ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಮಸ್ತೆ ಗಾರ್ಮೆಂಟ್ಸ್‌’ ನಾರಾಯಣ ಭಟ್‌ ಅಪಹರಣ, 1ಕೋಟಿ ಬೇಡಿಕೆ

By Staff
|
Google Oneindia Kannada News

ಬೆಂಗಳೂರು : ಬುಧವಾರ ಮುಂಜಾನೆ 7.30 ಗಂಟೆಗೆ ವಾಕಿಂಗ್‌ಗೆ ಹೋಗಿದ್ದ ನಮಸ್ತೆ ಗಾರ್ಮೆಂಟ್ಸ್‌ನ ಮಾಲೀಕರಾದ ಕಂಡಗಿ ನಾರಾಯಣ ಭಟ್‌ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಅವರ ಬಿಡುಗಡೆಗೆ 1 ಕೋಟಿ ರುಪಾಯಿ ಒತ್ತೆ ಹಣ ಕೇಳಿದ್ದಾರೆ.

ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದೂರು ದಾಖಲಾಗಿದೆ. ರಾಮು ಎಂಬ ಕಾರ್‌ ಡ್ರೆೃವರ್‌ ಜೊತೆಗೆ ಸಮೀಪದ ತಲಘಟ್ಟಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಕಿಂಗ್‌ ಮಾಡುತ್ತಿದ್ದ ನಾರಾಯಣ ಭಟ್ಟರನ್ನು ಫೋರ್ಡ್‌ ಕಾರಿನಲ್ಲಿ ನಾಲ್ವರು ಬಂದು ಅಪಹರಿಸಿದ್ದಾರೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಅಪಹರಣಕಾರರು ತನ್ನನ್ನು ಹೆದರಿಸಿ, ಅಲ್ಲೇ ಬಿಟ್ಟು ಹೋದರು ಎಂದು ರಾಮು ಪೊಲೀಸರಿಗೆ ಹೇಳಿದ್ದಾರೆ.

ತಕ್ಷಣ ಮನೆಗೆ ಹೋದ ರಾಮು ನಾರಾಯಣ ಭಟ್‌ ಮಗ ವಿನೋದ್‌ ಭಟ್‌ಗೆ ಘಟನೆ ವಿವರಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಅಪಹರಣಕಾರರು ಫೋನಾಯಿಸಿ, ಒತ್ತೆಯಾಳಿನ ಬಿಡುಗಡೆಗೆ 1 ಕೋಟಿ ರುಪಾಯಿ ಕೊಡುವಂತೆ ಕೇಳಿದ್ದಾರೆ. ಮತ್ತೊಂದು ಬಾರಿ ಇದೇ ರೀತಿ ಫೋನ್‌ ಕರೆ ಬಂದಿದೆ. ನಂತರ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಗೆ ವಿನೋದ್‌ ಭಟ್‌ ದೂರು ಕೊಟ್ಟಿದ್ದಾರೆ. ಅಪಹರಣಕಾರರು ಅಪಹೃತರ ಮೊಬೈಲನ್ನೇ ಹಣ ಕೇಳಲು ಬಳಸಿದ್ದು, ಪೊಲೀಸರಿಗೆ ಅವರ ಅಡಗುತಾಣ ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ.

ಮುಂಬೈ ಮಾಫಿಯಾ ಕೈವಾಡ ? : ಈ ಅಪಹರಣದ ಹಿಂದೆ ಮುಂಬೈ ಭೂಗತ ಜಗತ್ತಿನ ಕೈವಾಡವಿದೆ ಎಂದು ಪೊಲೀಸರು ಬಲವಾಗಿ ಶಂಕಿಸಿದ್ದಾರೆ. ಈ ಹಿಂದೆ ಜೆ.ಸಿ.ರಸ್ತೆಯಿಂದ ಆಟೋಮೊಬೈಲ್ಸ್‌ ಉದ್ಯಮಿ ಆನಂದ ವಾಚಾನಿ ಪುತ್ರ ಕಿಶೋರ್‌ ವಾಚಾನಿಯನ್ನು ಕೆಲ ದುಷ್ಕರ್ಮಿಗಳು ಅಪಹರಿಸಿ, ಇದೇ ಮೊತ್ತದ ಬೇಡಿಕೆ ಇತ್ತಿದ್ದರು. ಅನೇಕ ಒತ್ತಡಗಳ ನಡುವೆ ವಾಚಾನಿಯನ್ನು ಅಪಹರಣಕಾರರು ಬಿಟ್ಟು ಪೇರಿ ಕಿತ್ತಿದ್ದರು. ನಂತರ ಮುಂಬೈ ಪೊಲೀಸರು ಆರೋಪಿಗಳನ್ನು ಬಂಧಿಸಿದಾಗ, ಬೆಂಗಳೂರು ಪೊಲೀಸರು ತನಿಖೆ ನಡೆಸಿದ್ದರು.

ಚಾಮರಾಜಪೇಟೆ ಬಳಿಯ ವಿಶ್ವ ವಿಖ್ಯಾತ ನಮಸ್ತೆ ಎಕ್ಸ್‌ಪೋರ್ಟ್ಸ್‌ನ ಪಾಲುದಾರರಾದ ನಾರಾಯಣ ಭಟ್‌ ಅಪಹರಣ ಮತ್ತೆ ಬೆಂಗಳೂರಿನ ಶ್ರೀಮಂತ ಉದ್ಯಮಿಗಳ ನಿದ್ದೆಗೆಡಿಸಿದೆ. ವಾಚಾನಿ ಅಪಹರಣದ ಕೆಲವು ಶಂಕಿತರು ಜೈಲಿನಲ್ಲಿದ್ದರೂ ಕೃತ್ಯಗಳನ್ನು ಕೈಬಿಟ್ಟಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಬಂಧಿತರಲ್ಲಿ ಒಬ್ಬನಾದ ಬಬ್ಲು ಶ್ರೀವಾತ್ಸವ ತನ್ನ ಅಕ್ರಮ ಚಟುವಟಿಕೆಗಳನ್ನು ಜೈಲಿನಲ್ಲಿದ್ದುಕೊಂಡೇ ನಡೆಸುತ್ತಿದ್ದುದು ಬೆಳಕಿಗೆ ಬಂದಿತ್ತು.

ಮುಂಬೈ ಮಾಫಿಯಾಗೆ ಸೇರಿದ ಒಬ್ಬ ವ್ಯಕ್ತಿ ಬೆಂಗಳೂರಿನಲ್ಲೇ ತಳವೂರಿ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಪೊಲೀಸರಲ್ಲಿ ಸಮನ್ವಯದ ಕೊರತೆಯಿದ್ದ ಕಾರಣ ಅಪಹರಣಕಾರರನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಯಾಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಕರಣದ ಬಗ್ಗೆ ತೀವ್ರ ನಿಗಾ ಇಟ್ಟಿರುವ ಪೊಲೀಸರಿಗೆ ನಾರಾಯಣ ಭಟ್‌ ಅಪಹರಣ ದೊಡ್ಡ ಸವಾಲಾಗಿ ಪರಿಣಮಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X