• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಟೆಯ ನೋಡಿಹಿರಾ,ದೇವನಹಳ್ಳಿ ಕೋಟೆಯ...

By Staff
|

ಬೆಂಗಳೂರು : ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪ ಬರುವವರೆಗೆ, ಬೆಂಗಳೂರಿಗೆ ಕೇವಲ 35 ಕಿಲೋ ಮೀಟರ್‌ ದೂರದಲ್ಲಿರುವ ದೇವನಹಳ್ಳಿ ಹೆಸರನ್ನು ಬಹುತೇಕ ಮಂದಿ ಕೇಳಿಯೇ ಇರಲಿಲ್ಲ. ಹೂವಿನಿಂದ ನಾರು ಸ್ವರ್ಗಕ್ಕೆ ಹೋಯ್ತು ಎಂಬಂತೆ, ನೂರಾರು ವರ್ಷಗಳ ಇತಿಹಾಸವುಳ್ಳ ಈ ಪುಟ್ಟ ಊರು ಈಗ ಪ್ರಸಿದ್ಧಿ ಪಡೆಯುತ್ತಿದೆ.

ದೇಶ ವಿದೇಶಗಳಲ್ಲಿಯೂ ದೇವನಹಳ್ಳಿಯ ಹೆಸರು ಮೊಳಗುತ್ತಿದೆ. ಈ ಹೆಸರಿನೊಂದಿಗೇ, ನಿರ್ಮಾಣವಾಗಲಿರುವ ಈ ವಿಮಾನ ನಿಲ್ದಾಣಕ್ಕೆ ಯಾವ ಹೆಸರು ಇಡಬೇಕು ಎಂಬುದೂ ದೊಡ್ಡ ವಿವಾದವಾಗುವ ಸೂಚನೆಗಳನ್ನು ನೀಡಿದೆ. ಅನಧಿಕೃತವಾಗಿ ಈ ನಿಲ್ದಾಣಕ್ಕೆ ನಾಮಕರಣವೂ ಆಗಿ ಹೋಗಿದ್ದರೆ, ಆ ಹೆಸರು ಇಡಿ, ಈ ಹೆಸರು ಇಡಿ ಎಂದು ಒತ್ತಾಯ, ಆಗ್ರಹಗಳು ಕೇಳಿ ಬರುತ್ತಿವೆ.

ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದೂ, ಬೆಂಗಳೂರಿಗೆ ಅತಿ ಸಮೀಪದಲ್ಲಿದ್ದೂ, ಜನರ ಉಪೇಕ್ಷೆಗೆ ಒಳಗಾಗಿದ್ದ ಇತಿಹಾಸ ಪ್ರಸಿದ್ಧ ದೇವನಹಳ್ಳಿಗೆ ಮಹತ್ವ ಬಂದಿದ್ದು ಮಾತ್ರ ಶುಭಲಕ್ಷಣವೇ...

ಇತಿಹಾಸ : ದೇವನಹಳ್ಳಿ ಇಂದು ನಿನ್ನೆ ಹುಟ್ಟಿದ ಬೆಂಗಳೂರು ಹೊರವಲಯದ ಹೊಸ ಬಡಾವಣೆ ಅಲ್ಲ. ದೇವನಹಳ್ಳಿಗೆ ಅನೇಕ ಶತಮಾನಗಳ ಇತಿಹಾಸವಿದೆ. 14ನೇ ಶತಮಾನದಲ್ಲೇ ಇಲ್ಲಿ ಊರಿತ್ತು ಎಂದು ಇತಿಹಾಸ ಹೇಳುತ್ತದೆ. 250 ವರ್ಷಗಳ ಕಾಲ ರಾಜರಾಳ್ವಿಕೆಗೆ ಒಳಪಟ್ಟಿದ್ದ ಈ ಪ್ರಾಂತದಲ್ಲಿ 500 ವರ್ಷಗಳಷ್ಟು ಹಳೆಯ ಸುಂದರವಾದ ಹಾಗೂ ಸುಭದ್ರವಾದ ಕೋಟೆಯೂ ಇದೆ.

14ನೇ ಶತಮಾನದಲ್ಲಿ ಕಾಂಚೀಪುರ ಬಳಿಯ ಅತ್ತೂರಿನ ಪಾಳೆಯಗಾರರ ಕಾಟ ತಾಳಲಾರದೆ ವಲಸೆ ಬಂದ ರಣಭೈರೇಗೌಡ ಹಾಗೂ ಆತನ ಆರು ಮಂದಿ ಸಹೋದರರು ದೇವನಹಳ್ಳಿ ಬಳಿಯ ಆವತಿಯಲ್ಲಿ ನೆಲೆಸಿದರು. ವಿಜಯನಗರ ಅರಸರ ಅನುಮತಿ ಪಡೆದು, ಇಲ್ಲಿ ಪಾಳೆಯಪಟ್ಟ ಕಟ್ಟಿದರು.

ರಣಭೈರೇಗೌಡನ ಸೋದರರಾದ ಮಲ್ಲಭೈರೇಗೌಡ, ಸಣ್ಣಭೈರೇಗೌಡ, ಜಯಗೌಡ, ತಮ್ಮೇಗೌಡರು ದೇವನಹಳ್ಳಿ, ಯಲಹಂಕ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರಗಳಲ್ಲಿ ನೆಲೆಸಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಳಿದರು. ಈ ಸೋದರರು ದೇವನಹಳ್ಳಿಯಲ್ಲಿ ಕೋಟೆಯನ್ನೂ ಕಟ್ಟಿದರು. ಇಂದಿಗೂ ಕೋಟೆ ತನ್ನ ನೈಜತೆಯನ್ನು ಉಳಿಸಿಕೊಂಡು ಕಂಗೊಳಿಸುತ್ತಿದೆ.

ಆಮೆಯಾಕಾರದ ಈ ಕೋಟೆಯಲ್ಲಿ 13 ವೃತ್ತಾಕಾರದ ಕೊತ್ತಲಗಳಿವೆ. ಎರಡು ಚೌಕಾಕಾರದ ಬತೇರಿಗಳಿವೆ. ಪೂರ್ವದ ಬಾಗಿಲು ಬಿದ್ದು ಹೋಗಿದೆಯಾದರೂ, ಪಶ್ಚಿಮದ ಬಾಗಿಲು ಸುಭದ್ರವಾಗಿದೆ. ಶತ್ರುಗಳ ದಾಳಿಯಿಂದ ರಕ್ಷಿಸಲು ಬೇಕಾದ ಸಕಲ ವ್ಯವಸ್ಥೆಯನ್ನೂ ಈ ಕೋಟೆಯಲ್ಲಿ ಮಾಡಲಾಗಿದೆ. ಶತ್ರುಗಳ ಮೇಲೆ ದಾಳಿ ಮಾಡಲೂ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ತಪ್ಪಿಸಿಕೊಳ್ಳಲು ತುರ್ತು ನಿರ್ಗಮನವನ್ನೂ ಮಾಡಲಾಗಿದೆ.

ಕೋಟೆಯ ಸುತ್ತ ರಕ್ಷಣಾರ್ಥ ಕಂದಕ ತೋಡಲಾಗಿತ್ತು ಎಂಬ ಕುರುಹುಗಳಿವೆ. ಕಾವಲುಗಾರರ ತಾಣಗಳಿವೆ. ಮಕ್ಕಳಿಗೆ ಹಿಂದೆ ರಾಜ ಮಹಾರಾಜರು, ಪಾಳೆಯಗಾರರು ಹೇಗೆ ಕೋಟೆಯನ್ನು ಕಟ್ಟಿ ಜನರನ್ನು ರಕ್ಷಿಸುತ್ತಿದ್ದರು ಎಂದು ತೋರಿಸಲು ಚಿತ್ರದುರ್ಗ, ಶ್ರೀರಂಗಪಟ್ಟಣಕ್ಕೆ ಹೋಗುವ ಅಗತ್ಯ ಇಲ್ಲ. ಭಾನುವಾರದ ರಜೆಯಂದು ಮಕ್ಕಳೊಂದಿಗೆ ಇಲ್ಲಿಗೆ ಸಣ್ಣ ಪಿಕ್‌ನಿಕ್‌ ಹೋಗಿ ಬರಬಹುದು. ಜನಪ್ರಿಯವಾದ ಚಕ್ಕೋತವನ್ನೂ ಮೆಲ್ಲಬಹುದು.

ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುವ ಹೊತ್ತಿಗೆ ಈ ಇತಿಹಾಸ ಪ್ರಸಿದ್ಧ ಊರನ್ನು ಅಭಿವೃದ್ಧಿ ಪಡಿಸಿ, ಒಂದು ಪ್ರೇಕ್ಷಣೀಯ ಹಾಗೂ ಪ್ರವಾಸಿತಾಣವನ್ನಾಗಿ ಪರಿವರ್ತಿಸಿದರೆ, ಸಾವಿರಾರು ದೇಶ - ವಿದೇಶಗಳ ಪ್ರವಾಸಿಗರು, ಕೋಟೆಯ ರಮಣೀಯತೆಯನ್ನು ಸವಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more