Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್‌ವುಡ್‌ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್
Virat Kohli Sandalwood entry: ಆರ್‌ಸಿಬಿ ಅಭಿಮಾನಿಗಳ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ, ಕ್ಯಾಮೆರಾ ಮುಂದೆಯೂ ಅಷ್ಟೇ ಫನ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಆರ್‌ಸಿಬಿ ಯುಟ್ಯೂಬ್ ಚಾನೆಲ್ ಹಂಚಿಕೊಂಡಿರುವ ವಿಡಿಯೋದಲ್ಲಿ ಕೊಹ್ಲಿ ಮತ್ತು ಕಾಮಿಡಿಯನ್ ಡ್ಯಾನಿಶ್ ಸೇಠ್ ನಡುವಿನ ಸಂಭಾಷಣೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದರಲ್ಲಿ ಕೊಹ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಬಗ್ಗೆ ಮಾತನಾಡಿರುವುದು ಗಮನ ಸೆಳೆದಿದೆ.
ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿ, ಮೈದಾನದ ಹೊರಗೂ ಕನ್ನಡಿಗರ ಮನಗೆಲ್ಲುವುದರಲ್ಲಿ ಸದಾ ಮುಂದು. ಇತ್ತೀಚೆಗೆ ಆರ್‌ಸಿಬಿ ತಂಡದ 'ಮಿಸ್ಟರ್ ನಾಗ್ಸ್' ಖ್ಯಾತಿಯ ಡ್ಯಾನಿಶ್ ಸೇಠ್ ನಡೆಸಿದ ಸಂದರ್ಶನದಲ್ಲಿ ಕೊಹ್ಲಿ ಸ್ಯಾಂಡಲ್‌ವುಡ್ ಪ್ರವೇಶದ ಬಗ್ಗೆ ತಮಾಷೆಯಾಗಿ ಮಾತನಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಡ್ಯಾನಿಶ್ ಇನ್ಫ್ಲ್ಯುಯೆನ್ಸ್ ಇದೆಯಲ್ಲ?
ಕೇವಲ ಐದು ನಿಮಿಷಗಳ ಈ ಕಿರು ಸಂದರ್ಶನದಲ್ಲಿ ಡ್ಯಾನಿಶ್ ಮತ್ತು ವಿರಾಟ್ ಪರಸ್ಪರ ಕಾಲೆಳೆದುಕೊಳ್ಳುತ್ತಾ ಮಜಾ ಮಾಡಿದ್ದಾರೆ. ಮಾತುಕತೆಯ ನಡುವೆ ಡ್ಯಾನಿಶ್, "ವಿರಾಟ್, ನಿಮಗೆ ಎಲ್ಲಾದರೂ ಅಭದ್ರತೆ ಕಾಡುತ್ತಿದೆಯೇ? ಹಾಗೇನಾದರೂ ಇದ್ದರೆ ಹೇಳಿ, ನಾನು ನಿಮ್ಮನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ, ಭಯಪಡಬೇಡಿ" ಎಂದು ಕಿಚಾಯಿಸಿದ್ದಾರೆ.
ಇದಕ್ಕೆ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟ ವಿರಾಟ್, "ನನಗೆ ಯಾವುದೇ ಅಭದ್ರತೆ ಕಾಡುತ್ತಿಲ್ಲ. ಒಂದು ವೇಳೆ ಎಲ್ಲೂ ಅವಕಾಶ ಸಿಗದಿದ್ದರೆ, ಕೊನೆಗೆ ನಿಮ್ಮ ಪ್ರಭಾವ ಬಳಸಿ ನಾನು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಬಹುದು. ನೀವು ಇಲ್ಲಿ ದೊಡ್ಡ ಸ್ಟಾರ್ ಅಲ್ವೇ? ನಿಮ್ಮ ಶಿಫಾರಸಿನ ಮೇಲೆ ನಾನು ಯಾವುದಾದರೂ ಸೈಡ್ ರೋಲ್ ಮಾಡಬಹುದು" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ವಿಡಿಯೋ ವೈರಲ್
ಕೊಹ್ಲಿ ಅವರ ಈ ಮಾತಿಗೆ ನಕ್ಕ ಡ್ಯಾನಿಶ್, "ಖಂಡಿತ, ನಾನು ನಿಮ್ಮ ಪರ ಇದ್ದೇನೆ, ಯಾವುದಕ್ಕೂ ಹೆದರಬೇಡಿ" ಎಂದು ಅಭಯ ನೀಡಿದ್ದಾರೆ. ಆರ್‌ಸಿಬಿ ತನ್ನ ಅಧಿಕೃತ ಯುಟ್ಯೂಬ್ ವಾಹಿನಿಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. ವಿರಾಟ್ ಕೊಹ್ಲಿ ಅವರ ಈ ಸಮಯಪ್ರಜ್ಞೆ ಮತ್ತು ಹಾಸ್ಯ ಪ್ರವೃತ್ತಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕ್ರಿಕೆಟ್ ಲೋಕದ ಕಿಂಗ್ ಆಗಿರುವ ವಿರಾಟ್, ನಿಜವಾಗಿಯೂ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದು ಕುತೂಹಲದ ವಿಷಯವಾದರೂ, ಸದ್ಯಕ್ಕೆ ಅವರ ಈ ತಮಾಷೆಯ ಮಾತುಗಳು ಆರ್‌ಸಿಬಿ ಮತ್ತು ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿರುವುದಂತೂ ಸುಳ್ಳಲ್ಲ.
ವಿರಾಟ್ ಕೊಹ್ಲಿ ಅವರು ಸ್ಯಾಂಡಲ್‌ವುಡ್ ಬಗ್ಗೆ ಮಾತನಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಅವರು "ಈ ಸಲ ಕಪ್ ನಮ್ದೆ" ಎಂಬಂತಹ ಕನ್ನಡದ ಡೈಲಾಗ್ ಹೇಳಿ ಕನ್ನಡಿಗರ ಮನಗೆದ್ದಿದ್ದಾರೆ. ಇತ್ತೀಚೆಗೆ ಆರ್‌ಸಿಬಿ ಅನ್-ಬಾಕ್ಸ್ ಕಾರ್ಯಕ್ರಮದಲ್ಲಿ "ನಾನು ಯಾವಾಗಲೂ ಬೆಂಗಳೂರಿನವನೇ" ಎಂದು ಹೇಳಿದ್ದು ಅವರ ಕನ್ನಡದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.
ಡ್ಯಾನಿಶ್ ಸೇಠ್ ಅವರು ಆರ್‌ಸಿಬಿ ತಂಡದೊಂದಿಗೆ 'ಮಿಸ್ಟರ್ ನಾಗ್ಸ್' (Mr. Nags) ಎಂಬ ಪಾತ್ರದ ಮೂಲಕ ಕಳೆದ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಇವರು ಆಟಗಾರರನ್ನು ಕಾಲೆಳೆಯುವುದು, ತಮಾಷೆಯ ಪ್ರಶ್ನೆ ಕೇಳುವುದು ಆರ್‌ಸಿಬಿ ಅಭಿಮಾನಿಗಳಿಗೆ ಬಹುದೊಡ್ಡ ಮನರಂಜನೆ. ಪ್ರತಿ ಐಪಿಎಲ್ ಸೀಸನ್‌ನಲ್ಲಿ ವಿರಾಟ್ ಮತ್ತು ನಾಗ್ಸ್ ನಡುವಿನ ಇಂತಹ ವಿಡಿಯೋಗಳಿಗಾಗಿಯೇ ಅಭಿಮಾನಿಗಳು ಕಾಯುತ್ತಿರುತ್ತಾರೆ. ಕೊಹ್ಲಿ ಅವರು ಡ್ಯಾನಿಶ್ ಅವರನ್ನು "ದೊಡ್ಡ ಸ್ಟಾರ್" ಎಂದು ಕರೆದಿದ್ದಕ್ಕೆ ಕಾರಣವಿದೆ. ಡ್ಯಾನಿಶ್ ಸೇಠ್ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ 'ಹಂಬಲ್ ಪೊಲಿಟಿಷಿಯನ್ ನೊಗ್ರಾಜ್', 'ಫ್ರೆಂಚ್ ಬಿರಿಯಾನಿ' ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.












Click it and Unblock the Notifications