ಝೆನ್ ಕಥೆ: ಅಜ್ಜಿ ಕೊಟ್ಟ ರೊಟ್ಟಿ ಮತ್ತು ಪುಸ್ತಕದ ಜ್ಞಾನ
ಜಪಾನಿನ ಝೆನ್ ಸನ್ಯಾಸಿ ಆ ಕಾಲದ ಅಮೂಲ್ಯವಾದ ಬೌದ್ಧ ಧರ್ಮದ 'ವಜ್ರ ಸೂತ್ರ'ದಲ್ಲಿ ಪರಿಣತನಾಗಿದ್ದ. ಆತನ ಬಳಿ ಅದರ ಕುರಿತಾಗಿ ಬರೆಯಲಾಗಿದ್ದ ಜಗತ್ತಿನ ಏಕೈಕ ಪ್ರತಿ ಇತ್ತು. ಆತ ಅದನ್ನು ಜತನದಿಂದ ಬೆನ್ನಿಗೆ ಕಟ್ಟಿಕೊಂಡು ಓಡಾಡುತ್ತಿದ್ದ. ಆತ ವಜ್ರ ಸೂತ್ರದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಅದರ ಒಳಹುಗಳನ್ನೆಲ್ಲ ತಿಳಿದುಕೊಂಡಿದ್ದ.
ವಜ್ರ ಸೂತ್ರದ ತತ್ವಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಆತನ ಬಳಿ ಸನ್ಯಾಸಿಗಳು, ಮಾಸ್ಟರ್‌ಗಳು ಮಾತ್ರವಲ್ಲದೆ ಸಾಮಾನ್ಯ ಜನರೂ ಬರುತ್ತಿದ್ದರು. ಹೀಗೆ ಆತ ಅದನ್ನು ಕಟ್ಟಿಕೊಂಡು ಊರೂರಿಗೆ ತೆರಳುತ್ತಿದ್ದ.
ಒಮ್ಮೆ ಒಂದು ಮಧ್ಯಾಹ್ನ ಬೆಟ್ಟದ ಮೇಲೆ ನಡೆದು ಪಕ್ಕದ ಊರಿಗೆ ಹೋಗುತ್ತಿದ್ದ. ಆತನಿಗೆ ದಾರಿ ಮಧ್ಯೆ ವಿಪರೀತ ಹಸಿವಾಗತೊಡಗಿತು. ತಂದಿದ್ದ ಆಹಾರವೆಲ್ಲ ಖಾಲಿಯಾಗಿತ್ತು. ಅವನ ಬಳಿ ಹಣವೂ ಇರಲಿಲ್ಲ.

ಹಸಿವು ತಾಳಲಾಗದೆ ಹುಡುಕಾಡಿದಾಗ ಮುದುಕಿಯೊಬ್ಬಳು ಟೀ ಮತ್ತು ರೊಟ್ಟಿ ಮಾರುತ್ತಿರುವುದು ಕಂಡಿತು.
ಆಕೆಯ ಬಳಿ ಹೋಗಿ, "ನನಗೆ ಸ್ವಲ್ಪ ರೊಟ್ಟಿ ಮತ್ತು ಚಹಾ ಕೊಡು. ನನ್ನ ಬಳಿ ಹಣವಿಲ್ಲ. ಆದರೆ ವಜ್ರ ಸೂತ್ರದ ಜ್ಞಾನವಿದೆ. ನಿನಗೆ ಈ ಅಮೂಲ್ಯ ಭಂಡಾರದಿಂದ ಒಂದಷ್ಟು ಜ್ಞಾನವನ್ನು ತಿಳಿಸುತ್ತೇನೆ" ಅಂದ.
ಆ ಮುದುಕಿಗೆ ವಜ್ರ ಸೂತ್ರದ ಕುರಿತು ಒಂದಷ್ಟು ಜ್ಞಾನವಿತ್ತು. "ಓ ತಿಳಿವಳಿಕೆಯುಳ್ಳ ಸನ್ಯಾಸಿಯೇ, ನಾನೊಂದು ಸರಳ ಪ್ರಶ್ನೆ ಕೇಳುತ್ತೇನೆ. ಅದಕ್ಕೆ ಉತ್ತರ ಕೊಟ್ಟರೆ ಚಹಾ ಮತ್ತು ರೊಟ್ಟಿ ಕೊಡುತ್ತೇನೆ" ಎಂದಳು.
ಅದಕ್ಕೆ ಸನ್ಯಾಸಿ ಒಪ್ಪಿಕೊಂಡ. ಮುದುಕಿ ಕೇಳಿದಳು, "ಈ ರೊಟ್ಟಿಗಳನ್ನು ತಿನ್ನುವಾಗ ನೀನು ಭೂತದ ಮನಸಿನಿಂದ ತಿನ್ನುತ್ತೀಯೋ, ವರ್ತಮಾನದ ಮನಸಿನಿಂದ ತಿನ್ನುತ್ತೀಯೋ ಅಥವಾ ಭವಿಷ್ಯದ ಮನಸಿನಿಂದ ತಿನ್ನುತ್ತೀಯೋ?"
ಸನ್ಯಾಸಿ ಯೋಚಿಸಿದ, ತಲೆ ಕೆರೆದುಕೊಂಡು ಯೋಚಿಸಿದ, ಆದರೂ ಉತ್ತರ ಹೊಳೆಯಲಿಲ್ಲ.
ಕೊನೆಗೆ ಉತ್ತರಕ್ಕಾಗಿ ಬೆನ್ನಿನಿಂದ ವಜ್ರ ಸೂತ್ರದ ಪುಸ್ತಕ ತೆಗೆದು ಅದರ ಎಲ್ಲ ಪುಟಗಳನ್ನೂ ತೆರೆದು ಮತ್ತೆ ಮತ್ತೆ ಓದತೊಡಗಿದ. ಸಂಜೆಯಾಯಿತು. ಮುದುಕಿಗೆ ಉತ್ತರ ಕೊಡುವ ಭರವಸೆಯೊಂದಿಗೆ ಹುಡುಕಿದ ಅವನಿಗೆ ಪುಸ್ತಕದಲ್ಲೂ ಉತ್ತರ ಸಿಗಲಿಲ್ಲ. ಮುಸ್ಸಂಜೆಯಾದರೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಮುದುಕಿ ತನ್ನ ರೊಟ್ಟಿ ಅಂಗಡಿಯನ್ನು ಮುಚ್ಚಿ ಅಲ್ಲಿಂದ ಹೊರಡಲು ತಯಾರಾದಳು.
"ನನಗೆ ಉತ್ತರ ಗೊತ್ತಾಗಲಿಲ್ಲ. ನೀನೇ ಉತ್ತರ ಹೇಳು!" ಸನ್ಯಾಸಿ ಸುಸ್ತಾಗಿ ದೈನ್ಯದಿಂದ ಕೇಳಿದ.
"ನೀನೊಬ್ಬ ಶತಮೂರ್ಖ! ಹಸಿವನ್ನು ವಜ್ರಸೂತ್ರದಿಂದ ತಣಿಸಿಕೊಳ್ಳಲು ಸಾಧ್ಯವೇ? ಯಾವ ಕಾಲದ ಮನಸಿನಿಂದಲೂ ರೊಟ್ಟಿಯನ್ನು ತಿನ್ನಲು ಸಾಧ್ಯವಿಲ್ಲ. ರೊಟ್ಟಿಯನ್ನು ತಿನ್ನುವುದು ಬಾಯಿಯಿಂದ" ಎಂದು ನಕ್ಕು ಅಲ್ಲಿಂದ ಹೊರಟಳು.
(ಸಂಗ್ರಹ)











Click it and Unblock the Notifications