ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೆ ಬುಕ್ಕಿ ಗುಪ್ತಾ ಯಾರೆಂದೇ ಗೊತ್ತಿಲ್ಲ : ಮಾರ್ಕ್‌ ವಾ

By Staff
|
Google Oneindia Kannada News

*ಗ್ರೆಗ್‌ ಬಕ್‌ಲ್‌

ಮೆಲ್ಬೋರ್ನ್‌ : ಶುಕ್ರವಾರವಷ್ಟೇ ಆಸ್ಟ್ರೇಲಿಯಾ ಪರ ದಾಖಲೆ ಶತಕ (148 ಎಸೆತಗಳಲ್ಲಿ 173, ವಿಂಡೀಸ್‌ ವಿರುದ್ಧ) ಸಿಡಿಸಿ, ಕಳೆದುಕೊಂಡಿದ್ದ ಆತ್ಮ ವಿಶ್ವಾಸವನ್ನು ಮತ್ತೆ ತುಂಬಿಕೊಂಡಿರುವ ಮಾರ್ಕ್‌ ವಾ ಮೊಗ ಫ್ರೆಷ್‌ ಆಗಿತ್ತು. ಯಾವುದೋ ದೊಡ್ಡ ತಲೆನೋವು ಹೋಗಲಾಡಿಸಿಕೊಂಡ ಕೃತಾರ್ಥ ಭಾವ ಅವರಲ್ಲಿ . ಶನಿವಾರ ಐಸಿಸಿಯ ಫಿಕ್ಸಿಂಗ್‌ ತನಿಖಾಗಾರರ ಮುಂದೆ ಭಾರತದ ಬುಕ್ಕಿ ಮುಕೇಶ್‌ ಗುಪ್ತಾನನ್ನು ತಾವು ಎಂದೂ ಭೇಟಿಯಾಗೇ ಇಲ್ಲ ಎಂದು ಹೇಳಿ ಬಂದರು.

ಸುದ್ದಿಗಾರರರೊಂದಿಗೆ ಮುಖ ಕೊಟ್ಟು ಮಾತನಾಡದ ವಾ, ಬೆರಳೆಣಿಕೆಯಷ್ಟು ಉತ್ತರಗಳನ್ನು ಮಾತ್ರ ಕೊಟ್ಟರು. ತಮ್ಮ ಮುಂದೆ ಬಂದ ಕೆಮೆರಾಗಳಿಗೆ ‘ನೋ ನೋ’ ಅಂದರು. ನಾನು ಎಂದೂ ಗುಪ್ತಾನನ್ನು ನೋಡೇ ಇಲ್ಲ. ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಲಿ ಹಾಗೂ ಐಸಿಸಿಯ ತನಿಖಾ ದಳದ ಅಧಿಕಾರಿಗಳಿಗೆ ಇದನ್ನೇ ಹೇಳಿದೆ. ಯಾವುದೋ ಫೋಟೋ ತೋರಿಸಿದರು. ಅವರ ಪ್ರಕಾರ ಅದು ಮುಕೇಶ್‌ ಗುಪ್ತಾನದು. ಅದು ನನಗೆ ಹೊಸ ಮುಖವಾಗಿತ್ತು. ಒಂದು ದೊಡ್ಡ ಕಿರಿಕಿರಿ ತೊಳೆದುಕೊಂಡಂತಾಗಿದೆ ಎಂದು ವಾ ಹೇಳಿದರು.

ವಾ ವಿಚಾರಣೆ ನಡೆದ ಹಿಲ್ಟನ್‌ ಹೊಟೇಲಿನ ಮುಂದೆ ನೆರೆದಿದ್ದ ಹಿಂಡುಗಟ್ಟಲೆ ಪತ್ರಕರ್ತರಿಗೆ ಕೊಂಚ ನಿರಾಸೆಯೇ ಆಯಿತು. ವಾ ಚುಟುಕು ಮಾತು ಮುಂದುವರೆಯಿತು- ‘ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಲಿಯ ಗ್ರೆಗ್‌ ಮೆಲಿಕ್‌ ಮತ್ತು ಐಸಿಸಿಯ ಇಬ್ಬರು ಭ್ರಷ್ಟಾಚಾರಿ ವಿರೋಧಿ ದಳದ ಅಧಿಕಾರಿಗಳು ನನ್ನನ್ನು ಪ್ರಶ್ನಿಸಿದರು. ಪಿಚ್‌ ಹಾಗೂ ಹವಾಮಾನದ ವರದಿ ಕೊಟ್ಟದ್ದಕ್ಕೆ 1994ರಲ್ಲಿ ನಾನು ಹಣ ಪಡೆದಿದ್ದದ್ದು ಜಾನ್‌ ಎಂಬ ಬುಕ್ಕಿಯಿಂದ. ಗುಪ್ತಾ ಯಾರೆಂದು ನನಗೆ ಗೊತ್ತೇ ಇಲ್ಲ’.

1995ರಲ್ಲಿ ಮಾರ್ಕ್‌ ವಾ ಹಾಗೂ ಶೇನ್‌ ವಾರ್ನ್‌ಗೆ ಬುಕ್ಕಿಯಿಂದ ಹಣ ಪಡೆದದ್ದಕ್ಕೆ ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಮುಕೇಶ್‌ ಗುಪ್ತಾ ಕೊಟ್ಟಿರುವ ಹೇಳಿಕೆಯಂತೆ- 1993ರಲ್ಲಿ ಹಾಂಗ್‌ಕಾಂಗ್‌ನಲ್ಲಿನ ಟೂರ್ನಿಯಾಂದರ ವೇಳೆ ಆಸ್ಟ್ರೇಲಿಯಾ ತಂಡದ ತಂತ್ರಗಳ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಮಾರ್ಕ್‌ ವಾ ಅವರಿಗೆ ಗುಪ್ತಾ 20 ಸಾವಿರ ಡಾಲರ್‌ ಕೊಟ್ಟಿದ್ದಾರೆ.

ಸಿಬಿಐ ವರದಿಯಲ್ಲಿರುವ ಭಾರತೀಯೇತರ 9 ಕ್ರಿಕೆಟಿಗರ ಹೆಸರುಗಳ ಪೈಕಿ ಮಾರ್ಕ್‌ ವಾ ಹೆಸರೂ ಇತ್ತು. ಉಳಿದ ಪ್ರಮುಖ ಹೆಸರುಗಳೆಂದರೆ ಲಾರಾ, ಅಲೆಕ್‌ ಸ್ಟುವರ್ಟ್‌ ಹಾಗೂ ಮಾರ್ಟಿನ್‌ ಕ್ರೋವ್‌. ಇವರೆಲ್ಲಾ ಭಾರತೀಯ ಬುಕ್ಕಿಗಳೊಂದಿಗೆ ವ್ಯವಹರಿಸಿರುವ ಬಗ್ಗೆ ಬಲವಾದ ಆಧಾರಗಳಿವೆ ಎಂದು ಸಿಬಿಐ ಹೇಳಿತ್ತು.

ತಲೆ ತೊಳೆದುಕೊಂಡ ವಾ : ಮೊದಲು ವಿಚಾರಣೆಗೆ ಹೌದೆಂದು, ನಂತರ ಒಲ್ಲೆ ಎಂದು ಹೇಳಿ ಸುದ್ದಿಯಲ್ಲಿದ್ದ ಮಾರ್ಕ್‌ ವಾ ಕೆಲವು ಟೀಕೆಗಳ ನಡುವೆಯೂ ತಮ್ಮ ಫಾರ್ಮ್‌ ಕಂಡುಕೊಂಡಿದ್ದಾರೆ. ಬರುವ ಮಂಗಳವಾರ (ಫೆಬ್ರವರಿ 12) ಭಾರತಕ್ಕೆ ಹಾರಲಿರುವ ವಾ ಇನ್ನಷ್ಟು ರನ್‌ ದೋಚುವ ನಿರೀಕ್ಷೆಯಿದೆ. ಈಗ ತಲೆ ಮೇಲಿನ ಭಾರ ಇಳಿಸಿಕೊಂಡಿರುವ ಕಾರಣ ಮಾನಸಿಕವಾಗಿ ಇವರು ಇನ್ನಷ್ಟು ಬಲವಾಗಿದ್ದಾರೆ ಎನ್ನಲೂ ಅಡ್ಡಿಯಿಲ್ಲ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X