ತಿರುಪತಿಯಲ್ಲಿ ವಸತಿ ಸೌಲಭ್ಯಕ್ಕೆ ಕನ್ನಡ ಭವನ ನಿರ್ಮಾಣ ನಿರ್ಧಾರ
ಬೆಂಗಳೂರು : ಕರ್ನಾಟಕದಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲು ರಾಜ್ಯ ಪ್ರವಾಸೋದ್ಯಮ ಸಚಿವಾಲಯ ನಿರ್ಧರಿಸಿದೆ. ತಿರುಪತಿಯಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಸ್ಥಳಾವಕಾಶ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿಗಳಿಗೆ ರಾಜ್ಯ ಮನವಿ ಮಾಡಿದೆ.
ಈ ವಿಷಯವನ್ನು ರಾಜ್ಯ ಪ್ರವಾಸೋದ್ಯಮ ಸಚಿವ ಆರ್. ರೋಷನ್‌ಬೇಗ್ ತಿಳಿಸಿದ್ದಾರೆ. ತಿರುಪತಿಯಲ್ಲಿ ವಸತಿ ಸೌಲಭ್ಯ ಸೀಮಿತವಾಗಿದ್ದು, ರಾಜ್ಯದಿಂದ ತಿರುಪತಿಗೆ ಹೋಗುವ ಭಕ್ತಾದಿಗಳು ವಸತಿಗಾಗಿ ಪರದಾಟುತ್ತಿದ್ದಾರೆ. ಇದನ್ನು ತಪ್ಪಿಸಲು ವಸತಿ ಸೌಲಭ್ಯ ಕಲ್ಪಿಸಲು ರಾಜ್ಯ ನಿರ್ಧರಿಸಿದೆ. ಆಂಧ್ರ ಸರಕಾರ ನಿವೇಶನ ನೀಡಿದ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಮಂಗಳವಾರ ನವದೆಹಲಿಯಲ್ಲಿ ಚಂದ್ರಬಾಬು ನಾಯ್ದು ಅವರನ್ನು ಭೇಟಿ ಮಾಡಿದ ಬೇಗ್ ಅವರು, ಕರ್ನಾಟಕದ ಈ ಬೇಡಿಕೆಯನ್ನು ತ್ವರಿತಗತಿಯಲ್ಲಿ ಪೂರೈಸುವಂತೆ ಮನವಿ ಮಾಡಿದ್ದಾರೆ. ಹಾಲಿ ತಿರುಪತಿಯಲ್ಲಿರುವ ಛತ್ರ ಮುಜರಾಯಿ ಇಲಾಖೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ವಹಣೆಯಲ್ಲಿದ್ದು, ಅಲ್ಲಿನ ಸೌಲಭ್ಯಗಳು ಸೀಮಿತವಾಗಿವೆ. ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಸಲುವಾಗಿ ಈ ಮನವಿ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.












Click it and Unblock the Notifications