• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ

|

ಬೆಂಗಳೂರು, ಜುಲೈ 27: ಮುಂಬೈನ ಜನನಿಬಿಡ ಮಪ್ಕಾನ್ ನಗರದಲ್ಲಿ ವಿಶಿಷ್ಟವಾದ ರೆಸ್ಟೊರೆಂಟ್ ಇದೆ. ಇಲ್ಲಿನ ತಿನಿಸುಗಳ ರುಚಿ ಸವಿದವರು ಮತ್ತೆ ಮತ್ತೆ ಹುಡುಕಿಕೊಂಡು ಅಲ್ಲಿಗೆ ಹೋಗುತ್ತಾರೆ.

ರುಚಿಯ ಕಾರಣಕ್ಕಾಗಿ ಮಾತ್ರ ಇದು ಖ್ಯಾತವಲ್ಲ. ಇಲ್ಲಿ ಬೀದಿಬದಿಯ ಮಕ್ಕಳಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ.

ಹೀಗಾಗಿ ಇಲ್ಲಿ ತಿನಿಸು ಸವಿಯಲು ಬರುವವರು ಖಾದ್ಯದ ರುಚಿಯನ್ನು ಚಪ್ಪರಿಸುವ ಜತೆಗೆ ಮಾನವೀಯ ಕಾರ್ಯವನ್ನೂ ಮೆಚ್ಚಿಕೊಳ್ಳುತ್ತಾರೆ.

ಹಸಿದವರಿಗೆ ಅನ್ನ ನೀಡಿ ಸಾರ್ಥಕತೆ ಪಡೆದ ಹೈದರಾಬಾದಿನ ಹುಡುಗರು

ಉದರದ ಹಸಿವಿನ ಜತೆಗೆ ಜ್ಞಾನದ ಹಸಿವನ್ನು ಸಹ ತಣಿಸಿಕೊಳ್ಳಲು ಇಲ್ಲಿ ಸಾಹಿತ್ಯದ ಸಾಂಗತ್ಯವೂ ಸಿಗುತ್ತದೆ. 'ಬಾಂಬೆ ಟು ಬಾರ್ಸಿಲೋನಾ ಲೈಬ್ರರಿ ಕೆಫೆ' ಎನ್ನುವುದು ಅದರ ಹೆಸರು.

ಸುದೀರ್ಘ ಕಥೆಯಿದು

ಸುದೀರ್ಘ ಕಥೆಯಿದು

ಇದು ಗ್ರಾಹಕರನ್ನು ಆಕರ್ಷಿಸುವ ತಂತ್ರವಾಗಿ ಇರಿಸಿರುವ ಹೆಸರಲ್ಲ. ಅದರ ಹಿಂದೆ ಸುದೀರ್ಘ ಕಥೆಯಿದೆ. ಈ ಕೆಫೆಯಲ್ಲಿ ಬೀದಿ ಬದಿಯ ಮಕ್ಕಳಿಗೆ ಆಹಾರ ನೀಡುವ ಮಹತ್ಕಾರ್ಯದ ಹಿಂದಿನ ಕಥೆಯೂ ಅಷ್ಟೇ ಸುದೀರ್ಘ. ಏಕೆಂದರೆ ಈ ಎರಡೂ ಕಥೆಗಳು ಒಂದೇ.

'ಬಾಂಬೆ ಟು ಬಾರ್ಸಿಲೋನಾ ಲೈಬ್ರರಿ ಕೆಫೆ' ಒಬ್ಬ ಕನಸುಗಾರನ ಮಹಲ್ಲು. ರೆಸ್ಟೊರೆಂಟ್‌ಗೆ ಬಂದವರನ್ನು ನಗುತ್ತಾ ಸ್ವಾಗತಿಸುವ 37 ವರ್ಷದ ಅಮಿನ್ ಶೇಖ್ ಇದರ ಮಾಲೀಕ.

ಒರಟ ಬೀದಿ ಬಾಲಕ

ಒರಟ ಬೀದಿ ಬಾಲಕ

ಸುಮಾರು 25-30 ವರ್ಷದ ಹಿಂದಿನ ಇತಿಹಾಸ ಕೆದಕಿದರೆ ಸಿಗುವುದು ಮುಂಬೈನ ಬೀದಿಗಳಲ್ಲಿ ಮಾಸಿದ ಉಡುಪು ತೊಟ್ಟು, ಹೊಟ್ಟೆಪಾಡಿಗಾಗಿ ದಿನಕ್ಕೊಂದು ಕೆಲಸ ಮಾಡಿಕೊಂಡು, ಜನರ ನಿಂದನೆ ಮತ್ತು ಅತ್ಯಾಚಾರಗಳಿಗೆ ಒಳಗಾಗುತ್ತ ನೋವು ಪಡುತ್ತಲೇ ಮತ್ತೆ ಬೀದಿಗಳಲ್ಲಿ ಅಡ್ಡಾಡುತ್ತಿದ್ದ ಒರಟ ಬಾಲಕ ಅಮಿನ್ ಶೇಖ್.

ಅಮಿನ್ ಓದಿರುವುದು ಏಳನೇ ತರಗತಿ. ಆದರೆ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು. ದೇಶ ವಿದೇಶಗಳಲ್ಲಿ ಅವರಿಗೆ ಗೆಳೆಯರಿದ್ದಾರೆ.

ತಮ್ಮ ಬದುಕಿನ ಕಥೆಯನ್ನು ಅವರು 'ಬಾಂಬೆ ಮುಂಬೈ: ಲೈಫ್ ಈಸ್ ಲೈಫ್, ಐ ಆಮ್ ವಿಕಾಸ್ ಆಫ್ ಯೂ' ಎಂಬ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಅವರ ಬದುಕಿನ ಈ ಯಶೋಗಾಥೆ ನೂರಾರು ಮಂದಿಗೆ ಸ್ಫೂರ್ತಿಯಾಗಿದೆ.

ತನ್ನ ಮದುವೆಯಂದು ರಕ್ತದಾನ ಶಿಬಿರ ಏರ್ಪಡಿಸಿದ ಕೋಲ್ಕತ್ತದ ವಧು!

ಐದರ ವಯಸ್ಸಿಗೇ ದುಡಿಮೆ

ಐದರ ವಯಸ್ಸಿಗೇ ದುಡಿಮೆ

ಮುಂಬೈನ ಕೊಳೆಗೇರಿಯೊಂದರ ಕಡುಬಡತನದ ಕುಟುಂಬದಲ್ಲಿ ಹುಟ್ಟುನ ಅಮಿನ್, ಐದನೇ ವಯಸ್ಸಿಗೇ ದುಡಿಮೆಗೆ ಹೋಗುವ ಅನಿವಾರ್ಯತೆಗೆ ಬಿದ್ದವರು.

ಟೀ ಅಂಗಡಿಯೊಂದರಲ್ಲಿ ಬೈಗುಳ ಹೊಡೆತಗಳನ್ನು ತಿನ್ನುತ್ತಾ ಕೆಲಸ ಮಾಡುವುದು ಅಭ್ಯಾಸವಾಗಿತ್ತು. ತಾನಲ್ಲಿ ಕೆಲಸ ಮಾಡಲಾರೆ ಎಂದು ಅಮ್ಮನ ಬಳಿ ಹೇಳಿದಾಗ, ಹೊಟ್ಟೆಪಾಡಿಗಾಗಿ ಕೆಲಸ ಮಾಡಲೇಬೇಕು. ನೀನು ಗಟ್ಟಿಯಾಗಿ ಇವುಗಳನ್ನು ಎದುರಿಸಬೇಕು ಎಂಬ ಉತ್ತರ ಬಂತು.

ಓಟ ಶುರುವಾಗಿದ್ದು ಹೀಗೆ

ಓಟ ಶುರುವಾಗಿದ್ದು ಹೀಗೆ

ಒಮ್ಮೆ ಟೀ ಅಂಗಡಿಯಲ್ಲಿ ಬಿಡುವಿನ ವೇಳೆ ಗಾಜಿನ ಲೋಟಗಳ ಜತೆ ಆಡುತ್ತಿದ್ದಾಗ ಅಮಿನ್ ಜಾರಿ ಬಿದ್ದು ಟೀ ಗಾಜುಗಳು ಪುಡಿಪುಡಿಯಾದವು.

ನಿತ್ಯ ಬೈಗುಳ, ಹೊಡೆತ ತಿನ್ನುತ್ತಿದ್ದ ಅಮಿನ್‌ಗೆ ಮುಂದಿನ ಪರಿಣಾಮ ಏನಾಗಲಿದೆ ಎನ್ನುವುದು ಗೊತ್ತಿತ್ತು. ತಕ್ಷಣ ಅಲ್ಲಿಂದ ಓಡಲು ಆರಂಭಿಸಿದ.

ಅಲ್ಲಿಂದ ಮನೆಗೆ, ಮನೆಯಿಂದ ಬೀದಿಗೆ ಓಡುವುದು ಅಮಿನ್ ಅಭ್ಯಾಸವಾಯಿತು. 'ಓಡಿ ಹೋಗುವುದು' ಎನ್ನುವುದು ಅಮಿನ್ ಬದುಕಿನ ಅವಿಭಾಜ್ಯ ಅಂಗವಾಯಿತು. ಈಗಲೂ ಅಮಿನ್ ಓಡುತ್ತಲೇ ಇದ್ದಾರೆ. ಆದರೆ ಅವರ ಓಟದ ದಿಕ್ಕು ಮತ್ತು ಗತಿ ಬದಲಾಗಿದೆ.

ಮೊದಲ ರಾತ್ರಿಯ ಕರಾಳತೆ

ಮೊದಲ ರಾತ್ರಿಯ ಕರಾಳತೆ

ಅಮಿನ್ ಮೊದಲು ಓಡಿದ್ದು, ಮುಂಬೈನ ಬೀದಿಗೆ. ಮುಂಬೈ ಬೀದಿಯ ಮೊದಲ ರಾತ್ರಿಯೇ ಕರಾಳವಾಗಿತ್ತು. ಬಾಲಕ ಅಮಿನ್ ಅತ್ಯಾಚಾರಕ್ಕೆ ಒಳಗಾಗಿದ್ದ. ಆದರೆ, ಅದೇನಂದು ಆಗ ಅರ್ಥವಾಗಿರಲಿಲ್ಲ. ಮುಂದೆ ಅಲ್ಲಿನ ಬದುಕು ಅರ್ಥವಾಗತೊಡಗಿತು. ಅಭ್ಯಾಸವೂ ಆಯಿತು.

ಒಂದೆರಡು ಬಾರಿ ಅಮಿನ್‌ನನ್ನು ರಕ್ಷಿಸಿ ಅಲ್ಲಿಂದ ಕೊಳೆಗೇರಿಯ ಗುಡಿಸಿಲಿನ ತಾಯಿಯ ಬಳಿ ಕರೆದುಕೊಂಡು ಹೋಗಿ ಬಿಡಲಾಯಿತು.

ಮತ್ತೆ ಕರೆಯಿತು ಬೀದಿ

ಮತ್ತೆ ಕರೆಯಿತು ಬೀದಿ

ಆದರೆ, ಮುಂಬೈನ ನರಕ ಎಂಬಂತಹ ಬೀದಿಗಳೂ ಅಮಿನ್‌ನಲ್ಲಿ ಅದೇನೋ ಪ್ರೀತಿ ಹುಟ್ಟಿಸಿದ್ದವು. ಮನೆಯಲ್ಲಿ ಕುಡುಕ ಮಲತಂದೆಯ ಬೈಗುಳ, ಹೊಡೆತಗಳಿಗಿಂತ ಮುಂಬೈ ಬೀದಿಯ ನಿಂದನೆಗಳೇ ವಾಸಿ ಎನಿಸತೊಡಗಿತ್ತು.

ಏಕೆಂದರೆ ಅಲ್ಲಿನ ಬೀದಿಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಅಮಿನ್‌ಗೆ ಖುಷಿ ಮತ್ತು ಸ್ವಾತಂತ್ರ್ಯ ನೀಡಿದ್ದವು.

ಆ ಮಹಾನಗರಿಯ ಬೀದಿಗೆ ಹೊಸ ಮಕ್ಕಳ ಸೇರ್ಪಡೆಯಾಗುತ್ತಲೇ ಇರುತ್ತದೆ. ಅವರುಗಳ ಗೆಳೆತನ ಸಿಗುತ್ತಿತ್ತು. ಸಿನಿಮಾಗಳಿಗೆ ಹೋಗುತ್ತಿದ್ದರು. ಕಳ್ಳತನ, ಶೂ ಪಾಲಿಶ್, ರೈಲುಗಳಲ್ಲಿ ಹಾಡುವುದು ಮುಂತಾದವು ಆದಾಯದ ಮೂಲಗಳಾದವು.

ಟ್ಯೂನ್‌ಗೆ ಸರಿಯಾಗಿ ಹಾಡಿಲ್ಲ ಎಂದರೆ ಪ್ರಯಾಣಿಕರು ಕರುಣೆಯಿಲ್ಲದೆ ಬಾರಿಸುತ್ತಿದ್ದದ್ದೂ ಉಂಟು. ಕೆಲವು ಅನುಭವಗಳಂತೂ ತೀರಾ ಕರಾಳವಾಗಿರುತ್ತಿದ್ದವು. ಆದರೂ ದಿನದ ಕೊನೆಯಲ್ಲಿ ಒಂದು ಖುಷಿ ಇರುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಅಮಿನ್.

ಅಣ್ಣನ ಹಿಂಬಾಲಿಸಿದ ತಂಗಿ

ಅಣ್ಣನ ಹಿಂಬಾಲಿಸಿದ ತಂಗಿ

ಕೆಲವು ವರ್ಷಗಳ ಬಳಿಕ ಅಮಿನ್ ಬದುಕಿನಲ್ಲಿ ಒಂದು 'ಮ್ಯಾಜಿಕ್' ನಡೆಯಿತು. ರೈಲ್ವೆ ಸ್ಟೇಷನ್‌ನಲ್ಲಿ ಆಡುತ್ತಿರುವಾಗ ಆತನಿಗೆ ತನ್ನ ಕಿರಿಯ ತಂಗಿ ಸಬೀರಾ ಸಿಕ್ಕಿದಳು.

ಅಣ್ಣ ಅಮಿನ್‌ನನ್ನು ಹುಡುಕಿಕೊಂಡು ಅವಳೂ ಮನೆಬಿಟ್ಟು ಓಡಿಬಂದಿದ್ದಳು. ಆದರೆ, ಆಕೆ ಸಿಕ್ಕ ರಾತ್ರಿಯೇ ಆಕೆಯನ್ನು ಯಾರೋ ಅಪಹರಿಸಿಕೊಂಡು ಹೋದರು.

ಮಾನವ ಕಳ್ಳ ಸಾಗಣೆ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಗಳ ಕೈಗೆ ಸಿಕ್ಕ ತಂಗಿಯನ್ನು ಮತ್ತೆ ನೋಡಲಾರೆ ಎಂದುಕೊಂಡಿದ್ದ ಅಮಿನ್‌ಗೆ ಅಚ್ಚರಿ ಎದುರಾಗಿತ್ತು. ಟ್ಯಾಕ್ಸಿ ಡ್ರೈವರ್‌ ಒಬ್ಬ ಆಕೆಗೆ ತಪ್ಪಿಸಿಕೊಳ್ಳಲು ನೆರವಾಗಿದ್ದ. ಮರುದಿನವೇ ತಂಗಿ ವಾಪಸ್ ಸಿಕ್ಕಿದ್ದಳು.

ಬದಲಾವಣೆಯ ಗಳಿಗೆ

ಬದಲಾವಣೆಯ ಗಳಿಗೆ

ಒಮ್ಮೆ ದಾದರ್ ರೈಲು ನಿಲ್ದಾಣದಲ್ಲಿ ಈ ಮಕ್ಕಳು ಸಿಸ್ಟರ್ ಸೆರಫಿನ್ ಅವರ ಕಣ್ಣಿಗೆ ಬಿದ್ದರು. ಸ್ನೇಹಸದನ್ ಎಂಬ ಬಾಲಾಶ್ರಮ ನಡೆಸುತ್ತಿದ್ದ ಸಿಸ್ಟರ್, ತನ್ನ ಜೊತೆ ಬರುವಂತೆ ಕರೆದರು.

ಆದರೆ, ಅಮಿನ್ ಕೈಗೆ ಸಿಕ್ಕಿದ ಕಲ್ಲು ಹಿಡಿದು ಅವರಿಗೇ ಬೆದರಿಸಿದ. ಏಕೆಂದರೆ ಹೀಗೆ ತನ್ನ ಮೇಲೆ ಕರುಣೆ ತೋರಿಸಿ ಮನೆಗೆ ಕರೆದುಕೊಂಡು ಹೋದವರೆಲ್ಲರೂ ಒಂದೋ ಮನೆಗೆಲಸಕ್ಕೆ ಹಚ್ಚುತ್ತಿದ್ದರು, ಇಲ್ಲವೇ ಅತ್ಯಾಚಾರ ಎಸಗುತ್ತಿದ್ದರು.

ಹೀಗಾಗಿ ಬಾಲಕ ಅಮಿನ್ ಒಳ್ಳೆಯವರೋ, ಕೆಟ್ಟವರೋ, ಜನರನ್ನು ನಂಬುವುದನ್ನೇ ಬಿಟ್ಟುಬಿಟ್ಟಿದ್ದ. ಆದರೆ, ತಂಗಿಯ ಸುರಕ್ಷತೆಯನ್ನು ಬಯಸಿದ್ದ ಅಮಿನ್, ಆಕೆಯನ್ನು ಕರೆದುಕೊಂಡು ಹೋಗಲು ಒಪ್ಪಿದ್ದ. ಮಾತ್ರವಲ್ಲ, ಅದಕ್ಕೆ ಹಣವನ್ನೂ ಕೊಡುವುದಾಗಿ ಹೇಳಿದ್ದ.

ಎರಡು ದಿನದ ಬಳಿಕ ಸಬೀರಾ ಸ್ಟೇಷನ್‌ನಲ್ಲಿ ಅಣ್ಣನ ಮುಂದೆ ನಿಂತಿದ್ದಳು. 'ನೀನು ಬರದೇ ಇದ್ದರೆ ನನ್ನನ್ನು ಅಲ್ಲಿ ಇರಿಸಿಕೊಳ್ಳುವುದಿಲ್ಲವಂತೆ' ಎಂದು ಆಕೆ ಹೇಳಿದಾಗ ಅಮಿನ್‌ಗೆ ಬೇರೆ ಆಯ್ಕೆ ಇರಲಿಲ್ಲ.

ಸ್ನೇಹಸದನದಲ್ಲಿ ಸ್ನೇಹಿತರು, ಹೊಸಬಟ್ಟೆ, ಊಟ ಎಲ್ಲವೂ ಸಿಕ್ಕಿತು. ಶಾಲೆಗೂ ಹೋಗತೊಡಗಿದ. ಆದರೆ, 10 ವರ್ಷದ ಹುಡುಗ ಒಂದನೇ ತರಗತಿಯಲ್ಲಿದ್ದ. ಶಾಲೆಯಲ್ಲಿ ಪಾಠದ ಬದಲು ಆತನಿಂದ ಕೆಲಸ ಮಾಡಿಸಿಕೊಳ್ಳತೊಡಗಿದರು. ಕೊನೆಗೆ ಓದಿಗೆ ತಿಲಾಂಜಲಿ ಇಟ್ಟರು.

ಯುವಕ ಅಮಿನ್ ಬದುಕು

ಯುವಕ ಅಮಿನ್ ಬದುಕು

18 ವರ್ಷವಾದ ಬಳಿಕ ಯುವಕ ಅಮಿನ್ ಸ್ನೇಹಸದನದಿಂದ ಹೊರಬಂದರು. ಪತ್ರಿಕೆ ವ್ಯವಹಾರ, ಬ್ಯಾಂಕಿಂಗ್ ಕೊರಿಯರ್ ಕೆಲಸ, ಸಂಜೆ ವೇಳೆ ಗ್ಯಾರೇಜ್ ಕೆಲಸ ಎಲ್ಲವನ್ನೂ ಮಾಡಿದರು.

ಒಂದು ದಿನ ಸ್ನೇಹಸದನದ ಫಾದರ್ ಫ್ಲೇಸಿ ಅಮಿನ್‌ನನ್ನು ಕರೆಸಿಕೊಂಡು ಯೂಸ್ಟೇಸ್ ಫರ್ನಾಂಡಿಸ್ ಅವರನ್ನು ಪರಿಚಯಿಸಿದರು. ಯೂಸ್ಟೇಸ್ ಫರ್ನಾಂಡಿಸ್ ಬೇರಾರೂ ಅಲ್ಲ, ಖ್ಯಾತ 'ಅಮುಲ್ ಗರ್ಲ್‌'ನ ಸೃಷ್ಟಿಕರ್ತ.

ಪ್ರತಿವರ್ಷ ಸ್ನೇಹಸದನದಿಂದ ಹೊರಬಂದ ಒಬ್ಬ ಹುಡುಗನಿಗೆ ಅವರು ನೆರವು ನೀಡುತ್ತಿದ್ದರು. ಯೂಸ್ಟೇಸ್ ಅವರ ಅರಮನೆಯಂತಹ ಬಂಗಲೆ ಕಂಡು ಬೆರಗಾದ ಅಮಿನ್, ಆರು ತಿಂಗಳಲ್ಲಿ ಇಂಗ್ಲಿಷ್ ಕಲಿತು ಅವರೊಂದಿಗೆ ಕೆಲಸ ಮಾಡಿದರು.

ಯೂಸ್ಟೇಸ್‌ನ ಸ್ನೇಹಿತರು ಅಮಿನ್‌ಗೂ ಸ್ನೇಹಿತರಾದರು. ಮುಂದೆ ಯೂಸ್ಟೇಸ್, ಅಮಿನ್‌ಗೆ ಸ್ವಂತ ವ್ಯವಹಾರವಾದ 'ಸ್ನೇಹ ಟ್ರಾವೆಲ್ಸ್' ಆರಂಭಿಸಲು ನೆರವು ನೀಡಿದರು.

ಸ್ನೇಹಸದನ ಮತ್ತು ಯೂಸ್ಟೇಸ್ ಮನೆಯಲ್ಲಿನ ಜನರು ಮಾತ್ರವೇ ನನ್ನನ್ನು ಮನುಷ್ಯನಂತೆ ನೋಡಿಕೊಂಡಿದ್ದು ಎಂದು ನೆನಸಿಕೊಳ್ಳುತ್ತಾರೆ ಅಮಿನ್.

ಬಾಂಬೆ ಟು ಬಾರ್ಸಿಲೋನಾ

ಬಾಂಬೆ ಟು ಬಾರ್ಸಿಲೋನಾ

2002ರ ಕ್ರಿಸ್‌ಮಸ್‌ ವೇಳೆ ಯೂಸ್ಟೇಸ್ ನಿನಗೆ ಯಾವ ಉಡುಗೊರೆ ಕೊಡಲಿ ಎಂದು ಕೇಳಿದರು. ಅದಕ್ಕೆ ಅಮಿನ್ ಕೇಳಿದ್ದು ತನ್ನನ್ನು ಬಾರ್ಸಿಲೋನಾಕ್ಕೆ ಕರೆದುಕೊಂಡಿ ಹೋಗಿ ಎಂದು.

ತನ್ನ ತಂಗಿಯನ್ನು ಭೇಟಿ ಮಾಡಲು ಪ್ರತಿ ಮಾರ್ಚ್-ಏಪ್ರಿಲ್‌ನಲ್ಲಿ ಬಾರ್ಸಿಲೋನಾಕ್ಕೆ ತೆರಳುತ್ತಿದ್ದ ಯೂಸ್ಟೇಸ್, ಅಲ್ಲಿನ ನೂರಾರು ಫೋಟೊಗಳನ್ನು ಅಮಿನ್‌ಗೆ ತೋರಿಸಿದ್ದರು.

ಬಾರ್ಸಿಲೋನಾದ ಬಗ್ಗೆ ವಿಶೇಷ ಆಕರ್ಷಣೆ ಬೆಳೆಸಿಕೊಂಡಿದ್ದ ಅಮಿನ್‌ಗೆ ಆರಂಭದಲ್ಲಿ ಸಿಕ್ಕ ಉತ್ತರ ಆಗೊಲ್ಲ ಎಂದು. ಆದರೆ, ಯೂಸ್ಟೇಸ್ ಅವರಿಗೆ ನಿರಾಶೆ ಮಾಡಲಿಲ್ಲ.

ಪುಸ್ತಕದಿಂದ ಹಣ ಸಂಗ್ರಹ

ಆದರೆ, ಅದಕ್ಕೆ ಹಣ ಎಲ್ಲಿಂದ ತರುವುದು? ಆಗ ಸಿಕ್ಕವರು ಅಮಿನ್‌ನ ಸ್ನೇಹಿತೆ ಮಾರ್ಟಾ ಮಿಕ್ವೆಲ್. ಬಾರ್ಸಿಲೋನಾದ ಮಿಕ್ವೆಲ್, ಒಡಿಶಾ ಮತ್ತು ನೇಪಾಳಗಳಲ್ಲಿ ಆಸ್ಪತ್ರೆಗೆ ಸೌಲಭ್ಯಗಳನ್ನು ಒದಗಿಸಲು ಹಣ ಸಂಗ್ರಹಕ್ಕಾಗಿ ಪುಸ್ತಕ ಬರೆದರು.

ಪುಸ್ತಕ ಬರೆದು ಹಣ ಸಂಪಾದಿಸಬಹುದೇ? ಮಿಕ್ವೆಲ್ ಮಾರ್ಗದರ್ಶನದಂತೆ ಅಮಿನ್ ತಮ್ಮ ಜೀವನಗಾಥೆ ಬರೆಯಲು ಆರಂಭಿಸಿದರು. ಅವರಿಗೆ ಇನ್ನಷ್ಟು ಸ್ನೇಹಿತರು ನೆರವಾದರು. 2012 ರಲ್ಲಿ 11 ತಿಂಗಳ ಪರಿಶ್ರಮದ ಬಳಿಕ ಅಮಿನ್ ಪುಸ್ತಕ ಪ್ರಕಟವಾಯಿತು.

ಸ್ನೇಹಸದನದ ಮಕ್ಕಳಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ಕಲೆಯಿತ್ತು. ಅಮಿನ್ ಉತ್ತಮ ಬಾಣಸಿಗರಾಗಿದ್ದರು. ಪೈಂಟಿಂಗ್, ಮರಗೆಲಸ, ವಿದ್ಯುತ್ ಕೆಲಸ ಮುಂತಾದವುಗಳನ್ನು ಕಲಿತಿದ್ದ ಮಕ್ಕಳೇ ಲೈಬ್ರರಿ ಕೆಫೆಯನ್ನು ಕಟ್ಟುವ ಕೆಲಸ ಮಾಡಿದರು.

ಅಮಿನ್ ಬರೆದ ಪುಸ್ತಕ ಎಲ್ಲೆಡೆ ಮಾರಾಟವಾಯಿತು. ಜರ್ಮನ್, ಕ್ಯಾಟಲಾನ್, ಸ್ಪ್ಯಾನಿಶ್, ಫ್ರೆಂಚ್, ಹೀಬ್ರೂ ಭಾಷೆಗಳಿಗೂ ಅನುವಾದವಾಯಿತು.

ವಿದೇಶಗಳಿದ್ದ ಸ್ನೇಹಿತರೂ ದೇಣಿಗೆ ಸಂಗ್ರಹಿಸಿದರು. ಹೀಗೆ ವಿವಿಧ ಮೂಲಗಳಿಂದ ಅಮಿನ್ ಸಂಗ್ರಹಿಸಿದ್ದು ಸುಮಾರು 70-80 ಲಕ್ಷ.

ಬಾಂಬೆ ಟು ಬಾರ್ಸಿಲೋನಾ ಕನಸು ನನಸು

ಅದರಲ್ಲಿಯೇ ಆರಂಭವಾಗಿದ್ದು ಈ ಬಾಂಬೆ ಟು ಬಾರ್ಸಿಲೋನಾ ಎಂಬ ಲೈಬ್ರರಿ ಕೆಫೆ. ಮುಂಬೈನ ಬೀದಿಯಲ್ಲಿನ ಮಕ್ಕಳಿಗೆ ಉಚಿತವಾಗಿ ಆಹಾರ ನೀಡುತ್ತಿರುವ ಅಮಿನ್, ಅವರ ಶಿಕ್ಷಣಕ್ಕೆ ನೆರವಾಗಲೂ ಸಹ ಮುಂದಾಗಿದ್ದಾರೆ.

ಅದಕ್ಕಾಗಿ ತಮ್ಮ ದುಡಿಮೆಯ ಹಣದ ಜತೆಗೆ, ಇನ್ನೊಂದಿಷ್ಟು ಮೂಲಗಳಿಂದ ದೇಣಿಗೆ ಸಂಗ್ರಹಿಸುವುದು ಅವರ ಗುರಿ. ಬೀದಿಗಳಲ್ಲಿ ಕೆಲಸ ಮಾಡುತ್ತಾ, ರೈಲ್ವೆ ಸ್ಟೇಷನ್‌ಗಳಲ್ಲಿ ಹಾಡುತ್ತಾ, ಆಡುತ್ತಾ, ಯಾರದೋ ದೌರ್ಜನ್ಯಕ್ಕೆ ತುತ್ತಾಗಿ ಬಾಲ್ಯದಲ್ಲಿ ನೂರಾರು ಅನುಭವಗಳನ್ನು ಕಂಡಿರುವ ಅಮಿನ್, ಈಗ ಸಾವಿರಾರು ಜನರಿಗೆ ಮಾದರಿ.

ಮುಂಬೈ ಟು ಬಾರ್ಸಿಲೋನಾ ಎಂಬ ಹೆಸರು ಸೊಗಸಾಗಿ ಕಾಣಿಸುತ್ತದೆ. ತನ್ನಂತೆ ಮುಂಬೈನ ಬೀದಿಗಳಲ್ಲಿ ಕಂಗೆಟ್ಟು ಸುತ್ತಾಡುತ್ತಿರುವ ಲೆಕ್ಕವಿಲ್ಲದಷ್ಟು ಅಮಿನ್‌ರನ್ನು ತನ್ನಂತಾಗಿಸುವ ಬಯಕೆಯುಳ್ಳ ಅವರಿಗೆ ಮುಂಬೈ, ಬಾರ್ಸಿಲೋನಾ ಆಗಿ ಬದಲಾಗಬೇಕೆಂಬ ಕನಸಿದೆ.

ಅದು ಇಂತಹ ಛಲವುಳ್ಳ ಅಮಿನರು ಹುಟ್ಟಬೇಕು. ಅವರಿಗೆ ಸಿಸ್ಟರ್ ಸೆರಫಿನ್, ಫಾದರ್ ಪ್ಲೇಸಿ, ಕಲಾಕಾರ ಯೂಸ್ಟೇಸ್‌ನಂತಹ ಮಂದಿಯೂ ಸಿಗಬೇಕು. ಅವರಿರುವುದು ಬೆಂಗಳೂರೋ, ಬಾಂಬೆಯೋ... ಅವರಿಗೆ ಬಾರ್ಸಿಲೋನಾದ ಚೆಂದದ ಬೀದಿಗಳ ಪರಿಚಯವಾಗಬೇಕು.

English summary
An inspring life of Amin Sheikh is on the headlines today. He is the owenr of Bombay to Barcelona Library Cafe. But who is Amin? where did he from? how was his life? read the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X