Kannada: ಕರ್ನಾಟಕದಲ್ಲಿರುವ ಬ್ಯಾಂಕ್‌ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್
Kannada: ಕರ್ನಾಟಕದಲ್ಲಿರುವ ಬ್ಯಾಂಕ್‌ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಉಳಿದಿಲ್ಲ ಗೀತರಚನೆಕಾರ ಮತ್ತು ನಿರ್ದೇಶಕ ಕವಿರಾಜ್ ಅವರ ಬರಹ ಇಲ್ಲಿದೆ.
ಹಿಂದೆಲ್ಲಾ ನಮ್ಮ ನಾಡಲ್ಲಿ ಎಲ್ಲೇ ಬ್ಯಾಂಕ್ ಒಳಗೆ ಕಾಲಿಟ್ಟರೆ ದಕ್ಷಿಣ ಕನ್ನಡಕ್ಕೆ ಹೋದಂತೆ ಆಗುತ್ತಿತ್ತು. ಅವರ ಸ್ಪಷ್ಟ ಕನ್ನಡ, ನಡುನಡುವೆ ತುಳು,ಕೊಂಕಣಿ ಭಾಷೆಯ ಕಲರವ ಕಿವಿಗೆ ಮನಸಿಗೆ ಹಿತ ಕೊಡುತ್ತಿತ್ತು. ನಮ್ಮವರೇ ಆದ ಶೆಟ್ಟರು, ಭಟ್ಟರು, ಹೆಗಡೆ, ಪೈಗಳು, ಪ್ರಭುಗಳು ಅದೇನೋ ಸಲುಗೆಯಿಂದ ಹಾಸ್ಯ ಚಟಾಕಿ ಹಾರಿಸುತ್ತಾ ಕೆಲಸ ಮಾಡುತ್ತಿದ್ದರು, ಆಪ್ತತೆಯಿಂದ ಸಲಹೆ ನೀಡುತ್ತಿದ್ದರು.

ಒಂಥರಾ ನಮ್ಮತನ ಅಲ್ಲಿ ಹಾಸುಹೊಕ್ಕಾಗಿತ್ತು. ಆದರೆ ಈಗ ಬ್ಯಾಂಕ್ ಒಳಗೆ ಹೋದರೆ ಉತ್ತರ ಭಾರತಕ್ಕೆ ಹೋದಂತೆ ಆಗುತ್ತೆ. ಅದೊಂದು ಅಪರಿಚಿತತೆ ಕಣ್ಣಿಗೆ ರಾಚುತ್ತದೆ. ಎಲ್ಲವೂ ಹಿಂದಿಮಯ.ಗಂಟಿಕ್ಕಿದ ಮುಖದ ಹಿಂದಿಗರು ನಮ್ಮ ದುಡ್ಡನ್ನೇ ಕೇಳಲು ಹೋದರೂ ಅವರಪ್ಪನ ದುಡ್ಡು ಕೇಳಲು ಬಂದೇವೆನೋ ಎಂಬಂತೆ ವರ್ತಿಸುತ್ತಾರೆ.
ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಎಲ್ಲಾ ದಿಕ್ಕಿನಲ್ಲೂ ತನ್ನದೇ ಆದ ವಿಶೇಷತೆ, ವಿಭಿನ್ನತೆ, ಗಟ್ಟಿತನಗಳಿಂದ ಗುರುತಿಸಿಕೊಂಡ ಹೆಗ್ಗಳಿಕೆ ದಕ್ಷಿಣ ಕನ್ನಡದ್ದು. ಅಂದು ದಕ್ಷಿಣ ಕನ್ನಡವನ್ನು ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಎಂದು ಹೆಮ್ಮೆಯಿಂದ ಗುರುತಿಸಲಾಗುತ್ತಿತ್ತು. ಅವರ ಜಿಲ್ಲೆಯವರೇ ಕಟ್ಟಿ ಬೆಳೆಸಿದ್ದ ವಿಜಯ ಬ್ಯಾಂಕ್ ನೋಡುನೋಡುತ್ತಾ ಬ್ಯಾಂಕ್ ಆಫ್ ಬರೋಡಾ ಆಯಿತು. ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ನುಂಗಿಕೊಂಡಿತು.
ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ (ಇದೊಂದೇ ಉಳಿದಿರುವುದು) ಒಳಗೆ ಸೇರಿತು. ವಿಶ್ವೇಶ್ವರಯ್ಯನವರು ಕಟ್ಟಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಯಿತು. ಜಿಲ್ಲೆಯ ಹೆಮ್ಮೆಯ ಹೆಗ್ಗುರತನ್ನೇ ಕಿತ್ತು ಕೊಳ್ಳಲಾಯಿತು. ಜೊತೆಗೆ ಒಂದು ರೀತಿ ಕೇರಳದ ಹುಡುಗಿಯರು ಎಂದರೆ ನರ್ಸ್ ಎನ್ನುವಂತೆ, ದಕ್ಷಿಣ ಕನ್ನಡದವರು ಎಂದರೆ ಬ್ಯಾಂಕ್ ಉದ್ಯೋಗಿಗಳು ಎಂಬಷ್ಟು ಖ್ಯಾತಿಯಾಗಿದ್ದ ಉದ್ಯೋಗವನ್ನು ಅವರಿಂದ ಈ ಹಿಂದಿಯವರು ಕಸಿದುಕೊಂಡು ಬಿಟ್ಟರು.
ಕೋಮು ವಿಚಾರಕ್ಕೆ ಮಾತ್ರ ಹೊತ್ತಿ ಉರಿಯುವ ದಕ್ಷಿಣ ಕನ್ನಡ ತಣ್ಣಗೆ ಇಂತಹ ಮಹಾ ಮೋಸವನ್ನು ಒಪ್ಪಿಕೊಂಡ ಬಗೆ ಅತ್ಯಂತ ಅಚ್ಚರಿ ಮೂಡಿಸಿತ್ತು. ವಿಷಾದ, ವಿಪರ್ಯಾಸವೆಂದರೆ ಈ ಹಿಂದಿ, ಹಿಂದಿಯವರನ್ನು ಜಾಸ್ತಿ ಬೆಂಬಲಿಸೋದು ಇದೇ ದಕ್ಷಿಣ ಕನ್ನಡದವರೇ. ಹಿಂದಿ ಹೇರಿಕೆ ವಿರುದ್ಧ ನಮ್ಮ ಕೆಲಸ ಬಿಟ್ಟು, ಸಮಯ ಕೊಟ್ಟು ಹೋರಾಡುವ ನಮ್ಮಂತ ಕನ್ನಡ ಪರರನ್ನು ನಿಂದಿಸುವ ಹೆಚ್ಚಿನ ಪ್ರೊಫೈಲ್ ಅಲ್ಲಿ ಅದೇ ಶೆಟ್ಟಿ, ಪೈ, ಭಟ್, ಹೆಗಡೆ ಮುಂತಾದ ಸರ್ ನೇಮ್ ಇರುತ್ತವೆ.
ಕೇವಲ ಕೈ ಬೆರಳೆಣಿಕೆಯಷ್ಟು ವರ್ಷಗಳಲ್ಲಿ ದಕ್ಷಿಣ ಕನ್ನಡವೇ ತವರು ಮನೆಯಾಗಿ, ಇಡೀ ವಿಶ್ವಕ್ಕೆ ಮಾದರಿಯಾಗಿ ಕಟ್ಟಿದ್ದ ಒಂದು ಅದ್ಭುತ ವ್ಯವಸ್ಥೆಯನ್ನೇ ನುಂಗಿ ನೀರು ಕುಡಿದು ಅದರಿಂದ ಅವರ ಇರುವು, ಗುರುತು, ಅಸ್ತಿತ್ವ ಎಲ್ಲವನ್ನೂ ಹೇಳಹೆಸರಿಲ್ಲದಂತೆ ಅಳಿಸಲಾಗಿದೆ. ಹಿಂದಿ ಹೇರಿಕೆ ಹೇಗಾಗುತ್ತದೆ, ಹಿಂದಿ ಹೇಗೆ ನಮ್ಮನ್ನು ನುಂಗುತ್ತದೆ ಎಂಬುದಕ್ಕೆ ಇದಕ್ಕಿಂತ ಜೀವಂತ, ಜ್ವಲಂತ ಉದಾಹರಣೆ ಬೇಕೇ.
ಇಂಗ್ಲೀಷ್ ಕೂಡಾ ದೊಡ್ಡದಾಗಿ ಹೀಗೆ ನಮ್ಮತನವನ್ನು ನುಂಗುತ್ತಿದ್ದರೂ, ಅದು ನಮಗೆ ನೀಡಿದ ಉಪಯೋಗಗಳು ಕೂಡಾ ಅಷ್ಟೇ ದೊಡ್ಡದಾಗಿವೆ. ಜಗತ್ತೇ ಒಂದು ಹಳ್ಳಿಯಾದ ಈ ಹೊತ್ತಲ್ಲಿ ಒಂದು ಲಿಂಕ್ ಭಾಷೆ ಆಗಿ ಇಡೀ ರಾಷ್ಟ್ರಕ್ಕೆ ಅನ್ವಯ ಆಗುವಂತೆ ಸಂವಿಧಾನವೇ ಒಪ್ಪಿಕೊಂಡ ಇಂಗ್ಲೀಷ್ ಇವತ್ತು ನಮಗೆ ಅನಿವಾರ್ಯವೇ ಆಗಿದೆ.
ಆದರೆ ಹಿಂದಿ ಹಾಗಲ್ಲ ಅದಕ್ಕೆ ಕೇವಲ ನುಂಗುವುದಷ್ಟೇ ಗೊತ್ತು, ಉತ್ತರ ಭಾರತದ ಮೈಥಿಲಿ, ಅವಧಿ,ಬುಂದೇಲಿ, ಭಗೇಲಿ, ಘರ್ವಾಲಿ, ಹರ್ಯಾಣ್ವಿ, ಛತ್ತೀಸ್ಗರಿ,ಕುಮೌನಿ ಮುಂತಾದ ಹತ್ತಾರು ಮಾತೃ ಭಾಷೆಗಳನ್ನು ಈಗಾಗಲೇ ಹಿಂದಿ ಎಂಬ ಹೆಬ್ಬಾವು ಕಬಳಿಸಿ ಬಹಳ ಕಾಲವಾಗಿದೆ. ಇದೀಗ ಅದರ ಕಣ್ಣು ನಮ್ಮ ಭಾಷೆಯ ಮೇಲೆ ಬಿದ್ದಿದೆ. ನಮ್ಮ ಹೋರಾಟ ಅದರ ವಿರುದ್ಧ. ಈ ಹಿಂದೆ ಹತ್ತು ಹಲವು ಸಲ ಸ್ಪಷ್ಟಪಡಿಸಿರುವಂತೆ ಈಗಲೂ ಖಂಡಿತವಾಗಿ ನಾವು ಒಂದು ಭಾಷೆಯಾಗಿ ಹಿಂದಿಯನ್ನು, ಹಿಂದಿ ಹಾಡು, ಸಿನಿಮಾ, ಸಾಹಿತ್ಯವನ್ನು ಪ್ರೀತಿಸುತ್ತೇವೆ. ನಮ್ಮ ವಿರೋಧ ಇರುವುದು ನಮ್ಮ ನಾಡಲ್ಲಿ ನಡೆಯುವ ಹಿಂದಿ ಹೇರಿಕೆ ಮತ್ತು ಹಿಂದಿಯವರ ದಬ್ಬಾಳಿಕೆ ಮೇಲೆ ಮಾತ್ರ.
ಅಷ್ಟಕ್ಕೂ ಈಗೇನು ಹಿಂದಿಯನ್ನು ತೆಗೆದು ಹಾಕಿಲ್ಲ, ಪರೀಕ್ಷೆ ನಡೆಯುತ್ತೆ. ಅಂಕಗಳ ಬದಲಿಗೆ ಗ್ರೇಡಿಂಗ್ ನೀಡಲಾಗುತ್ತೆ ಅನ್ನೋದಷ್ಟೇ ಬದಲಾವಣೆ. ದಯವಿಟ್ಟು ಹಿಂದಿ ಪರವಾಗಿ ಮಾತಾಡುತ್ತಿರುವವರು ಪಕ್ಷ, ಸಿದ್ಧಾಂತ, ವ್ಯಕ್ತಿಪೂಜೆಯ ಒಲವಿಂದ ಹೊರಬಂದು ನಮಗೆ ಜ್ಞಾನ, ಬದುಕು ಕೊಟ್ಟ ಮಣ್ಣಿನ ಭಾಷೆಯ ಹಿತದೃಷ್ಟಿಯಿಂದ ಒಮ್ಮೆಯಾದರೂ ಪೂರ್ವಾಗ್ರಹವಿಲ್ಲದೆ ಕಣ್ತೆರೆದು ಯೋಚಿಸಿ.. ನಿರ್ಧಾರಕ್ಕೆ ಬನ್ನಿ.
(ವಿ. ಸೂ - ಪರವಿರಲಿ, ವಿರೋಧವಿರಲಿ ಅಸಭ್ಯ, ನಿಂದನೆಯ ಕಾಮೆಂಟ್ ಡಿಲೀಟ್ ಮಾಡಿ ಅವರನ್ನು ಬ್ಲಾಕ್ ಮಾಡಲಾಗುವುದು)
ಕವಿರಾಜ್, ಗೀತರಚನೆಕಾರ & ನಿರ್ದೇಶಕರು












Click it and Unblock the Notifications