ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಡಾ ಮೊಕದ್ದಮೆ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ

By Staff
|
Google Oneindia Kannada News

ನವದೆಹಲಿ : ಈ ಬುಧವಾದರೂ ಸರ್ವೋಚ್ಚ ನ್ಯಾಯಾಲಯದಿಂದ ಶುಭಕರವಾದ ತೀರ್ಪು ಹೊರಬೀಳುತ್ತದೆ. ರಾಜ್‌ಕುಮಾರ್‌ ಬಿಡುಗಡೆ ಆಗುತ್ತದೆ. ವರ್ಷ ತುಂಬಿದ ಸರಕಾರಕ್ಕೆ ಹರ್ಷ ತರುತ್ತದೆ ಎಂದು ಎಣಸಿದ್ದವರಿಗೆಲ್ಲಾ ನಿರಾಶೆಯಾಗಿದೆ.

ಸರ್ವೋನ್ನತ ನ್ಯಾಯಾಲಯ ಮೈಸೂರು ಜೈಲಿನಲ್ಲಿರುವ ಟಾಡಾ ಬಂದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮುಂದಿನ ಮಂಗಳವಾರ (ಅ. 17)ಕ್ಕೆ ಮುಂದೂಡಿದೆ.

ಬುಧವಾರ ಬೆಳಗ್ಗೆ 10.30 ಗಂಟೆಗೆ ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿಗಳಾದ ಎಸ್‌.ಪಿ. ಬರೂಚ, ವೈ.ಕೆ. ಸಬರ್‌ವಾಲ್‌ ಹಾಗೂ ಡಿ.ಪಿ. ಮಹಾಪಾತ್ರ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ವೀರಪ್ಪನ್‌ ಸಹಚರರರಾದ 51 ಟಾಡಾ ಆರೋಪಿಗಳ ಮೇಲಿನ ಮೊಕದ್ದಮೆಗಳನ್ನು ಕೈಬಿಡುತ್ತಿರುವುದಾದರೂ ಏಕೆ? ಇದರ ಹಿಂದಿರುವ ಉದ್ದೇಶವೇನು ಎಂಬ ನಿಜ ಸಂಗತಿಯನ್ನು ನಿಯೋಜಿತ ನ್ಯಾಯಾಲಯಕ್ಕೆ ಬಹಿರಂಗಪಡಿಸದ ಕರ್ನಾಟಕ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಡಾ. ರಾಜ್‌ಕುಮಾರ್‌ ಹಾಗೂ ಅವರ ಬಂಧುಗಳನ್ನು ವೀರಪ್ಪನ್‌ ಒತ್ತೆಯಿಂದ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಇದು ವೀರಪ್ಪನ್‌ ಬೇಡಿಕೆಯ ಈಡೇರಿಸುವ ಕ್ರಮ ಆಗಿರಲಿಲ್ಲವೇ ಎಂದು ನ್ಯಾಯಪೀಠದ ಪರವಾಗಿ ನ್ಯಾಯಮೂರ್ತಿ ಎಸ್‌.ಪಿ. ಬರೂಚಾ ಪ್ರಶ್ನಿಸಿದರು.

ತ್ರಿಸದಸ್ಯ ನ್ಯಾಯಪೀಠವು ವಾದ - ಪ್ರತಿವಾದಗಳನ್ನು ಆಲಿಸಿದ ಬಳಿಕ ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 17ಕ್ಕೆ ನಿಗದಿಪಡಿಸಿತು.

ರಾಜ್‌ ಬಿಡುಗಡೆ ವಿಳಂಬ ?: ಇದರಿಂದಾಗಿ ರಾಜ್‌ಕುಮಾರ್‌ ಮತ್ತಷ್ಟು ದಿನ ವೀರಪ್ಪನ್‌ ಬಂಧನದಲ್ಲಿ ಅರಣ್ಯವಾಸ ಮುಂದುವರಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಸರ್ವೋನ್ನತ ನ್ಯಾಯಾಲಯ ರಾಜ್ಯ ಸರಕಾರದ ಪರ ತೀರ್ಪು ನೀಡುತ್ತದೆ, ಟಾಡಾ ಬಂದಿಗಳ ಬಿಡುಗಡೆ ಆಗುತ್ತದೆ ಎಂಬ ಭರವಸೆಯಾಂದಿಗೆ, ರಾಜ್‌ಕುಮಾರ್‌ ಅವರನ್ನು ಕರೆದು ತರುವುದಾಗಿ ವೀರಪ್ಪನ್‌ ಅಡಗುತಾಣಕ್ಕೆ ಹೋಗಿರುವ ಸಂಧಾನಕಾರರಾದ ಗೋಪಾಲ್‌, ಪಳ ನೆಡುಮಾರನ್‌, ಪ್ರೊ. ಕಲ್ಯಾಣಿ ಹಾಗೂ ಪತ್ರಕರ್ತ ಸುಕುಮಾರನ್‌ ಅವರುಗಳು ಈಗ ಬರಿಗೈಯಲ್ಲಿ ಬರುತ್ತಾರೆಯೇ ಅಥವಾ ವೀರಪ್ಪನ್‌ ಮನವೊಲಿಸಿ ರಾಜ್‌ಕುಮಾರ್‌ ಅವರನ್ನು ಬಿಡಿಸಿಕೊಂಡೇ ಕಾಡಿನಿಂದ ಮರಳುತ್ತಾರೆಯೇ ಇಲ್ಲ ಮುಂದಿನ ಮಂಗಳವಾರದವರೆಗೂ ಅವರೂ ಕಾಡಿನಲ್ಲಿ ಉಳಿಯುತ್ತಾರೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ರಾಜ್ಯದ ನಿಲುವನ್ನು ಬೆಂಬಲಿಸುವ ಸಮರ್ಥನೀಯ ದಾಖಲಾತಿಗಳನ್ನು ಸಲ್ಲಿಸುವ ಮೂಲಕ ಈ ಬಾರಿ ಜಯ ಪಡೆದೇ ತೀರುತ್ತೇವೆ ಎಂದು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದ ರಾಜ್ಯ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡರು ನಿರಾಶರಾಗಿದ್ದಾರೆ. ರಾಜ್ಯಕ್ಕೆ ಹರ್ಷ ತರುವ ಸುದ್ದಿಯನ್ನು ತಾವೇ ಮೊದಲು ತಿಳಿಸಬೇಕು ಎಂದು ದೆಹಲಿಯಲ್ಲಿ ಬೀಡುಬಿಟ್ಟಿರುವ ಕೆಲವು ಚಿತ್ರ ನಟರೂ, ಅಭಿಮಾನಿಗಳೂ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಮತ್ತೆ ಮಂಗಳವಾರ ಸರ್ವೋನ್ನತ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದರೆ ಏನು ಗತಿ ಎಂಬುದೇ ಇವರೆಲ್ಲರ ಚಿಂತೆ ಆಗಿದೆ. (ಯು.ಎನ್‌.ಐ./ ಇನ್ಫೋ ವರದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X