ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಉದ್ಘಾಟನೆ : ಅವರ್ನ ಬಿಟ್ಟು, ಇವರ್ನ ಬಿಟ್ಟು ಅವರ್ಯಾರು ?

By Staff
|
Google Oneindia Kannada News

ಮೈಸೂರು : ಶಾಂತಾದೇವಿ ಮಾಳವಾಡರು ಬಾಗಲಕೋಟೆಯ 68ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುತ್ತೇವೆಂದು ಎಣಿಸಿರಲಿಲ್ಲ. ಬಯಸದೇ ಬಂದ ಭಾಗ್ಯ ಅದು ಎಂದು ಅವರು ಹೇಳಿದ ನೆನಪು. ಈಗ ಮತ್ತೆ ಆವರಿಗೆ ವಿಶ್ವ ವಿಖ್ಯಾತ ದಸರೆಯನ್ನು ಉದ್ಘಾಟಿಸುವ ಯೋಗ ಬಂದಿದೆ.

ಮೈಸೂರು ದಸರೆಗೆ ಈ ಬಾರಿ ರಾಜ್‌ ಅಪಹರಣದ ಬಿಸಿ ತಟ್ಟಿದೆ. ವೀರಪ್ಪನ್‌ನ ಕಾರ್ಮೋಡ ಕವಿದಿದೆ. ರಾಜ್‌ಕುಮಾರ್‌ ಅಪಹರಣವಾದ ನಾಲ್ಕಾರು ದಿನದಲ್ಲೇ ಈ ಬಾರಿಯ ದಸರೆಯನ್ನು ರಾಜ್‌ಕುಮಾರ್‌ ಅವರಿಂದಲೇ ಉದ್ಘಾಟಿಸುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವರೂ ಆದ ವಿಶ್ವನಾಥ್‌ ಹೇಳಿದ್ದರು.

ನಾನಾ ಕಾರಣಗಳಿಂದ ರಾಜ್‌ಕುಮಾರ್‌ ಅವರ ಬಿಡುಗಡೆ ಅನಿರ್ದಿಷ್ಟ ಕಾಲ ಮುಂದಕ್ಕೆ ಹೋದಾಗ ಕನ್ನಡಿಗರ ಹೃದಯ ಗೆಲ್ಲ ಬಯಸಿದ ಚತುರ ಮತಿಗಳು ಅಪಹೃತ ರಾಜ್‌ ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್‌ಕುಮಾರ್‌ ಅವರಿಂದಲೇ ದಸರೆಯನ್ನು ಉದ್ಘಾಟಿಸುವುದಾಗಿ ಹೇಳಿಕೆಗಳನ್ನು ನೀಡಿದರು. ತಮ್ಮ ಪತಿ ಕಾಡಿನಲ್ಲಿ ಅದೂ ನರಹಂತಕನ ವಶದಲ್ಲಿ , ಚಳಿ ಮಳೆ ಗಾಳಿಯಲ್ಲಿ ವೇದನೆ ಅನುಭವಿಸುತ್ತಿರುವಾಗ ಯಾವ ಪತ್ನಿ ತಾನೆ ಸಡಗರ, ಸಂಭ್ರಮದ ಉತ್ಸವ ಉದ್ಘಾಟಿಸಲು ಬಂದಾರು ಹೇಳಿ. ಆದರೂ ತಮ್ಮ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಳ್ಳುವ, ಕನ್ನಡ ಜನರ ಸಹಾನುಭೂತಿ ಗಳಿಸುವ ನಿಟ್ಟಿನಲ್ಲಿ ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು ಎಂಬುದು ಜನರಾಡುವ ಮಾತು.

ಪಾರ್ವತಮ್ಮ ರಾಜ್‌ಕುಮಾರ್‌ ಈಗ ದಸರಾ ಉತ್ಸವ ಸಮಿತಿಯ ಆ ಆಹ್ವಾನವನ್ನು ನಮ್ರವಾಗಿಯೇ ನಿರಾಕರಿಸಿದ್ದಾರೆ. ಈ ಹಂತದಲ್ಲಿ ದಸರೆಗೆ ಉಳಿದಿರುವುದು ಕೇವಲ 7 ದಿನ ಮಾತ್ರ. ಹೀಗಾಗಿ ದಿಢೀರೆಂದು ಶಾಂತಾದೇವಿ ಮಾಳವಾಡರನ್ನೇ ಉದ್ಘಾಟನೆಗೆ ಆಹ್ವಾನಿಸುವ ನಿರ್ಧಾರ ಕೈಗೊಳ್ಳಲಾಗಿದೆಯಂತೆ.

ದಸರಾ ಮಹೋತ್ಸವ ರದ್ದಿಗೆ ಒತ್ತಾಯ : ಈ ಮಧ್ಯೆ ರಾಜ್‌ಕುಮಾರ್‌ ಅವರ ಅಪಹರಣದಿಂದ ಇಡೀ ರಾಜ್ಯದ ಜನತೆಯ ಉತ್ಸಾಹವೇ ಉಡುಗಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಉತ್ಸವವನ್ನು ರದ್ದು ಪಡಿಸುವಂತೆ ಕನ್ನಡ ಚಳವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ. ನಾರಾಯಣ ಕುಮಾರ್‌ ಬೆಂಗಳೂರಿನಲ್ಲಿ ಬುಧವಾರ ಒತ್ತಾಯಿಸಿದ್ದಾರೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X