ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರದಿಂದ ನಿಮಗೊಂದು ಕರಪತ್ರಉತ್ತರ ಕನ್ನಡದಲ್ಲಿ ನಡೆಯುತ್ತಿದ್ದ ಕರಪತ್ರಗಳ ಆಂದೋಲನ ಮುದ್ರಣ ಮಾಧ್ಯಮದ ಇತಿಹಾಸದಲ್ಲಿಯೇ ವಿಶೇಷವಾದುದು

By Staff
|
Google Oneindia Kannada News

* ಪುರು

ಇಂಟರ್‌ನೆಟ್‌ ಯುಗದಲ್ಲಿ ಸಂವಹನ ಎಂಬುದು ಬರೀ ಕಂಪ್ಯೂಟರ್‌ನ ಮೌಸ್‌ ಕ್ಲಿಕ್‌ ಎಂಬ ಕ್ಷೀಣ ಶಬ್ದದಷ್ಟೇ ದೂರ. ಮನಸ್ಸಿನೊಳಗೆ ಯೋಚನೆಯಾಂದು ಬರುವುದೇ ಬಾಕಿ, ಕ್ಷಣಗಳಲ್ಲಿ ಕಾರ್ಯಗತ. ವಿಶ್ವದ ಯಾವುದೇ ಮೂಲೆಗೆ ಮಾಹಿತಿ ತಲುಪುವುದು ಸಾಧ್ಯ. ಪ್ರಪಂಚ ಅಷ್ಟು ಕುಗ್ಗಿದೆ. ಆದರೆ, ಸುಮಾರು 100 ವರ್ಷಗಳ ಹಿಂದೆ ಸ್ವಾತಂತ್ರ ಚಳವಳಿ ಸಂದರ್ಭದಲ್ಲಿ ಸಂವಹನ ಹೇಗಿತ್ತು ಎಂಬುದನ್ನು ಊಹಿಸಲೂ ಅಸಾಧ್ಯ. ಪತ್ರಿಕೆಗಳ ಮೇಲೆ ನಿರ್ಬಂಧ, ಅಸಾಧ್ಯ ಎನಿಸುವ ವಿಚಾರ ವಿನಿಮಯ, ಅಭಿವ್ಯಕ್ತಿ ಸ್ವಾತಂತ್ರವಂತೂ ಇಲ್ಲವೇ ಇಲ್ಲ. ಹೀಗಿದ್ದಾಗಲೂ ಸ್ವಾತಂತ್ರ ಚಳವಳಿಗಾರರ ನಡುವಿನ ವಿಚಾರ ವಿನಿಮಯದ ಕೊಂಡಿ ಯಾವುದಿತ್ತು ಎಂಬುದರ ಬಗ್ಗೆ ಆಸಕ್ತಿಯಿದ್ದರೆ ಬನ್ನಿ, ಈ ಇತಿಹಾಸದ ಪುಟಗಳನ್ನು ತಿರುವಿ ಹಾಕಿ.

ಆ ಕಾಲದಲ್ಲಿ ಮಾತ್ರವಲ್ಲ, ಈಗಲೂ ಸಂವಹನ ಬೇರೆಡೆಗಳಿಗಿಂತ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಂಚ ದುರ್ಗಮವೇ. ಇನ್ನು ಆಗಂತೂ, ವರ್ಷದ ಐದಾರು ತಿಂಗಳು ಎಡೆ ಬಿಡದೇ ಸುರಿಯುವ ಧಾರಾಕಾರ ಮಳೆ, ದುರ್ಗಮ ಕಾಡು, ವನ್ಯ ಮೃಗಗಳ ಭೀತಿ, ಸಾರಿಗೆ ಎಂದರೆ ಕಾಲ್ನಡಿಗೆ ಮಾತ್ರ. ಉಳ್ಳವರಿಗೆ ಚಕ್ಕಡಿಯೂ ಆದೀತು. ಅಲ್ಲೊಂದು ಇಲ್ಲೊಂದು ಜನವಸತಿ. ಇಂಥ ಕಷ್ಟಕರ ಸನ್ನಿವೇಶದಲ್ಲಿ ಸ್ವಾತಂತ್ರದ ಕುರಿತು ಜನ ಜಾಗೃತಿ ಮೂಡಿಸಲು ಬಳಸಿದ ಉಪಕರಣ ಯಾವುದು ಗೊತ್ತೇ - ಕರಪತ್ರಗಳು.

ಸ್ವಾತಂತ್ರ ಚಳವಳಿಯ ಕುರಿತು ಮಾತನಾಡುವುದು ಇರಲಿ. ಆ ಕುರಿತು ಯೋಚಿಸುವುದು ಅಪರಾಧ ಎಂಬ ಭಾವನೆಯಿದ್ದ ಕಾಲದಲ್ಲಿ , ಆ ಕುರಿತ ಉದ್ರೇಕಕಾರಿ ಭಾಷಣ, ವಿಚಾರ ವಿನಿಮಯ ಮಾಡಲು ಪತ್ರಿಕೆಗಳನ್ನು ಪ್ರಕಟಿಸುವುದು ಒಂದರ್ಥದಲ್ಲಿ ನೀರಿಗೆ ಬೆಂಕಿ ಹೊತ್ತಿದಂತೆ. ಹಾಗಿದ್ದಾಗ ಅಬೇಧ್ಯ ಅರಣ್ಯದಿಂದ ಆವೃತವಾದ ಉತ್ತರ ಕನ್ನಡವೆಂಬ ಕಗ್ಗಾಡಿನ ದ್ವೀಪಕ್ಕೆ ಸುದ್ದಿ ಹೊತ್ತು ತಂದು , ಸೇತು ಬಂಧ ನಿರ್ಮಿಸಿದ್ದು, ಹೋರಾಟದ ಕಿಡಿ ಹೊತ್ತಿಸಿದ್ದು , ಬರೀ ಕೈಯಗಲದ ಕರಪತ್ರಗಳು ಎಂದರೆ ಆಶ್ಚರ್ಯ ಪಡಬೇಕಾದ ವಿಚಾರ.

ನೀರಿಗೆ ಬೆಂಕಿ ಹತ್ತಿದ ಕತೆ ಇದೋ ಇಲ್ಲಿ ...: ಈ ಶತಮಾನ ಆರಂಭವಾಗಿ 25 ವರ್ಷಗಳು ಕಳೆದಿರಬೇಕು. ಭಾರತದ ಸ್ವಾತಂತ್ರ ಚಳವಳಿಯಲ್ಲಿ ಗಾಂಧೀಜಿಯವರ ಪ್ರಭಾವ ಸ್ನಿಗ್ಧವಾಗತೊಡಗಿತ್ತು. ಗಾಂಧೀಜಿಯವರ ವಿಚಾರ ಧಾರೆಯನ್ನು ಉತ್ತರ ಕನ್ನಡದಂಥ ದುರ್ಗಮ ಜಿಲ್ಲೆಗೆ ತಲುಪಿಸಲು ನಮ್ಮ ಹಿರಿಯರು ಕಂಡುಕೊಂಡ ಮಾರ್ಗವೇ ಕರಪತ್ರಗಳು. ಒಂದರ್ಥದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ ಹೋರಾಟಕ್ಕೆ ಕಸುವು ಪ್ರಾಪ್ತವಾದದ್ದೇ ಅವುಗಳಿಂದ. ಎಲ್ಲೆಡೆಯಲ್ಲಿಯಂತೆ ಇಲ್ಲೂ ಸ್ವಾತಂತ್ರ ಚಳವಳಿಯನ್ನು ಹ್ತತಿಕ್ಕಲು ಬ್ರಿಟಿಷರು ದೌರ್ಜನ್ಯದ ಅಸ್ತ್ರವನ್ನೇ ಬಳಸಿದರು. ಪತ್ರಿಕೆಗಳ ಮೇಲೆ ನಿರ್ಬಂಧ ಹೇರಿದ ಮೇಲೆ ಸ್ವಾತಂತ್ರ ಹೋರಾಟಗಾರರಿಗೆ ದೈನಂದಿನ ಸಮಾಚಾರಗಳನ್ನು ತಲುಪಿಸುವುದೇ ಮುಖ್ಯ ಧ್ಯೇಯವಾಗಿತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಕರಪತ್ರಗಳು ಪ್ರಕಟವಾಗಿರುವ ಕುರಿತು ದಾಖಲೆಗಳಿವೆ. ಅಂಕೋಲೆಯಿಂದಲೂ ಸಾಕಷ್ಟು ಕರಪತ್ರಗಳು ಹೊರಬಂದಿವೆ. ಈ ಕರಪತ್ರಗಳ ಮುದ್ರಣ, ಹಂಚಿಕೆ, ಎಲ್ಲವೂ ಭೂಗತವಾಗಿಯೇ ನಡೆಯುತ್ತಿದ್ದವು. ಗುಹೆ , ಕಾಡು, ಮಹಡಿ ಮನೆ, ನೆಲಮಾಳಿಗೆಗಳು, ಜನವಸತಿಯಿಲ್ಲದ ದೇವಾಲಯ ಹೀಗೆ ಕರಪತ್ರಗಳ ಮುದ್ರಣ ಎಲ್ಲೆಂದರಲ್ಲಿ ಆದರೆ, ಅತ್ಯಂತ ಗುಪ್ತವಾಗಿ ನಡೆಯುತ್ತಿತ್ತು. ಕೆಲವೊಮ್ಮೆ ಬ್ರಿಟಿಷರು ಅನುಮಾನದಿಂದ ಅನೇಕ ಮನೆಗಳನ್ನು ಶೋಧಿಸಿದ್ದೂ ಉಂಟು. ಅನೇಕ ಬಾರಿ ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಅವರ ಮನೆಯ ಮಾಳಿಗೆಯ ಮೇಲೆ ಕರಪತ್ರಗಳನ್ನು ಮುದ್ರಣ ಮಾಡಿದ್ದರ ಕುರಿತೂ ದಾಖಲೆಯಿದೆ.

ಈ ಕರಪತ್ರಗಳದ್ದು ಅತ್ಯಂತ ಕ್ರಾಂತಿಕಾರ ಶೈಲಿ. ಮುದ್ರಣ ಸಂಪೂರ್ಣವಾಗಿ ಕಲ್ಲಚ್ಚು ಯಂತ್ರದಿಂದ. ಕೆಲ ಕರಪತ್ರಗಳಂತೂ ಉತ್ತರಕನ್ನಡದ ಪ್ರಥಮ ಪತ್ರಿಕೆಗಳು ಎಂದು ಹೇಳುವಷ್ಟು ಅಚ್ಚುಕಟ್ಟಾಗಿವೆ. ಇವುಗಳ ಬರವಣಿಗೆಯ ಕಾರ್ಯ ಹಿರಿಯ ಸ್ವಾತಂತ್ರ ಯೋಧರಿಗೆ ಬಂದರೆ, ಮುದ್ರಣ ಹಾಳೆಯ (ಸ್ಟೇನ್ಸಿಲ್‌) ನಕಲಿಸುವ ಕೆಲಸ ಅಕ್ಷರ ದುಂಡಾಗಿಯೂ ಸ್ಫುಟವಾಗಿಯೂ ಇರುವವರ ಮೇಲೆ ಬರುತ್ತಿತ್ತು. ಈ ಪಾಳಿ ಕೆಲವೊಮ್ಮೆ ಕಿರಿಯರಿಗೂ. ಗೋಕರ್ಣದ ಹಿರಿಯ ವಿದ್ವಾಂಸ ವೇಧೇಶ್ವರೂ ಚಿಕ್ಕಂದಿನಲ್ಲಿ ಇಂತಹ ಕೆಲಸ ಮಾಡಿದವರೆ.

ಇನ್ನು ವಿತರಣೆಯ ಕಾರ್ಯಕ್ಕೆ ಹೆಂಗಸರು ಮಕ್ಕಳು, ಮುದುಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಎಲ್ಲರೂ ಭಾಗಿಗಳಾಗುತ್ತಿದ್ದರು. ಗಾಂಧಿ ವಿಚಾರ ಧಾರೆಯ ಮೇಲೆ ರೂಪಿತವಾಗಿದ್ದ ಈ ಕರಪತ್ರಗಳು, ಅಹಿಂಸೆ ಹಾಗೂ ಸತ್ಯಾಗ್ರಹವನ್ನು ಬೋಧಿಸಿದ್ದವು. ಕರಪತ್ರಕ್ಕೆ ಯಾವುದೇ ಧಾರಣೆ ನಿಗದಿಪಡಿಸದಿದ್ದರೂ, ಇದನ್ನು ಓದಿ, ಎಸೆಯದೇ ಮತ್ತೊಬ್ಬರಿಗೆ ನೀಡುವುದನ್ನು ಕಡ್ಡಾಯ ಮಾಡಲಾಗಿತ್ತು. ಹೀಗೆ ಮಾಡುವಂತೆ ಕರಪತ್ರದಲ್ಲಿಯೇ ತಿಳಿಸಲಾಗುತ್ತಿತ್ತು.

ಒಮ್ಮೆ ಹಂಚುವಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಸಿದ್ದಾಪುರದ ಬಿಳಗಿಯ ಮಾಧವ ವಿಟ್ಠಲ ಎಂಬ ಹೋರಾಟಗಾರರು ತಮ್ಮಲ್ಲಿದ್ದ ಕರಪತ್ರಗಳನ್ನೆಲ್ಲಾ ನುಂಗಿ ಸಾಕ್ಷ್ಯ ನಾಶ ಮಾಡಿದ್ದರಂತೆ. ಗೋಕರ್ಣದ ವ್ಯಕ್ತಿಯಾಬ್ಬರು ಶಿರಸಿಯಿಂದ ಕರಪತ್ರವನ್ನು ಒಯ್ಯುವಾಗ ಅವರು ಬುದ್ಧಿ ಭ್ರಮಣೆಯಾದಂತೆ ನಟಿಸುತ್ತಾ, ಯಾರಾದರೂ ಎದುರಿಗೆ ಸಿಕ್ಕಿದಾಗ ಗೋಕರ್ಣದ ಮಹಾಬಲೇಶ್ವರ ಒಳ್ಳೆಯದು ಮಾಡಲಿ ಎಂದು ಹಾರೈಸಿ, ಮುನ್ನಡೆಯುತ್ತಿದ್ದರು.

ಶಿವಾನಂದ ಕಳವೆ ಎಂಬವರು ಮೊನ್ನೆ ಸ್ವಾತಂತ್ರ ದಿನದಂದು ಇಂತಹ ಅಪರೂಪದ ಕರಪತ್ರಗಳನ್ನು ಶಿರಸಿಯಲ್ಲಿ ಪ್ರದರ್ಶಿಸಿದ್ದರು. ಹೀಗೆ ಇವುಗಳ ರೋಚಕ ಕತೆಗಳಿವೆ. ಇಂಥ ಅಮೂಲ್ಯ ದಾಖಲೆಗಳು ಈವರೆಗೆ ಬೆಳಕಿಗೆ ಬಂದಿರಲಿಲ್ಲ. ಶಿರಸಿ ಪತ್ರಕರ್ತ ಶಿವಾನಂದ ಕಳವೆ ಅವರಿಗೆ ಅಕಸ್ಮಿಕವಾಗಿ ಇಂಥ ಕರಪತ್ರಗಳ ಕಂತೆಯಾಂದು ಅಂಗಡಿಯಾಂದರ ರದ್ದಿ ಕಾಗದಗಳ ರಾಶಿಯಲ್ಲಿ ದೊರೆಯಿತು. ಅವುಗಳ ಅಧ್ಯಯನ ಮಾಡಿದಾಗ, ಇಂತಹ ರೋಚಕ ಇತಿಹಾಸ ಬೆಳಕಿಗೆ ಬಂತು. ಹಿರೀಕರು ಸ್ವಾತಂತ್ರಕ್ಕಾಗಿ ಹೇಗೆಲ್ಲಾ ಕೆಲಸ ಮಾಡಿದ್ದಾರೆ ಎನ್ನುವುದನ್ನು ಕಂಡಾಗ ಆಶ್ಟರ್ಯವಾಗುತ್ತದೆ. ಉತ್ತರ ಕನ್ನಡದಲ್ಲಿ ನಡೆಯುತ್ತಿದ್ದ ಕರಪತ್ರಗಳ ಆಂದೋಲನ ಮುದ್ರಣ ಮಾಧ್ಯಮದ ಇತಿಹಾಸದಲ್ಲಿಯೇ ವಿಶೇಷವಾದುದು. ಕರಪತ್ರಗಳ ಸಾಮರ್ಥ್ಯ, ಸಾಧನೆ ಹಾಗೂ ಸಂವಹನಕ್ಕೆ ಸಂಬಂಧಿಸಿದಂತೆ ಶತಮಾನರಾಂಭದಲ್ಲಿ ಪ್ರಯೋಗಗಳೂ ನಡೆದಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X