ಹೊಸೆಯುತ್ತಿದ್ದಾನೆ ಒಸಾಮ ಇನ್ನಷ್ಟು ಸಂಚುಗಳ ಸರಮಾಲೆ- ಇಂಟಲಿಜೆನ್ಸ್
ನ್ಯೂಯಾರ್ಕ್ : ಜಗತ್ತಿನ ದೊಡ್ಡಾತಿದೊಡ್ಡ ದೇಶಗಳು ಭಯೋತ್ಪಾದಕರ ಸಂಭವನೀಯ ದಾಳಿಯ ತವಕದಲ್ಲಿ ಮುಳುಗಿಹೋಗಿವೆ. ಪಶ್ಚಿಮ ಏಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳ ಬೇಹುಗಾರಿಕಾ ದಳಗಳ ಕಣ್ಣಿಗೆ ಬಿದ್ದಿರುವಂತೆ ಒಸಾಮನ ಜಾಲ ಮತ್ತಷ್ಟು ಹುನ್ನಾರಗಳನ್ನು ಹೂಡುತ್ತಿದೆ. ಇಂದೋ ನಾಳೆಯೋ ಎರಗಲಿದೆ ದಾಳಿ ಎನ್ನುವುದು ಇವುಗಳ ವರದಿಯ ಉಪಸಂಹಾರ.
ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವಂತೆ ಅಮೆರಿಕಾ ಬೇಹುಗಾರಿಕಾ ದಳಗಳ ಮಾತನ್ನೇ ಎಲ್ಲಾ ದೇಶಗಳು ನೆಚ್ಚಿಕೊಳ್ಳುತ್ತಿಲ್ಲ. ತಮ್ಮ ತಮ್ಮ ಬೇಹುಗಾರಿಕಾ ಪಡೆಗಳು ಹೇಳೋದನ್ನು ಅನುಸರಿಸಿ ಮಾತ್ರ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿವೆ. ಆದರೆ ಅಮೆರಿಕಾ ಪತ್ತೆ ಮಾಡಿರುವುದಕ್ಕೂ, ಬೇರೆ ದೇಶಗಳು ಪತ್ತೆ ಮಾಡಿರುವುದಕ್ಕೂ ಸಾಕಷ್ಟು ಸಾಮ್ಯತೆ ಇದೆ. ಇನ್ನಷ್ಟು ವಿಮಾನಗಳು ದೊಡ್ಡ ಕಟ್ಟಡಕ್ಕೆ ನುಗ್ಗುತ್ತವೋ, ದೊಡ್ಡದೊಂದು ಬಾಂಬ್ ಸಿಡಿಯುತ್ತದೋ ಅಥವಾ ವೈರಾಣು- ಕ್ರಿಮಿ- ಕೀಟಗಳ ಹರಿಬಿಡುವ ಜೈವಿಕ ದಾಳಿ ನಡೆಯುತ್ತದೋ ಎಂಬುದು ಇನ್ನೂ ಗೊತ್ತಾಗಿಲ್ಲ.
ಫ್ರಾನ್ಸ್, ಬೆಲ್ಜಿಯಮ್, ಜೋರ್ಡನ್, ಟರ್ಕಿ ಹಾಗೂ ತನ್ನ ನೆಲದಲ್ಲಿನ ಅಮೆರಿಕಾ ಬೇಹುಗಾರಿಕಾ ಜಾಲ ಈಗಾಗಲೇ ಒಂದು ವರದಿ ಸಿದ್ಧಪಡಿಸಿದೆ. ಸೆಪ್ಟೆಂಬರ್ 11ರ ದಾಳಿ ನಂತರ ವಿಚಾರಣೆಗೊಳಗಾಗಿರುವವರು ಅದೆಷ್ಟೋ? ದೂರವಾಣಿ ಕದ್ದಾಲಿಕೆಯ ಮಾಹಿತಿ, ಇ- ಮೇಲ್, ಪತ್ರ ವ್ಯವಹಾರಗಳ ದಾಖಲುಗಳನ್ನು ಬೇಹುಗಾರಿಕಾ ದಳಗಳು ಪರಿಶೀಲಿಸಿದ ನಂತರ ತಿಳಿದುಬಂದಿರುವ ಮಹತ್ತರ ವಿಷಯವೆಂದರೆ, ಸೆಪ್ಟೆಂಬರ್ 11ರ ದಾಳಿ ಒಸಾಮನಿಗೆ ಗೊತ್ತಿತ್ತು ಎಂಬುದು. ದಾಳಿಗೆ ಕೆಲ ದಿನಗಳ ಮುನ್ನವಷ್ಟೇ ಹೆಂಡತಿ ಸಿರಿಯಾಗೆ ಕರೆ ಮಾಡಿದ್ದ ಒಸಾಮ, ಬೇಗ ಆಫ್ಘನ್ನಿಗೆ ಮರಳು ಎಂದಿದ್ದ. ಅಮೆರಿಕಾ ಆಫ್ಘನ್ ಮೇಲೆ ಯುದ್ಧ ಸಾರಲಿದೆ ಅನ್ನುವುದನ್ನೂ ಮೊದಲೇ ಲೆಕ್ಕಿಸಿದ್ದ ಒಸಾಮ ಇನ್ನಷ್ಟು ಪ್ರತಿದಾಳಿ ಸಂಚುಗಳನ್ನು ಮಾಡುತ್ತಿದ್ದನಂತೆ.
ಒಟ್ಟಿನಲ್ಲಿ ಒಸಾಮನ ದಂಡಿನ ಸರಸರ ಸಾಕಷ್ಟು ಕಿವಿಗಳನ್ನು ಮುಟ್ಟುತ್ತಿದೆ. ಆದರೂ ಕಣ್ಣಿಗೆ ಬೀಳದ, ಕಿವಿಗೆ ಕೇಳದ ಎಷ್ಟೋ ಉಗ್ರ ನಡೆಗಳಿರುತ್ತವಲ್ಲ. ಅಂದಹಾಗೆ, ಪತ್ರದ ಮೂಲಕ ಆ್ಯಂಥ್ರಾಕ್ಸ್ ರವಾನಿಸಿದ್ದೂ ಒಸಾಮನ ಪಡೆಯಂತೆ.
(ಪಿಟಿಐ)












Click it and Unblock the Notifications