ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವಾಡಪ್ರಿಯನಯ್ಯಾ ನಮ್ಮ ಚಂದೂ ಬೋರ್ಡೆ !

By Staff
|
Google Oneindia Kannada News

*ರಮಾ

ನಮ್ಮ ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆದಾರರಿಗೆ ಸಾಮರ್ಥ್ಯ, ಪ್ರತಿಭೆಗಳಿಗಿಂತಾ ಪವಾಡದಲ್ಲೇ ಹೆಚ್ಚು ನಂಬುಗೆ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮುಂಬಯಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕಾಂಗರೂ ಪಡೆಯ ವಿರುದ್ಧ ಭಾರತ ತಂಡ ಹೀನಾಯ ಸೋಲು ಅನುಭವಿಸಿದ ನಂತರವಾದರೂ ಆಯ್ಕೆ ಮಂಡಳಿಯಿಂದ ಎರಡನೆಯ ಟೆಸ್ಟ್‌ಗೆ ತಂಡದ ಆಯ್ಕೆಯಲ್ಲಿ ಕಠಿಣ ನಿರ್ಧಾರಗಳನ್ನು ನಿರೀಕ್ಷಿಸಿದ್ದವರೆಲ್ಲ ಮೂರ್ಖರಾಗಿದ್ದಾರೆ.

ಒಂದಾನೊಂದು ಕಾಲದಲ್ಲಿ ಚೆಂಡನ್ನು ತಿರುಗಿಸಿ ಎಸೆಯುತ್ತಿದ್ದರೆಂದು ಕೆಲವು ಮಂದಿ ಈಗಲೂ ನಂಬಿದ್ದಾರೆ ಅನ್ನುವುದಕ್ಕೆ ಸಾಕ್ಷಿಯಾಗಿ ಹೈದರಾಬಾದ್‌ನ ಕ್ರಿಕೆಟಿಗ ವೆಂಕಟಪತಿರಾಜು ತಂಡಕ್ಕೆ ಮತ್ತೆ ಮರಳಿದ್ದಾರೆ. ಇದರಿಂದಾಗಿ ಹೈದರಾಬಾದ್‌ಗೆ ಕ್ರಿಕೆಟ್‌ ತಂಡದಲ್ಲಿ ಪ್ರಾತಿನಿಧ್ಯ ಕಲ್ಪಿಸುವ (ಅಜರ್‌ ಬದಲಿಗೆ) ಆಯ್ಕೆದಾರರ ಉದ್ದೇಶ ಈಡೇರಿರಬಹುದು.

ಆಯ್ಕೆ ಸಮಿತಿಯ ಅಧ್ಯಕ್ಷ ಚಂದು ಬೋರ್ಡೆ ಅನ್ನುವ ವ್ಯಕ್ತಿ ರಾಜು ಆಯ್ಕೆಗೆ ನೀಡಿರುವ ಕಾರಣ ತಮಾಷೆಯಾಗಿದೆ. ಸ್ಪಿನ್ನರ್‌ಗಳ ನೆಲದಲ್ಲಿ ಸ್ಪಿನ್ನರ್‌ಗಳಿಗೆ ಬರ ಬಂದಿರುವುದನ್ನು ಬೋರ್ಡೆ ಒಪ್ಪಿಕೊಂಡಿದ್ದಾರೆ. ಇದ್ದುದರಲ್ಲೇ ಸ್ಪಿನ್‌ನಲ್ಲಿ ಉತ್ತಮ ಸಾಧನೆ ತೋರಿರುವ ದೆಹಲಿಯ ನೀಲೇಶ್‌ ಕುಲಕರ್ಣಿಯಂಥಾ ಯುವಕರಿದ್ದಾಗಲೂ ಅನುಭವದ ಹಿನ್ನೆಲೆಯಲ್ಲಿ ವೆಂಕಟಪತಿ ರಾಜು ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬೋರ್ಡೆ ತಿಳಿಸಿದ್ದಾರೆ. ಅನುಭವಕ್ಕೆ ಬೆಲೆ ಕೊಟ್ಟ ಬೋರ್ಡೆಗೆ ಧನ್ಯವಾದಗಳು. ಅದೇ ಮೌಲ್ಯಾಧಾರಿತ ಮಾನದಂಡದಲ್ಲಿ ಮೊಂಗಿಯಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವ ಬೋರ್ಡೆ ಬೋರ್ಡ್‌ನ ಜಾಣತನವನ್ನು (ಬೋರ್ಡೆ ಬಾಯಿ ಬಿಡದಿದ್ದರೂ) ಎಲ್ಲಾ ಕೆಲಸವನ್ನು ಬದಿಗಿಟ್ಟು ಕ್ರಿಕೆಟ್‌ ನೋಡುವ ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ.

ಆದರೆ, ಬೋರ್ಡೆ ಒಂದು ವಿಷಯವನ್ನು ಮರೆತಿದ್ದಾರೆ. ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ - ತಂಡದಲ್ಲಿರುವ ಬಹಳಷ್ಟು ಆಟಗಾರರು ಅನನುಭವಿಗಳು. ಸ್ಪಿನ್ನರ್‌ಗಳಾದ ಹರ್‌ಭಜನ್‌ ಅಥವಾ ಶರಣ್‌ದೀಪ್‌, ವೇಗಿಗಳಾದ ಜಹೀರ್‌ ಖಾನ್‌ ಅಥವಾ ನೆಹ್ರಾ ಇನ್ನೂ ಬಾಲಕರು. ಬ್ಯಾಟಿಂಗ್‌ನಲ್ಲಿ ಕೂಡ ಬದಾನಿ ಹೊಸಬರು. ರಮೇಶ್‌, ದಾಸ್‌, ಲಕ್ಷ್ಮಣ್‌ಗೆ ಕೂಡ ಅನುಭವದ ಭಾರ ಅಷ್ಟಕ್ಕಷ್ಟೆ . ಈ ಹಿನ್ನೆಲೆಯಲ್ಲಿ ಅನುಭವದ ತೂಕವಿರುವ ಚೇತನ್‌ ಶರ್ಮಾ, ರೋಜರ್‌ ಬಿನ್ನಿ, ಮದನ್‌ಲಾಲ್‌, ರವಿಶಾಸ್ತ್ರಿ , ಬೇಡಿ, ಪ್ರಸನ್ನ, ವಿಶ್ವನಾಥ್‌ ಮುಂತಾದವರನ್ನು ಆಯ್ಕೆ ಮಾಡಿದ್ದರೆ ತಂಡ ಸಂಪೂರ್ಣ ಅನುಭವಿಗಳಿಂದ ಕೂಡಿರುತ್ತಿತ್ತು .

ಮದುಮಗನಾದನಾ ಹೈದರಾಬಾದಿನ ಮುದುಕ ಪತಿ

ರಾಜು ಕ್ರಿಕೆಟ್‌ನ ಪಳೆಯುಳಿಕೆ ಎಂದು ನಿರೀಕ್ಷಿಸಿದ್ದವರಿಗೆಲ್ಲಾ ಬೋರ್ಡೆ ಕಂಪನಿ ಪೆಟ್ಟು ಕೊಟ್ಟಿದೆ. ರಾಜು ಯಾವತ್ತಾದರೂ ಬಾಲನ್ನು ತಿರುಗಿಸಿದ್ದಾಗಲೀ, ಬ್ಯಾಟನ್ನು ಗಟ್ಟಿಯಾಗಿ ಹಿಡಿದಿದ್ದನ್ನಾಗಲೀ ಕಂಡವರು ಕಡಿಮೆಯೇ. ಆದರೂ, ರಾಜು ಮತ್ತೆ ತಂಡಕ್ಕೆ ಬಂದಿದ್ದಾರೆ. ಆದರೆ, ಅವರು ತಂಡದಲ್ಲಿ ಆಡಿಯೇ ತೀರುತ್ತಾರೆ ಎನ್ನುವ ಬಗ್ಗೆ ಯಾರಿಗೂ ವಿಶ್ವಾಸವಿಲ್ಲ (ಸ್ವತಃ ಆಯ್ಕೆ ಮಂಡಳಿಗೂ). ರಾಜು ಮಾದರಿಯಲ್ಲೇ ಅನುಭವದ ಕಾರಣದಿಂದಾಗಿ ತಂಡದಲ್ಲಿ ಸ್ಥಾನ ಪಡೆದ ನರೇಂದ್ರ ಹಿರ್ವಾನಿ ಮೈದಾನಕ್ಕಿಳಿಯಲಿಲ್ಲ . ಹಿರ್ವಾನಿಯ ಸ್ಥಿತಿ ರಾಜು ಅವರದಾದಲ್ಲಿ ಆಶ್ಚರ್ಯವೇನೂ ಇಲ್ಲ . ಅಲ್ಲಿಗೆ ರಾಜು ಅವರನ್ನು ತಂಡಕ್ಕೆ ಕರೆ ತಂದ ಉದ್ದೇಶವೇ ವಿಫಲವಾಗುತ್ತದೆ.

ರಾಜು ಯಶಸ್ವಿಯಾಗುತ್ತಾರೆಯೆ (ಅವಕಾಶ ಕೊಟ್ಟಲ್ಲಿ ) ಅನ್ನುವುದೀಗ ಕುತೂಹಲದ ಪ್ರಶ್ನೆ . ಆಯ್ಕೆ ಮಂಡಳಿಗೆ ಆ ವಿಶ್ವಾಸವಿದೆ. ಅವರು ಇತ್ತೀಚೆಗೆ ಉತ್ತಮ ಸಾಧನೆಯನ್ನೂ ತೋರಿದ್ದಾರೆ ಅಂದಿದ್ದಾರೆ ಬೋರ್ಡೆ. ಪಾಪ, ಅವರಿಗಿಂತಲೂ ಉತ್ತಮ ಸಾಧನೆ ತೋರಿರುವ ಸ್ಪಿನ್ನಿಗರಿಗೆ ಬಾಲನ್ನು ನುಂಗುವಷ್ಟು ದುಃಖವಾಗಿದ್ದಲ್ಲಿ ಆಶ್ಚರ್ಯವೇನೂ ಇಲ್ಲ . ಮುಖ್ಯವಾಗಿ, ತುಂಬಾ ದುಃಖವಾಗಿರುವುದು ಆಸ್ಟ್ರೇಲಿಯಾ ವಿರುದ್ಧದ ಮೊನ್ನಿನ ಪಂದ್ಯದಲ್ಲಿ ಮುಂಬಯಿ ಪರವಾಗಿ ಅತ್ಯಂತ ಶ್ರೇಷ್ಠ ಆಲ್‌ರೌಂಡ್‌ ಸಾಧನೆ ತೋರಿದ ಸಾಯಿರಾಜ್‌ ಬಹುತುಲೆಗೆ. ಇನ್ನು ರಾಜುವಿಗಾಗಿ ತಂಡದಿಂದ ಹೊರಕ್ಕೆ ದಬ್ಬಲ್ಪಟ್ಟ ರಾಹುಲ್‌ ಸಾಂಘ್ವಿ ಗೆ ಹುತಾತ್ಮನ ಪಟ್ಟ .

ಜೋಶಿ ಎಂಬುವನು ದುರಾದೃಷ್ಟವಂತನಯ್ಯ

ಮೊದಲ ಟೆಸ್ಟ್‌ ತಂಡದಲ್ಲಿ ಜೋಶಿ ಎನ್ನುವ ಹೆಸರು ಕಂಡು ಬರದಿದ್ದಾಗ, ನಾನು ಇದನ್ನು ನಿರೀಕ್ಷಿಸಿದ್ದೆ ಎಂದು ಜೋಶಿ ಎನ್ನುವ ಆ ವ್ಯಕ್ತಿಯೇ ಬೆಂಗಳೂರಿನಲ್ಲಿ ವೇದಾಂತದ ದನಿಯಲ್ಲಿ ಹೇಳಿದ್ದರು. ಮುಂಬಯಿ ಟೆಸ್ಟ್‌ಗೂ ಮುನ್ನ ಭಾರತ ಆಡಿದ ಕಡೆಯ ಟೆಸ್ಟ್‌ನಲ್ಲಿ ತಂಡಕ್ಕೆ ಗೆಲುವಿನ ರುಚಿಯುಣಿಸಿದ್ದು ಇದೆ ಜೋಶಿ ಎನ್ನುವ ಆಲ್‌ರೌಂಡರ್‌. ಅದೇ ಜೋಶಿ ಮುಂದಿನ ಟೆಸ್ಟನ್ನು ಟೀವಿಯಲ್ಲಿ ವೀಕ್ಷಿಸುವಂತಾದದ್ದು ಅಪ್ಪಟ ದೇಶೀ ‘ ಕ್ರಿಕೆಟ್ಟು ’.

ಜೋಶಿಗೆ ಹೋಲಿಸಿದಲ್ಲಿ ಜಹೀರ್‌ ಖಾನ್‌ ಸ್ವಲ್ಪ ಮಟ್ಟಿಗಿನ ಅದೃಷ್ಟವಂತ . ಒಂದು ದಿನದ ಪಂದ್ಯಗಳಲ್ಲಿ ವೇಗವಾಗಿ ವಿಕೆಟ್‌ ಕಬಳಿಸುತ್ತಿದ್ದರೂ ಟೆಸ್ಟ್‌ ಪಂದ್ಯಗಳಲ್ಲಿ ಸ್ಥಾನ ಪಡೆಯುವಲ್ಲಿ ವಿಫಲನಾಗಿದ್ದ ಈ ಪ್ರತಿಭಾವಂತ ಶ್ರೀನಾಥ್‌ ಬೆರಳು ಮುರಿದುಕೊಳ್ಳುವುದರೊಂದಿಗೆ, ಅಗರ್ಕರ್‌ಗೆ ಜ್ವರ ಅಟಕಾಯಿಸುವುದರೊಂದಿಗೆ ತಂಡಕ್ಕೆ ಮರಳಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀನಾಥ್‌ಗೆ ಬೆರಳು ಮುರಿದದ್ದು ಸ್ವಾಗತಾರ್ಹ.

ಅಂದಹಾಗೆ, ಮಾರ್ಚ್‌ 11 ರ ಭಾನುವಾರ ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಬೋರ್ಡೆ ಬೋರ್ಡ್‌ ಆರಿಸಿರುವ 14 ಮುಖಗಳು ಇಂತಿವೆ. ಅವರ ಸಾಧನೆ ಸದ್ಯದಲ್ಲೇ ಬಯಲಾಗಲಿದೆ -

ಸೌರವ್‌ ಗಂಗೂಲಿ (ನಾಯಕ), ರಾಹುಲ್‌ ದ್ರಾವಿಡ್‌ (ಉಪನಾಯಕ), ಶಿವಸುಂದರ್‌ ದಾಸ್‌, ಶಡಗೋಪನ್‌ ರಮೇಶ್‌, ಸಚಿನ್‌ ತೆಂಡೂಲ್ಕರ್‌, ವಿವಿಎಸ್‌ ಲಕ್ಷ್ಮಣ್‌, ನಯನ್‌ ಮೊಂಗಿಯಾ (ವಿಕೆಟ್‌ ಕೀಪರ್‌), ಹರಭಜನ್‌ ಸಿಂಗ್‌, ಶರಣದೀಪ್‌ ಸಿಂಗ್‌, ವೆಂಕಟಪತಿ ರಾಜು, ಜಹೀರ್‌ ಖಾನ್‌, ಆಶೀಶ್‌ ನೆಹ್ರಾ, ವೆಂಕಟೇಶ ಪ್ರಸಾದ್‌ ಮತ್ತು ಹೇಮಂಗ್‌ ಬದಾನಿ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X