ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇ- ಪಾರ್ಲಿಮೆಂಟ್‌’: ಸಿಲಿಕಾನ್‌ ವ್ಯಾಲಿಯಲ್ಲಿ ಜಾಗತಿಕ ಸಂಸತ್ತು

By Staff
|
Google Oneindia Kannada News

ಬೆಂಗಳೂರು: ಭಾರತದ ಸಿಲಿಕಾನ್‌ ವ್ಯಾಲಿ ನಮ್ಮ ನಿಮ್ಮ ಬೆಂಗಳೂರು ಮತ್ತೊಂದು ಅಗ್ಗಳಿಕೆಯತ್ತ ಮುಂದಡಿಯಿಡುತ್ತಿದೆ. ವಿಶ್ವದ ಎಲ್ಲ ನಾಗರಿಕರು ಹಾಗೂ ಸಂಸದರು ಏಕ ಛತ್ರಿಯಡಿ ಸೇರಲು ಅನುಕೂಲವಾಗುವ ‘ನೈಜ ಸಂಸತ್ತು ’ ಅಥವಾ ‘ಇ-ಪಾರ್ಲಿಮೆಂಟ್‌’ ಸಿಲಿಕಾನ್‌ ವ್ಯಾಲಿಯಲ್ಲಿ ರೂಪುಗೊಳ್ಳುತ್ತಿದೆ.

ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಇ- ಪಾರ್ಲಿಮೆಂಟ್‌ ಅನುಕೂಲಕರವೆಂದು ಭಾವಿಸಲಾಗಿದೆ. ಇಂಥ ಅಪರೂಪದ ಸಂಸತ್ತಿನ ಹಿಂದಿನ ರೂವಾರಿಗಳು ಮೂವರು. ಆ ತ್ರಿಮೂರ್ತಿಗಳೆಂದರೆ- ಬ್ರಿಟನ್‌ ಮೂಲದ ‘ಅರ್ಥ್‌ ಆಕ್ಷನ್‌’ ಸ್ವಯಂ ಸೇವಾಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ನಿಕೊಲಸ್‌ ಡನ್‌ಲಪ್‌, ಬ್ರಿಟನ್‌ನ ಸಂಸದ ಬರ್ಟ್‌ ಕೊಯಿಂಡರ್ಸ್‌ ಹಾಗೂ ಕಾಂಗ್ರೆಸ್‌ ಸಂಸದ ಮಣಿಶಂಕರ್‌ ಅಯ್ಯರ್‌.

ಇ- ಪಾರ್ಲಿಮೆಂಟ್‌ನ ಕನಸು ಕಾಣುತ್ತಿರುವ ತ್ರಿಮೂರ್ತಿಗಳು ಜುಲೈ 16 ರಂದು , ತಮ್ಮ ಮಹತ್ತರ ಯೋಜನೆಯ ಕುರಿತು ಸಿಲಿಕಾನ್‌ ಕಣಿವೆಯ ರೂವಾರಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ರಾಜ್ಯ ಐಟಿ ಹಾಗೂ ಬಿಟಿ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ಅವರು ಈ ಪ್ರಯತ್ನಗಳ ಸಂಯೋಜಕರಾಗುವ ಸಾಧ್ಯತೆಗಳಿವೆ.

ಇ-ಪಾರ್ಲಿಮೆಂಟ್‌ ಕೇಂದ್ರವನ್ನಾಗಿ ಬೆಂಗಳೂರನ್ನೇ ಆರಿಸಿಕೊಂಡಿರುವುದೇಕೆ?
ಈ ಗೌರವಕ್ಕೆ ಇಲ್ಲಿನ ಅಪರೂಪದ ಸಾಫ್ಟ್‌ವೇರ್‌ ಪ್ರತಿಭೆ ಹಾಗೂ ಸಂಪನ್ಮೂಲಗಳೇ ಕಾರಣ ಎನ್ನುತ್ತಾರೆ ನಿಕೊಲಸ್‌ ಡನ್‌ಲಪ್‌. ಉದ್ದೇಶಿತ ಇ-ಪಾರ್ಲಿಮೆಂಟ್‌ 130 ರಾಷ್ಟ್ರಗಳ 25 ಸಾವಿರ ಚುನಾಯಿತ ಸಂಸದರನ್ನು ಒಳಗೊಳ್ಳುವ ನಿರೀಕ್ಷೆಯಿದೆ. ಪ್ರಮುಖ ಕೈಗಾರಿಕೋದ್ಯಮಿಗಳು ಹಾಗೂ ಸಂಸದರ ತಂಡದ ಮೂಲಕ ಇ-ಪಾರ್ಲಿಮೆಂಟ್‌ಗೆ ಬೇಕಾಗುವ ನಿಧಿಯನ್ನು ಒಟ್ಟು ಮಾಡುವ ವಿಶ್ವಾಸವನ್ನು ಅದರ ಸಂಘಟಕರು ವ್ಯಕ್ತಪಡಿಸುತ್ತಾರೆ.

ಇ- ಪಾರ್ಲಿಮೆಂಟ್‌ ಮೂರು ಹಂತಗಳಲ್ಲಿ ಕಾರ್ಯಗಳನ್ನು ನಿರ್ವಹಿಸುತ್ತದೆ-

  • ವಿಶ್ವದ ಎಲ್ಲ ಸಂಸದರ ಅಭಿಪ್ರಾಯವನ್ನು ಪಡೆಯುವ ಮೂಲಕ ಇ- ಪಾರ್ಲಿಮೆಂಟ್‌ನ ಗುರಿಯನ್ನು ಗೊತ್ತು ಪಡಿಸಲಾಗುವುದು.
  • ಗೊತ್ತು ಪಡಿಸಿದ ಗುರಿಯನ್ನು ಸಾಧಿಸಲು ಅನುಕೂಲವಾಗುವ ಪ್ರಸ್ತಾವನೆಗಳನ್ನು ತಜ್ಞರ ಗುಂಪು ಅಭಿವೃದ್ಧಿಪಡಿಸುವುದು. ಈ ಸಂಬಂಧ ಪ್ರಮುಖ ನಾಗರಿಕರು, ಸ್ವಯಂ ಸೇವಾ ಸಂಘಟನೆಗಳು, ಶಾಸಕರು ಹಾಗೂ ಅಂತರರಾಷ್ಟ್ರೀಯ ಅಧಿಕಾರಿಗಳ ನಡುವೆ ಚರ್ಚೆ ಏರ್ಪಡಿಸಲಾಗುವುದು ಹಾಗೂ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಸಂವಹನ ಸಾಧಿಸಲಾಗುವುದು.
  • ಇ-ಪಾರ್ಲಿಮೆಂಟ್‌ನ ಒಪ್ಪಿಗೆ ಪಡೆಯುವ ಮಸೂದೆಗಳನ್ನು ರಾಷ್ಟ್ರಗಳಿಗೆ ಪರಿಚಯಿಸಲಾಗುವುದು.
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X