ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಮಿಕ ಚೆಲುವೆಯರ ವನವಿಹಾರ

By Super
|
Google Oneindia Kannada News

ಇಷ್ಟು ದೂರ ಬಂದಿದ್ದೀರಿ, ಪಕ್ಕದಲ್ಲೊಂದು ಸನ್‌ ಸೆಟ್‌ ವ್ಯೂ ಪಾಯಿಂಟಿಗೂ ಭೇಟಿ ನೀಡಿ. ಇಲ್ಲಿ ಸೂರ್ಯಾಸ್ತ ಮಾತಿಗೆ ಮೀರಿದ್ದು. ಅಂದ ಹಾಗೆ ಅದು ಹೆಸರಿಗೆ ತಕ್ಕಂತೆ ಅಕ್ಷರಶಃ ಜೇನುಕಲ್ಲು ಗುಡ್ಡವೇ. ಗುಡ್ಡದ ಕೆಳಗೆ ನೂರಾರು ಜೇನಿನ ಹುಟ್ಟುಗಳಿವೆ. ನೋಡಲು ಮರೆಯದಿರಿ. ಸಂಜೆಯಾಗುತ್ತಿದ್ದಂತೆ, ಕಣಿವೆ ಸಿಂಗರಿಸಿಕೊಳ್ಳಲಾರಂಭಿಸುತ್ತದೆ. ಸಂಜೆ ಸೂರ್ಯ ಕಿತ್ತಳೆ ಹಣ್ಣಿನಂತಾಗುತ್ತಿದ್ದಂತೆ, ಕಣಿವೆಯ ತಳದಲ್ಲಿ ಹರಿವ ನದಿ ನಿಸರ್ಗ ಸೌಂದರ್ಯಕ್ಕೆ ಕನ್ನಡಿ. ಗುಡ್ಡದಲ್ಲಿ ಮಲಯ ಮಾರುತದ ಹಿಮ್ಮೇಳ. ಕಣಿವೆಯಲ್ಲಿ ತಿಮಿರ ಅಮರುತ್ತಿದ್ದಂತೆ, ಕಾಡಿನಲ್ಲಿ ಹಾದಿ ತಪ್ಪುವ ಮುನ್ನ ಯಲ್ಲಾಪುರದತ್ತ ಕಾಲು ಕೀಳುವುದು ಅನಿವಾರ್ಯ.

ಯಲ್ಲಾಪುರದಿಂದ ಮುಕ್ಕಾಲು ತಾಸಿನ ಹಾದಿ ಸವೆಸಿದರೆ, ದೊರಕುವ ಸಾತೊಡ್ಡಿ ಜಲಪಾತ ಅನೇಕ ರೀತಿಯಲ್ಲಿ ವಿಶಿಷ್ಟವಾದುದು. ಬರಿ 16 ಮೀಟರ್‌ ಎತ್ತರದಿಂದ ನದಿ ನಿಧಾನವಾಗಿ ಬಳುಕುತ್ತಾ ಬೀಳುತ್ತದೆ. ಇದೊಂದು ಲೆಕ್ಕದಲ್ಲಿ ವಿಶ್ವ ವಿಖ್ಯಾತ ನಯಾಗಾರ ಜಲಪಾತದ ಮಿನಿಯೇಚರ್‌ನಂತಿದೆ. ಜಲಪಾತದ ಬುಡದವರೆಗೂ ನಡೆದು ಹೋಗಿ, ಜಲಧಾರೆಗೆ ತಲೆಯಾಡ್ಡಿದರೆ.....,

ಯಲ್ಲಾಪುರ ದಿಂದ 13 ಕಿಮೀ ದೂರದಲ್ಲಿ ಕಾಳಿ ನದಿ ಸೃಷ್ಟಿಸಿರುವ ರುದ್ರ ರಮಣೀಯ ಜಲಧಾರೆಗಳ ಸಮೂಹವೇ ಲಾಲ್ಗುಳಿ ಫಾಲ್ಸ್‌. ವಿವಿಧ ಎತ್ತರಗಳಿಂದ ಅಂದರೆ ಸುಮಾರು 61 ಮೀಟರ್‌ಗಳಿಂದ 91 ಮೀಟರ್‌ಗಳ ವರೆಗೆ ನದಿ ಧುಮುಕುವ ನೋಟ ಕಮನೀಯ.

ಚಾರಣಿಗರಿಗೆ ಸವಾಲು ಎಂದರೆ ದೇವಕಾರ ಜಲಪಾತ. ಇದನ್ನು ನೋಡಲು 18 ಕಿಮೀ ದೂರ ದಟ್ಟ ಕಾಡಿನಲ್ಲಿ ನಡೆದೇ ಹೋಗಬೇಕು. ಕೆಲವೊಮ್ಮೆ ಉಂಬಳಕ್ಕೆ ರಕ್ತದುಂಬಳಿ ನೀಡಬೇಕಾದೀತು ಎಚ್ಚರ. ಆದರೆ, ಹಲವು ನೂರು ಮೀಟರ್‌ಗಳೆತ್ತರಗಿಂಗ ಬೀಳುವ ಜಲಧಾರೆ ಕಂಡಾಗ, ಹಿಮಗಡ್ಡೆಗಿಂತಲೂ ತಂಪು ನೀರು ಮೈ ಸೋಕಿದಾಗ, ಅಲ್ಲಿ ಮಿಂದಾಗ, ಅನಿರ್ವಚನೀಯ ಆನಂದ.

ಇವುಗಳೊಟ್ಟಿಗೆ ಪ್ರಶಾಂತ ಸರೋವರವನ್ನು ನೋಡದೆ, ಯಲ್ಲಾಪುರದ ಪ್ರವಾಸ ಪೂರ್ತಿಯಾಗದು. ಯಲ್ಲಾಪುರದಿಂದ ಮಾಗೋಡು ಜಲಪಾತದ ಹಾದಿಯಲ್ಲಿ ಐದಾರು ಕಿಮೀ ದೂರದಲ್ಲಿರುವುದೇ ಕವಡಿಕೆರೆ. ತಾವರೆಗಳರಳಿದ ಕೆರೆ, ಪಕ್ಕದಲ್ಲಿಯೇ ದೈವ ಸನ್ನಿಧಾನ, ಖ್ಯಾತ ಕವಿ ಪುತಿನ ಅವರ ಯದುಗಿರಿಯ ಮೌನದಲ್ಲಿ ಚಿತ್ರಿತವಾಗಿರುವ ಹೆಪ್ಪುಗಟ್ಟಿದ ಚಿನ್ಮೌನವನ್ನು ಕದಡುವ ಹಕ್ಕಿಗಳಿಂಚರ ಪ್ರವಾಸಿಗರಲ್ಲಿ ದೈವಿಕ ಭಾವನೆಯನ್ನು ಉದ್ದೀಪನಗೊಳಿಸುತ್ತವೆ. ಇಂಥ ಸಂತೋಷಕ್ಕೆ ನೀವು ದೈವ ಭಕ್ತರಾಗಿರಬೇಕೆಂದೇನೂ ಕಟ್ಟಳೆಯಿಟ್ಟುಕೊಳ್ಳುವುದೂ ಸರಿಯಲ್ಲ. ಉಳಿಯಲು ಯಲ್ಲಾಪುರದಲ್ಲಿ ನಿಸರ್ಗಮನೆಯೆಂಬ ನಿಸರ್ಗ ದ ನಡುವಿನ ಅಪರೂಪದ ಗೆಸ್ಟ್‌ ಹೌಸಿದೆ. ಎಲ್ಲ ಅನುಕೂಲಗಳು ಅಲ್ಲಿ ಲಭ್ಯ.

ಇನ್ನು ಬೆಳಗಾವಿಯಿಂದ ಕಾರವಾರಕ್ಕೆ ಬರುವ ಹಾದಿಯಲ್ಲಿಯೇ ಕಾಣಿಸುವುದೊಂದು ಅನಾಮಿಕ ಜಲಧಾರೆ. ಯಾರೋ ಪುಣ್ಯಾತ್ಮರು, ಮಳೆಗಾಲದಲ್ಲಿ ಮೈದುಂಬುವ, ಇದನ್ನು ವಜ್ರ ಫಾಲ್ಸ್‌ ಎಂದರು. ಈಗಲೂ ಅದೇ ಹೆಸರು ಮುಂದುವರೆದಿದೆ. ಇದರ ದರ್ಶನಕ್ಕಾಗಿ ನೀವೇನೂ ಹರದಾರಿಗಟ್ಟಲೆ ಚಾರಣ ಮಾಡಬೇಕಿಲ್ಲ. ರಸ್ತೆಯಲ್ಲಿ ಸಾಗುವಾಗ, ನೀವಿರುವ ಕಾರಿನದೋ , ಬಸ್ಸಿನದೋ ಕಿಟಕಿಯಿಂದ ಇಣಕಿದರೂ ಸಾಕು. ಇದು ಕದ್ರಾದಿಂದ ಅಣಶಿ- ದಾಂಡೇಲಿಯತ್ತ ಸಾಗುವಾಗ ಅಣಶಿ ಘಟ್ಟದ ನಡುವೆ ಬಲಗಡೆ ದೊರೆಯುತ್ತದೆ- ಕದ್ರಾದಿಂದ ಸುಮಾರು 6 ಕಿಮೀ ದೂರದಲ್ಲಿ. ಮಳೆರಾಯನ ಪೌರುಷ ಹೆಚ್ಚಿದ್ದರೆ, ನೀರಿನ ಪ್ರೋಕ್ಷಣೆಯ ಭಾಗ್ಯವೂ ದಕ್ಕೀತು.

ಜಿಲ್ಲೆಯಾದ್ಯಂತ ಜಲಪಾತಗಳು ಕಂಡರೂ ಅನೇಕವು ಅಷ್ಟಾಗಿ ಬೆಳಕಿಗೆ ಬಂದಿಲ್ಲ. ಜಿಲ್ಲೆಯ ಜಲಪಾತಗಳ ತಾಲೂಕು ಅಂದರೆ ಸಿದ್ದಾಪುರ. ಇಲ್ಲಿ ಕಾಣಸಿಗುವವುಗಳಲ್ಲಿ ಪ್ರಮುಖವಾದುವುಗಳೆಂದರೆ, ಉಂಚಳ್ಳಿ, ಬುರುಡೆ ಜೋಗ, ಮಲಮನೆ ಜಲಪಾತ. ಇವೆಲ್ಲವುಗಳಿಗಿಂತಲೂ ತಾಲೂಕಿನ ಗಡಿಯಲ್ಲೇ ಜೋಗ.

ಉಂಚಳ್ಳಿ ಜಲಪಾತ ಸಿದ್ಧಾಪುರದಿಂದ 27 ಕಿಮೀ ದೂರ. ಸುಮಾರು 400 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಅಬ್ಬರದ ಧಭ ಧಭೆ ಕಂಡಾಗ ಎಂಥವರಿಗೂ ಮೈ ನಡುಗುತ್ತದೆ. ಈ ಜಲಪಾತಕ್ಕೆ ಸೂರ್ಯನಿದ್ದಾಗಲೆಲ್ಲಾ ಕಾಮನ ಬಿಲ್ಲಿನ ಕಮಾನು. ನೀರು ಮಂಜಿನಷ್ಟೇ ತಂಪು. ನೀರಿಗಿಳಿದು, ಈಜುವುದು ಮೋಜಿನ ಸಂಗತಿಯಾದರೂ, ಬಳಿಕ ವಾಪಸ್ಸು ಗುಡ್ಡ ಹತ್ತಿ ಬರುವುದು ಹರ ಸಾಹಸವೇ ಸರಿ.

ಸಿದ್ದಾಪುರದ ಬಿಳಗಿ ಹಾಗೂ ದೊಡ್ಮನೆ ರಸ್ತೆ ನಡುವೆ ಎರಡು ಜಲಪಾತಗಳು ಸಿಗುತ್ತವೆ. ಎರಡು ಹಂತದಲ್ಲಿ ಬೀಳುವ ಬುರುಡೆ ಜೋಗ ಹಾಗೂ ಸುಮಾರು 230 ಮೀಟಚರ್‌ ಎತ್ತರದ ಮಲ್ಮನೆ ಜಲಪಾತ ಹೊರಗಿನವರ ಕಣ್ಣಿಗೆ ಅಷ್ಟಾಗಿ ಬಿದ್ದಿಲ್ಲ. ಕುಮಟಾ ಅಥವಾ ಹೊನ್ನಾವರದ ಬದಿಯಿಂದ ಸಿದ್ದಾಪುರದತ್ತ ಸಾಗುವಾಗ ಹತ್ತು ಹಲವು ಜಲಪಾತಗಳ ಇಣುಕು ನೋಟ ಸಾಧ್ಯ.

ಶಿರಸಿ ತಾಲೂಕಿನ ಸೋಂದಾ ಬಳಿಯ ಶಿವಗಂಗೆ ಹಾಗೂ ಮತ್ತಿಘಟ್ಟ ಜಲಪಾತಗಳೂ ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಕಾರವಾರದಿಂದ ಶಿರಸಿಯನ್ನು ಜೋಡಿಸುವ ಸುಮಾರು ಒಂದು ಶತಮಾನಕ್ಕೂ ಹೆಚ್ಚು ಹಳೆಯ ಹಾದಿಯನ್ನು ೕಗ ನವೀಕರಿಸಲಾಗುತ್ತದೆ. ಈ ಮಾರ್ಗದಲ್ಲಿ ಪ್ರಯಾಣಿಸಿದರೆ ಬೆಟ್ಟದ ಭಿತ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಜಲಪಾತಗಳು ಕೈಬೀಸಿ ಕಣ್ಮರೆಯಾಗುತ್ತವೆ.

ಉತ್ತರಕನ್ನಡದ ಮಟ್ಟಿಗೆ, ಫಾಲ್ಸ್‌ ಎಂಬುದು ಎರಡು ರೀತಿಯಲ್ಲಿಯೂ ಸರಿ. ಮಳೆಗಾಲದ Falls ಗಳುಬೇಸಿಗೆಯಲ್ಲಿ False ಗಳಲ್ಲವೆ ? ಎಂದು ಹಿರಿಯ ಪತ್ರ ಕರ್ತ ಪನ್‌ಡಿತ ವೈಎನ್ಕೆ ಪನ್‌ ನಿಜಕ್ಕೂ ಅರ್ಥಪೂರ್ಣ.

English summary
water falls of north canara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X