ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗನತಿಟ್ಟಿಗೆ ಅರ್ಲಿ ಬರ್ಡ್ಸ್‌

By Staff
|
Google Oneindia Kannada News

ರಂಗನತಿಟ್ಟು : ಕಳೆದ ವಾರ ನಾವೆಲ್ಲ ರಂಗನತಿಟ್ಟು ಪಕ್ಷಿಧಾಮಕ್ಕೆ ಪಿಕ್‌ನಿಕ್‌ ಹೋದಾಗ ಬೋಟು ಮೀಟುವವ ಹೇಳುತ್ತಿದ್ದ. ‘ ಬರೋದು ಬಂದಿದ್ದೀರಿ, ಇರುವ ಅಲ್ಪಸ್ವಲ್ಪ ಹಕ್ಕಿಗಳನ್ನೇ ಎವೆಯಿಕ್ಕದೆ ನೋಡಿಬಿಡಿ. ಕಣ್ತುಂಬ ಪಕ್ಷಿಗಳನ್ನು ನೋಡಬೇಕಾದರೆ ಫೆಬ್ರವರಿ ನಂತರ ಬನ್ನಿ . ಆ ಸಂತೋಷವೇ ಬೇರೆ’

ಫೆಬ್ರವರಿಯಿಂದ ಆರಂಭವಾಗುವ ರಂಗನತಿಟ್ಟು ಸೀಸನ್‌ ಅಕ್ಟೋಬರ್‌ವರೆಗೆ ಹರಡಿಕೊಂಡಿರುತ್ತದೆ. ಈ ಅವಧಿಯಲ್ಲಿ ಮಧ್ಯೆ ಮೂರು ತಿಂಗಳು ಅಂದರೆ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಇಡೀ ರಂಗನತಿಟ್ಟು ಪಕ್ಷಿಗಳ ಕಲರವದಿಂದ ತುಂಬಿಕೊಂಡಿರುತ್ತದೆ. ಈ ಕ್ಯಾಲೆಂಡರ್‌ ಅಜೆಂಡವನ್ನು ಮೀರಿ ಪ್ರಕೃತಿ ತನ್ನ ಪಾಡಿಗೆ ತಾನು ಕಾರ್ಯೋನ್ಮುಖವಾಗುತ್ತದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇವತ್ತು ರಂಗನತಿಟ್ಟಿನಲ್ಲಿ ದೂರದೂರಿನಿಂದ ಬಂದ ಅತಿಥಿಗಳು ತಮಗೆ ಒಪ್ಪುವ ಮರ ಆರಿಸಿಕೊಂಡು ಗೂಡು ಕಟ್ಟಿಕೊಳ್ಳುವ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಪಕ್ಕಿ ಪಿಕ್ಕಿಗಳು ನಮಗೆ ಹೀಗೆ ಮೋಸ ಮಾಡುತ್ತವೆ ಅಂತ ಗೊತ್ತಿರಲಿಲ್ಲ ! ರಂಗನತಿಟ್ಟಿನಿಂದ ಬೆಂಗಳೂರಿಗೆ ನಾವು ವಾಪಸ್ಸು ಬಂದು ಹತ್ತು ದಿನ ಆಗಿಲ್ಲ, ಆಗಲೇ ಎಲ್ಲಿಂದಲೋ ಅತಿಥಿಗಳು ಅಲ್ಲಿಗೆ ಬಂದು ಮನೆ ಕಟ್ಟಿಕೊಳ್ಳಲು ಶುರುಮಾಡಿವೆ. ಇವತ್ತಿನ ರಂಗನತಿಟ್ಟು ವರದಿ ಕೇಳುತ್ತಿದ್ದರೆ ಅರೆ ! ನಡೀರಿ ಮತ್ತೆ ಹೋಗೋಣ ಎನಿಸುತ್ತಿದೆ. ಅಯ್ಯೋ ಮತ್ತೆ ರಜಾ ಹಾಕಬೇಕಾ ?!

ಈ ಬಾರಿ ತಿಟ್ಟಿಗೆ ಬಂದ ಮೊದಲಿಗರಲ್ಲಿ ಸೈಬೀರಿಯಾ, ಆಸ್ಟ್ರೇಲಿಯಾದ ಪೈಂಟೆಡ್‌ ಸ್ಟಾರ್ಕ್‌, ಸ್ಪೂನ್‌ ಬಿಲ್‌ಗಳು ಅರ್ಲಿ ಬರ್ಡ್ಸ್‌. ಬೇಸಗೆಗೆ ಮುಂಚೆ ಚಳಿಕಾಯಿಸಲು ಬಂದ ಸಲೀಂ ಆಲಿಯ ಜೀವಗೆಳೆಯರು. ನೈಜಿರಿಯಾ, ಅಮೆರಿಕಾ, ರಷ್ಯಗಳಿಂದಲೂ ಇಲ್ಲಿಗೆ ಹಕ್ಕಿಗಳು ಆಗಮಿಸಿವೆ, ಆಗಮಿಸುತ್ತವೆ. ನೈಟ್‌ ಹೆರಾನ್‌, ಪರ್ಪಲ್‌ ಹೆರಾನ್‌, ರಿವರ್‌ ಟರ್ನ್‌, ಸ್ನೇಕ್‌ಬರ್ಡ್‌ ಮೊದಲಾದ ಪಕ್ಷಿಗಳು ರಂಗನತಿಟ್ಟಿನಲ್ಲಿ ವಿಶ್ರಾಂತಿ ಪಡೆದಿವೆ. ಗೂಡುಗಳನ್ನೂ ಕಟ್ಟಿವೆ. ಮೊಟ್ಟೆಗಳನ್ನೂ ಇಟ್ಟಿವೆ.

ಹಿಂದೆ ನೂರಾರು ಸಂಖ್ಯೆಯಲ್ಲಷ್ಟೇ ಬರುತ್ತಿದ್ದ ಅತಿ ವಿರಳ ಪಕ್ಷಿಗಳು ಇಂದು ಸಾವಿರದ ಸಂಖ್ಯೆಯಲ್ಲಿ ಬರುತ್ತಿವೆ. ಅಂದರೆ, ರಂಗನತಿಟ್ಟಿನ ಆಹ್ಲಾದಕರ ವಾತಾವರಣಕ್ಕೆ ಮನಸೋತಿರುವ ಹಕ್ಕಿಗಳು, ತಮ್ಮ ಗೆಳೆಯರನ್ನೂ ಇಲ್ಲಿಗೆ ಕರೆತರುತ್ತಿವೆ ಎಂದೇ ಅರ್ಥ. ಇದು ಉತ್ಪ್ರೇಕ್ಷೆಯಲ್ಲ. ಮೂರ್ನಾಲ್ಕು ವರ್ಷಗಳ ಹಿಂದೆ 400 -500 ಸಂಖ್ಯೆಯಲ್ಲಿ ಬರುತ್ತಿದ್ದ ಪಕ್ಷಿಗಳು ಕಳೆದ ವರ್ಷ 2500ರ ಸಂಖ್ಯೆಯನ್ನೂ ದಾಟಿವೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿಗಳ ಸಂತಾನೋತ್ಪತ್ತಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಮೈಸೂರಿನ ಲಿಂಗಾಂಬುಧಿ ಕೆರೆಯಲ್ಲಿ ಮೊನ್ನೆ ಹಕ್ಕಿಗಳು ಸತ್ತ ವರದಿಯಿಂದ ಕಂಗಾಲಾಗಿದ್ದ ಪಕ್ಷಿಪ್ರೇಮಿಗಳಿಗೆ ರಂಗನತಿಟ್ಟಿನ ಹೊಸ ಕಲರವ ಒಂದಿಷ್ಟು ಸಮಾಧಾನ ತಂದಿದೆ.

ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X