ಆಕಾಶವಾಣಿಯಲ್ಲಿ ಕಣ್ಣೀರುಗರೆದ ಪಾರ್ವತಮ್ಮ, ವೀರಪ್ಪನ್‌ಗೆ ಮನವಿ

ಬೆಂಗಳೂರು : ಅನಾರೋಗ್ಯದಿಂದ ಮಲ್ಯ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವ ಪಾರ್ವತಮ್ಮ ರಾಜ್‌ಕುಮಾರ್‌ ಅಕ್ಷರಶಃ ಗೊಳೋ ಎಂದು ಅತ್ತಬಿಟ್ಟರು. ತಮ್ಮ ಪತಿಯನ್ನು ಬಿಡುವಂತೆ ಅಣ್ಣಾ ಎಂದು ಸಂಬೋಧಿಸಿ ವೀರಪ್ಪನ್‌ ಅವರಲ್ಲಿ ಕಣ್ಣೀರುಗರೆಯುತ್ತಾ ತಮಿಳಿನಲ್ಲಿ ಗೋಗರೆದರು.

ಪಾರ್ವತಮ್ಮನವರ ಕೋರಿಕೆಯ ಮೇರೆಗೆ ಅವರ ಸಂದೇಶವನ್ನು ಬೆಂಗಳೂರು ಆಕಾಶವಾಣಿ ಪದೇಪದೇ ಗುರುವಾರ ಬಿತ್ತರಿಸಿತು. ತಮ್ಮ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿಗಳನ್ನೂ ಬಾನುಲಿ ಮೂಲಕ ಪಾರ್ವತಮ್ಮ ನಿವಾರಿಸಿದರು. ಶಾಂತಿಯಿಂದಿರುವಂತೆ ಕನ್ನಡಿಗರನ್ನು ಕೋರಿದರು.

‘ ನಮ್ಮ ಅಭಿಮಾನಿ ದೇವರುಗಳೇ.. ನಾನು ಆರೋಗ್ಯದಿಂದಿದ್ದೇನೆ. ಶಾಂತಿಯಿಂದಿರಿ, ನಮ್ಮ ಯಜಮಾನರು, ಸುರಕ್ಷಿತವಾಗಿ ಹಿಂತಿರುಗುತ್ತಾರೆ ಎಂಬ ಭರವಸೆ ನನಗಿದೆ ಶಾಂತಿಯಿಂದ ವರ್ತಿಸಿ’ ಎಂದು ಮನವಿ ಮಾಡಿದರು.

ರಾಜ್‌ಕುಮಾರ್‌ ಅವರಿಗೆ ತಾವು ಮಲ್ಯ ಆಸ್ಪತ್ರೆಯಲ್ಲಿ ಇರುವ ವಿಷಯ ತಿಳಿದರೆ, ಕಂಗಾಲಾಗುತ್ತಾರೆ ಎಂಬುದನ್ನು ಮನಗಂಡ ಅವರು, ಕಾಡು - ನಾಡಿನ ನಡುವೆ ಸಂಪರ್ಕಕೊಂಡಿಯಾಗಿರುವ ಆಕಾಶವಾಣಿಗೆ ಕರೆಕಳಿಸಿ, ತಮ್ಮ ಈ ಸಂದೇಶವನ್ನು ಬಿತ್ತರಿಸಿ ಎಂದು ಮನವಿ ಮಾಡಿಕೊಂಡಿದ್ದರು. ಆಕಾಶವಾಣಿಯಲ್ಲಿ ಬಿತ್ತರವಾದ ಸಂದೇಶ ಇದು:

ಪಾರ್ವತಮ್ಮ : (ಅನಾರೋಗ್ಯದಿಂದ ಹಾಗೂ ಆತಂಕದಿಂದ ಗಂಟಲು ಗದ್ಗದಿತವಾಗಿತ್ತು) ರೀ ನಾನು ಆರೋಗ್ಯವಾಗಿದ್ದೇನೆ. 15 -20 ದಿನದಿಂದ ಆರೋಗ್ಯ ಚೆನ್ನಾಗಿರಲಿಲ್ಲ. ಆದ್ರೂ ಆಸ್ಪತ್ರೆ ಸೇರಿರಲಿಲ್ಲ. ನಿನ್ನೆ ಸ್ವಲ್ಪ ಎದೆ ನೋವು ಬಂದಿತ್ತು. ಹಾಸ್ಪೆಟಲ್‌ನಲ್ಲಿ ಇದ್ದೇನೆ. ನೀವು ಗಾಬರಿ ಆಗಬೇಡಿ. ನೀವು ಗಾಬರಿ ಆಗ್ತೀರಾ ಅಂತ್ಲೇ ರೇಡಿಯೋದೋರ್ನ ಕರೆದು ಮಾತಾಡಿದ್ದೀನಿ. ಇಲ್ಲಿ ಡಾಕ್ಟರು ನನ್ನ ಚೆನ್ನಾಗಿ ನೋಡ್ಕೋತಿದ್ದಾರೆ. ಎಲ್ಲರೂ ಚೆನ್ನಾಗಿದ್ದಾರೆ. ಯೋಚನೆ ಮಾಡಬೇಡಿ. ಏನಿಲ್ಲ ಹುಷಾರಾಗಿದ್ದೀನಿ. ಮನೇಲಿದ್ರೆ ರೆಸ್ಟ್‌ ತಗೋಳಲ್ಲ ಅಂತ ಆಸ್ಪತ್ರೆಗೆ ಅಡ್ಮಿಟ್‌ ಮಾಡಿದ್ದಾರೆ. ಸ್ಪಲ್ಪ ಬ್ಲಡ್‌ ಪ್ರೆಷರ್‌, ಷುಗರ್‌ ಜಾಸ್ತಿ ಆಗಿದೆ ಅಷ್ಟೇ.

ಪೇಪರ್‌ನಲ್ಲಿ ಏನೇನೋ ಬರತ್ತೆ, ಜನ ಏನೇನೋ ಸುದ್ದಿ ಹಬ್ಬಿಸಿ ಬಿಡ್ತಾರೆ ನೀವು ಗಾಬರಿ ಆಗಬೇಡಿ. 50 ದಿನ ಆಗಿಹೋಯ್ತಲ್ಲ ಅದಕ್ಕೆ ಸ್ವಲ್ಪ ಗಾಬರಿ ಆಯ್ತು.

ಗೋವಿಂದು ನಿನಗೂ ಅಷ್ಟೇ.. ನೀನೇನೂ ಹೆದರ್ಕೋ ಬೇಡ. ನಾನು ಆರೋಗ್ಯವಾಗಿದ್ದೀನಿ. ಅಕ್ಕಂಗೆ ಹುಷಾರಿಲ್ಲ ಅಂತ ಗಾಬರಿ ಆಗಬೇಡ. ಅವರಿಗೂ ಧೈರ್ಯ ಹೇಳು. ಅಕ್ಕ ಚೆನ್ನಾಗಿದ್ದಾಳೆ ಅಂತ ಹೇಳು. ನಾವೆಲ್ಲ ಎಲ್ಲರ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದೇವೆ.

ನಾಗೇಶ್‌ ಹೆಂಡ್ತಿ ಎಲ್ಲ ಚೆನ್ನಾಗಿದ್ದಾರೆ. ಗಾಬರಿ ಆಗಬೇಡಿ. ನೀವು ಎಲ್ಲ ಸುರಕ್ಷಿತವಾಗಿ ಬರ್ತೀರಿ ಅನ್ನುವ ಭರವಸೆ ನನಗಿದೆ.

ತಮಿಳಿನಲ್ಲಿ ವೀರಪ್ಪನ್‌ಗೆ ಮನವಿ: ವೀರಪ್ಪನ್‌ ಅವರ್‌ಗಳೇ ... ನಿಮ್ಮನ್ನು ಅಣ್ಣಾ ಅಂತ ಕರಿತೀದ್ದೇನೆ. ತಂಗಿ ಮಾತಿಗೆ ಗೌರವ ಕೊಟ್ಟು ಅವರನ್ನು ಬಿಟ್ಟು ಬಿಡಿ. ಮಾತುಗಳು ಮುಗಿಯುವ ಮೊದಲೇ ಗೊಳೋ ಎಂದು ಅತ್ತರು. ಮಾತು ಬಾರದಾಗಿತ್ತು. ಕಣ್ಣುಗಳು ತುಂಬಿ ಬಂದಿದ್ದವು. 50 ದಿನದಿಂದ ಅದುಮಿಟ್ಟುಕೊಂಡಿದ್ದ ದುಃಖ ಒಮ್ಮೆಲೇ ಉಮ್ಮಳಿಸಿ ಬಂತು. ಅನಾರೋಗ್ಯದ ಜತೆಗೆ ಮಡುಗಟ್ಟಿದ್ದ ಪತಿಯ ಅಗಲಿಕೆಯ ನೋವು ಅಳುವಿನ ರೂಪದಲ್ಲಿ ಉಕ್ಕಿ ಹರಿಯಿತು. ಕೊನೆಯಲ್ಲಿ ಅವರು ಹೇಳಿದ್ದು : ವೀರಪ್ಪ ಅವರ್‌ಗಳೇ... ಉಂಗಳೈ ನಾನ್‌ ಅಣ್ಣಾ ಎಂಡ್ರು ಕೂಪಿರ್ಕೆ, ಇಪ್ಪ ನಿಲುಮೈ ಇಪ್ಪಿರ್ಕೇ ವಂದು ಆಸ್ಪೆಟ್ಲೆ ಸೇಂತಿರ್ಕೆ, ಅವರುಂಗಳೈ ವಿಟ್ಟು ವಿಡುಂಗಳ್‌.....

ನಾಲ್ಕು ನಿಮಿಷದ ಈ ಸಂದೇಶಗಳನ್ನು ಬೆಂಗಳೂರು ಆಕಾಶವಾಣಿ, 5.30, 5.45, 5.55, 6.35ರಲ್ಲಿ ಪ್ರಸಾರ ಮಾಡಿತು. ನಾಳೆ ರಾಜ್‌ ಪುತ್ರರ ಸಂದೇಶ ಕಾಡಿಗೆ ಮುಟ್ಟಲಿದೆ.

ಮುಖಪುಟ / ರಾಜ್‌ ಅಪಹರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+