ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದ : ಶಬರಿಮಲೆ ಅಯ್ಯಪ್ಪ ಪ್ರಸಾದದಲ್ಲಿ ಇಲಿ ಬಾಲ, ಬೀಡಿ ತುಂಡು

By Staff
|
Google Oneindia Kannada News

ತಿರುವನಂತಪುರಂ : ಸ್ವಾಮಿ ಅಯ್ಯಪ್ಪನ ಮಂಡಲ ಪೂಜೆ ಸನ್ನಿಹಿತವಾಗುತ್ತಿದ್ದಂತೆ, ದೇಶದ ವಿವಿಧ ಭಾಗಗಳ ಸಾವಿರಾರು ಭಕ್ತರು ಶಬರಿಮಲೆಗೆ ಭೇಟಿಕೊಡುತ್ತಿರುವ ಹೊತ್ತಿನಲ್ಲಿ ಅಯ್ಯಪ್ಪನ ಪ್ರಸಾದ ವಿವಾದ ಸೃಷ್ಟಿ ಮಾಡಿದೆ. ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಮುಖ ಪ್ರಸಾದವೆಂದು ಮಾರುವ ಅರವಣ ಪಾಯಸ (ಸಿಹಿ ಅನ್ನ) ವಿವಾದದ ಕೇಂದ್ರ ಬಿಂದುವಾಗಿದ್ದು , ಈಚಿನ ದಿನಗಳಲ್ಲಿ ಪ್ರಸಾದದಲ್ಲಿ ಇಲಿ ಬಾಲಗಳು ಹಾಗೂ ಬೀಡಿ ತುಂಡುಗಳು ಸಿಕ್ಕ ಘಟನೆಗಳು ವರದಿಯಾಗಿದೆ.

ಮಂಗಳವಾರದ ತೋಡುಪೂಜ ಸಂದರ್ಭದಲ್ಲಿ (ನ.25), ಅರವಣ ಪ್ರಸಾದದ ಟಿನ್‌ ಒಂದರಲ್ಲಿ ಬೀಡಿ ತುಂಡಿರುವುದು ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ಪ್ರಸಾದದಲ್ಲಿ ಸಿಕ್ಕ ಹೆಗ್ಗಣದ ಬಾಲ ದೊಡ್ಡ ವಿವಾದವನ್ನೇ ಎಬ್ಬಿಸಿತ್ತು . ಈ ವಿವಾದ ಕೋರ್ಟಿನ ಕಟೆಕಟೆಯನ್ನು ಹತ್ತಿದ್ದು, ಪ್ರಕರಣದ ಬಗೆಗಿನ ಸಂಪೂರ್ಣ ವರದಿಯನ್ನು ದೇವಸ್ಥಾನದ ಮಂಡಳಿಯಿಂದ ನ್ಯಾಯಾಲಯ ಅಪೇಕ್ಷಿಸಿದೆ.

ಪ್ರಸಾದದಲ್ಲಿ ಹೆಗ್ಗಣದ ಬಾಲ ಸಿಕ್ಕ ಘಟನೆ ವ್ಯವಸ್ಥಾಪಕರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿಯ ಕೇರಳ ಘಟಕದ ಅಧ್ಯಕ್ಷ ಸಿ.ಕೆ. ಪದ್ಮನಾಭನ್‌ ಟೀಕಿಸಿದ್ದಾರೆ. ದೇವಸ್ಥಾನದ ಮೂಲಕ ಕೋಟ್ಯಂತರ ರುಪಾಯಿ ಆದಾಯ ಹರಿದು ಬರುತ್ತಿದ್ದರೂ, ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದ ನಯನಾರ್‌ ಸರ್ಕಾರದ ವಿರುದ್ಧ ಅವರು ಕಿಡಿ ಕಾರಿದ್ದಾರೆ.

ಘಟನೆಯನ್ನು ಲಘುವಾಗಿ ಪರಿಗಣಿಸಿ ಮೌನದಿಂದಿರುವ ಸರ್ಕಾರದ ನಡವಳಿಕೆಯನ್ನು ಕಟುವಾಗಿ ಟೀಕಿಸಿರುವ ಅವರು, ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ತಕ್ಷಣದಿಂದಲೇ ಪರಭಾರೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಮೊದಲು ಪ್ರಸಾದವನ್ನು ಪರೀಕ್ಷಿಸಿದ ಸರ್ಕಾರದ ಪರಿಣತರು ಪ್ರಸಾದದಲ್ಲಿ ಇಲಿ ಬಾಲ ಇರುವುದನ್ನು ತಳ್ಳಿ ಹಾಕಿದ್ದು, ಪ್ರಸಾದದಲ್ಲಿ ಇರುವುದನ್ನು ಶುಂಠಿ ನಾರು ಎಂದು ಸ್ಪಷ್ಟಪಡಿಸಿದ್ದರು. ಆದರೆ, ಕೇರಳ ಕೃಷಿ ವಿಶ್ವ ವಿದ್ಯಾಲಯದ ತಜ್ಞರು ಪ್ರಸಾದದಲ್ಲಿ ಇಲಿ ಬಾಲ ಇರುವುದನ್ನು ಸ್ಪಷ್ಟಪಡಿಸಿದ್ದರು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್‌. ಬಾಬು ಅವರು, ಪ್ರಸಾದದಲ್ಲಿ ಇಲಿ ಬಾಲ, ಬೀಡಿ ತುಂಡುಗಳು ಕಂಡುಬಂದ ಬಗೆಗೆ ತನಿಖೆ ನಡೆಸುತ್ತೇವೆ. ಆದರೆ ಇದಕ್ಕೆ ಮೊದಲು ಪ್ರಸಾದದಲ್ಲಿ ಇದ್ದುದೇನು ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಆಧುನಿಕ ಯಂತ್ರೋಪಕರಣಗಳಿಂದಲೇ ಪ್ರಸಾದವನ್ನು ಪ್ಯಾಕ್‌ ಮಾಡುವುದಾಗಿ ಹೇಳಿರುವ, ಪ್ರಸಾದದ ವ್ಯವಸ್ಥೆಯ ಜವಾಬ್ದಾರಿಯನ್ನು ಹೊತ್ತಿರುವ ಕೇರಳದ ಪಂಚಮಿ ಪ್ಯಾಕ್‌ ಸಂಸ್ಥೆಯವರು ಬೇಜವಾಬ್ದಾರಿಯ ಆರೋಪವನ್ನು ತಳ್ಳಿ ಹಾಕಿದ್ದಾರೆ. ಪ್ರತಿದಿನ 80 ಸಾವಿರ ಟಿನ್‌ ಪ್ರಸಾದ ಪ್ಯಾಕ್‌ ಮಾಡಲಾಗುತ್ತಿದೆ. ಅಯ್ಯಪ್ಪ ಭಕ್ತರ ಸಂದರ್ಶನದ ಕಾಲ ಆರಂಭಕ್ಕೆ ಮುನ್ನವೇ ಸನ್ನಿಧಾನದಲ್ಲಿ 2 ಲಕ್ಷ ಟಿನ್‌ ಅರವಣ ಪ್ರಸಾದವನ್ನು ಸಂಗ್ರಹಿಸಲಾಗಿತ್ತು .

ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಸಿ.ಕೆ. ನೀಲಕಂಠನ್‌ ಅವರು ಪಂಚಮಿ ಪ್ಯಾಕ್‌ ಸಂಸ್ಥೆಯಾಂದಿಗಿನ ಪ್ರಸಾದ ಪ್ಯಾಕ್‌ ಮಾಡುವ ಕುರಿತಾದ ಒಪ್ಪಂದವನ್ನು ಕಡಿದುಕೊಳ್ಳಲು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X