ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡಿಯ ನೋಡಿರಣ್ಣ, ಕನ್ನಂಬಾಡಿಯ ಗುಡಿಯ ನೋಡಿರಣ್ಣ..

By Staff
|
Google Oneindia Kannada News

Gopal Swamy templeಮೈಸೂರು : ಕರ್ನಾಟಕದ ಹೆಮ್ಮೆಯ ಕೃಷ್ಣರಾಜ ಸಾಗರ (ಕೆ.ಆರ್‌.ಎಸ್‌) ಅಣೆಕಟ್ಟೆ ಕಟ್ಟಿದ ದಿನದಿಂದ ನೀರಿನಲ್ಲಿ ಮುಳುಗಿದ್ದ ಕನ್ನಂಬಾಡಿ ವೇಣುಗೋಪಾಲ ಸ್ವಾಮಿ ದೇವಾಲಯ ಒಂದೇ ವರ್ಷದ ಅವಧಿಯಲ್ಲಿ ಮೂರನೇ ಬಾರಿ ಕಾವೇರಿಯಿಂದ ಮೇಲಿದ್ದಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಕೃಷ್ಣರಾಜ ಸಾಗರದ ನೀರಿನ ಮಟ್ಟ 60 ಅಡಿಗೆ ಕುಸಿದಿದ್ದಾಗ ಸುಮಾರು 18 ವರ್ಷಗಳ ನಂತರ (ನೀರಿನಲ್ಲಿ ಮುಳುಗಡೆಯಾಗಿದ್ದ) ವೇಣುಗೋಪಾಲ ಸ್ವಾಮಿ ದೇವಾಲಯ ಬಹುತೇಕ ಸಂಪೂರ್ಣವಾಗಿ ಗೋಚರಿಸಿತ್ತು. ಸಹಸ್ರಾರು ಮಂದಿ ಪ್ರವಾಸಿಗರು, ಈ ದೇವಾಲಯ ನೋಡಲೆಂದೇ ಕೆ.ಆರ್‌.ಎಸ್‌.ಗೆ ತಂಡೋಪತಂಡವಾಗಿ ಆಗಮಿಸಿದ್ದರು.

ಕಳೆದೆರಡು ತಿಂಗಳ ಹಿಂದೆ ಅಂದರೆ, 2001 ಮಾರ್ಚ್‌ ತಿಂಗಳ ಕೊನೆಯ ವಾರದಲ್ಲಿ ಕೂಡ ಜಲಾಶಯದ ನೀರಿನ ಮಟ್ಟ 93.46 ಅಡಿಗೆ ಇಳಿದಾಗ ದೇವಾಲಯದ ಗೋಪುರ ಮತ್ತೊಮ್ಮೆ ಗೋಚರಿಸಿತ್ತು. ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಏಪ್ರಿಲ್‌ ಮಳೆಯಿಂದ ಜಲಾಶಯಕ್ಕೆ ನೀರು ಹರಿದು ಬಂದ ಕಾರಣ ದೇಗುಲದ ಗೋಪುರವನ್ನು ಕಾವೇರಿ ತಾಯಿ ಮುಚ್ಚಿದ್ದಳು.

ಈಗ ಮತ್ತೆ ಬಿರು ಬಿಸಿಲು. ಕಾವೇರಿಯ ಕಣಿವೆಯಲ್ಲಿ ಮಳೆಯು ಸುಳಿದಿಲ್ಲ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನಿಂದ ಕೆರೆ, ಕಟ್ಟೆ, ಜಲಾಶಯಗಳು ಒಣಗುತ್ತಿವೆ. ಕೃಷ್ಣರಾಜ ಸಾಗರ ಕೂಡ. ಈ ಹೊತ್ತು ಜಲಾಶಯದ ನೀರಿನ ಮಟ್ಟ 79.60 ಅಡಿಗಳಿಗೆ ಕುಸಿದಿದೆ. ದೇವಾಲಯದ ಗೋಪುರ ಸಂಪೂರ್ಣವಾಗಿ ಕಾಣಿಸುತ್ತಿದೆ.

ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಜೂನ್‌ ಮೊದಲ ವಾರದಲ್ಲೇ ಕರ್ನಾಟಕಕ್ಕೆ ಮುಂಗಾರು ಕಾಲಿಡಲಿದೆ. ಅಕಸ್ಮಾತ್‌ ಮುಂಗಾರು ಮಳೆ ಬರುವುದು ಒಂದು ವಾರ ತಡವಾದರೂ, ಕೆ.ಆರ್‌.ಎಸ್‌.ನಲ್ಲಿ ಮುಳುಗಿಹ ಈ ದೇವಾಲಯ ಮತ್ತೊಮ್ಮೆ ಸಂಪೂರ್ಣ ದರ್ಶನ ನೀಡುವ ಸಂಭವವನ್ನು ತಳ್ಳಿಹಾಕುವಂತಿಲ್ಲ. ಪ್ರಸಕ್ತ ಜಲಾಶಯಕ್ಕೆ 760 ಕ್ಯೂಸೆಕ್ಸ್‌ ನೀರು ಹರಿದುಬರುತ್ತಿದ್ದು, 905 ಕ್ಯೂಸೆಕ್ಸ್‌ನಷ್ಟು ನೀರು ಹೊರ ಹರಿಯುತ್ತಿದೆ.

ಮಳೆ ಬಾರದೆ ನೀರಿನ ಒಳಹರಿವು ಹೆಚ್ಚಲು ಸಾಧ್ಯವೇ ಇಲ್ಲ. ಕಾವೇರಿ ನದಿ ಪಾತ್ರದ ರೈತರ ಬೇಸಿಗೆ ಬೆಳೆಗೆ ನೀರು ಹಾಯಿಸದೆ ವಿಧಿ ಇಲ್ಲ. ಬೇಸಿಗೆ ಬೆಳೆ ಹೆಚ್ಚು ನೀರನ್ನೇ ಬಯಸುತ್ತದೆ. ಹೀಗಾಗಿ, ಒಂದೆರಡು ವಾರದಲ್ಲಿ ಮಳೆ ಬಾರದಿದ್ದರೆ, 124 ಅಡಿ ಗರಿಷ್ಠ ಮಟ್ಟದ ಕೆ.ಆರ್‌.ಎಸ್‌. ಜಲಾಶಯದ ನೀರಿನ ಮಟ್ಟ, ಮತ್ತಷ್ಟು ಕುಸಿಯುವುದು ಖಂಡಿತ. ಭಯಭೀತರಾಗಿರುವ ರೈತರಂತೂ ಮುಗಿಲಿನೆಡೆಗೆ ಮುಖ ಮಾಡಿ, ಹುಯ್ಯೋ ಹುಯ್ಯೋ ಮಳೆರಾಯ ಕನ್ನಂಬಾಡಿಗೆ ನೀರಿಲ್ಲ ಎಂದು ವರುಣನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಾವೂ ಮಳೆರಾಯನಿಗೆ ಮನವಿ ಸಲ್ಲಿಸೋಣ.

ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X