ಸೈಬರ್ ಅಪರಾಧ ನಿಗ್ರಹಕ್ಕೆ ಸಜ್ಜಾಗುವಂತೆ ಪೊಲೀಸರಿಗೆ ಕೃಷ್ಣ ಕರೆ
ಬೆಂಗಳೂರು : ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಹಾಗೂ ಪ್ರಗತಿ ಹೆಚ್ಚಿದಂತೆ, ಸೈಬರ್ ಅಪರಾಧಗಳೂ ಉಲ್ಬಣಿಸುತ್ತಿವೆ. ಈ ಸೈಬರ್ ಅಪರಾಧಗಳನ್ನು ಹತ್ತಿಕ್ಕಲು ಪೊಲೀಸ್ ಪಡೆ ಸಜ್ಜಾಗಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಕರೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪೊಲೀಸ್ ಕಟ್ಟಡಗಳ ನಿರ್ಮಾಣ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಇತರ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಗಂಭೀರ ಸ್ವರೂಪದ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಇದರಲ್ಲಿ ಸೈಬರ್ ಅಪರಾಧಗಳೂ ಸೇರಿವೆ ಎಂದರು.
ಸೈಬರ್ ಅಪರಾಧಗಳನ್ನು ಪತ್ತೆಹಚ್ಚಲು ಹಾಗೂ ಹತ್ತಿಕ್ಕಲು ರಾಜ್ಯ ಪೊಲೀಸರು ಹೆಚ್ಚಿನ ಗಮನ ಕೊಡಬೇಕು ಎಂದೂ ಅವರು ಹೇಳಿದರು. ಯಾವುದೇ ಸ್ವರೂಪದ ಅಪರಾಧಗಳ ಸಂಖ್ಯೆ ಹೆಚ್ಚದಂತೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಪೊಲೀಸ್ ಕಟ್ಟಡಗಳ ಯೋಜನೆಗೆ ಹುಡ್ಕೋ ನೆರವು ನೀಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಸಚಿವರುಗಳಾದ ಧರ್ಮಸಿಂಗ್, ರೋಷನ್‌ಬೇಗ್, ಪ್ರತಿಪಕ್ಷ ನಾಯಕರಾದ ರಾಮಚಂದ್ರಗೌಡ, ಎಚ್.ಕೆ. ಶ್ರೀನಿವಾಸ್ ಮೊದಲಾದವರು ಪಾಲ್ಗೊಂಡಿದ್ದರು.
ವಾರ್ತಾ ಸಂಚಯ
ಮುಖಪುಟ / ಕೃಷ್ಣ ಗಾರುಡಿ












Click it and Unblock the Notifications