ಸ್ಫೂರ್ತಿಯುತ ಕತೆ ಬರೆಯಿರಿ, ಬಹುಮಾನ ಗೆಲ್ಲಿರಿ
'ಶುಭಸಂಕಲ್ಪ' ಅಂಕಣದ ಕತೆಗಳನ್ನು ಓದಿ ಸ್ಪೂರ್ತಿಗೊಂಡಿದ್ದೀರಿ, ಮೆಚ್ಚಿದ್ದೀರಿ ಮತ್ತು ಪ್ರೋತ್ಸಾಹಿಸಿದ್ದೀರಿ. ನಿಮ್ಮ ಪ್ರೀತಿಗೆ ನಾನು ಮತ್ತು 'ಒನ್ ಇಂಡಿಯಾ ಕನ್ನಡ' ಬಳಗ ಆಭಾರಿ. ನಿಮ್ಮಲ್ಲೂ ಹೀಗೆ ಅನೇಕ ಕತೆಗಳು, ಸ್ಪೂರ್ತಿ ಉಕ್ಕಿಸಿದ ಘಟನೆಗಳು ಇವೆಯಲ್ಲವೇ? ಅಂತಹ ಕತೆಗಳನ್ನು, ಘಟನೆಗಳನ್ನು 'ಶುಭಸಂಕಲ್ಪ' ಅಂಕಣಕ್ಕೆ ನೀವು ಬರೆಯಬಾರದೇಕೆ? ನಿಮ್ಮ ಸ್ಪೂರ್ತಿಯ ಸೆಲೆಯನ್ನು ನಮ್ಮೊಡನೆ, ನಮ್ಮ ಅಪಾರ ಓದುಗರೊಡನೆ ಹಂಚಿಕೊಳ್ಳಬಾರದೇಕೆ?
ಬದುಕಲ್ಲಿ ಎಂತೆಂತಹ ಛಲದಂಕ ಮಲ್ಲರು, ಶಕ್ತಿವಂತರು ಕೂಡ ತಮ್ಮ ಬದುಕಿನ ಯಾವುದೋ ಒಂದು ಗಳಿಗೆಯಲ್ಲಿ ಕೈಚೆಲ್ಲಿ ಕೂತಿರುತ್ತಾರೆ. ಹಾಗೆ ನೋಡಿದರೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಾರಿ ತಮ್ಮ ಬದುಕಲ್ಲಿ ಅಗ್ನಿ ಪರೀಕ್ಷೆಯನ್ನು ಎದುರಿಸಿರುತ್ತಾರೆ. ಆಗ ಯಾರೋ ಸಿಗುತ್ತಾರೆ, ಎಲ್ಲೋ ಕೇಳಿದ, ಓದಿದ ಅಥವಾ ತಮ್ಮದೇ ಕತೆಯನ್ನು ಹೇಳಿರುತ್ತಾರೆ. ಶಸ್ತ್ರ ಸನ್ಯಾಸ ಮಾಡಿ ಕರ್ತವ್ಯ ವಿಮುಖನಾದ ಅರ್ಜುನನಿಗೆ ಶ್ರೀಕೃಷ್ಣ ಸಿಕ್ಕಹಾಗೆ, ಭಗವದ್ಗೀತೆ ಬೋಧಿಸಿದ ಹಾಗೆ, ನಮಗೂ ಯಾರೋ ಬಂದು ಬದುಕಲ್ಲಿ ಸ್ಫೂರ್ತಿ ತುಂಬಿರುತ್ತಾರೆ.
ಬದುಕಲ್ಲಿ ಸೋತೆವು ಅಂದುಕೊಂಡಿದ್ದ ನಾವು ಮತ್ತೆ ಉಲ್ಲಾಸದಿಂದ, ಇನ್ನಷ್ಟು ಉತ್ಸಾಹದಿಂದ ಬದುಕಿಗೆ ಮರಳಿರುತ್ತೇವೆ. ಅವರು ಹೇಳಿದ ಕತೆ ಕೇಳಿ ನಮ್ಮಲ್ಲಿ ಸಣ್ಣದಾಗಿ ಸ್ಪೂರ್ತಿಯ ಸೆಲೆ ಊಟೆಯೊಡೆದಿರುತ್ತದೆ. ನಂತರ ಅದೇ ದೊಡ್ಡ ಪ್ರವಾಹವಾಗಿ ನಮ್ಮನ್ನು ಸೆಳೆದುಕೊಂಡು ಹೋಗಿ ಯಶಸ್ಸಿನ ದಡ ಸೇರಿಸಿರುತ್ತದೆ. ಅಲ್ಲಿಯವರೆಗೆ ನಮ್ಮಲ್ಲಿ ಆವರಿಸಿದ ಅನುಮಾನ, ಜಡತ್ವ ಮೋಡದಂತೆ ಚದುರಿ ಹೋಗಿ ಮತ್ತೆ ಜೀವನದ ಸೂರ್ಯ ಗೆಲುವಾಗಿ ಪ್ರಕಾಶಿಸಿರುತ್ತಾನೆ. ಹಾಗೆ ಸಿಕ್ಕ ಸ್ಪೂರ್ತಿಯ ಕತೆ ನಮ್ಮ ಪಾಲಿಗೆ ಅಲ್ಲಾವುದ್ಧೀನ ಅದ್ಭುತ ದೀಪವಾಗಿ ಹೋಗಿರುತ್ತದೆ.

ಅಂತಹ ಕ್ಷಣವನ್ನು, ನೀವು ಸ್ಪೂರ್ತಿಗೊಂಡ ಘಳಿಗೆಯನ್ನು ಮೆಲುಕು ಹಾಕಿ 'ಶುಭಸಂಕಲ್ಪ' ಅಂಕಣಕ್ಕೆ ಬರೆಯಿರಿ, ನಿಮ್ಮ ಕತೆಯನ್ನು ನಮ್ಮೊಡನೆ ಹಂಚಿಕೊಳ್ಳಿ. ನಮಗೆ ಬಂದ ಉತ್ತಮ ಕತೆಗಳನ್ನು, ಬರಹಗಳನ್ನು ಈ ಅಂಕಣದಲ್ಲಿ ಪ್ರಕಟಿಸಲಾಗುವುದು, ಹಾಗೆ ನಿಮ್ಮ ಪ್ರಯತ್ನಕ್ಕೆ ಮತ್ತು ನಮ್ಮ ಸಂತೋಷಕ್ಕೆ ನಮ್ಮ ಕಡೆಯಿಂದ ಪುಟ್ಟ ಬಹುಮಾನವೂ ಉಂಟು. ನೆನಪಿರಲಿ! ಎಲ್ಲದಕ್ಕಿಂತ ದೊಡ್ಡ ಬಹುಮಾನವೆಂದರೆ ಬದುಕಲ್ಲಿ ನೊಂದ, ಸೋತು ರೋಸಿ ಹೋದ ಹೃದಯಗಳಿಗೆ ನಿಮ್ಮ ಬರಹ, ಹಂಚಿಕೊಂಡ ಕತೆ ತುಂಬುವ ಸ್ಪೂರ್ತಿ.
ಬರಹಗಾರರಿಗೆ ಸೂಚನೆಗಳು
* ಬರಹ ಯೂನಿಕೋಡ್ ಅಥವಾ ಬರಹ ಅಥವಾ ನುಡಿ ರೂಪದಲ್ಲಿರಲಿ.
* ಕಾಗುಣಿತಕ್ಕೆ ಗಮನ ಕೊಡಿ. ಬರಹ ಚುಟುಕಾಗಿರಲಿ, 400-500 ಪದಗಳಲಿದ್ದರೆ ಸೂಕ್ತ.
* ನೀವು ಎಲ್ಲೂ ಓದಿದ ಕತೆಯಾಗಿದ್ದರೆ, ನಿಮಗೆ ಕತೆಯ ಮೂಲ ಗೊತ್ತಿದ್ದರೆ, ಕತೆಯ ಮೂಲವನ್ನು, ಕತೆಗಾರರನ್ನು ಲೇಖನದಲ್ಲಿ ನಮೂದಿಸಿ.
* ಕಥೆ ನಿಮ್ಮ ಜೀವನದ ಅನುಭವ ಒಳಗೊಂಡಿದ್ದರೆ ಇನ್ನೂ ಉತ್ತಮ. ಸ್ವಂತ ಕಥೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
* ಅಕ್ಟೋಬರ್ 21ರೊಳಗೆ [email protected] ವಿಳಾಸಕ್ಕೆ ಕಳಿಸಿಕೊಡಿ. (ಇಂದೇ ಕಳಿಸಿದರೆ ಇನ್ನೂ ಉತ್ತಮ)
* ನಿಮ್ಮ ಸಂಪೂರ್ಣ ವಿಳಾಸ ಬರೆಯಿರಿ ಮತ್ತು ಫೋಟೋ ಲಗತ್ತಿಸಲು ಮರೆಯಬೇಡಿ.
* ಲೇಖನಗಳು ಮಾತ್ರವಿರಲಿ, ಕವನಗಳು ಬೇಡ.
ಈ ವಿಷಯಗಳ ಮೇಲೆಯೂ ನೀವು ಬರೆಯಬಹುದು
1. ನಿಮ್ಮಲ್ಲಿ ಕನ್ನಡ ಭಾಷೆಯ ಬಗ್ಗೆ ಸ್ಫೂರ್ತಿ ತುಂಬಿದವರು ಯಾರು?
2. ಯಾವ ಘಟನೆ ಅಥವಾ ಸಂದರ್ಭ ಅಥವಾ ಕಥೆ ನಿಮ್ಮಲ್ಲಿ ಕನ್ನಡಪ್ರೇಮ ಉಕ್ಕುವಂತೆ ಮಾಡಿತು?
3. ಈ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿಮ್ಮ ಶುಭಸಂಕಲ್ಪವೇನು?
ಶುಭ ಸಂಕಲ್ಪದ ಎಲ್ಲ ಕತೆಗಳು ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
ಪ್ರೀತಿಯಿಂದ,
ಗುಣಮುಖ
ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!











Click it and Unblock the Notifications