Siddaramaiah: ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್; ದೇಶಕ್ಕೆ ಈ ಕಾರಣಕ್ಕೆ ಕಾಂಗ್ರೆಸ್ ಬೇಕು: ಸಿದ್ದರಾಮಯ್ಯ
Siddaramaiah: ತಲಾ ಆದಾಯದಲ್ಲಿ ಕರ್ನಾಟಕದ ದೇಶದಲ್ಲೇ ನಂಬರ್ ಒನ್; ದೇಶಕ್ಕೆ ಕಾಂಗ್ರೆಸ್ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಏಪ್ರಿಲ್ 3ರ ಶುಕ್ರವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇವಿನಮಟ್ಟಿ ಗ್ರಾಮದಲ್ಲಿ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇದಕ್ಕಾಗಿ ನೀವು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು.

ಉಮೇಶ್ ಮೇಟಿ ಗೆದ್ದು ಬಂದರೆ ನಿಮ್ಮ ಪ್ರತಿನಿಧಿಯಾಗಿ ಉತ್ತಮ ಕೆಲಸ ಮಾಡ್ತಾರೆ ಎನ್ನುವ ವಿಶ್ವಾಸ ನನಗಿದೆ. ಎಚ್.ವೈ. ಮೇಟಿಯವರು ಐದು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ, ಸಂಸದರಾಗಿ ತಳ ಸಮುದಾಯ ಮತ್ತು ಬಡವರ ಪರವಾಗಿ ಕೆಲಸ ಮಾಡಿದ್ದರು. ಅದೇ ಕೆಲಸವನ್ನು ಉಮೇಶ್ ಮೇಟಿ ಮುಂದುವರಿಸುತ್ತಾರೆ.
ನಮ್ಮ ಸರ್ಕಾರ ಸಾಲ ಮಾಡಿದೆ ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ವಿತ್ತೀಯ ಹೊಣೆಗಾರಿಕಾ ಕಾಯ್ದೆಯ ಮಾನದಂಡಗಳನ್ನು ಮೀರಿ ನಾವು ಸಾಲ ಮಾಡಿಲ್ಲ. ಈ ಸತ್ಯವನ್ನು ಬಿಜೆಪಿ ಹೇಳುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ಬರಲಿಲ್ಲ. ಜೊತೆಗೆ ಜಿಎಸ್‌ಟಿ ಮೂಲಕ ನಮಗೆ ಬರಬೇಕಿದ್ದ ತೆರಿಗೆ ಕೇಂದ್ರದ ಅವೈಜ್ಞಾನಿಕ ನೀತಿಯಿಂದಾಗಿ 10 ಸಾವಿರ ಕೋಟಿ ಕಡಿಮೆಯಾಯಿತು. ಆದರೂ ನಾವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಿಲ್ಲ. ಜೊತೆಗೆ ಅಭಿವೃದ್ಧಿ ಕೆಲಸಗಳನ್ನೂ ಮುಂದುವರೆಸಿದ್ದೇವೆ. ಹೀಗಾಗಿ ನಮ್ಮದು ನುಡಿದಂತೆ ನಡೆದ ಪಕ್ಷ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅಧಿಕಾರ ಇದ್ದಾಗ ಕೆಲಸ ಮಾಡದೆ ಈ ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿ ಗೆ ನಿಮ್ಮ ಮತ ಪಡೆಯುವ ಯೋಗ್ಯತೆ ಇಲ್ಲ. ಯೋಗ್ಯತೆ ಇಲ್ಲದವರಿಗೆ ನಿಮ್ಮ ಮತ ಕೊಡಬೇಡಿ. ಚನ್ನಪಟ್ಟಣ, ಶಿಗ್ಗಾಂವ್, ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿಯ ಎಲ್ಲಾ ಅಪಪ್ರಚಾರದ ನಡುವೆಯೂ ಗೆದ್ದಿದ್ದು ಕಾಂಗ್ರೆಸ್ ಪಕ್ಷವೇ. ಈ ಚುನಾವಣೆಯಲ್ಲೂ ಎರಡೂ ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ. ಜೊತೆಗೆ 2028ಕ್ಕೂ ನಾವೇ ಗೆದ್ದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
Siddaramaiah: ಬಡವರು ಹಸಿದು ಮಲುಗಬಾರದು
ಕರ್ನಾಟಕದಲ್ಲಿ ಬಡವರು ಹಸಿದು ಮಲುಗಬಾರದು ಎನ್ನುವ ಕಾರಣಕ್ಕೆ ಅನ್ನ ಭಾಗ್ಯ ಜಾರಿಗೆ ತಂದಿದ್ದೇನೆ. ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿ ಆಗಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದರಿಂದ ಇಲ್ಲಿ ನಾನು ಅನ್ನಭಾಗ್ಯ ಜಾರಿಗೆ ತರಲು ಸಾಧ್ಯವಾಯಿತು. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾಳಜಿಯನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಎಚ್.ವೈ.ಮೇಟಿಯವರು ಐದು ಬಾರಿ ಶಾಸಕರು, ಎರಡು ಬಾರಿ ಸಚಿವರು ಮತ್ತು ಒಮ್ಮೆ ಸಂಸದರಾಗಿ ಎಲ್ಲರನ್ನೂ ಗೌರವವಾಗಿ ಕಾಣುತ್ತಾ ಜಾತಿ ಸೋಂಕನ್ನು ಸೋಕಿಸಿಕೊಂಡಿರಲಿಲ್ಲ. ಬಡವರು ಮತ್ತು ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಉಮೇಶ್ ಮೇಟಿಯವರನ್ನು ಗೆಲ್ಲಿಸಿದರೆ ಎಚ್.ವೈ.ಮೇಟಿಯವರ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಲು ಸಾಧ್ಯವಾಗುತ್ತದೆ.
ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಒಂದು ಬಾರಿಯೂ ಅಧಿಕಾರಕ್ಕೆ ಬರಲಿಲ್ಲ. ಬಿಜೆಪಿಗೆ ರಾಜ್ಯದ ಜನರ ಆಶೀರ್ವಾದ ಇಲ್ಲದಿದ್ದರಿಂದ ಆಪರೇಷನ್ ಕಮಲದ ಮೂಲಕ ಅಪಾರ ಹಣ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿದ್ದಾರೆ. ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವ ಯಡಿಯೂರಪ್ಪ ಅವರಿಗೆ ಆಪರೇಷನ್ ಕಮಲ ಮಾಡಲು ಅಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವುದನ್ನು ನೀವೆಲ್ಲಾ ಕೇಳಬೇಕಿದೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಅತ್ಯಂತ ಭ್ರಷ್ಟರು ಎಂದು ಯತ್ನಾಳ್ ಅವರು ಹೇಳುತ್ತಾರೆ. ಅದೇ ಯತ್ನಾಳ್ ಅವರನ್ನು ಬಿಜೆಪಿ ನಾಯಕರು ಬಾಗಲಕೋಟೆಗೆ ಕರೆಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಗುತ್ತಿಗೆದಾರರ ಸಂಘದವರು ಬಿಜೆಪಿ ಸರ್ಕಾರದಲ್ಲಿ ನಡೆಯುವ ಕಮಿಷನ್ ದಂಧೆ ಬಗ್ಗೆ ಪತ್ರ ಬರೆದಿದ್ದರು. ಇಂಥಾ ಬಿಜೆಪಿಯವರಿಂದ ನಾವು ಭ್ರಷ್ಟಾಚಾರದ ಮಾತು ಕೇಳಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ಹಸಿವುಮುಕ್ತ ರಾಜ್ಯ ನಮ್ಮದಾಗಬೇಕು ಎನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ತಂದಿದ್ದೆ. ಆದ್ದರಿಂದ ನಾನು ಸಾಲದ ರಾಮಯ್ಯ ಅಲ್ಲ , ಅನ್ನದ ರಾಮಯ್ಯ. ಇದು ಜನರೇ ಪ್ರೀತಿಯಿಂದ ಕೊಟ್ಟ ಹೆಸರು. ದುಡಿಯುವವರ, ಮಹಿಳೆಯರ, ಶ್ರಮಿಕರ ಮತ್ತು ಹಿಂದುಳಿದವರ, ದಲಿತರ ವಿರೋಧ ಪಕ್ಷವಾದ ಬಿಜೆಪಿಯನ್ನು ಬೆಂಬಲಿಸಬೇಡಿ. ಉಮೇಶ್ ಮೇಟಿಯವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಕರೆ ನೀಡಿದ್ದಾರೆ.












Click it and Unblock the Notifications