ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಭ್ರಮ, ಸಡಗರದ ಮಧ್ಯೆ ಹಂಪಿ ವಿರೂಪಾಕ್ಷನ ರಥೋತ್ಸವ

By Staff
|
Google Oneindia Kannada News

ಬಳ್ಳಾರಿ : ಕಲ್ಲಿನ ರಥ ಕದಲದೆ ನಿಂತಿತ್ತು . ಕಲ್ಲಾದ್ದರಿಂದ, ಬಿರು ಧಗೆಯಲ್ಲೂ ಬೆವರದೆ ನಿಂತಿತ್ತು . ಬೆವರಿ ತೊಪ್ಪೆಯಾದದ್ದು ನೆರೆದಿದ್ದ ಸಹಸ್ರ ಸಂಖ್ಯೆಯ ಭಕ್ತ ಜನ. ಪಂಪಾನದಿಯ ಪರಿಸರದ ತುಂಬಾ ಭಾವಾವೇಶ, ಭಕ್ತಿಯ ಹೊಳೆ. ವಿರೂಪಾಕ್ಷೇಶ್ವರ, ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ ಸಾಗುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.

ಭಾನುವಾರ, ಇತಿಹಾಸ ಪ್ರಸಿದ್ಧ ಹಂಪಿಯಲ್ಲಿ ವಿಜೃಂಭಣೆಯಿಂದ ಜರುಗಿದ ರಥೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಂಭ್ರಮ, ಸಡಗರದಿಂದ ಪಾಲ್ಗೊಂಡಿದ್ದರು. ವಿಜಯನಗರ ಸಂಸ್ಥಾನವನ್ನಾಳಿದ ಕನ್ನಡ ನಾಡಿನ ಹೆಮ್ಮೆಯ ದೊರೆ ಕರ್ನಾಟಕ ರಮಾ ರಮಣ ಶ್ರೀಕೃಷ್ಣದೇವರಾಯ, ಸ್ವಾಮಿಗೆ ನೀಡಿರುವ ನವರತ್ನ ಖಚಿತ ಕಿರೀೕಟವನ್ನು ತೊಡಿಸಿ ಉತ್ಸವ ಮೂರ್ತಿಯನ್ನು ಅಲಂಕರಿಸಲಾಗಿತ್ತು. ರಾಜಮುಡಿಯ ಈ ಅಲಂಕಾರದಲ್ಲಿ ಸ್ವಾಮಿಯನ್ನು ಕಾಣಲು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ನೆರೆದಿದ್ದರು.

ವಿದ್ಯಾರಣ್ಯ ಪೀಠಾಧಿಪತಿಗಳು, ಹೈದರಾಬಾದ್‌ ನಿಜಾಮರು ಕೊಡುಗೆಯಾಗಿ ನೀಡಿದ್ದಾರೆಂಬ ಇತಿಹಾಸವುಳ್ಳ ಬೆಳ್ಳಿ ಕಿರೀಟವನ್ನು ಧರಿಸಿ, ಆನೆಗೊಂದಿ ಸಂಸ್ಥಾನದ ಕಡೆಯ ಮಹಾರಾಣಿ ಲಾಲ್‌ಕುಮಾರಿ ಮಠಕ್ಕೆ ಅರ್ಪಿಸಿರುವ ಬೆಳ್ಳಿಯ ಸಿಂಹಾಸನಾರೂಢರಾಗಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪಂಪಾನದಿಯಲ್ಲಿ ಮಿಂದು ಬಂದ ಭಕ್ತರು ಹರಹರ ಮಹಾದೇವ, ಜೈ ವಿರೂಪಾಕ್ಷೇಶ್ವರ, ಜೈ ಚಂದ್ರಮೌಳೇಶ್ವರ ಎಂದು ಜಯಘೋಷ ಹಾಕುತ್ತಾ ರಥಗಳನ್ನು ಎಳೆದರು. ವೈಭವೋಪೇತವಾಗಿ ನಡೆದ ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ . ಪೊಲೀಸ್‌ ಪಹರೆ ಬಿಗಿಯಾಗಿತ್ತು .

ಮಹಾನವಮಿ ದಿಬ್ಬ, ಕಮಲ್‌ ಮಹಲ್‌, ಉಗ್ರ ನರಸಿಂಹನ ಸನ್ನಿಧಿ, ವಿರೂಪಾಕ್ಷೇಶ್ವರ ದೇವಾಲಯ, ಕಡಲೇಕಾಳು ಗಣಪತಿ, ಸಾಸಿವೆ ಗಣಪತಿ, ಚಂದ್ರಮೌಳೇಶ್ವರ ಸ್ವಾಮಿ ಸನ್ನಿಧಿಯೂ ಸೇರಿದಂತೆ ಹಂಪೆಯೆಲ್ಲೆಡೆ ಭಕ್ತರು- ಪ್ರವಾಸಿಗಳು, ರಸ್ತೆಗಳ ಇಕ್ಕೆಲಗಳಲ್ಲೂ ವ್ಯಾಪಾರಿಗಳು. ಹಂಪೆಯ ಗತವೈಭವ ಕೆಲ ಕಾಲ ಮರಳಿದಂತೆ ಭಾಸವಾಯಿತು. ಬೆಟ್ಟದ ಮೇಲೇರಿ ಸೂರ್ಯಾಸ್ತಮಾನ ನೋಡಲು ಬಂದವರಿಗೆ ಸೂರ್ಯಾಸ್ತದ ಬಳಿಕ ಹುಣ್ಣಿಮೆಯ ಹಾಲು ಬೆಳದಿಂಗಳಿನ ಔತಣ .

(ಬಳ್ಳಾರಿ ಪ್ರತಿನಿಧಿಯಿಂದ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X