Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ
Bengaluru Weather Forecast: ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮಾರ್ಚ್ 30) ಸೋಮವಾರ ಸಹ ಮಳೆ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಗುಡುಗು ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಭಾನುವಾರ ಸುರಿದ ಮಳೆಗೆ ಅಲ್ಲಲ್ಲಿ ಸಂಚಾರ ಸಮಸ್ಯೆ ಉಂಟಾಗಿತ್ತು. ಬೆಳಗ್ಗೆಯಿಂದ ಹೆಚ್ಚಿನ ಬಿಸಿಲಿನ ತಾಪ ಕಂಡು ಬಂದಿದ್ದು, ಸಂಜೆ ಇಲ್ಲವೇ ತಡರಾತ್ರಿ ನಗರದ ಹಲವೆಡೆ ಮಳೆ ಬೀಳಬಹುದೆಂದು ಎಚ್ಚರಿಸಲಾಗಿದೆ.
ಮಬ್ಬ ಕವಿದ ವಾತಾವರಣ ಅಲ್ಲಲ್ಲಿ ನಿರ್ಮಾಣವಾಗಲಿದ್ದು, ಜಿಟಿ ಜಿಟಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ. ಗರಿಷ್ಠ ತಾಪಮಾನ 34ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ತಾಪಮಾನದಲ್ಲಿ ತೀವ್ರ ಸ್ವರೂಪದ ಬದಲಾವಣೆಗಳು ಇಲ್ಲ ಎನ್ನಲಾಗಿದೆ.

ನಾಳೆ ಮಂಗಳವಾರದಿಂದ (ಮಾರ್ಚ್ 31) ನಗರದ ವಾತಾವರಣ ಸಹಜ ಸ್ಥಿತಿಗೆ ಮರಳಲಿದ್ದು, ಕೆಲವೆಡೆ ಮಾತ್ರವೇ ಮಬ್ಬು ವಾತಾವರಣ ಕಂಡು ಬರಬಹುದು. ಇದರ ಹೊರತು ಹೆಚ್ಚಿನ ಮಳೆ ನಿರೀಕ್ಷೆ ಇಲ್ಲ. ಮುಂದಿನ ವಾರ ಗರಿಷ್ಠ ತಾಪಮಾನ, ಸೆಕೆ ಹೆಚ್ಚಾದರೂ ಅಚ್ಚರಿ ಇಲ್ಲ.
ಭಾನುವಾರ ನಗರದಲ್ಲಿ ಸುರಿದ ಮಳೆಗೆ ಸಂಚಾರ ಸಮಸ್ಯೆ
ಭಾನುವಾರ ನಗರದ ಆಗ್ನೇಯ ಭಾಗದಲ್ಲಿ ಹೆಚ್ಚಿನ ಮಳೆ ಆಗಿದೆ. ಬೆಳ್ಳಂದೂರು, ಮಹದೇವಪುರ, ಮಾರತ್ತಹಳ್ಳಿ, ಕೋರಮಂಗಲ ಸೇರಿದಂತೆ ವಿವಿಧ ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಜಿಟಿ ಜಿಟಿ ಮಳೆ ಆಗಿದೆ. ಇದು ಭಾನುವಾರ ಸಂಜೆ ಸಿಟಿ ಸುತ್ತಾಟ, ಮೋಜು ಮಸ್ತಿಗೆ ಪ್ಲ್ಯಾನ್ ಮಾಡಿಕೊಂಡಿದ್ದ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡಿತು. ಬೈಕ್, ಆಟೋ ಸೇರಿ ವಾಹನ ಸವಾರರಿಗೆ ತೊಂದರೆ ಆಯಿತು. ಹೊರ ವರ್ತುಲ ರಸ್ತೆಯುದ್ದಕ್ಕೂ ನಡೆಯುತ್ತಿರುವ ನೀಲಿ ಮೆಟ್ರೋ ಮಾರ್ಗದ ವಯಾಡಕ್ಟ್‌ಗಳಿಂದಲ ಮಳೆ ನೀರು ಸವಾರರು ಮೇಲೆ ಸುರಿಯುತ್ತಲೇ ಇದ್ದದ್ದು ಕಂಡು ಬಂತು. ಬೆಳ್ಳಂದೂರು, ಎಚ್‌ಎಸ್‌ಆರ್, ರಿಂಗ್ ರಸ್ತೆ, ಆಗರ, ಸರ್ಜಾಪುರ ರಸ್ತೆ ಸೇರಿ ಕೆಲವು ರಸ್ತೆಗಳ ಮೇಲೆ ಅಲ್ಲಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.
ಹವಾಮಾನ ಇಲಾಖೆ ಪ್ರಕಾರ, ವಿವಿಪುರಂ, ಸಂಪಂಗಿರಾಮನಗರ, ಬೆಂಗಳೂರು ಉತ್ತರದಲ್ಲಿ ತಲಾ 19.5 ಮಿ.ಮೀ., ದೊರೆಸಾನಿ ಪಾಳ್ಯ, ಬೊಮ್ಮನಹಳ್ಳಿ, ಕೋಣನಕುಂಟೆ, ಸಾರಕ್ಕಿ ಹಾಗೂ ಅಂಜನಾಪುರದಲ್ಲಿ ತಲಾ 18.5ಮಿ.ಮೀ., ಕೋಣನಕುಂಟೆ 2 18 ಮಿ.ಮೀ., ಕಾಟನ್‌ಪೇಟೆ, 17.5ಮಿ.ಮೀ. ಗೊಟ್ಟಿಗೆರೆ 14.5 ಮಿ.ಮೀ., ಬೇಗೂರು 14.5ಮಿ.ಮೀ. 14 ಮಿ.ಮೀ, ವನ್ನಾರಪೇಟೆ 14 ಮಿ.ಮೀ., ದೊಮ್ಮಲೂರು ಪೂರ್ವ 14 ಮಿ.ಮೀ., ಸಂಪಂಗಿರಾಮನಗರ 13 ಮಿ.ಮೀ. ಮಳೆ ದಾಖಲಾಗಿ ಇಳೆಗೆ ತಂಪೆರೆಯಿತು. ಇನ್ನುಳಿದಂತೆ ಕೋರಮಂಗಲ, ಬೆಳ್ಳಂದೂರು, ಲಕ್ಕಸಂದ್ರ, ಜಕ್ಕಸಂದ್ರ, ಮಡಿವಾಳ ಕ್ರಾಸ್, ಡೈರಿ ವೃತ್ತ ಹೀಗೆ ನಗರದ ವಿವಿಧ ಬಡಾವಣೆಗಳಲ್ಲಿ ಹಗುರ ಮಳೆ ದಾಖಲಾಯಿತು.
ಜಿಟಿ ಜಿಟಿ ಮಳೆಯಲ್ಲೇ ಬ್ರಹ್ಮರಥೋತ್ಸವ
ದಿಢೀರ್ ಬಂದ ಮಳೆಗೆ ಮೇಲ್ಸೇತುವೆ ಕೆಳಗೆ ಬೈಕ್ ಸವಾರರು ನಿಂತಿದ್ದು ಕಂಡು ಬಂತು. ಇನ್ನೂ ಬೆಳ್ಳಂದೂರು ಶ್ರೀ ವೆಂಕಟೇಶ್ವರ ಸ್ವಾಮಿ ಮತ್ತು ಶ್ರೀ ಗೋಪಾಲಸ್ವಾಮಿ ಬ್ರಹ್ಮರಥೋತ್ಸವವರು ಜಿಟಿ ಜಿಟಿ ಮಳೆಯಲ್ಲಿ ಜರುಗಿತು. ಇಲ್ಲಿನ ಮುತ್ಯಾಲಮ್ಮ ದೇವಿ ಕರಗ ಶಕ್ತೋತ್ಸವವು ಅದ್ಧೂರಿಯಾಗಿ ನಡೆಯಿತು. ಮಳೆಯಲ್ಲೇ ಅಪಾರ ಭಕ್ತರು ಸೇರಿದ್ದರು. ರಥೋತ್ಸವ ನೋಡಿ, ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿ ದೇವರ ದರ್ಶನ ಪಡೆದು ಜನ ಪುನೀತರಾದರು. ಭಾನುವಾರ ಬೆಳಗ್ಗೆಯಿಂದಲೇ ಈ ಮೂರು ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನಗಳು, ರಥಬೀದಿ ವಿದ್ಯುದಲಂಕಾರಗಳಿಂದ ಕಂಗೊಳಿಸಿದವು. ಮಕ್ಕಳು ಜಾಯಿಂಟ್ ವ್ಹೀಲ್, ತಿರುಗ ಚಕ್ರ ಆಟವಾಡಿ ಖಷಿಪಟ್ಟಿದ್ದು ಸಾಮಾನ್ಯವಾಗಿತ್ತು.












Click it and Unblock the Notifications