ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ತೇದಾರಿ ಕಾದಂಬರಿ: ಬಸವನಗುಡಿಯ ಆ ಹುಡುಗಿ ಯಾರು?

By ಬಸವರಾಜ್ ಕಂಠಿ
|
Google Oneindia Kannada News

ಎರಡು ದಿನಗಳಾದ ಮೇಲೆ, ಕೊಲೆಯಾಗಿದ್ದ ಮೊದಲನೇ ಹುಡುಗ ಶ್ರೇಯಸ್ ನ ಹತ್ತಿರದ ಗೆಳೆಯರಾದ ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿಯನ್ನು ವಿಚಾರಿಸಲು ನಾನು, ಭೈರೇಗೌಡ, ಮತ್ತು ಜಾಲಹಳ್ಳಿ ಕ್ರಾಸ್ ಸ್ಟೇಷನ್ ನ ಎಸ್. ಐ ಒಬ್ಬರು ಸೇರಿಕೊಂಡು ಜೆ.ಪಿ. ನಗರದ ಕಾಫಿ ಡೇ ಒಂದರಲ್ಲಿ ಕೂಡಿಕೊಂಡೆವು.

ಅಲ್ಲಿಗೆ ಆ ಹುಡುಗ ಮತ್ತು ಹುಡುಗಿ ಸರಿಯಾದ ಸಮಯಕ್ಕೆ ಬಂದರು. ಏಕಾಂತವಿದ್ದ ಟೇಬಲ್ ಒಂದನ್ನು ಆರಿಸಿ ಎಲ್ಲರೂ ಕುಳಿತುಕೊಂಡೆವು. ಹುಡುಗನ ಹೆಸರು ರಾಮ್, ಹುಡುಗಿ ಸುಮಾ. ಪರಸ್ಪರ ಪರಿಚಯಗಳು ಮುಗಿದ ಮೇಲೆ ನಾನು ಮಾತಾಡಿದೆ,

"ನೋಡಿ, ಇದು ತುಂಬಾ ಇನ್ ಫಾರ್ಮಲ್ ಮೀಟಿಂಗ್. ಅದಕ್ಕೇ ಇಂಥಾ ಜಾಗದಲ್ಲೇ ಮೀಟ್ ಮಾಡಲು ನಾನು ಬಯಸಿದ್ದು. ರಾಮ್, ಸುಮಾ ನೀವು ಇದನ್ನಾ ಎನ್ಕ್ವೈರಿ ಅನ್ಕೋಬೇಡಿ. ಕೊಲೆಗಾರರನ್ನ ಪತ್ತೆ ಮಾಡೋದಕ್ಕೆ ನಿಮ್ಮಿಂದ ಸಹಾಯ ಬೇಕು".

'Tabbaliyu neenade magale'-A detective mystery part-6

ರಾಮ್ ಮಾತಾಡಿದ, "ಕೇಳಿ ಸರ್. ನಮ್ಮಿಂದ ಯಾವ್ ಥರಾ ಸಹಾಯ ಬೇಕಿದ್ರೂ ಮಾಡ್ತೀವಿ. ಶ್ರೇಯಸ್ ನನ್ ಬೆಸ್ಟ್ ಫ್ರೆಂಡ್ ಆಗಿದ್ದ".

"ಗುಡ್. ನಿಮ್ಮಿಂದ ನನಗೆ ಗೊತ್ತಾಗ ಬೇಕಿರೋದು ಇಷ್ಟೇ. ಅವನ ಜೀವನ ಶೈಲಿ ಹೇಗಿತ್ತು? ಅದರಲ್ಲೂ ಹುಡುಗಿಯರ ಬಗ್ಗೆ ಅವನ ಯೋಚನೆಗಳು ಹೇಗಿದ್ದವು? ನೀವು ಮುಚ್ಚುಮರೆ ಮಾಡ್ದೆ, ಬಿಚ್ಚು ಮನಸ್ಸಿನಲ್ಲಿ ಹೇಳಿದ್ರೆ ನಮಗೆ ತುಂಬಾ ಸಹಾಯ ಆಗುತ್ತೆ".

ದೀರ್ಘವಾದ ಒಂದು ಉಸಿರೆಳೆದುಕೊಂಡು ರಾಮ್ ಮಾತಾಡಿದ, "ನಮ್ಮಿಬ್ಬರ ಲೈಫ್ ಸ್ಟೈಲ್ ಹೆಚ್ಚು ಕಮ್ಮಿ ಒಂದೇ ಥರಯಿತ್ತು ಸರ್. ಕಾಲೇಜೆಲ್ಲಾ ನಮಗೆ ಹೆಸರಿಗೆ ಮಾತ್ರ. ಕಾರ್ ತಗೊಂಡು ಲಾಂಗ್ ಡ್ರೈವ್ ಹೋಗೋದು, ಪಬ್ ಹೋಗೋದು, ರಾತ್ರಿಯೆಲ್ಲಾ ಪಾರ್ಟಿ ಮಾಡೋದು. ನಿಮಗೆ ಗೊತ್ತಿರೋ ಹಾಗೆ ಅವನ ಅಣ್ಣ ಫಿಲ್ಮ್ ಇಂಡಸ್ಟ್ರಿಯಲ್ಲಿರೋನು. ಪೇಜ್ ತ್ರೀ ಪಾರ್ಟಿಗೆಲ್ಲಾ ಹೋಗ್ತಿದ್ವಿ. ಹುಡುಗಿಯರ ವಿಷಯದಲ್ಲಿ ಸ್ವಲ್ಪ... ಸ್ವಲ್ಪ ಯಾಕೆ ಜಾಸ್ತಿನೇ ಚೆಲ್ಲಾಟ ಅವಂದು. ಅಫೇರ್ ಮಾಡೋದು, ಆಮೇಲೆ ಬ್ರೇಕಪ್. ಮತ್ತೆ ಅಫೇರ್, ಮತ್ತೆ ಬ್ರೇಕಪ್. ಹೀಗೆ ನಡಿತಾನೇ ಇತ್ತು".

ಗೆಳತಿ ಸುಮಾ ಹೇಳಿದಳು, "ಮುಗ್ಧ ಹುಡುಗಿಯರ ಮೇಲೆ ಅವನ ಕಣ್ಣು ಜಾಸ್ತಿ ಸರ್. ಕಾಲೇಜ್ ನಲ್ಲಿ ಅಂಥಾ ಹುಡುಗಿಯರ ಪರಿಚಯ ಮಾಡ್ಸು ಅಂತ ನನ್ ಬೆನ್ನ ಹಿಂದೆ ಬೀಳ್ತಿದ್ದಾ. ಅಂಥವರನ್ನ ಪಟಾಯಿಸಿ ಆಮೇಲೆ ಕೈ ಬಿಡೋದರಲ್ಲಿ ಅವನಿಗೆ ಒಂಥರಾ ಮಜಾ ಸಿಗುತ್ತೆ ಅಂತಾ ಹೇಳ್ತಿದ್ದ. ಪ್ರಪಂಚದಲ್ಲಿ ಯಾವ್ ಹುಡುಗಿನಾ ಬೇಕಿದ್ರೂ ಲವ್ ಅನ್ನೋ ಜಾಲದಲ್ಲಿ ಬೀಳಿಸಬಹುದು ಅಂತ ಯಾವಾಗ್ಲೂ ಹೇಳ್ತಿದ್ದಾ".

ರಾಮ್ ಕತೆ ಮುಂದುವರೆಸಿದ, "ಒಂದ್ಸಾರಿ ಒಬ್ಳು ಹುಡುಗಿ ಸೂಸೈಡ್ ಅಟೆಂಪ್ಟ್ ಮಾಡಿದ್ಳು ಸರ್. ಅವಳ ಅಣ್ಣ ಇವನ ಮನೆಗೆ ಬಂದು ಗಲಾಟೆ ಮಾಡಿದ್ದ. ಆಗ ಶ್ರೇಯಸ್ ನ ಅಣ್ಣ ಹೇಗೋ ವಿಷಯ ಮುಚ್ಚಾಕಿದ್ರು, ಯಾರಿಗೂ ಗೊತ್ತಾಗ್ಲಿಲ್ಲ".

ಸುಮಾ ಅಚ್ಚರಿಯಲ್ಲಿ ಕೇಳಿದಳು, "ಹೌದಾ? ಯಾವ್ ಹುಡುಗಿ? ನಂಗ್ ಗೊತ್ತೇ ಇಲ್ಲ?".

"ಅದೇ ಕಣೆ... ಬಸವನಗುಡಿಯಿಂದ ಬರ್ತಾಯಿದ್ಳಲ್ಲಾ, ಸರಳಾ ಅಂತಾ. ನೀನು ಅವಾಗ ಡೆಲ್ಲಿ ಹೋಗಿದ್ದೆ. ನಾವು ಯಾರ ಮುಂದೂ ಬಾಯ್ಬಿಟ್ಟಿಲ್ಲ".

"ಏನಾಗಿತ್ತು? ಸ್ವಲ್ಪ ವಿವರ ಹೇಳ್ತೀರಾ?" ನಾನು ಕೇಳಿದೆ.

"ಅವ್ಳನ್ನಾ ಪಟಾಯ್ಸಿ ಕೈ ಬಿಟ್ಟಿದ್ದ ಸರ್. ಹುಡುಗಿ ತುಂಬಾ ಸೀರಿಯಸ್ ತಗೊಂಡಿದ್ಳು ಅನ್ಸುತ್ತೆ, ಕೈ ಕುಯ್ಕೊಂಡಿದ್ಳಂತೆ. ಅವತ್ತು ಸಂಜೆ ಅವನ ಮನೆಯಲ್ಲಿ ನಾನು, ಬಬಿತಾ, ಮತ್ತೆ ರೂಪಾ ಇದ್ವಿ. ಅವಳ ಅಣ್ಣ ಮಚ್ಚು ಹಿಡ್ಕೊಂಡ್ ಬಂದು ಶ್ರೇಯಸ್ ಗೆ ಹೊಡೆಯೋದಕ್ಕೆ ಮುಂದಾಗಿದ್ದ. ಕೆಲಸದವರೆಲ್ಲಾ ಸೇರಿ ಹೇಗೋ ಕಂಟ್ರೊಲ್ ಮಾಡಿದ್ವಿ. ಆಮೇಲೆ ಶ್ರೇಯಸ್ ನ ಅಣ್ಣ ಸುಮೀತ್ ಅವರನ್ನ ಕರೆಸಿದ್ವಿ. ಅವರು ಹೇಗೋ ಅವನನ್ನ ಸಮಾಧಾನ ಮಾಡಿ ಕಳ್ಸಿದ್ರು".

"ಈ ಬಬಿತಾ, ರೂಪಾ ಯಾರು?"

"ಬಬಿತಾ ನಮ್ ಕ್ಲಾಸ್ ಮೇಟ್ ಸರ್. ರೂಪಾ ಕನ್ನಡವಾಣಿ ಪೇಪರ್ ನ ಪೇಜ್ ತ್ರೀ ರಿಪೋರ್ಟರ್. ನಮಗೆ ತುಂಬಾ ಕ್ಲೋಸ್".

"ಇದೆಲ್ಲಾ ನಡದು ಎಷ್ಟ್ ದಿನಾ ಆಯ್ತು?"

"ಹತ್ ಹತ್ರ ಒಂದ್ ವರ್ಷ ಆಯ್ತು ಸರ್".

ನಾನೂ ಜೋರಾಗಿ ಉಸಿರೆಳೆದುಕೊಂಡೆ. "ಈಗ ಕೇಸಿನ ವಿಷಯಕ್ಕೆ ಬರೋಣ... ಅವನ ಕೊಲೆಯಾಗೊಕ್ಕಿಂತ ಮುಂಚೆ ಅವನಿಗೆ ಯಾವ್ದೋ ಹುಡುಗಿಯ ಪರಿಚಯ ಆಗಿತ್ತು ಅಲ್ವಾ?"

ರಾಮ್ ಹೇಳಿದ, "ಹೌದು ಸರ್. ಆದ್ರೆ ಬರೀ ಫೇಸ್ಬುಕ್ಕು, ಮತ್ತೆ ಫೋನಿನಲ್ಲೇ ಮಾತಾಡ್ತಿದ್ರು. ಅವನ ಕೊಲೆಯಾಗೋದಕ್ಕೆ ಎರಡು ದಿನ ಮುಂಚೆ ಅವಳನ್ನ ಮೀಟ್ ಮಾಡಿದ್ದಾ. ಆದ್ರೆ ನನಗೆ ಅವಳ ಬಗ್ಗೆ ಏನೂ ಹೇಳಿರಲಿಲ್ಲ."

"ಅವಳನ್ನಾ ಮೀಟ್ ಮಾಡಿದ್ದಾಗಿ ಅವನೇ ಹೇಳಿದ್ನಾ?"

"ಹೌದು ಸರ್. ಅವನೇ ಹೇಳಿದ್ದಾ. ಸಕ್ಕತ್ತಾಗಿದಾಳೆ ಅಂತಾನೂ ಹೇಳಿದ್ದಾ."

"ಎಲ್ಲಿ ಮೀಟ್ ಮಾಡಿದ್ದು?"

"ಗೊತ್ತಿಲ್ಲ ಸರ್. ಅವನು ಏನೂ ಹೇಳಿಲ್ಲಾ".

ಅವರಿಂದ ಆ ಬಸವನಗುಡಿ ಹುಡುಗಿಯ ವಿವರ ಪಡೆದುಕೊಂಡು ಬೀಳ್ಕೊಂಡೆವು.

ಮುಂದುವರಿಯುವುದು

English summary
'Tabbaliyu neenade magale'-A murder mystery story by Basavaraj Kanthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X