ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರು ಅವತಾರ ಎತ್ತುವ ಸಿದ್ಧಾಂತ ಮೇಲ್ಜಾತಿ ಸೃಷ್ಟಿಸಿದ ಶ್ರೇಷ್ಠ ಸುಳ್ಳು

By Staff
|
Google Oneindia Kannada News

ಮಂಗಳೂರು : ದೇವರು ಅವತಾರ ಎತ್ತುತ್ತಾನೆ ಎನ್ನುವುದು ಅತ್ಯಂತ ಶ್ರೇಷ್ಠ ಸುಳ್ಳು. ಅವತಾರ ಸಿದ್ಧಾಂತವು ಪುರೋಹಿತ ವರ್ಗ ಮತ್ತು ಮೇಲ್ಜಾತಿಯವರು ಸೃಷ್ಟಿಸಿರುವ ಶುದ್ಧ ಸುಳ್ಳು ಎಂದು ನಿಡುಮಾಮಿಡಿ ಮಹಾ ಸಂಸ್ಥಾನದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮಿಜೀ ಹೇಳಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ಡಿವೈಎಫ್‌ಐನ 6ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮೂರು ಹೊತ್ತೂ ಕರ್ತವ್ಯವನ್ನು ಮರೆತು ಪೂಜೆ ಮಾಡುವುದು ಪಾಪ ಎಂದು ಬಣ್ಣಿಸಿದರು. ಧರ್ಮ, ದೇವರ ಹೆಸರಿನಲ್ಲಿ ಶೋಷಣೆ, ವಂಚನೆ ಮಾಡಬಾರದು ಎಂದ ಸ್ವಾಮೀಜಿ, ವರ್ಣಭೇದವನ್ನು ಕಟುವಾಗಿ ಟೀಕಿಸಿದರು. ಅಸ್ಪೃಶ್ಯತೆ ಆಚರಿಸುವ ಗುಡಿ, ಮಂದಿರ, ಮಠಗಳಿಗೆ ಹೋಗುವುದಿಲ್ಲ ಎಂದು ಯುವಜನತೆ ಸಂಕಲ್ಪ ಮಾಡಬೇಕು. ಹಿಂದೂಗಳೆಲ್ಲರೂ ಒಂದು, ಹಿಂದುಗಳು ನಮ್ಮ ಬಂಧು ಎಂದು ಹೇಳುವ ಮಠಗಳಲ್ಲಿ ದಲಿತ, ಹರಿಜನ, ಹಿಂದುಳಿದ ವರ್ಗದವರಿಗೆ ಪೂಜೆ ಮಾಡಲು ಅವಕಾಶ ಇದೆಯೇ ಎಂದು ಪ್ರಶ್ನಿಸಿದರು.

ಕಸ ಚೆಲ್ಲುವವನು ಮೇಲು, ಕಸ ಎತ್ತುವವನು ಕೀಳು, ಹೊಲಸು ಮಾಡುವವ ಮೇಲು, ಹೊಲಸು ತೆಗೆಯುವವನು ಕೀಳು, ಇಂದು ವರ್ಣಭೇದದ ಕೊಡುಗೆ ಎಂದು ಸ್ವಾಮೀಜಿ ಖಂಡಿಸಿದರು. ಜಾತಿಯ ಕೇಂದ್ರಗಳಾಗುತ್ತಿರುವ ಮಠಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಅಯೋಧ್ಯೆ ವಿವಾದ : ಅಯೋಧ್ಯೆ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸುವುದನ್ನು ಬಿಟ್ಟು, ಅಲ್ಲಿ ರಕ್ತದ ಹೊಳೆ ಹರಿಸಲಾಗುತ್ತಿದೆ. ಕೋಮು ಸೌಹಾರ್ದಕ್ಕಾಗಿ ಅಲ್ಲಿರುವ ಅಂದಾಜು ಮೂರು ಎಕರೆ ಭೂಮಿಯನ್ನು ಹಿಂದೂ ಹಾಗೂ ಮುಸ್ಲಿಮರಿಗೆ ಸಮನಾಗಿ ಹಂಚಿ, ಹಿಂದುಗಳಿಂದ ಮಸೀದಿ ಕಟ್ಟಿಸಬೇಕು, ಅಂತೆಯೇ ಮುಸ್ಲಿಮರಿಂದ ರಾಮ ಮಂದಿರ ನಿರ್ಮಿಸಬೇಕು ಎಂದೂ ಸ್ವಾಮೀಜಿ ಸಲಹೆ ಮಾಡಿದರು.

ದಕ್ಷಿಣ ಕನ್ನಡ ಬೀಡಿ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಕೆ. ಮಹಂತೇಶ್‌, ಕೃಷ್ಣಪ್ಪ ಕೊಂಚಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X