ಶುಭಸಂಕಲ್ಪ: ಸುಳ್ಳು ಆಪಾದನೆ ಎಂಬ ಮುಳ್ಳು ಚುಚ್ಚಿದರೆ...

ಮೊನ್ನೆ ಸಿಕ್ಕ ಗೆಳತಿಯೊಬ್ಬಳು ತನ್ನ ಬಗ್ಗೆ ಹುಟ್ಟಿಕೊಂಡಿರುವ ಸುಳ್ಳು ಆಪಾದನೆಯನ್ನು, ಅದರಿಂದ ತನಗಾಗುತ್ತಿರುವ ಅವಮಾನ, ಕಿರಿಕಿರಿ ಹೇಳಿಕೊಂಡು ಕನಲಿದಳು. ನನಗೆ ಅವಳ ಬಗ್ಗೆ ಚೆನ್ನಾಗಿ ಗೊತ್ತು. ಅವಳ ಸಂಕಟದ ಕತೆ ಕೇಳುತ್ತಾ, ಆ ಆಪಾದನೆಯಲ್ಲಿ ಎಳ್ಳಷ್ಟೂ ನಿಜವಿಲ್ಲ ಎಂಬುದು ನನಗೆ ಮನದಟ್ಟಾಗಿತ್ತು. ಪಾಪ, ತುಂಬಾ ಸಂಕಟ ಅನುಭವಿಸುತ್ತಿದ್ದಳು. ಏನು ಸಮಾಧಾನ ಹೇಳುವುದು ಗೊತ್ತಾಗಲಿಲ್ಲ. ಸುಮ್ಮನೆ ಅವಳ ಸಂಕಟದ ಕತೆ ಕೇಳಿಕೊಂಡು ಮೌನವಾಗಿ ಸಾಂತ್ವನ ಹೇಳಿದೆ.
'ಹೇಳು, ಈ ಸುಳ್ಳು ಆಪಾದನೆಯನ್ನು ಹೇಗೆ ಎದುರಿಸಬೇಕು? ನಾನೇನಾದರು ತಪ್ಪು ನಡೆಯಿಟ್ಟರೆ ಆ ಆಪಾದನೆ ನಿಜವಾಗಿ ಬಿಡುತ್ತದೆ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಇದರಿಂದಾಗಿ ನನ್ನ ಮನಃಶಾಂತಿ, ನೆಮ್ಮದಿ ಹಾಳಾಗಿದೆ.' ಎಂದಳು. ತಕ್ಷಣ ನನಗೆ ಏನು ಉತ್ತರ ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಕೊಂಚ ಹೊತ್ತು ಅವಳು ಹೇಳಿದ್ದನ್ನೇ ಧ್ಯಾನಿಸುತ್ತಾ ಕೂತೆ. ಏನೋ ಹೊಳೆಯಿತು. ತಕ್ಷಣ ಹೇಳಿದೆ 'ಏನು ಮಾಡಬೇಕೆಂದರೆ... ನೀನು ಸಂತೋಷದಿಂದ, ಸಮಾಧಾನದಿಂದಿರಬೇಕು ಅಷ್ಟೆ! ಕಾಲವೇ ಎಲ್ಲವನ್ನು ಪರಿಹರಿಸುತ್ತದೆ...' ಎಂದೆ.
ಅವಳ ಗೊಂದಲ ಅವಳ ಮುಖದಲ್ಲಿ ಪ್ರತಿಫಲಿಸಿತು. ಕೊಂಚ ಹಿಂಜರಿಕೆಯಿಂದಲೇ 'ನನಗೆ ಅರ್ಥವಾಗಲಿಲ್ಲ...' ಎಂದಳು. 'ಈ ಗುಟ್ಟು ನನಗೂ ಅಷ್ಟು ಬೇಗ ಅರ್ಥವಾಗಿರಲಿಲ್ಲ. ಈ ಕತೆ ಕೇಳು ನಿನಗೇ ಎಲ್ಲಾ ತಿಳಿಯಾಗುತ್ತದೆ' ಎಂದೆ. ಅವಳು ಕೊಂಚ ಅನುಮಾನದಿಂದ, ಗೊಂದಲದಿಂದಲೇ ಹೂಂಗುಟ್ಟಿದಳು.
***
ಜ್ಞಾನೋದಯವಾದ ನಂತರದ ದಿನಗಳವು. ಬುದ್ಧನ ಕೀರ್ತಿ ಹೂವಿನ ಪರಿಮಳದಂತೆ ಎಲ್ಲೆಡೆ ಹರಡುತ್ತಿತ್ತು. ವಸಂತದಲ್ಲಿ ಹೂವಿಗೆ ದುಂಬಿಗಳು ಮುತ್ತುವಂತೆ, ಬೆಲ್ಲದ ಅಚ್ಚಿಗೆ ಇರುವೆಗಳು ಮುಗಿಬೀಳುವಂತೆ, ಗೌತಮ ಬುದ್ಧನ ಧರ್ಮೋಪದೇಶಕ್ಕೆ, ದರ್ಶನಕ್ಕೆ ಜನ ಹಾತೊರೆಯುತ್ತಿದ್ದರು.
ಹಾಗೆಂದು ಗೌತಮ ಬುದ್ಧನಿಗೆ ವಿರೋಧಿಗಳು ಇರಲಿಲ್ಲವೆಂದೇನಲ್ಲ. ಜನರು ಬುದ್ಧನೆಡೆಗೆ ಆಕರ್ಷಿತರಾಗುತ್ತಿದ್ದಂತೆ, ಕೆಲವು ವಿರೋಧಿಗಳು ಹುಟ್ಟಿಕೊಂಡರು. ಜನ ಕಂದಾಚಾರದಿಂದ ಬಿಡುಗಡೆ ಹೊಂದಿ ಬುದ್ಧನ ಧಮ್ಮ ಮಾರ್ಗ ಅನುಸರಿಸಲಾರಂಭಿಸಿದಂತೆ ಡಂಭಾಚಾರಿಗಳ ಕಸುಬಿಗೆ ಹೊಡೆತ ಬಿತ್ತು. ಅವರ ಪ್ರಭಾವ, ಆದಾಯ ಮತ್ತು ಸಮಾಜದಲ್ಲಿ ಅವರ ವರ್ಚಸ್ಸು ಕುಂದಿತು. ಇದರಿಂದ ಕನಲಿ ಹೋದ ಕಪಟಿ ಕಂದಾಚಾರಿಗಳು ಗೌತಮ ಬುದ್ಧನ ಚಾರಿತ್ರ್ಯಕ್ಕೆ ಮಸಿ ಬಳಿಯುವ ಕುಟಿಲೋಪಾಯ ಮಾಡಿದರು.
ಒಬ್ಬ ವೇಶ್ಯೆಗೆ ದುಡ್ಡು ಕೊಟ್ಟು ದುರ್ಬೋಧನೆ ಮಾಡಿ, ಗೌತಮ ಬುದ್ಧನು ಧರ್ಮೋಪದೇಶ ಮಾಡುತ್ತಿರುವ ಜಾಗಕ್ಕೆ ಕಳುಹಿಸಿದರು. ಬೋಧಿವೃಕ್ಷದ ಕೆಳಗೆ ದೊಡ್ಡ ಜನ ಸಾಗರವೇ ನೆರೆದಿತ್ತು. ಬುದ್ಧನ ಕರುಣೆ ತುಂಬಿದ ಧರ್ಮೋಪದೇಶವನ್ನು ಜನ ನಿಶ್ಶಬ್ದವಾಗಿ ಕೇಳಿಸಿಕೊಳ್ಳುತ್ತಿದ್ದರು. ಗೌತಮ ಬುದ್ಧ, ಜನಸಾಗರ ಮತ್ತು ಧರ್ಮೋಪದೇಶ ಎಲ್ಲಾ ಒಂದಾಗಿ ಬೆರೆತು ವಾತಾವರಣ ಅದ್ವೈತವೇ ಆಗಿಹೋಗಿತ್ತು. ಅಂತಹ ಘನತೆ ತುಂಬಿದ ಸಭೆಗೆ ವೇಶ್ಯೆ ಬಂದವಳೇ, ಬುದ್ಧನನ್ನು ವಾಚಾಮಗೋಚರವಾಗಿ ಬಯ್ಯತೊಡಗಿದಳು.
'ಅಯ್ಯಾ ಕಪಟ ಸನ್ಯಾಸಿ... ನನ್ನ ಹೊಟ್ಟೆಯಲ್ಲಿ ನಿನ್ನ ಮಗು ಬೆಳೆಯುತ್ತಿದೆ. ನನ್ನನು ನಂಬಿಸಿ, ಗರ್ಭಿಣಿ ಮಾಡಿ ನಡು ನೀರಿನಲ್ಲಿ ಕೈ ಬಿಟ್ಟೆಯಲ್ಲೋ... ಈಗ ನೋಡಿದರೆ ಇಲ್ಲಿ ಬಂದು ಧರ್ಮೋಪದೇಶ ಮಾಡುತ್ತಿರುವೆಯಾ? ನನ್ನ ಜೊತೆ ಪ್ರಣಯದ ಆಟವಾಡಿ, ಮೋಸ ಮಾಡಿ ನೀನು ಹೀಗೆ ಓಡಿ ಬರಬಹುದೆ? ಓಡಿ ಬಂದರೆ ನಾನು ಸುಮ್ಮನೆ ಬಿಡುವೆನೆ? ಆ ದೇವರು ನಿನ್ನ ಮೆಚ್ಚುವನೆ? ನಡಿ... ನಡಿ... ನಿನ್ನ ಡಂಭಾಚಾರ ಸಾಕು, ನನ್ನನ್ನು ಮದುವೆಯಾಗು" ಎಂದಳು. ಅವಳ ಆಪಾದನೆಗೆ ಅವಳ ಉಬ್ಬಿದ ಹೊಟ್ಟೆ ಸಾಕ್ಷಿಯಾಗಿತ್ತು.
ಗೌತಮ ಬುದ್ಧ ಏನೂ ಮಾತಾಡಲಿಲ್ಲ. ಮೌನದಿಂದ ಕುಳಿತಿದ್ದ. ಅವನ ಕಣ್ಣುಗಳಿಂದ ಕರುಣೆ ಜಿನುಗುತ್ತಿತ್ತು. ಆದರೆ ಅವನ ಶಿಷ್ಯರು ಕೋಪದಿಂದ ತತ್ತರಿಸಿದರು. ಬುದ್ಧ ಅವರೆನ್ನೆಲ್ಲಾ ತನ್ನ ಕಣ್ಣ ಸನ್ನೆಯಿಂದಲೇ ಸುಮ್ಮನಿರುವಂತೆ ಆದೇಶಿಸಿದ. ಸೇರಿದ ಜನರಲ್ಲಿ ಗುಸು-ಗುಸು ಪಿಸು-ಪಿಸು ಶುರುವಾಯಿತು. ಕೆಲವರು ಬುದ್ಧನ ಕಡೆ ನೋಡಿ ಹುಳ್ಳಗೆ ನಕ್ಕರು. ಕೆಲವರು ಆ ಸುಂದರಿ ವೇಶ್ಯೆಯನ್ನೇ ಅನುಮಾನಿಸಿದರು. ಇಷ್ಟೆಲ್ಲಾ ಆದರೂ ಗೌತಮ ಬುದ್ಧ ಮಾತ್ರ ಸಮಾಧಾನದಿಂದ ಮೌನವಾಗಿ ಕುಳಿತಿದ್ದ.
ಇದ ಕಂಡು ಉತ್ತೇಜಿತಳಾದ ಆ ಹೆಣ್ಣು 'ಹೇ ಕಪಟಿ! ಮೌನವಾಗಿ ಕುಳಿತುಬಿಟ್ಟರೆ ಹೇಗೆ? ಕಾವಿ ಬಟ್ಟೆ ತೊಟ್ಟರೆ ಜನರನ್ನು ಮರಳು ಮಾಡಬಹುದು ಎಂದುಕೊಂಡೆಯಾ? ನನ್ನ ಜೊತೆ ಕಳೆದ ಮಧುರ ಕ್ಷಣಗಳ ಮರೆತೆಯಾ? ನಡಿ ನಡಿ... ನನ್ನ ಜೊತೆ ಸಂಸಾರ ಮಾಡು... ಇಲ್ಲದಿದ್ದರೆ ಮುಂದೆ ಹುಟ್ಟುವ ನಮ್ಮ ಮಗುವಿಗೆ ಯಾರು ದಿಕ್ಕು?' ಎಂದು ಜೋರಾಗಿ ಅತ್ತಳು. ಈ ನಾಟಕ ಇನ್ನೂ ಸ್ವಲ್ಪ ಹೊತ್ತು ನಡೆಯಿತು. ಬುದ್ಧನ ಶಿಷ್ಯರು, ಇನ್ನು ಸಹಿಸೆವು ಎಂದು ಕೋಪದಿಂದ ಅವಳನ್ನು ಸಭೆಯಿಂದ ತಳ್ಳಲು ಹೊರಟರು. ಮತ್ತೆ ಗೌತಮ ಬುದ್ಧ ಅವರನ್ನೆಲ್ಲಾ ಸುಮ್ಮನಿರುವಂತೆ ಸೂಚಿಸಿದ. ಆಗ ಅಚಾನಕ್ಕಾಗಿ ವೇಶ್ಯಯ ಹೊಟ್ಟೆಯಿಂದ ಪುಟ್ಟ ಬಟ್ಟೆಯ ಗಂಟು ಜಾರಿತು. ಅದು ಅವಳು ಗರ್ಭಿಣಿ ಎಂದು ನಿರೂಪಿಸಲು ಇಟ್ಟುಕೊಂಡಿದ್ದು. ಜನರಿಗೆ ತಕ್ಷಣ ಅವಳ ಕಪಟತನ, ಬುದ್ಧನ ಹಿರಿಮೆ ಅರ್ಥವಾಯಿತು. ಆಗಲೂ ಬುದ್ಧ ಸಂಭ್ರಮಿಸಲಿಲ್ಲ. ಅವಳು ತನ್ನ ತಪ್ಪನ್ನು ಒಪ್ಪಿಕೊಂಡಳು. ಕಪಟಿ ಕಂದಾಚಾರಿಗಳ ಸಂಚನ್ನು ವಿವರಿಸಿದಳು. ಕರುಣಾಸಾಗರ ಮೂರ್ತಿ ಅವಳನ್ನು ಕ್ಷಮಿಸಿದ, ಧಮ್ಮಕ್ಕೆ ಶರಣಾದ ಅವಳಿಗೂ ಧರ್ಮೋಪದೇಶ ಮಾಡಿದ.
***
ಅಂದು ಈ ಕತೆ ಕೇಳಿಹೋದ ಗೆಳತಿ ಮೊನ್ನೆ ಸಿಕ್ಕಿದ್ದಳು. ಅವಳ ಕತೆಯೂ ಸುಖಾಂತ್ಯವಾಯಿತು. ಆ ಕಷ್ಟದ ಸಂದರ್ಭದಲ್ಲಿ ಅವಳು ತೋರಿದ ಸಮಾಧಾನ ಚಿತ್ತ, ಸಹನೆ, ಸಂಯಮ ಅವಳನ್ನು ಸುಳ್ಳು ಆಪಾದನೆಯ ಸಂಕಟದಿಂದ ಪಾರುಮಾಡಿತು ಎಂದು ಅವಳೇ ಹೇಳಿದಳು. ನಾವೂ ಸಂಕಟದ ಸಮಯದಲ್ಲಿ, ಸುಳ್ಳು ಆಪಾದನೆಯ ಸಂದರ್ಭದಲ್ಲಿ ಸಂಯಮ, ಸಮಾಧಾನ ಚಿತ್ತ, ಸಹನೆ, ಸಹಿಷ್ಣುತೆ ತೋರುವ 'ಶುಭಸಂಕಲ್ಪ' ಮಾಡೋಣವೆ? [ಲೇಖಕರ ಈಮೇಲ್ : [email protected]] [connect with Gunamukha on facebook : https://www.facebook.com/#!/gunamukha]
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications