ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪಾ ನಿನಗೆ ನಿಜಕ್ಕೂ ಏನು ಬೇಕು?

By ಕೆ. ಕರಿಸ್ವಾಮಿ
|
Google Oneindia Kannada News

ವೀರಪ್ಪನ್‌ ಮುಂದಿಟ್ಟಿರುವ ಬೇಡಿಕೆಗಳನ್ನು ನೋಡಿದರೆ ನಿಮಗೇನನ್ನಿಸುತ್ತೆ ? ವೀರಪ್ಪನ್‌ ಯಾಕೋ ಈಚೆಗೆ ಸಂಪೂರ್ಣ ಬದಲಾಗಿದ್ದಾನೆ ಎನಿಸುತ್ತಿದೆ ನಮಗೆ. ಆತ ಇವತ್ತು ಕಾಡಿನಲ್ಲಿದ್ದುಕೊಂಡು ಕೆಳ ವರ್ಗದ ತಮಿಳರ ಪರ ಹೋರಾಟ ನೆಡಸುತ್ತಿದ್ದಾನಾ? ಆಂಧ್ರದ ನಕ್ಸಲೀಯರಂತೆ ಒಂದು ವರ್ಗದವರಿಗೆ ನ್ಯಾಯ ಕೊಡಿಸಲೆತ್ನಿಸುವ ಹೋರಾಟಗಾರನಾಗಿ ರೂಪುಗೊಂಡಿದ್ದಾನಾ ? ನಿಮ್ಮ ಕ್ಷಮಾದಾನವೂ ಬೇಡ, ದುಡ್ಡು ಕಾಸೂ ಬೇಡ ಎಂಬಂತಿರುವ ಅವನ ಬೇಡಿಕೆಗಳ ಪಟ್ಟಿ ನೋಡುತ್ತಾ ಹೋದರೆ ಅವನಿಗೆ ನಿಜಕ್ಕೂ ಬೇಕಾಗಿರುವುದು ಏನು ಎನ್ನುವುದರ ಬಗ್ಗೆ ಕೆಲವು ಪ್ರಶ್ನೆಗಳು ಏಳುತ್ತವೆ.

ಈಗ ಆತ ಇಟ್ಟಿರುವ ಬೇಡಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕ್ಯಾಸೆಟ್‌ನಲ್ಲಿರುವುದು ಅವನ ಧ್ವನಿ. ಅದರಲ್ಲಿ ಯಾವುದೇ ಅನುಮಾನ ಬೇಡ. ಆದರೆ ಬೇಡಿಕೆಗಳ ಕರಡುಪ್ರತಿ ತಯಾರಿಸಿದವನು ವೀರಪ್ಪನ್‌ ಅಲ್ಲ. ವೀರಪ್ಪನ್‌ ಮಾತನಾಡಿರುವುದಕ್ಕಿಂತ ಆತನನ್ನು ಬೇರೆಯವರು ಮಾತನಾಡಿಸಿರುವ ಸಾಧ್ಯತೆಗಳೇ ಹೆಚ್ಚಾಗಿವೆ ಎನಿಸದಿರುವುದಿಲ್ಲ . ಅಂದರೆ, ನಾಲಗೆ ವೀರಪ್ಪನದ್ದು, ತಲೆ ಇನ್ನಾರದ್ದೋ ! ಹಣದ ಪ್ರಸ್ತಾಪವಿಲ್ಲ, ತನಗೆ ನಿಜಕ್ಕೂ ಏನು ಬೇಕು ಎನ್ನುವ ಮಾತಿಲ್ಲ, ಇಂಥವು ಒಂದಲ್ಲ , ಹತ್ತು ಬೇಡಿಕೆಗಳನ್ನು ಸ್ಪಷ್ಟವಾಗಿ ಚಿತ್ರಿಸಿರುವ ಅವನ ಕ್ಯಾಸೆಟ್‌ ಪ್ರಾದೇಶಿಕ ಪಕ್ಷವೊಂದರ ಪ್ರಣಾಳಿಕೆಯಂತಿದೆ. ಬೇಡಿಕೆಗಳ ಹಿಂದೆ ಕಾಣದ ಕೈ ಕೆಲಸ ಮಾಡಿರುವುದು ಗೋಚರವಾಗುತ್ತಿದೆ. ಯಾವುದಿದು ಕಾಣದ ಕೈ ?

ತನ್ನ ಗುಂಪಿನಲ್ಲಿದ್ದು ಪ್ರಾಣ ಕಳೆದುಕೊಂಡ ಕುಟುಂಬದವರ ರಕ್ಷಣೆ ಹಾಗೂ ತನ್ನ ಮೇಲಿನ ಪ್ರಕರಣಗಳ ಹಿಂತೆಗೆತ (ಅಂದರೆ ಕ್ಷಮಾಧಾನ) ಅಥವಾ ಎಲ್ಲ ಪ್ರಕರಣಗಳನ್ನೂ ತಮಿಳುನಾಡು ಕೋರ್ಟಿಗೆ ವರ್ಗಾಯಿಸುವುದು. ಇಂತಿಷ್ಟು ಹಣ, ನಾಗರಿಕನಾಗಿ ಬದುಕಲು (ಡಕಾಯಿತರಾಣಿ ಪೂಲನ್‌ ದೇವಿಯಂತೆ) ಅವಕಾಶ. ತನ್ನ ಬಲ ಮುರಿದ ಪೊಲೀಸರ ವಿರುದ್ಧ ಕ್ರಮ ಮುಂತಾದ ಬೇಡಿಕೆ ಇಡಬಹುದು, ಇಡುತ್ತಾನೆ ಎಂದು ಊಹಿಸಿದ್ದವರಿಗೆ ವೀರಪ್ಪನ್‌ ನಿರಾಶೆಪಡಿಸಿದ್ದಾನೆ.

ಕಾಡುಗಳ್ಳ, ಕ್ರೂರಿಯಾಗಿದ್ದ ವೀರಪ್ಪನ್‌ ತನ್ನ ಹಿತಾಸಕ್ತಿಗಿಂತ ತಮಿಳು ಜನಹಿತದ ಬಗ್ಗೆ ಅದರಲ್ಲೂ ಕೆಳವರ್ಗದವರ ಬಗೆಗಿನ ಕಾಳಜಿ ಇರುವ ಬೇಡಿಕೆ ಇಟ್ಟಿರುವಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ. ಎಲ್ಲವನ್ನೂ ಪ್ರಜ್ಞಾಪೂರ್ವಕವಾಗಿ, ಯೋಜನಾಬದ್ದನಾಗಿ ಕೆಲಸ ಮಾಡುವುದನ್ನು ವೀರಪ್ಪನ್‌ ಈಗಾಗಲೇ ಸಾಬೀತುಪಡಿಸಿದ್ದಾನೆ.

ಈ ಹಿನ್ನಲೆಯಲ್ಲಿ ನೋಡಿದರೆ ವೀರಪ್ಪನ್‌ನ ಬೇಡಿಕೆಗಳ ಹಿಂದೆ ಬಾರೀ ಯೋಜನೆಯೇ ಇದ್ದಂತೆ ಕಾಣುತ್ತದೆ. ಶೋಷಿತರ ವಕ್ತಾರನಂತೆ ಮಾತನಾಡುತ್ತಿರುವ ವೀರಪ್ಪನ್‌ನ ವ್ಯಕ್ತಿತ್ವ ಅಳೆಯಲು ಹೊಸ ಮಾನದಂಡಗಳನ್ನು ಬಳಸಬೇಕಾದ ಅನಿವಾರ್ಯ ಕಾಲ ಈಗ ಹತ್ತಿರವಾಗಿದೆ. ನೂರಾರು ಆನೆ ಕೊಂದು, ಗಂಧ ಕಡಿದ(ಗಂಧ ಕಡಿದ ಆರೋಪದ ಮೇಲೆ ಒಂದು ಪ್ರಕರಣವೂ ದಾಖಲಾಗಿಲ್ಲ ಎಂಬುದು ಬೇರೆ ವಿಷಯ) ತನ್ನ ಕಸುಬಿಗೆ ಅಡ್ಡಬಂದವರ ರುಂಡ ಚೆಂಡಾಡಿದ ಹಾಗೂ ತನ್ನ ಕಡೆಯ ಹತ್ತಾರು ಜನರನ್ನು ಬಲಿಕೊಟ್ಟ ವೀರಪ್ಪನ್‌ ಇವನೇನಾ ? ಯಾಕೋ ಡೌಟ್‌ ಬರತ್ತೆ.

ದಲಿತರ, ನಿಮ್ನವರ್ಗಕ್ಕೆ ಸೇರಿ ನಿರ್ಭಾಗ್ಯ ಜೀವನ ನಡೆಸುತ್ತಿರುವ ಪರ ಹೋರಾಟ ಮಾಡಿದವರ ಪಂಕ್ತಿಯಲ್ಲಿ ಕುಳಿತುಕೊಳ್ಳುಲು ಇವತ್ತು ವೀರಪ್ಪನ್‌ ಹವಣಿಸಿದಂತೆ ಕಾಣುತ್ತದೆ. ಕೆಳವರ್ಗದವರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ತಿರುವಳ್ಳುವರ್‌ ಅವರ ಪ್ರತಿನಿಧಿಯಂತೆ ವೀರಪ್ಪನ್‌ ಓತಪ್ರೋತವಾಗಿ ಮಾತನಾಡುತ್ತಿದ್ದಾನೆ. ತಿರುವಳ್ಳುವಾರ್‌ ಪ್ರತಿಮೆ ಅನಾವರಣದ ಬೇಡಿಕೆಯಲ್ಲಿ ಇದು ವ್ಯಕ್ತವಾಗುತ್ತಿದೆ.

ಇಷ್ಟಕ್ಕೂ ವೀರಪ್ಪನ್‌, ಸಾಂಸ್ಕೃತಿಕವಾಗಿ ಮತ್ತು ಪಾರಂಪರಿಕವಾಗಿ ದನಿ ಎತ್ತಲು ಈ ಹಂತದಲ್ಲಿ ತಿರುವಳ್ಳುವಾರ್‌ ಅವರಿಂದ ಸ್ಪೂರ್ತಿ ಪಡೆದನೆ ? ಇಷ್ಟು ಜ್ಞಾನ ಆತನಿಗೆ ಮೊದಲೇ ಇತ್ತೆ ? ಇಷ್ಟಕ್ಕೂ ಜನಕಲ್ಯಾಣವನ್ನು ಯೋಚಿಸಿರುವ ವೀರಪ್ಪನ್‌ ತನ್ನ ಕ್ಷಮಾಪಣೆ ಸೇರಿದಂತೆ ಸ್ವಂತದ ಎಲ್ಲ ಆಯ್ಕೆಗಳನ್ನು ಬಿಟ್ಟುಕೊಟ್ಟಿರುವಲ್ಲಿ ತಮಿಳರ ಪ್ರೀತಿಗಳಿಸುವ ಹವಣಿಕೆ ಎದ್ದು ಕಾಣುತ್ತಿದೆಯೇ ? ಅಂದರೆ ತಮಿಳುನಾಡು ಇನ್ನೊಬ್ಬ ಪೂಲನ್‌ದೇವಿಯನ್ನು ಒಡಲಲ್ಲಿ ತುಂಬಿಕೊಂಡಿದೆಯೇ ? ಕಾವೇರಿ ಸೇರಿದಂತೆ ಅನೇಕ ಭಾವನಾತ್ಮಕ ವಿಷಯಗಳನ್ನೇ ಬಳಸಿಕೊಂಡು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಂಡ ಕರ್ನಾಟಕ ಮತ್ತು ತಮಿಳುನಾಡು ರಾಜಕಾರಣಿಗಳನ್ನು ಹಿಂದೆಹಾಕಲು ವೀರಪ್ಪನ್‌ ರಾಜ್‌ಕುಮಾರ್‌ ಅವರ ಅಪಹರಣವನ್ನು ದಾಳ ಮಾಡಿಕೊಂಡನೇ ? ದಕ್ಷಿಣಪ್ರಸ್ಥ ಭೂಮಿಯಲ್ಲಿ ಈ ದಿವಸಗಳು ಇಂಥ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

English summary
What exactly Veerappan wants?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X