ಭೀಮೆ ಬತ್ತದಂತೆ 15 ಬ್ಯಾರೇಜ್ ನಿರ್ಮಾಣ : ಸಚಿವರ ಭರವಸೆ
ಕುಷ್ಟಗಿ: ಭೀಮಾ ನದಿ ಬತ್ತಿಹೋಗಲು ಹಿಂದಿನ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ ಎಂದು ರಾಜ್ಯದ ಬೃಹತ್ ಹಾಗೂ ಮಧ್ಯಮ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಆರೋಪಿಸಿದ್ದಾರೆ. ಭೀಮಾನದಿಯಲ್ಲಿ 15 ಟಿ.ಎಂ.ಸಿ.ಗಿಂತಲೂ ಹೆಚ್ಚು ನೀರು ಹರಿಯುತ್ತಿದೆ. ಹಿಂದಿನ ಸರ್ಕಾರಗಳು ನೀರಿನ ಸದ್ಭಳಕೆಗೆ ಕ್ರಮ ಕೈಗೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.
ಹಿಂದಿನ ಸರ್ಕಾರಗಳು ಕೇವಲ ಭರವಸೆಗಳನ್ನಷ್ಟೇ ನೀಡಿದವು. ಆ ಬದಲು ಬ್ಯಾರೇಜ್‌ಗಳನ್ನು ನಿರ್ಮಿಸಿದ್ದರೆ, ಇಂತಹ ಸ್ಥಿತಿ ಬರುತ್ತಿತ್ತೇ ಎಂದು ಅವರು ಪ್ರಶ್ನಿಸಿದರು. ಭವಿಷ್ಯದಲ್ಲಿ ಎಂದೆಂದೂ ಭೀಮೆ ಬತ್ತಿ ಇಂತಹ ಘೋರ ಪರಿಸ್ಥಿತಿ ಎದುರಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದರು. ಉತ್ತರ ಕರ್ನಾಟಕದ ನೀರಿನ ಸಮಸ್ಯೆ ಪರಿಹರಿಸಲು ಕೃಷ್ಣ ನೇತೃತ್ವದ ಸರ್ಕಾರ ಯೋಜನೆ ರೂಪಿಸಲಿದೆ ಎಂದರು.
ಜಲಕ್ಷಾಮ ಬಾರದಂತೆ ತಡೆಲು ಬಿಜಾಪುರದಲ್ಲಿ ನಾಲ್ಕು ಹಾಗೂ ಗುಲ್ಬರ್ಗಾ ಜಿಲ್ಲೆಯಲ್ಲಿ 11 ಬ್ಯಾರೇಜ್ ನಿರ್ಮಿಸಲಾಗುವುದು ಎಂದೂ ಅವರು ಹೇಳಿದರು. ಇನ್ನು 6 ತಿಂಗಳಲ್ಲಿ ಬ್ಯಾರೇಜ್ ನಿರ್ಮಾಣ ಕಾಮಗಾರಿ ಆರಂಭಿಸುವ ಭರವಸೆಯನ್ನೂ ನೀಡಿದರು.
ನಾಲೆಗಳಿಂದ ನೀರು ಹರಿದು ಪೋಲಾಗುತ್ತಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಗಂಗಾವತಿ ತಾಲೂಕಿನ ಕೇಸರಹಟ್ಟಿ ಬಳಿ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ನೀರು ಪೋಲಾಗಿರುವ ಬಗ್ಗೆ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.












Click it and Unblock the Notifications