ಕೆಸಿಎಯ ಪ್ರಥಮ ಅಧ್ಯಕ್ಷ ಪ್ರೊ. ನಾಗರಾಜ ರಾವ್ ಇನ್ನಿಲ್ಲ
ಕ್ಯಾಲಿಫೋರ್ನಿಯಾ : ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಕರ್ನಾಟಕ ಸಾಂಸ್ಕೃತಿಕ ಸಂಘದ ಪ್ರಥಮ ಅಧ್ಯಕ್ಷ ಪ್ರೊ. ನಾಗರಾಜ ರಾವ್ ಮೇ 13ರಂದು ಹೃದಯದ ತೊಂದರೆಯಿಂದಾಗಿ ನಿಧನರಾದರು.
ವೃತ್ತಿಯಲ್ಲಿ ಹವಾಮಾನ ತಜ್ಞರಾಗಿದ್ದ ನಾಗರಾಜ ರಾವ್, ತಮ್ಮ ಪತ್ನಿ ಲಲಿತಾ ಮತ್ತು ಇಬ್ಬರು ಪುತ್ರಿಯರಾದ ಜಾನಕಿ ಹಾಗೂ ಶೀಲಾ ಅವರನ್ನು ಅಗಲಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
1973 - 74 ರ ಸಾಲಿನಲ್ಲಿ ಕರ್ನಾಟಕ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿದ್ದ ನಾಗರಾಜ ರಾಯರು ಇಲ್ಲಿನ ಕನ್ನಡಿಗರಿಗೆ ಸಂಕ್ರಾಂತಿ, ಯುಗಾದಿ, ದೀಪಾವಳಿ, ಚೌತಿ ಮುಂತಾದ ಕನ್ನಡಿಗರ ಎಲ್ಲ ಹಬ್ಬಗಳನ್ನು ಆಚರಿಸುವಂತೆ ಒತ್ತಾಯಿಸುತ್ತಿದ್ದರು ಹಾಗೂ ಕನ್ನಡದಲ್ಲಿಯೇ ವ್ಯವಹರಿಸುವಂತೆ ಕನ್ನಡಿಗರನ್ನು ಆಗ್ರಹಿಸುತ್ತಿದ್ದರು. ಅವರ ಮನೆ ಅತಿಥಿ ಸತ್ಕಾರಕ್ಕೆ ಹೆಸರಾದುದು.
ನಾಗರಾಜರು, UCLA, ಕೋರ್ವಾಲಿಸ್, ಮತ್ತು ವಾಷಿಂಗ್ಟನ್ ಡಿಸಿಗಳಲ್ಲಿ ವಿವಿಧ ಉಪನ್ಯಾಸಗಳನ್ನು ನೀಡುತ್ತಿದ್ದರು. ತಮ್ಮ ಕೊನೆಯ ದಿನಗಳಲ್ಲಿಯೂ ಅಧ್ಯಯನ ಕಾರ್ಯಗಳಲ್ಲಿ ಕ್ರಿಯಾ ಶೀಲರಾಗಿದ್ದ ಅವರ ಆತ್ಮ ಶಾಂತಿಗೆ ಶುಕ್ರವಾರ ( ಮೇ 25) ಬಂಧು-ಗೆಳೆಯರಿಂದ ಕೊನೇ ನಮನ ಸಲ್ಲಲಿದೆ.












Click it and Unblock the Notifications