Get Updates
Get notified of breaking news, exclusive insights, and must-see stories!

ಕೋಲಾರ ಚಿನ್ನದ ಗಣಿಯ ಆಯುಷ್ಯ ಇನ್ನು ಕೆಲವೇ ದಿನ ಮಾತ್ರ

ಕೆ.ಜಿ.ಎಫ್‌ : 120 ವರ್ಷಗಳ ಸುದೀರ್ಘ ಇತಿಹಾಸ ಇರುವ ಕೋಲಾರ ಚಿನ್ನದ ಗಣಿ ಮುಚ್ಚುವ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರಕಿದೆ. ಚಿನ್ನದ ಗಣಿ ಈಗ ಅಲ್ಪಾಯು. ಇದರ ಅಯುಷ್ಯ ಇನ್ನು ಕೇವಲ ಕೆಲವೇ ದಿನಗಳು ಮಾತ್ರ. ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ ಅನ್ನು ಮಾರ್ಚ್‌ 31ರಿಂದ ಕಾಯಂ ಆಗಿ ಮುಚ್ಚುವಂತೆ ಕೇಂದ್ರ ಗಣಿ ಸಚಿವಾಲಯ ಸೂಚಿಸಿದೆ.

ನೌಕರರ ವಜಾಕ್ಕೆ ಆದೇಶ : ಈ ಸಂಬಂಧ ಗಣಿಯ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್‌ ಅವರಿಗೆ ಗಣಿ ಮುಚ್ಚಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ಕೇಂದ್ರದ ಆದೇಶ ತಿಳಿಸಿದೆ. ಒಂದೊಮ್ಮೆ ಗಣಿಯ ನೌಕರರು ಫೆಬ್ರವರಿ 9ರೊಳಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದಿದ್ದರೆ, ಅವರನ್ನು ನಿರ್ದಾಕ್ಷಿಣ್ಯವಾಗಿ ಕೈಗಾರಿಕಾ ವ್ಯಾಜ್ಯ ಕಾಯಿದೆ 1948ರ ಅಡಿಯಲ್ಲಿ ಅಥವಾ ಸೇವಾ ನಿಯಮಗಳ ಅಡಿಯಲ್ಲಿ ಕೆಲಸದಿಂದ ವಜಾ ಮಾಡುವಂತೆ ಕೂಡ ಆದೇಶಿಸಲಾಗಿದೆ.

ಈ ಕಠಿಣ ಕ್ರಮದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು, ಗಣಿಯ ಆಸ್ತಿ ಪಾಸ್ತಿ ರಕ್ಷಣೆಯ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದ ನೆರವು ಪಡೆಯುವಂತೆ ಸಹ ಆಡಳಿತ ಮಂಡಳಿಗೆ ಸೂಚಿಸಲಾಗಿದೆ.

ಟೌನ್‌ಷಿಪ್‌ ತೆರವು : ಕೇಂದ್ರ ಸರಕಾರದ 2001ರ ಜನವರಿ 30ರ ಪತ್ರದ ರೀತ್ಯ ಗಣಿ ಸುತ್ತಮುತ್ತಲ ಪ್ರದೇಶವನ್ನು (ಟೌನ್‌ಷಿಪ್‌) ನಗರಸಭೆಗೆ ಹಸ್ತಾಂತರಿಸಲು ಸಂಬಂಧಿತ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅಂದರೆ ಟೌನ್‌ಷಿಪ್‌ ತೆರವು ಕಾರ್ಯವೂ ಚುರುಕುಗೊಳ್ಳಲಿದೆ. ನಗರಸಭೆಯಲ್ಲಿ ಬಾಕಿ ಉಳಿಸಿಕೊಂಡಿರುವ 12 ಲಕ್ಷ ರುಪಾಯಿ ಆಸ್ತಿ ತೆರಿಗೆ ಪಾವತಿಗೆ ಕ್ರಮ ಕೈಗೊಳ್ಳಬೇಕಾಗಿದ್ದು, ಈ ಹಸ್ತಾಂತರ ಪ್ರಕ್ರಿಯೆ ಫೆಬ್ರವರಿ 15ರೊಳಗೆ ಪೂರ್ಣಗೊಳ್ಳಬೇಕಿದೆ.

ಮುಚ್ಚಲಿರುವ ಆಸ್ಪತ್ರೆ : ಚಿನ್ನದ ಗಣಿಯ ಆಸ್ಪತ್ರೆಯನ್ನು ಸಹ ಇದೇ 15ರೊಳಗೆ ಮುಚ್ಚಬೇಕು ಎಂದು ಆದೇಶ ಪತ್ರ ತಿಳಿಸಿದೆ. ಇನ್ನು ಮುಂದೆ ಯಾವುದೇ ಹೊಸ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಬಾರದು. ಈಗ ಹಾಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ನಿಗದಿತ ಕಾಲಾವಧಿಯಾಳಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗದಿದ್ದ ಸಂದರ್ಭದಲ್ಲಿ ಅವರನ್ನು ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸುವಂತೆ ಸಹ ಆದೇಶ ತಿಳಿಸಿದೆ.

ಗಣಿ ಮುಚ್ಚಿದ ಬಳಿಕವೂ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಹಾಲಿ ಸೊಸೈಟಿ ಆಡಳಿತದ ಮೂಲಕ ನಡೆಯುತ್ತಿರುವ ಬಿಜಿಎಂಎಲ್‌ ಶಾಲೆಯ ಆಡಳಿತ ಮಂಡಳಿಯನ್ನು ಬದಲಾಯಿಸಿ, ಸರಕಾರದ ಅನುಧಾನ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಹ ಸೂಚನೆ ನೀಡಲಾಗಿದೆ. ನರ್ಸರಿ ವಿಭಾಗವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೂ ಈ ಸಂಬಂಧ ಚಾಲನೆ ದೊರೆಯಲಿದೆ.

ಗಣಿ ಸುರಕ್ಷತಾ (ಭದ್ರತೆ) ನಿರ್ದೇಶನಾಲಯದ ಉಸ್ತುವಾರಿಯಲ್ಲಿ ಗಣಿ ಮುಚ್ಚಲು ಆಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯ ಗಣಿ ಮತ್ತು ಭೂ ವಿಜ್ಞಾನ ನಿರ್ದೇಶನಾಲಯ ಹಾಗೂ ಕೈಗಾರಿಕಾ ಬ್ಯಾಂಕ್‌ ಜತೆ ಮಾತುಕತೆ ನಡೆಸಿ, ಕಂಪನಿಯ ಆಸ್ತಿ ಉಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಬಾಕಿ ಉಳಿದಿರುವ ಖನಿಜ ತೆರಿಗೆ ಇತ್ಯಾದಿ ಪಾವತಿಗೂ ಸೂಚಿಸಲಾಗಿದೆ. ಈ ಸಂಬಂಧ ಆಸ್ತಿ ಮಾರಾಟದ ಬಳಿಕೆ ಈ ಬಾಕಿ ಚುಕ್ತಾ ಪ್ರಕ್ರಿಯೆ ಆರಂಭವಾಗಲಿದ್ದು, ಬಡ್ಡಿ ಮನ್ನಾ ಮಾಡಲು ಮನವಿ ಸಲ್ಲಿಸಲಾಗುವುದು.

ಈ ಸಂಬಂಧ ಎಸ್‌.ಆರ್‌. ಪ್ರಸಾದ್‌ ಅವರು ಕಾರ್ಯ ಪ್ರವೃತ್ತರಾಗಿದ್ದು, 2000 ಅಡಿಗಳಿಗಿಂತಲೂ ಹೆಚ್ಚು ಆಳದಲ್ಲಿ ನೀರು ಪಂಪ್‌ ಮಾಡುವುದನ್ನು ನಿಲ್ಲಿಸಿ, ಯಂತ್ರೋಪಕರಣಗಳನ್ನು ಮೇಲಕ್ಕೆ ತರಲು ಸೂಚನೆ ನೀಡಿದ್ದಾರೆ. ಪುರಸಭೆ, ಗಣಿ ಭದ್ರತಾ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಮಾತುಕತೆಯಲ್ಲೂ ತೊಡಗಿದ್ದಾರೆ. ಆಸ್ತಿ ತೆರಿಗೆ ಪಾವತಿ, ವಿದ್ಯುತ್‌ ಬಿಲ್‌ ಬಾಕಿ ಸಂಬಂಧ ಕ್ರಮ ಕೈಗೊಂಡಿದ್ದಾರೆ.

ಅಲ್ಲಿಗೆ ಚಿನ್ನದ ಗಣಿ ಮುಚ್ಚುವುದು ಈಗ ಶತಸಿದ್ಧವಾಗಿದೆ. ಬಹುತೇಕ ಒಂದು ವರ್ಷದಿಂದಲೂ ಗಣಿ ಉಳಿಸಲು ವಿವಿಧ ಸ್ತರಗಳಲ್ಲಿ ನಡೆದ ಹೋರಾಟ ವ್ಯರ್ಥವಾಗಿದೆ. ಕೆ.ಜಿ.ಎಫ್‌. ನ ಜನಜೀವನಕ್ಕೆ ಮಂಕು ಕವಿದಿದೆ. ಬೇರೆ ಉದ್ಯೋಗದ ಪರಿವೆಯೇ ಇಲ್ಲದ ನೌಕರರು ಕಂಗೆಟ್ಟಿದ್ದಾರೆ. ಗೋಲ್ಡ್‌ ಸಿಟಿಯಲ್ಲಿ ಪ್ರೇತಕಳೆ ಆವರಿಸಿದೆ. ಇನ್ನು ಉಳಿದಿರುವುದು ಕೇವಲ ಕ್ಷಣಗಣನೆ.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+