ದುರುಗಮ್ಮನ ಜಾತ್ರೆಗೆ ಬಲಿಪಶುಗಳೊಂದಿಗೆ ಭಕ್ತಾದಿಗಳ ದಂಡು
ಕೊಪ್ಪಳ : ಬಲಿ ಜಾತ್ರೆ ಎಂದೇ ಖ್ಯಾತವಾದ ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡ ಗ್ರಾಮದ ದುರುಗಮ್ಮನ ಜಾತ್ರೆ ಇಂದಿನಿಂದ. ಫೆ. 23ರಿಂದ 26ರವರೆಗೆ ನಡೆವ ಈ ಜಾತ್ರೆಯಲ್ಲಿ ಪ್ರಾಣಿ ಬಲಿಯೇ ವಿಶೇಷ. ಮೂರು ವರ್ಷಕ್ಕೊಮ್ಮೆ ನಡೆವ ಜಾತ್ರೆಯಲ್ಲಿ ಭಕ್ತಾದಿಗಳು ಕೋಳಿ, ಕುರಿ, ಟಗರು ಹಾಗೂ ಕೆಲವೊಮ್ಮೆ ಕೋಣನ ಬಲಿ ನೀಡುವುದೂ ಉಂಟು.
ದೇವರ ಹರಕೆ ತೀರಿಸಲು ಕೋಳಿ, ಕುರಿ, ಟಗರುಗಳೊಂದಿಗೆ ತಂಡೋಪ ತಂಡವಾಗಿ ಭಕ್ತಾದಿಗಳು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನೀಡಬೇಡಿ ಎಂಬ ತಿಳಿವಳಿಕೆ ಮೂಡಿಸುವ ವಿಚಾರವಾದಿಗಳ ತಂಡವೂ ಗ್ರಾಮಕ್ಕೆ ಬಂದಿದೆ. ಪೊಲೀಸ್ ಬಿಗಿಬಂದೋಬಸ್ತ್ ಸಹ ಮಾಡಲಾಗಿದೆ. ಈ ನಡುವೆಯೂ ಕೋಳಿ, ಕುರಿಗಳ ಬಲಿ ಅವ್ಯಾಹತವಾಗಿ ಸಾಗಿದೆ ಎಂಬುದು ವರದಿ.
ಜಾತ್ರೆಗೆ ವಾರಗಳ ಮುಂಚೆಯೇ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸಭೆ ನಡೆಸಿ, ಪ್ರಾಣಿ ಬಲಿ ಮೂಢ ನಂಬಿಕೆ, ಬಲಿ ನೀಡುವ ಪದ್ಧತಿ ಕೈಬಿಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದರು.
ಮನವಿಯನ್ನು ಧಿಕ್ಕರಿಸಿ ಕಾನೂನು ಬಾಹಿರವಾಗಿ ಪ್ರಾಣಿ ಬಲಿ ನೀಡಿದರೆ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶವನ್ನೂ ಹೊರಡಿಸಲಾಗಿದೆ. ಗ್ರಾಮದ ಎಲ್ಲೆಡೆ ದಯಯೇ ಧರ್ಮದ ಮೂಲವಯ್ಯ, ಪ್ರಾಣಿಗಳಿಗೂ ಬದುಕುವ ಹಕ್ಕಿದೆ, ಪ್ರಾಣಿ ಬಲಿ ಅಮಾನವೀಯ ಎಂಬ ಬರಹಗಳುಳ್ಳ ಬ್ಯಾನರ್, ಪೋಸ್ಟರ್ ಅಂಟಿಸಲಾಗಿದೆ.
ಆದರೆ, ಬೇರೆ ಊರುಗಳಿಂದ ಬರುವ ಭಕ್ತರು ತಮ್ಮ ಹರಕೆ ತೀರಿಸಲು ಪೊಲೀಸರ ಕಣ್ಣು ತಪ್ಪಿಸಿ ಬಲಿ ನೀಡುತ್ತಲೇ ಇದ್ದಾರೆ. ದಿನವೂ ಕಸಾಯಿ ಅಂಗಡಿಯಲ್ಲಿ ನೂರಾರು ಪ್ರಾಣಿಗಳನ್ನು ಕಡಿದು ತೂಗು ಹಾಕುತ್ತಾರೆ. ರಾಜಾರೋಷವಾಗಿ ಮಾಂಸ ಮಾರುತ್ತಾರೆ. ಅದು ತಪ್ಪಲ್ಲ, ನಾವು ದೇವರ ಹೆಸರಲ್ಲಿ ಪ್ರಾಣಿ ಬಲಿ ನೀಡಿದರೆ ತಪ್ಪೆ ಎಂದು ಕೆಲವು ಭಕ್ತಾದಿಗಳು ಪೊಲೀಸರೊಂದಿಗೆ ಜಗಳಕ್ಕೂ ನಿಂತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಂಪೂರ್ಣ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ. ಪ್ರಾಣಿ ಬಲಿ ನೀಡದಂತೆ ಗ್ರಾಮಸ್ಥರ ಮನವೊಲಿಸುವ ಕಾರ್ಯ ಸಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಜಿ. ಅಯಾಚಿತ್ ತಿಳಿಸಿದ್ದಾರೆ.
(ಕೊಪ್ಪಳ ಪ್ರತಿನಿಧಿಯಿಂದ)












Click it and Unblock the Notifications