ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರದಿಂದ ಜನಗಣತಿ, ಇಷ್ಟಕ್ಕೂ ಜನಗಣತಿ ಎಂದರೇನು ?

By Staff
|
Google Oneindia Kannada News

* ಪ್ರಿಯಾಂಕ ಖನ್ನ

ನವದೆಹಲಿ : ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಶುಕ್ರವಾರ, ಫೆ.9ರಿಂದ 3 ವಾರಗಳ ಕಾಲ ನಡೆಯಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ಎರಡನೇ ರಾಷ್ಟ್ರ ಎಂಬ ಅಗ್ಗಳಿಕೆ (?)ಗೆ ಪಾತ್ರವಾಗಿರುವ ಭಾರತದಂಥ ದೇಶದಲ್ಲಿ ಈ ಕಾರ್ಯ ಸರಳ ಅಲ್ಲ. ಜನಗಣತಿ ಎಂದರೆ ಕೇವಲ ತಲೆಗಳ ಲೆಕ್ಕಾಚಾರವಷ್ಟೇ ಅಲ್ಲ. ನಮ್ಮ ಸಮಾಜದ ಸ್ಥಿತಿ- ಗತಿ, ಆರ್ಥಿಕ ಸಾಮರ್ಥ್ಯ, ಆರೋಗ್ಯ ಹೀಗೆ ಇವುಗಳೆಲ್ಲದರ ಬಿಡಿಬಿಡಿ ಚಿತ್ರ ಕಟ್ಟಿಕೊಡುವ ಬಹು ಮುಖ್ಯ ಎಣಿಕಾ ಕಾರ್ಯ.

ಜನಗಣತಿ 2001. ಈ ವರದಿ ಸಿದ್ಧವಾಗುವಷ್ಟರಲ್ಲಿ ಅದರ ತುಂಬಾ ಅನೇಕ ಶಾಲಾ ಶಿಕ್ಷಕರ, ಸರ್ಕಾರಿ ಅಧಿಕಾರಿಗಳ ಹಾಗೂ ನೌಕರರ ಬೆವರು ಸೇರಿ ಹೋಗಿರುತ್ತದೆ. ಕಳ್ಳಕಾಕರ ಭಯವಿರುವ ನಗರಗಳಲ್ಲಿ ಬಹುತೇಕ ಮುಚ್ಚಿರುವ ಮನೆಗಳ ಕದ ಬಡಿಯಬೇಕು. ಜನರ ಹೀಗಳಿಕೆ, ಉಡಾಫೆ ಮೊದಲಾದ ಅಸಹಕಾರಗಳಿಗೆ ಸಿಲುಕಬೇಕು. ಸೂಳೆಗೇರಿ ನೋಡಬೇಕು. ದವಾಖಾನೆಗೆ ಹೋಗಬೇಕು. ಮಾನಸಿಕ ತೊಂದರೆಗೆ ಚಿಕಿತ್ಸೆ ನೀಡುವ ಕೇಂದ್ರಗಳಿಗೆ ಎಡತಾಕಬೇಕು. ಅಷ್ಟೇ ಅಲ್ಲ ಸೂರಿಲ್ಲದವರನ್ನೂ ಹುಡುಕಿ, ಅವರ ಸಂಖ್ಯೆಯನ್ನು ನಮೂದಿಸಬೇಕು.

ಗುರಾತ್‌ ಭೂಕಂಪದ ಸವಾಲು : ಫೆಬ್ರವರಿ 28 ಹಾಗೂ ಮಾರ್ಚ್‌ 1ರ ನಡುರಾತ್ರಿಯೂ ಜನಗಣತಿ ನಡೆಯಲಿದೆ. ಅಂದು ಫುಟ್‌ಪಾತನ್ನೇ ಮನೆ ಮಾಡಿಕೊಂಡಿರುವವರ ಗಣತಿ ಮಾಡಲಾಗುವುದು. ಈ ಬಾರಿ ಜನಗಣತಿಗೆ ಮತ್ತೊಂದು ಸವಾಲು- ಗುಜರಾತಿನಲ್ಲಿ ಸಂಭವಿಸಿರುವ ಹೊಟ್ಟೆಬಾಕ ಭೂಕಂಪ. ಯಾರ್ಯಾರು ಎಲ್ಲೆಲ್ಲಿಗೆ ಗುಳೇ ಹೋಗಿದ್ದಾರೋ, ಅಳಿದುಳಿದ ಆಸ್ತಿ ಪಾಸ್ತಿ ಎಷ್ಟೋ, ಆರೋಗ್ಯ ಎಷ್ಟರಮಟ್ಟಿಗೆ ಸುಧಾರಿಸಿದೆಯೋ- ಹೀಗೆ ಗುಜರಾತ್‌ನಲ್ಲಿ ಜನಗಣತಿ ಮಾಡುವವರು ಸಾಕಷ್ಟು ಗೊಂದಲಕ್ಕೆ ಸಿಲುಕುವ ಸಾಧ್ಯತೆಗಳಿವೆ.

ಜನಗಣತಿ ಯಾಕೆ ಮುಖ್ಯ? : ಜನಗಣತಿ ಎಂದರೆ ಜನಸಂಖ್ಯೆಯ ಪತ್ತೆಯಷ್ಟೇ ಅಲ್ಲ. ನಮ್ಮ ಸಾಮಾಜಿಕ ವ್ಯವಸ್ಥೆ- ಅವಸ್ಥೆಗಳ ಇಡೀ ಚಿತ್ರಣವನ್ನು ಅದು ನಮ್ಮ ಮುಂದಿಡುತ್ತದೆ. ಸರ್ಕಾರ ಯಾವುದೇ ಯೋಜನೆಗಳನ್ನು ರೂಪಿಸುವುದಕ್ಕೆ ಇದೊಂದು ಪ್ರಮುಖ ಆಕರವಾಗಬಲ್ಲದು. ನಿಮಗೆ ಚಿತ್ರ ಬಿಡಿಸಲು ಒಂದು ಕ್ಯಾನ್‌ವಾಸ್‌ ಹೇಗೆ ಬೇಕೋ, ಅದೇ ರೀತಿ ಸಾಮಾಜಿಕ ಯೋಜನೆಗಳ ರೂಪಿಸಲು ಜನಗಣತಿಯಲ್ಲಿನ ಒಂದೊಂದು ವಿವರವೂ ಕ್ಯಾನ್‌ವಾಸ್‌ ಆಗಬಲ್ಲುದು. ಒಂದು ದೇಶದ ಪರಿಸ್ಥಿತಿಯ ಸುಧಾರಣೆ, ಮೂಲಭೂತ ಸೌಕರ್ಯಗಳ ಪೂರೈಸುವಿಕೆ ವಗೈರೆಗೆ ಜನಗಣತಿ ಅತಿ ಮುಖ್ಯ ಎನ್ನುತ್ತಾರೆ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ)ಯ ವಕ್ತಾರ.

ಗಣತಿಯಲ್ಲಿ ನಾವೇ ನಂಬರ್‌ ಒನ್‌ : ಭಾರತಕ್ಕಿಂತ ಚೀನಾ ಜನಸಂಖ್ಯೆ ಅಧಿಕವಾಗಿದ್ದರೂ ಅಲ್ಲಿನ ಜನಗಣತಿಗಿಂತ ಭಾರತದ ಜನಗಣತಿ ಕಾರ್ಯ ಕಷ್ಟ. ಯಾಕೆಂದರೆ, ಚೀನಾಗೆ ಹೋಲಿಸಿದಲ್ಲಿ ನಮ್ಮ ದೇಶದಲ್ಲಿ ಹೆಚ್ಚು ವಿಭಾಗಗಳಲ್ಲಿ ಅಂಕಿ-ಅಂಶ ಸಂಗ್ರಹಿಸುತ್ತೇವೆ ಎನ್ನುತ್ತಾರೆ ಜನಗಣತಿ ಶಾಸ್ತ್ರಜ್ಞ ಆಶಿಶ್‌ ಬೋಸ್‌.

1872ರಲ್ಲಿ ಶುರುವಾದ ಜನಗಣತಿ ಈವರೆಗೆ ಒಮ್ಮೆಯೂ ನಿಲ್ಲದಂತೆ ನಡೆದುಕೊಂಡು ಬಂದಿದೆ. ಈ ವರ್ಷ ನಡೆಯುತ್ತಿರುವುದು 14ನೇ ಜನಗಣತಿ. ಇತರೆ ದೇಶಗಳಿಗೆ ಹೋಲಿಸಿದಲ್ಲಿ ಇದು ಭಾರತದ ಹೆಮ್ಮೆಯ ದಾಖಲೆ. ಬಹುತೇಕ ದೇಶಗಳಲ್ಲಿ ಜನಗಣತಿ ಪ್ರಕ್ರಿಯೆ ಪ್ರತಿ 10 ವರ್ಷಗಳಿಗೊಮ್ಮೆ ಯಾವುದೇ ಅಡೆತಡೆಯಿಲ್ಲದೆ ನಡೆದಿಲ್ಲ. ಜೊತೆಗೆ ಜನಗಣತೆಯ ನಿಖರತೆಗೂ ವಿಶ್ವದಲ್ಲಿ ಭಾರತ ಉತ್ತಮ ಉದಾಹರಣೆ. ಜನಗಣತಿ ಆಯುಕ್ತ ಜಯಂತ್‌ ಕುಮಾರ್‌ ಬಾಂತಿಯಾ ಅವರ ಪ್ರಕಾರ ನಮ್ಮ ಜನಗಣತಿಯಲ್ಲಿ ಅಬ್ಬಬ್ಬಾ ಅಂದರೆ ಶೇ. 1.5ಯಷ್ಟು ತಪ್ಪಿರುತ್ತದಷ್ಟೆ.

ಶುಕ್ರವಾರ, ಫೆಬ್ರವರಿ 9ರಿಂದ ಸುಮಾರು 25 ಲಕ್ಷ ಮಂದಿ ಜನಗಣತಿಗಾಗಿ ರಸ್ತೆಗಿಳಿಯಲಿದ್ದಾರೆ. ಅವರಲ್ಲಿ ಎಷ್ಟೋ ಮಂದಿ ನೀರುನಿಡಿ ಇರದ ಕೊಂಪೆಗಳಿಗೆ ಬರಬಹುದು. ನಿಮ್ಮ ಮನೆಯ ಕದವನ್ನಂತೂ ಖಂಡಿತ ತಟ್ಟುವರು. ದಯವಿಟ್ಟು ತಾತ್ಸಾರದ ಧೋರಣೆ ಬಿಟ್ಟು ಅವರೊಂದಿಗೆ ಸಹಕರಿಸಿ. ದೇಶದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಹು ಮುಖ್ಯ ಕಾರ್ಯವಾದ ಜನಗಣತಿಗೆ ನಿಮ್ಮ ಕೈ ಜೋಡಿಸಿ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X