Get Updates
Get notified of breaking news, exclusive insights, and must-see stories!

ರಾಜ್‌ಕುಮಾರ್‌ ನಾಡಿಗೇನು ಕೊಟ್ಟಿದ್ದಾರೆ?


ಗೋಪಾಲಕೃಷ್ಣ ಅಡಿಗ, ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಕೆ.ಕೆ. ಹೆಬ್ಬಾರ್‌, ಬಿ .ಆರ್‌. ಪಂತಲು ಮುಂತಾದವರ ಕೊಡುಗೆ ಏನು ಎನ್ನುವುದು ನಿಮಗೆ ಗೊತ್ತಿದ್ದರೆ ರಾಜ್‌ಕುಮಾರ್‌ ಕೊಡುಗೆ ಏನು ಎನ್ನುವ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ...


*ಸತ್ಯವ್ರತ ಹೊಸಬೆಟ್ಟು

ಇಂಥ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ . ಇಂಥ ನೂರೆಂಟು ಪ್ರಶ್ನೆಯನ್ನು ನಾವು ಹಾಕುತ್ತಾ ಹೋಗಬಹುದು. ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಒಬ್ಬ ಗುಮಾಸ್ತ ನಾಡಿಗೇನು ಮಾಡಿದ್ದಾನೆ ಎಂಬುದಕ್ಕಿಂತ ಅರ್ಥಹೀನ ಪ್ರಶ್ನೆ ಇದು. ನಾಡಿಗೆ ಯಾರೂ ಏನೂ ಮಾಡಬೇಕಾಗಿಲ್ಲ ಅನ್ನುವುದೂ, ಹಾಗೆ ಏನನ್ನಾದರೂ ಪ್ರಯತ್ನಪೂರ್ವಕವಾಗಿ ಮಾಡುವ ಮನುಷ್ಯ ಒಳಿತಿಗಿಂತ ಹೆಚ್ಚಾಗಿ ಕೆಡುಕನ್ನೇ ಮಾಡುತ್ತಾನೆ ಅನ್ನುವುದೂ ಇಂಥವರಿಗೆ ಅರ್ಥವಾದಂತಿಲ್ಲ . ಹಾಗೇ ಒಬ್ಬ ಕವಿ, ಕಲಾವಿದ, ಸಾಹಿತಿ, ಕತೆಗಾರ, ಸಂಗೀತಗಾರ, ಗಾಯಕ ನಾಡಿಗೆ ಏನು ಮಾಡಿದ್ದಾನೆ ಎಂದು ಕೇಳುವ ವ್ಯಕ್ತಿಯ ಚಿಂತನೆಯಲ್ಲೇ ದೋಷವಿದೆ ಎಂದು ನನಗೆ ಅನ್ನಿಸುತ್ತದೆ. ಅಂಥ ವ್ಯಕ್ತಿ ಸಮಾಜದಲ್ಲಿ ಬದುಕುವುದಕ್ಕೆ ಬೇಕಾದ ಅರ್ಹತೆಯನ್ನೂ ಪಡೆದಿರುವುದಿಲ್ಲ .

ರಾಜ್‌ಕುಮಾರ್‌ ನಾಡಿಗೆ ಏನು ಮಾಡಬೇಕಾಗಿತ್ತು ಎಂಬ ಇನ್ನೊಂದು ಪ್ರಶ್ನೆಯಿಂದ ಮೇಲಿನ ಪ್ರಶ್ನೆಯನ್ನು ಎದುರಿಸುವುದು ಒಳ್ಳೆಯ ಉಪಾಯ. ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟಿ ನಾಡಿಗೆ ನೀರು ಕೊಟ್ಟರು, ದಿವಾನ್‌ ಪೂರ್ಣಯ್ಯ ಮೈಸೂರಿನ ಆಡಳಿತ ಉತ್ತಮಪಡಿಸಿದರು, ಗಾಂಧೀಜಿ ಸ್ವಾತಂತ್ರ್ಯ ತಂದುಕೊಟ್ಟರು... ಎಂದೆಲ್ಲ ನೆನೆಯುವ ನಾವು ಕುವೆಂಪು ಈ ನಾಡಿಗೇನು ಕೊಟ್ಟರು? ಮಾಸ್ತಿಯ ಕೊಡುಗೆ ಏನು? ಕುಮಾರವ್ಯಾಸ ನಮಗೇಕೆ ಮುಖ್ಯ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳಲು ಹಿಂಜರಿಯುತ್ತೇವೆ. ಸಂಸ್ಕೃತಿ, ಕಲೆ, ಸಾಹಿತ್ಯದ ಹೆಸರಲ್ಲಿ ತೇಲಿಸಿ ಉತ್ತರಿಸುತ್ತೇವೆ.

ಆದರೆ, ಕುಮಾರವ್ಯಾಸನಾಗಲೀ, ಕುವೆಂಪು ಆಗಲೀ ಈ ನಾಡಿಗೆ ವಿಶ್ವೇಶ್ವರಯ್ಯನವರಿಗಿಂತ, ಗಾಂಧೀಜಿಗಿಂತ ಮುಖ್ಯ. ಲೌಕಿಕದ ಐಷಾರಾಮ ಹಾಗೂ ಸುಖದ ಆಚೆಗೊಂದು ಜಗತ್ತಿದೆ ಅನ್ನುವುದೂ, ಅದು ಸರ್ಕಾರ ಬಿಡುವ ನೀರು, ಕೊಡುವ ರೇಷನ್‌ ಅಕ್ಕಿ, ಹಂಚುವ ಸೈಟು, ಒದಗಿಸುವ ಸವಲತ್ತು, ಜಾರಿಗೆ ತರುವ ಮೀಸಲಾತಿ- ಇವೆಲ್ಲವನ್ನೂ ಮೀರಿದ್ದು ಎನ್ನುವುದನ್ನೂ ಮತ್ತೆ ಮತ್ತೆ ಹೇಳಬೇಕಾಗಿಲ್ಲ . ಅದು ಅನುಭವಿಸಿದವರಿಗೆ ಗೊತ್ತು . ಮೀಸಲಾತಿಯಿಂದ ನಾಳೆ ನನ್ನ ಮಗನಿಗೆ ಕೆಲಸ ಸಿಗುತ್ತದೆ ಅನ್ನುವುದು ಕೊಡುವುದಕ್ಕಿಂತ ಹೆಚ್ಚು ಖುಷಿಯನ್ನು ರಾಜ್‌ಕುಮಾರ್‌ ಸಿನಿಮಾ ಕೊಡುತ್ತದೆ. ನನ್ನ ಜಾತಿಯ ಮುಖಂಡ ಮುಖ್ಯಮಂತ್ರಿಯಾದ ಅನ್ನುವುದಕ್ಕಿಂತ ದೊಡ್ಡ ಸಂತೋಷವನ್ನು ಬೇಂದ್ರೆಯ ಒಂದು ಕವಿತೆ ಕೊಡುತ್ತದೆ. ಹೀಗಾಗಿ ಕಾವ್ಯ, ನಾಟಕ, ಸಿನಿಮಾಗಳು ಆತ್ಮಕ್ಕೆ ಹತ್ತಿರವಾಗುತ್ತವೆ. ವಿಶ್ವೇಶ್ವರಯ್ಯ, ಐನ್‌ಸ್ಟೀನ್‌, ಗ್ರಹಾಂಬೆಲ್‌ ಬುದ್ಧಿಗೆ ಹತ್ತಿರವಾಗುತ್ತಾರೆ.

ಈ ನಾಡೇ ವಿಚಿತ್ರ. ಇಲ್ಲಿ ರಾಜ್‌ಕುಮಾರ್‌ ದೇವಸ್ಥಾನ ಕಟ್ಟಿಸಬೇಕಿತ್ತು , ಅರವಟ್ಟಿಗೆ ಇಡಬೇಕಿತ್ತು ಎಂದು ಬಯಸುವ ಮಂದಿ ಇದ್ದಾರೆ. ಷೇಕ್ಸ್‌ಪಿಯರ್‌ ಯಾವತ್ತೂ ಸಮಾಜಸೇವೆ ಮಾಡಲಿಲ್ಲ . ಆತ ಬರೆದ ನಾಟಕಗಳನ್ನು ಹಣಕ್ಕೆ ಮಾರಿದ. ಹಾಗಿದ್ದೂ ಆತನ ಔನ್ನತ್ಯ ಕಡಿಮೆಯಾಗಲಿಲ್ಲ . ಕುಮಾರವ್ಯಾಸ ರೇಷನ್‌ ಅಂಗಡಿ ಇಟ್ಟಿರಲಿಲ್ಲ .

ಹಾಗಿದ್ದರೂ ‘ಕೇಳು ಜನಮೇಜಯ ಧರಿತ್ರೀಪಾಲ ಪಾಂಚಾಲೆಯ ಮನೋರಥ... ’ ಎಂಬ ಸಾಲುಗಳನ್ನು ಓದುವಾಗ ಆಗುವ ಖುಷಿ, ಅಶೋಕ ಸಾಲುಮರಗಳನ್ನು ನೆಡಿಸಿದನು ಎನ್ನುವುದನ್ನು ಓದುವಾಗ ಆಗುವುದಿಲ್ಲ .

ರಾಜ್‌ಕುಮಾರ್‌ ನೀಡಿದ ವಿಚಿತ್ರ ಸಂತೋಷ, ಬೆರಗು ಮತ್ತು ಪುಳಕಗಳನ್ನು ವಿವರಿಸುವುದು ಕಷ್ಟ . ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್‌ ಹೋಮ್ಸ್‌ ಕಾದಂಬರಿಯಾಂದರ ಕೊನೆಯಲ್ಲಿ , ತೀರಿಕೊಂಡಾಗ ಜನ ತಮ್ಮ ಕುಟುಂಬದ ಸದಸ್ಯನೊಬ್ಬ ತೀರಿಕೊಂಡಷ್ಟು ದುಗುಡ ಅನುಭವಿಸಿದ್ದರು. ರಾಜ್‌ಕುಮಾರ್‌ ಬಂಗಾರದ ಮನುಷ್ಯ ಚಿತ್ರದ ಕೊನೆಗೆ ಮನೆಬಿಟ್ಟು ಹೊರಡುವುದನ್ನು ಕಂಡ ಕೆಲವರಿಗಾದರೂ ತಮ್ಮ ಮನೆಯನ್ನು ಅವನಿಗೆ ಬಿಟ್ಟು ಕೊಡೋಣ ಅನ್ನಿಸಿರುತ್ತದೆ.

ವಾಸ್ತವದಲ್ಲಿ ಅತ್ಯಂತ ಸ್ವಾರ್ಥಿಯೂ ಜುಗ್ಗನೂ ಆದ ವ್ಯಕ್ತಿ ಹೀಗೆ ಕಾಲ್ಪನಿಕ ಪಾತ್ರವೊಂದಕ್ಕೆ ಮನೆ ಬಿಟ್ಟು ಕೊಡುವ ಬಗ್ಗೆ ಅರೆಕ್ಷಣ ಯೋಚಿಸುವಂತೆ ಮಾಡಿದರೂ, ಅದು ಸಾರ್ಥಕತೆಯೇ. ಅಂಥ ಸಾವಿರ ಸಾರ್ಥಕ ಕ್ಷಣಗಳು ರಾಜ್‌ ಚಿತ್ರ ಜೀವನದಲ್ಲಿವೆ.

ರಾಜ್‌ ನಾಡಿಗೆ ಏನು ಕೊಟ್ಟಿದ್ದಾರೆ ಅನ್ನುವುದನ್ನು ಇನ್ನೂ ವಿವರಿಸಿದರೆ ಅದು ಅರ್ಥಹೀನವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+