Get Updates
Get notified of breaking news, exclusive insights, and must-see stories!

ಕೊಳ್ಳುವವರ, ಮಾರುವವರ ಸಂತೆಯಲ್ಲಿ ನಾವು ಕಂಡ ಸಂಕ್ರಾಂತಿ ಖಳೆ

*ಎಸ್ಕೆ. ಶಾಮಸುಂದರ

ಬೆಂಗಳೂರು : ನಿಮ್ಮೆಲ್ಲರ ಕಣ್ತಪ್ಪಿಸಿಕೊಂಡು ಇದೇ ಭಾನುವಾರ ಮನೆ-ಮನಗಳಲ್ಲಿ ಬಚ್ಚಿಟ್ಟುಕೊಳ್ಳುವ ಸಂಕ್ರಾಂತಿಯನ್ನು ಈಗಲೇ ನೋಡಬೇಕಾದರೆ ನೀವು ಸೀದಾ ಮಾರ್ಕೆಟ್‌ ಬೀದಿಗೆ ಹೋಗಬೇಕು. ಲಾರಿಗಟ್ಟಲೆ ಕಬ್ಬಿನ ಜಲ್ಲೆಗಳು ರಸ್ತೆಯಂಚಿನಲ್ಲಿ ಸಂಕ್ರಾಂತಿ ಯೋಧರಂತೆ ನಿಂತಿವೆ. ಬಾಳೆಹಣ್ಣು , ಬಾಳೆ ಎಲೆ, ಎಳಚಿ ಹಣ್ಣು (ಬೋರೆ ಹಣ್ಣು), ವಿವಿಧ ಬಗೆಯ ಹೂವುಗಳನ್ನು ಮಾರುವ ಹೂವಾಡಗಿತ್ತಿಯರು ಮೊಳ ಹಿಡಿದು ಇಲ್ಲಿ ಬಾರಮ್ಮಾ , ಬನ್ರಕ್ಕಾ ಅಂತ ಕರೆಯುತ್ತಿದ್ದಾರೆ. ಕೊಳ್ಳುವವರು ಆಕಡೆ ಈಕಡೆ, ಎರಡೂಕಡೆ ನೋಡುತ್ತಾ ಸಾಗುತ್ತಿದ್ದಾರೆ. ಹಬ್ಬವನ್ನು ಕೈಹಿಡಿದು ನಡೆಸಬೇಕು. ನಾವು ಕೊಳ್ಳಲೇ ಬೇಕು ಅವರು ಮಾರಲೇ ಬೇಕು. ಮಧ್ಯೆ ಚೌಕಾಶಿ ತಲೆ ಹಾಕಬೇಕು.

ಮೂರು ತಿಂಗಳ ಹಿಂದೆ ನಡೆದ ಆಯುಧಪೂಜೆಯ ಸಂದರ್ಭದಲ್ಲಿ ನಗರಕ್ಕೆ ಲಾರಿಗಟ್ಟಲೆ ಕುಂಬಳಕಾಯಿ, ಬಾಳೆಕಂದುಗಳನ್ನು ತಂದ ವ್ಯಾಪಾರಿಗಳು ರಾಜ್‌ಕುಮಾರ್‌ ಅಪಹರಣದ ಹಿನ್ನೆಲೆಯಲ್ಲಿ ವ್ಯಾಪಾರವಾಗದೇ ಕೈ ಸುಟ್ಟುಕೊಂಡಿದ್ದರು. ಅಂದು ಆದ ನಷ್ಟವನ್ನು ಇಂದು -ತುಂ-ಬಿಕೊಳ್ಳುವ ತವಕದಲ್ಲಿ ವ್ಯಾಪಾರಸ್ಥರು ಕಬ್ಬಿನ ಜಲ್ಲೆಗಳ ಬೆಲೆಗಳನ್ನು ಜಬರ್‌ದಸ್ತ್‌ ಏರಿಸಿದ್ದಾರೆ. ಅಂದಹಾಗೆ ಸಂಕ್ರಾಂತಿಗೂ ಕನ್ನಡ ಸಿನಿಮಾಕ್ಕೂ ಅಷ್ಟೇನೂ ನೇರ ಸಂಬಂಧವಿಲ್ಲದಿದ್ದರೂ ವಿಷ್ಣುವರ್ಧನ್‌ ಕಾಲ್‌ಶೀಟ್‌ ಮನಿ 36 ಲಕ್ಷಕ್ಕೆ ಏರಿಸಿಲ್ಲವಾ.

ಇನ್ನೊಂದು ಮಾತು : ನಿಮಗೆ ಗೊತ್ತಿರುವ ಹಾಗೆ ಕರ್ನಾಟಕದ ರೈತ ಇದೀಗ ಕಷ್ಟದ ದಿನಗಳನ್ನು ದೂಡುತ್ತಿದ್ದಾನೆ. ಬೆಳೆಗೆ ತಕ್ಕ ಬೆಲೆ ಸಿಗದೆ ಕಂಗಾಲಾಗಿದ್ದಾನೆ. ಮೆಕ್ಕೆಜೋಳ ಬೆಳೆದವನು ಎಕ್ಕುಟ್ಟು ಹೋದ ಎನ್ನುವ ಹೊಸ ಗಾದೆ ಬಳ್ಳಾರಿಯಲ್ಲಿ ಚಾಲ್ತಿಗೆ ಬಂದಿದೆ. ಹೇಳಿಕೇಳಿ ಸಂಕ್ರಾಂತಿ ಹಬ್ಬ ರೈತನ ಕೊಡುಗೆ ಆಗಿರುವುದರಿಂದ ನಮ್ಮದೊಂದು ಸಲಹೆ : ಈ ಬಾರಿ ಎಳ್ಳು ಬೆಲ್ಲದ ಜತೆಗೆ ಕಬ್ಬಿನ ಬದಲು ಮೆಕ್ಕೆಜೋಳದ ತೆನೆಯನ್ನು ಬಾಗಿನವಾಗಿ ಕೊಡಿ.

ಕರಿಯ ಕಬ್ಬು ರುಚಿ ಹೆಚ್ಚು, ಜೋಡಿಗೆ 25 -ರು-ಪಾ-ಯಿ ಎನ್ನುವ ಮಂದಿ, ಕೆಂದು ಕಬ್ಬಿನ ಜೋಡಿ 20 ರುಪಾಯಿ ಎನ್ನುತ್ತಿದ್ದಾರೆ. ಮಲ್ಲಿಗೆಯ ಮೊಗ್ಗು, ಮಲ್ಲಿಗೆ ಹಾಗೂ ಮಲ್ಲೆ ಹೂಗಳು ಮಾರಿಗೆ 30 ರುಪಾಯಿ. ರೆಡಿಮೇಡ್‌ ಮಗ್ಗಿನ ಜಡೆ ಅದರ ವಿನ್ಯಾಸ, ಗಾತ್ರಕ್ಕೆ ತಕ್ಕ ಬೆಲೆಗೆ (50ರಿಂದ 150) ಮಾರಾಟವಾಗುತ್ತಿದೆ. ಬಟ್ಟೆಯಂಗಡಿಗಳಲ್ಲಿ ಕಾಲಿಡಲೂ ಜಾಗವಿಲ್ಲ. ಮಾನಿನಿಯರಿಂದ ತುಂಬಿ ತುಳುಕುತ್ತಿರುವ ಬಟ್ಟೆಯಂಗಡಿಗಳಲ್ಲಿ ಸೇಲ್ಸ್‌ಮನ್‌ಗಳು ಹಲವು ಬಗೆಯ ಹೊಸ ಡಿಸೈನ್‌ ರೆಡಿಮೇಡ್‌ ವಸ್ತ್ರಗಳನ್ನು ಹೊರತೆಗೆದು, ಮಡಿಚಿಟ್ಟು ಸೋತು ಹೋಗಿದ್ದಾರೆ. ಇನ್ನು ಬಳೆ ಅಂಗಡಿಯ ಲ್ಲಿ ವಿಧವಿಧ ಬಳೆಗಳ ಜತೆಗೆ ರಿಬ್ಬನ್‌, ಹೇರ್‌ಪಿನ್‌, ಚೌರಿ, ಕುಚ್ಚು ಆಯುವ ,ಕೊಳ್ಳುವ ಕಿಲಕಿಲ ಸಂಭ್ರಮ ಹೇಳತೀರದು.

ಜನರು ಕೊಳ್ಳುವುದು ಒಂದೆರಡು ಜೊತೆ ಬಟ್ಟೆಯಾದರೂ, ನೋಡುವುದು ಹತ್ತಾರು ಡ್ರಸ್‌ಗಳನ್ನು ತಾನೆ. ಈ ಮಧ್ಯೆ ಬೇಕರಿಗಳು, ಸಿಹಿ ತಿಂಡಿ ಮಾರುವ ಅಂಗಡಿಗಳಲ್ಲಿ ಸಹ ರೆಡಿಮೇಡ್‌ ಸಕ್ಕರೆ ಅಚ್ಚುಗಳು ಬಂದಿವೆ. ಬಣ್ಣ ಬಣ್ಣದ ಸಕ್ಕರೆ ಅಚ್ಚುಗಳನ್ನು ನಾನಾ ಆಕಾರಗಳಲ್ಲಿ ಜೋಡಿಸಿಡಲಾಗಿದೆ. ಎಳ್ಳು, ಕೊಬ್ಬರಿ, ಕಡಲೆಬೀಜ, ಹುರಿಗಡಲೆ ಬೆರೆಸಿದ ಮಿಶ್ರಣವೂ ಮಾರುಕಟ್ಟೆಗೆ ಬಂದಿದೆ.

ಸಕ್ಕರೆ ಅಚ್ಚು ಕೆ.ಜಿ.ಗೆ 45 ರುಪಾಯಿಯಿಂದ 75 ರುಪಾಯಿ ವರೆಗೂ ಅದರ ಡಿಜೈನಿನ ಅನುಸಾರ ಮಾರಾಟವಾಗುತ್ತಿದೆ. ಎಳ್ಳೂ ಅಷ್ಟೇ. ಜರಿ ಅಂಚಿನ ಲಂಗದ ಬಟ್ಟೆಗಂತೂ ಈ ಬಾರಿ ಭಾರಿ ಡಿಮ್ಯಾಂಡ್‌. (ಹಬ್ಬ ಕಳೆದ ನಂತರ ಜೀನ್ಸ್‌ ತೊಡುವುದು ಇದ್ದೇ ಇದೆ )ಬಾಳೆ ಹಣ್ಣಿನ ಬೆಲೆಯೂ ತೆಂಗಿನಮರದೆತ್ತರ . ಒಂದು ಗೊನೆ ಬಾಳೆ ಹಣ್ಣಿಗೆ ಅದರ ಗಾತ್ರ ಹಾಗೂ ಹಣ್ಣಿನ ಸಂಖ್ಯೆಗನುಗುಣವಾಗಿ 60ರುಪಾಯಿಯಿಂದ 200 ರುಪಾಯಿ. ಚಿಲ್ಲರೆಯಾಗಿ ಒಂದು ಪಚ್ಚಬಾಳೆಯ ಬೆಲೆ 1.50. ಹೌದಾ ! ಯಾಕೆ ಭಯ ಬೀಳ್ತೀರಿ ? ಇದು ಬೆಂಗಳೂರು ಮಾರುಕಟ್ಟೆ ಸ್ವಾಮೀ.

ಬೆಲೆ ಎಷ್ಟೇ ಆಗಲಿ. ಈಚೆಗೆ ದುರ್ಲಭವಾಗುತ್ತಿರುವ ಬೆಲೆ ಬಾಳುವ ಹಬ್ಬದ ಸಂಭ್ರಮಗಳನ್ನು ಯಾವ ಕಾರಣಕ್ಕೂ ಮಿಸ್‌ ಮಾಡಿಕೊಳ್ಳಬೇಡಿ. ಹ್ಯಾಪಿ ಸಂಕ್ರಾಂತಿ, ಆಲ್‌ ಆಫ್‌ ಯು.Have a wonderful day

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+