ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಮಾಜ ಘಾತಕರೊಂದಿಗೆ ಸಂಪರ್ಕವುಳ್ಳ ಪೊಲೀಸರ ವಿರುದ್ಧ ಕ್ರಮ’

By Staff
|
Google Oneindia Kannada News

ಬೆಂಗಳೂರು : ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆ, ಕಳ್ಳತನಗಳ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸುತ್ತಿದ್ದು, ಸಮಾಜ ಘಾತಕ ಶಕ್ತಿಗಳ ಜತೆ ಸಂಪರ್ಕ ಹೊಂದಿರುವ ಪೊಲೀಸ್‌ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಲಾಗುವುದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಚಿನ್ನಾಭರಣ ವ್ಯಾಪಾರಿಯ ಕೊಲೆಯೂ ಸೇರಿದಂತೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆಗಳ ಬಗ್ಗೆ ವಿಧಾನ ಮಂಡಳದ ಎರಡೂ ಸದನಗಳ ಶೂನ್ಯವೇಳೆಯಲ್ಲಿ ಪ್ರತಿಪಕ್ಷ ನಾಯಕರು ಮಾಡಿದ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ ಗೃಹ ಸಚಿವರು, ಈ ವಿಷಯವನ್ನು ಸರಕಾರ ತುಂಬಾ ಗಂಭೀರವಾಗಿ ಪರಿಗಣಿಸಿದೆ ಎಂದರು.

ಸಮಾಜ ಘಾತಕ ಶಕ್ತಿಗಳನ್ನು ಸದೆಬಡಿಯಲು ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್‌ ಆಯುಕ್ತರಿಗೆ ಮುಕ್ತ ಅಧಿಕಾರ ನೀಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಬಿಗಿ ಕ್ರಮ ಕೈಗೊಳ್ಳಲು ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಖರ್ಗೆ ಹೇಳಿದರು.

ಸಮಾಜ ದ್ರೋಹಿಗಳೊಂದಿಗೆ ಸಂಪರ್ಕ ಹೊಂದಿ, ಕರ್ತವ್ಯ ಚ್ಯುತಿ ಮಾಡುವ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡುವ ಬದಲು, ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಲಾಗುವುದು ಎಂದೂ ಖರ್ಗೆ ಎಚ್ಚರಿಕೆ ನೀಡಿದರು. ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯಕ್ಕೂ ಅಡ್ಡಿಯಾಗಿದೆ ಎಂಬುದನ್ನು ಖರ್ಗೆ ಒಪ್ಪಿಕೊಂಡರು.

ಪ್ರತಿಪಕ್ಷ ನಾಯಕರುಗಳಾದ ಪಿ.ಜಿ.ಆರ್‌. ಸಿಂಧ್ಯಾ, ಬಸವರಾಜ ಬೊಮ್ಮಾಯಿ, ಸುರೇಶ್‌ ಕುಮಾರ್‌ ಮೊದಲಾದವರು, ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಂದಾಗಿ ರಾಜ್ಯದ ಜನತೆ ಭಯಭೀತರಾಗಿದ್ದಾರೆ, ಇದಕ್ಕೆ ರಕ್ಷಣೆಯ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X