ಗುಲ್ಬರ್ಗಾ ಬಳಿ ಪೊಲೀಸ್ ಕಾರ್ಯಾಚರಣೆ : ಇಬ್ಬರು ಹಂತಕರ ಹತ್ಯೆ
ಬೆಂಗಳೂರು : ಗುಲ್ಬರ್ಗಾ ಜಿಲ್ಲೆಯ ಸಣ್ಣೂರು ಕ್ರಾಸ್ ಬಳಿ ಸೋಮವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಈ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಇಲ್ಲಿ ದೃಢಪಡಿಸಿದ್ದಾರೆ.
ಇದಕ್ಕೂ ಮುನ್ನ ಸೋಮವಾರ ಬೆಳಗಿನ ಝಾವ ವೇಗವಾಗಿ ಬರುತ್ತಿದ್ದ ವಾಹನ ನಿಲ್ಲಿಸಲು ಪ್ರಯತ್ನಿಸಿದ ಸಣ್ಣೂರಿನ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಶರಣ ಅವರ ಮೇಲೆ ಈ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರಿಗೆ ದುಷ್ಕರ್ಮಿಗಳು ಸಣ್ಣೂರು ಕ್ರಾಸ್ ಬಳಿ ಅಡಗಿದ್ದಾರೆ ಎಂಬ ಖಚಿತ ವರ್ತಮಾನ ದೊರೆಯಿತು. ಕೂಡಲೇ ಪೊಲೀಸರು ಈ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಕೊಂದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡಿರುವ ಪೊಲೀಸ್ ಅಧಿಕಾರಿ ಶಿವಶರಣ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಕಾರ್ಯಾಚರಣೆಯಲ್ಲಿ ಹತರಾದ ದುಷ್ಕರ್ಮಿಗಳನ್ನು ಅಶೋಕ್ ಚೌವ್ಹಾಣ್ ಹಾಗೂ ಅಶೋಕ್ ಪಾಟೀಲ್ ಎಂದು ಗುರುತಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ನಿರ್ದೇಶಕ ಎಂ.ಡಿ. ಸಿಂಗ್ ತಿಳಿಸಿದ್ದಾರೆ.
ಒಟ್ಟು ಐವರು ಹಂತಕರು ಯಾತ್ರಾರ್ಥಿಗಳ ಸೋಗಿನಲ್ಲಿ ಗುಲ್ಬರ್ಗಾ ಜಿಲ್ಲೆಯನ್ನು ಪ್ರವೇಶಿಸಿದ್ದು, ಈ ಪೈಕಿ ಇಬ್ಬರನ್ನು ಕೊಂದಿರುವ ಪೊಲೀಸರು ಉಳಿದ ಮೂವರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಯಾತ್ರಾರ್ಥಿಗಳ ವೇಷದಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದಿರುವ ಈ ದುಷ್ಕರ್ಮಿಗಳು ಯಾರು? ಎಂಬ ಬಗ್ಗೆ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಕಾರ್ಯಾಚರಣೆಯಿಂದಾಗಿ ಸಣ್ಣೂರು ಕ್ರಾಸ್ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
(ಪಿ.ಟಿ.ಐ/ಇನ್‌ಫೋ ವಾರ್ತೆ)












Click it and Unblock the Notifications