾಟಕ ತಂಬಾಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್‌.ಎಂ.ಅನಂತರಾಮು ಹೇಳಿದ್ದಾರೆ.

ತಂಬಾಕು ಬೆಳೆಗಾರರ ದುಸ್ಥಿತಿಯನ್ನು ಶನಿವಾರ ಸುದ್ದಿಗಾರರೊಡನೆ ಅನಂತರಾಮು ಹೇಳಿಕೊಂಡರು. 5 ಕೋಟಿ 30 ಲಕ್ಷ ಕೆ.ಜಿ.ಯಷ್ಟು ವರ್ಜಿನಿಯಾ ತಂಬಾಕನ್ನು ನಮ್ಮ ರಾಜ್ಯದ ರೈತರು ಬೆಳೆದಿದ್ದಾರೆ. ಆದರೆ ಮಾರಾಟವಾಗಿರುವುದು ಕೇವಲ 2 ಕೋಟಿ ಕಿಲೋ. ದೇಶದಲ್ಲೇ ವರ್ಜಿನಿಯಾ ತಂಬಾಕು ಬೆಳೆಯನ್ನು ಹೆಚ್ಚು ಬೆಳೆಯುವ ದ್ವಿತೀಯ ರಾಜ್ಯ ನಮ್ಮದು ಎಂದರು.

ಕಳೆದ ವರ್ಷ ಪ್ರತಿ ಕಿಲೋ ತಂಬಾಕಿಗೆ 55 ರುಪಾಯಿ ಬೆಂಬಲ ಬೆಲೆ ಸಿಗುತ್ತಿತ್ತು. ಈ ವರ್ಷ 35 ರುಪಾಯಿ ಸಿಗುತ್ತಿದೆ. ಪ್ರತಿ ಕಿಲೋ ತಂಬಾಕು ಬೆಳೆಯಲು ರೈತರಿಗೆ 40ರಿಂದ 45 ರುಪಾಯಿ ಖರ್ಚಾಗಿರುತ್ತದೆ. ಅಂದರೆ, ಕಿಲೋಗೆ 5ರಿಂದ 10 ರುಪಾಯಿ ಲುಕಸಾನು. ಈ ವರ್ಜಿನಿಯಾ ತಂಬಾಕಿನ ವಿದೇಶೀ ವಿನಿಮಯದಿಂದ 1000 ಕೋಟಿ ರುಪಾಯಿಗೂ ಹೆಚ್ಚು ಹಣ ದೇಶದ ಬೊಕ್ಕಸ ತುಂಬುತ್ತಿದೆ. ಹೀಗಿದ್ದೂ ವರ್ಜಿನಿಯಾ ತಂಬಾಕು ಬಿಕರಿಯಾಗದೆ ಗೋದಾಮಿನಲ್ಲಿ ಕೊಳೆಯುತ್ತಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೊದಲೇ ತಂಬಾಕು ಮಾರಾಟ ಡಲ್ಲಾಗಿತ್ತು

ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳನ್ನು ಉಗ್ರರು ಕೆಡವಿದ ನಂತರವಂತೂ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಆಫ್ಘನ್‌ ಯುದ್ಧ ಕೂಡ ತಂಬಾಕು ಕೊಳ್ಳುವವರನ್ನು ಹಿಮ್ಮೆಟ್ಟಿಸಿದೆ. ಇದರಿಂದ ವಿದೇಶೀ ಮಾರುಕಟ್ಟೆ ಸಾಕಷ್ಟು ಸೊರಗಿದೆ. ಸಾಲದ್ದಕ್ಕೆ ಸ್ಥಳೀಯ ನಕಲಿ ಸಿಗರೇಟು ಉತ್ಪಾದಕರ ಹಾವಳಿ. ಜೊತೆಗೆ ಸಿಗರೇಟಿನ ಮೇಲೆ 15 ಪ್ರತಿಶತ ತೆರಿಗೆ. ಇವೆಲ್ಲಾ ತಂಬಾಕು ಬೆಳೆಗಾರರ ಜೀವನಕ್ಕೇ ಕೊಡಲಿ ಪೆಟ್ಟು ಕೊಡುತ್ತಿದೆ ಎಂದು ಹೇಳಿದರು.

ವಿದೇಶೀ ಸಿಗರೇಟುಗಳ ಮೇಲೆ 150 ಪ್ರತಿಶತ ಸುಂಕ ವಿಧಿಸಬಹುದು. ವಿಶ್ವ ವ್ಯಾಪಾರ ಒಪ್ಪಂದದ ನಿಯಮಾವಳಿಗಳ ರೀತ್ಯ ಇದಕ್ಕೆ ಅವಕಾಶವಿದೆ. ಆದರೆ ವಿಧಿಸಿರುವುದು ಶೇ.35 ರಷ್ಟು ಸುಂಕ ಮಾತ್ರ. ನಕಲಿ ಸಿಗರೇಟು ಉತ್ಪಾದಕರ ಜಾಲ ಬಯಲಿಗೆಳೆಯುವ ಪ್ರಯತ್ನಗಳೇ ಆಗುತ್ತಿಲ್ಲ. ಮುಂದಿನ ವಾರ ನಮ್ಮ ಒಕ್ಕೂಟ ದೆಹಲಿಗೆ ತೆರಳಿ, ಸಂಬಂಧಪಟ್ಟ ಸಚಿವರಿಗೆ ತಂಬಾಕು ಬೆಳೆಗಾರರ ಸಮಸ್ಯೆ ಮನವರಿಕೆ ಮಾಡಿಸಲಿದೆ ಎಂದು ಅನಂತರಾಮು ತಿಳಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X