• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಬ್ಬನೇ ಕೂತು ಎಣ್ಣೆ ಹಾಕೋವಾಗ ಹೊಳೆದ ಕಥೆ

By * ಗುರುಪ್ರಸಾದ್, ಬೆಂಗಳೂರು
|

ಅವನಿಗೆ ಮೂವತ್ನಾಲ್ಕು ವರ್ಷ. ಮದುವೆಯಾಗಿ ಎಂಟು ವರ್ಷ ಆಗಿದೆ. ಒಂದು ಮಗುವೂ ಇದೆ. ದೊಡ್ಡ ಕೆಲಸ.. ಅವನ ಡ್ರೈವರ್‌ಗೇ ತಿಂಗಳಿಗೆ ಏಳು ಸಾವಿರ ಸಂಬಳ ಅಂದ್ರೆ ಇನ್ನು ನೀವೇ ಲೆಕ್ಕ ಹಾಕಿ. ಅವನ ಹೆಸರು ಹೇಳಲು ಮರೆತೆ.. 'ಜಾಣ', ಎಲ್ಲ ಗಂಡಸರಂತೆ.

***

ಜಾಣ ಒಂದು ದಿನ ಬೆಳಿಗ್ಗೆ ಏಳ್ತಾನೆ. ಎದ್ದು ನೋಡ್ತಾನೆ.. ಮುಖ ಒಣಗಿ ಹೋದ ಬದನೇಕಾಯಿಯಂತಾಗುತ್ತದೆ.. ಅವನು ನೋಡಿದ್ದು ಅವನ ಹೆಂಡತಿಯನ್ನ.. ರಾತ್ರಿ ಮಲಗಿದಾಗ ಕತ್ತಲಿದ್ದುದರಿಂದ ಬಹುಶಃ ಅವಳು ಸುಂದರವಾಗಿ ಗೋಚರಿಸಿರಬೇಕು.. ಅಥವಾ ತನ್ನ ಆ ಹೊತ್ತಿನ ಅವಶ್ಯಕತೆಗೆ ಹಾಗೆ ತನ್ನ ಕಣ್ಣಿಗೆ ಕಂಡಳೇನೋ.. ಈಗ ನೋಡಿದರೆ ಕೆದರಿರೋ ಕೂದಲು.. ಬಾಯಿವಾಸನೆ.. ಗೀಜು.. ಬೆವರು ನಾತ.. ಮುಖ ಸಿಂಡರಿಸಿಕೊಳ್ತಾನೆ ಜಾಣ. ಅವನಿಗೆ ನಗು ಬರುತ್ತದೆ. ಏನಪ್ಪಾ ದೇವರೇ ನಿನ್ನ ಲೀಲೆ.. ಈ ಕೊಳಕಿಯ ಜೊತೆಯಲ್ಲಾ ರಾತ್ರಿ ನಾನು ಮಲಗಿದ್ದು.. ನಿದ್ದೆ ಮಾಡ್ತಿದ್ದಾಗ ವಾಸನೆ ಯಾಕೆ ಗೊತ್ತಾಗಲ್ಲ..? ತನಗೆ ದಿನಂಪ್ರತಿ ಕನಸಿನಲ್ಲಿ ಬೀಳ್ತಿದ್ದ ಛತ್ರದ ಪಕ್ಕದ ಕೊಳೆ ತೊಟ್ಟಿಗೂ ಇವಳ ಗಬ್ಬಿಗೂ ಏನಾದ್ರೂ ಸಂಬಂಧ ಇರಬಹುದಾ..?

***

ಟವಲು ಸುತ್ತಿಕೊಂಡು ರೂಮಿನಿಂದ ಹೊರಬರುತ್ತಿರುವ ಜಾಣ ಕಣ್ಣಿನ ಗೀಜನ್ನು ಬೆರಳುಗಳಲ್ಲಿ ಪುಡಿಮಾಡುತ್ತಾ ಪಕ್ಕದಲ್ಲೇ ಇರೋ ದೇವರ ಕೋಣೆಯನ್ನು ಹಾದು ಹೋಗುವಾಗ ಅವನಿಗೆ ಇವತ್ತು ಏನೋ ತೋಚಿದಂತಾಗಿ ದೇವರ ಕೋಣೆಯ ಮುಂದೆ ಅರೆಕ್ಷಣ ನಿಲ್ತಾನೆ.. ಅಲ್ಲಿಂದಲೇ ರೂಮಿನಲ್ಲಿ ಅಸ್ತವ್ಯಸ್ತವಾಗಿ ಮಲಗಿರೋ ಹೆಂಡತಿಯ ಕಡೆ ಒಮ್ಮೆ ನೋಡಿ ಇನ್ನು ಸಾಧ್ಯವೇ ಇಲ್ಲಾ ಎನ್ನುವಂತೆ ದೇವರ ಕಡೆ ತಿರುಗಿ ಕೈ ಮುಗಿದು ಕೊಂಡು ಪ್ರಾರ್ಥಿಸಲಾರಂಭಿಸುತ್ತಾನೆ.

***

ಅಯ್ಯಾ.. ಭಗವಂತ.. ನಂಗೊಂದು ಸಹಾಯ ಮಾಡ್ತೀಯಾ.. ಮಾಡ್ತೀನಿ ಅಂದ್ರೆ ಹೇಳ್ತೀನಿ.. ದಿನಾ ಒಂದೇ ಮುಖವಾ.. ನನಗೆ ಸಾಕಾಗಿ ಹೋಗಿದೆ.. ದಿನಾ ನಾನು ಕೆಲಸದಿಂದ ಬರುವಷ್ಟರಲ್ಲಿ ನನ್ನ ಹೆಂಡತಿ ಬೇರೆ ಮುಖದಲ್ಲೇ ಇದ್ದರೆ ಹೇಗಿರ್ತಿತ್ತು..? ರಾತ್ರಿ ಮಲಗುವಾಗ ಒಂದು ಮುಖ.. ಬೆಳಿಗ್ಗೆ ಎದ್ದಾಗ ಬೇರೆಯೇ ಮುಖ.. ಡಬಲ್ ಧಮಾಕ.. ಇದೊಂದು ವರ ನನಗೆ ಕೊಡು.. ತುಂಬಾ ದಿನದಿಂದ ಕೇಳಬೇಕು ಅಂತಿದ್ದೆ.. ಇವತ್ತು ಕಾಲ ಕೂಡಿ ಬಂದಿದೆ ಅನ್ಸುತ್ತೆ.. ಯೋಚನೆ ಮಾಡು.. ನಾನು ಸ್ನಾನ ಮುಗಿಸಿ ಬರ್ತೀನಿ.. ಏನಂತೀ..? ಜಾಣ ಸ್ನಾನಕ್ಕೆ ಹೊರಡ್ತಾನೆ. ಮತ್ತೆ ತನ್ನ ರೂಮಿನೆಡೆಗೆ ನೋಡುವ ಧೈರ್ಯವನ್ನೂ ಮಾಡಲ್ಲ..

***

'ಸಾರ್.. ಇವತ್ತು ಮಧ್ಯಾಹ್ನ ಹನ್ನೆರಡಕ್ಕೆ ನಿಮ್ಮ ಮಿಸಸ್ ಅವ್ರು ಬ್ಯೂಟಿ ಪಾರ್ಲರ್‌ಗೆ ಡ್ರಾಪ್ ಮಾಡು ಅಂತಿದ್ರು.. ನಿಮ್ಮ ಪ್ರೋಗ್ರಾಮ್ ಏನು ಸಾರ್...?' ಜಾಣನನ್ನು ಡ್ರೈವರ್ ಕೇಳ್ತಾನೆ.. ಕಾರ್ ಚಲಿಸುತ್ತಿದೆ. ಲ್ಯಾಪ್ ಟಾಪ್‌ನಲ್ಲಿ ಮುಳುಗಿ ಹೋಗಿದ್ದ ಜಾಣ 'ರಾಷ್ಟ್ರಪತಿಗಳ ಜೊತೆ ಮೀಟಿಂಗ್ ಇದ್ರೂ ನಾನು ಆಟೋದಲ್ಲಿ ಹೋಗ್ತೀನಿ, ಮೊದಲು ಅವಳನ್ನ.. ಐ ಮೀನ್ ಮೇಡಂನ ಬ್ಯೂಟಿ ಪಾರ್ಲರ್‌ಗೆ ಕರ್ಕೊಂಡ್ ಹೋಗಿ ಬಿಡು.."

'ಆಯ್ತು ಸಾರ್..'

***

ಜಾಣನಿಗೆ ಅವತ್ತು ಆಫೀಸ್‌ನಲ್ಲಿ ಅಂಥ ತಲೆ ಹೋಗೋ ಕೆಲಸ ಏನೂ ಇರಲಿಲ್ಲ.. ತನ್ನ ಸೆಕ್ರೆಟರಿ ಬಂದು ಬೇಕಾದ ಫೈಲ್ಸ್‌ಗೆ ತನ್ನ ಸಹಿ ತೊಗೊಂಡು ಹೋದ ನಂತರ ಆತ ಯೋಚಿಸಲಾರಂಭಿಸುತ್ತಾನೆ. ಈ ಸೆಕ್ರೆಟರಿ ಎಷ್ಟು ಅದ್ಭುತವಾಗಿದಾಳೆ.. ಇವಳಿಗೆ ಬರ್ತಿರೋ ಸಂಬಳಕ್ಕೆ ನಾಲ್ಕು ಪಟ್ಟು ಸಂಬಳ ಕೊಡ್ತೀನಿ ನನ್ನ ಹೆಂಡತಿ ಕೆಲಸ ಮಾಡು ಅಂದ್ರೆ ಇವಳು ಏನು ಅನ್ನಬಹುದು..? ನಾನು ಯಾವ ಹೊತ್ತಿನಲ್ಲಿ ನಿನ್ನ ನೋಡಿದ್ರೂ ನೀನು ಅದ್ಭುತವಾಗಿ ನನಗೆ ಕಾಣಬೇಕು ಅನ್ನೋ ಶರತ್ತೂ ಹಾಕಬೇಕು.. ಆದ್‌ಹಂಗೆ ಆಗಿಬಿಡಲಿ ಇವತ್ತು ಕೇಳೇ ಬಿಡ್ತೀನಿ.. ಇಂಟರ್‌ಕಾಮನಲ್ಲಿ ಅವಳನ್ನು ಕರೆದೇ ಬಿಡ್ತಾನೆ ಜಾಣ..

***

ಸಾರ್.. ಕರೆದ್ರೀ..?

ನೀನು ಈಗ ಇಲ್ಲಿ ಬರೋ ಮುಂಚೆ ಲಿಪ್‌ಸ್ಟಿಕ್ ಹಾಕ್ಕೊಂಡ್ ಬಂದ್ಯಾ..?

ಹೌದು ಸಾರ್.. ಯಾಕೆ.. ಕೇಳ್ತಿದ್ದೀರಿ..?

ನಾನು ಮಾತಾಡ್ತೀನಿ.. ನೀನು ಬರ್ಕೋತೀ.. ನಿನ್ನ ತುಟಿಗಳಿಗೆ ಹಾಗೆ ನೋಡಿದ್ರೆ ಕೆಲಸವೇ ಇಲ್ಲ.. ಮತ್ಯಾಕೆ.. ಲಿಪ್‌ಸ್ಟಿಕ್..?

ಹಲೋ.. ಹೇಳಿ ಸಾರ್..

ಏನಿಲ್ಲಮ್ಮಾ.. ಅಕೌಂಟ್ ಸೆಕ್ಷನ್‌ಗೆ ಮಾಡೋಕೆ ಹೋದೆ ನಿಂಗೆ ಬಂತಾ..? ಸಾರಿ..

***

'ಊಟ ಬಂತಾ..?' ಬ್ರೇಕ್‌ನಲ್ಲಿ ಹೆಂಡತಿ ಫೋನ್..

'ಬ್ಯೂಟಿ ಪಾರ್ಲರ್‌ಗೆ ಹೋಗಿದ್ಯಾ..?'

'ಇಲ್ಲ.. ಇವತ್ತು ಯಾಕೋ ಹೊಟ್ಟೆ ಸರೀ ಇರ್ಲಿಲ್ಲಾ.. ತುಂಬಾ ಗ್ಯಾಸ್‌ಉ.. ಅದಕ್ಕೆ ಹೋಗ್ಲಿಲ್ಲಾ..'

ನೆನ್ನೆಯ ಕೊಳೆಯ ತೊಟ್ಟಿ ಇವತ್ತು ನಾರಬಹುದೇನೋ.. 'ಅದ್ಭುತ.. ಆರೋಗ್ಯ ಹುಷಾರು.. ಟೇಕ್ ಕೇರ್.. ಓಕೇ.. ಬಾಯ್..'

'ಒಂದ್ನಿಂಷ.. ಬರುವಾಗ ಕ್ರ್ಯಾಕ್ ತೊಗೊಂಡ್ ಬನ್ನಿ.. ಕಾಲು ಒಡೆದು ಸಾಲ್ಟ್ ಪೇಪರ್ ಥರಾ ಆಗಿ ಹೋಗಿದೆ.. ಮರೀಬೇಡೀ..'

'ನಿನ್ನನ್ನು ಮರೆತು ಬಿಟ್ಟೇನು.. ಅದನ್ನ ಮರೀತೀನ್ಯೇ..? ಖಂಡಿತಾಮ್ಮಾ.. ಬಾಯ್..'

***

ಜಾಣನಿಗೆ ಇವತ್ತು ಯಾಕೋ ಕ್ಲಬ್‌ಗೆ ಹೋಗಬೇಕು ಅಂತ ಅನ್ನಿಸ್ತಿಲ್ಲ.. ಸೀದಾ ಮನೆಗೆ ಹೋಗಿ ಬಿಡೋಣಾ ಅಂತ ಅಂದ್ಕೋತಾನೆ. ಹೆಂಡತಿ ನೆನಪಾಗ್ತಾಳೆ. ಒಂದಿಷ್ಟು ಫೈಲ್ಸ್ ತೊಗೊಂಡು ಹೋಗಬೇಕು.. ಅದರಲ್ಲಿ ಮುಳುಗಿ ಹೋದರೆ ಬಚಾವ್.. ಸಾಧ್ಯವಾದರೆ ವೀಡಿಯೋ ಪಾರ್ಲರ್‌ನಲ್ಲಿ ಯಾವುದಾದ್ರೂ ರೊಮ್ಯಾಂಟಿಕ್ ಸಿನಿಮಾ ಇಸ್ಕೋಬೇಕು.. ಮನೇಲೇ ಕೂತು ಎರಡು ಪೆಗ್ ಹಾಕ್ತಾ ಸಿನೆಮಾ ನೋಡಬೇಕು.. ಜಾಣ ಡ್ರೈವರ್‌ಗೆ ಕಾರ್ ತೆಗೆಯಲು ಹೇಳ್ತಾನೆ.

***

ಜಾಣ ಕಾಲಿಂಗ್ ಬೆಲ್ ಒತ್ತುತ್ತಾನೆ.. ಬಾಗಿಲನ್ನು ಹೆಂಡತಿ ತೆಗೆಯುತ್ತಾಳೆ.

ಹೆಂಡತಿ ಥೇಟ್ ಚಿತ್ರನಟಿ ರಮ್ಯನ ಥರಾ ಕಾಣ್ತಿದ್ದಾಳೆ.. ಅವಳು ಹಾಕಿರೋ ಪರ್‌ಫ್ಯೂಮ್ ಅವನನ್ನ ಹುಚ್ಚನನ್ನಾಗಿಸುತ್ತದೆ.. ಆಗ ತಾನೇ ಸ್ನಾನ ಮಾಡಿದ್ದಾಳೆ, ಜಾಣೆ. ಕಾಲಿನಿಂದ ತಲೆಯವರೆಗಿನ ಅಣು ಅಣುವಿನಲ್ಲೂ ಆಹ್ವಾನ ಕೊಡ್ತಿದಾಳೆ..

'ನೀವು ಇವತ್ತು ಕ್ಲಬ್‌ಗೆ ಹೋಗಲ್ಲಾಂತ ನನಗೆ ಗೊತ್ತಿತ್ತು..' ಮಾದಕ ಧ್ವನಿಯಲ್ಲಿ ಹೇಳ್ತಾಳೆ ಜಾಣೆ.

'ಹೇಗೆ.. ಗೊತ್ತಿತ್ತು..?'

ಅವಳ ಮುಖವನ್ನು ಅವನ ಮುಖಕ್ಕೆ ತಂದು ಅವನ ತುಟಿಯನ್ನು ಮುದ್ದಾಗಿ ಕಚ್ಚಿ ..'ಹೀಗೆ..' ಹಾಗೆ ಮುದ್ದಿಸುತ್ತಲೇ ಅವನನ್ನು ಸ್ನಾನದ ಮನೆಗೆ ತಲುಪಿಸುತ್ತಾಳೆ. ಕಣ್ಣಲ್ಲಿ ಬೇಗ ಸ್ನಾನ ಮುಗಿಸಿ ಬಾ, ಸ್ವರ್ಗದ ಅಡ್ರೆಸ್ ಗೊತ್ತಾಗಿದೆ.. ನಿನ್ನ ಕರ್‍ಕೊಂಡು ಹೋಗಿ ಹಾಗೇ ನಾಲ್ಕು ಸುತ್ತು ಹಾಕಿಸಿಕೊಂಡು ಬರ್ತೀನಿ ಅನ್ನೋ ಇನ್ವಿಟೇಷನ್ ಕಾರ್ಡ್ ತಲುಪಿಸುತ್ತಾಳೆ.. ಜಾಣನಿಗೆ ಮಹದಾನಂದ.. ತಾನು ಮುಂದೆ ಮಾಡಬಹುದಾದ ಎಲ್ಲವನ್ನೂ ನೆನೆನೆನೆಸಿ ಕೊಂಡು.. ಕಾಮ ವಾಸ್ತವಕ್ಕಿಂತ ಕಲ್ಪನೆಯಲ್ಲಿ ಹೆಚ್ಚು ಚೆನ್ನಾಗಿರುತ್ತಂತೆ.. ಕಲ್ಪನೆಗೆ ಕಾಲದ ಮಿತಿಯಿಲ್ಲದ ಕಾರಣ..

***

ಜಾಣ ಸ್ನಾನ ಮಾಡ್ತಿದ್ದಾನೆ.. ದೇವರೇ ಬೆಳಿಗ್ಗೆ ಕೇಳಿದ ವರವನ್ನು ಏನು ಅದ್ಭುತವಾಗಿ ಕರುಣಿಸಿದ್ದೀಯಪ್ಪಾ.. ತುಂಬಾ ಥ್ಯಾಂಕ್ಸ್.. ಭಗವಂತಾ.. ನೀನು ಕೊಟ್ಟ ವರವನ್ನು ತುಂಬಾ ಸಮರ್ಥವಾಗಿ ದುಡಿಸಿಕೊಳ್ತೇನೆ.. ನೊ ಟೈಂ ವೇಸ್ಟ್.. ಅಂದ ಹಾಗೆ ಭಗವಂತಾ.. ಒಂದು ಪ್ರಶ್ನೆ.. ನಾಳೆ ನನ್ನ ಹೆಂಡತಿಯ ಮುಖ ಯಾರಂತಿರಬಹುದು.. ಮಾಹಿತಿ ಇಂಟರ್‌ನೆಟ್‌ನಲ್ಲಿ ಸಿಗಬಹುದಾ..? ತುಂಬಾ ವರ್ಷದಿಂದ ಮಾಧುರಿ ದೀಕ್ಷಿತ್ ಕಾಡ್ತಿದ್ದಾಳೆ.. ಅದೊಂದು ವ್ಯವಸ್ಥೆ ಮಾಡು.. ನಿನಗೆ ಪುಣ್ಯ ಬರುತ್ತೆ..

***

ಅವನ ಎಂಟು ವರ್ಷದ ದಾಂಪತ್ಯ ಜೀವನದಲ್ಲಿ ಅವನ ಹೆಂಡತಿ ಅವನಿಗೆ ಅಷ್ಟು ಅದ್ಭುತವಾಗಿ ಸ್ಪಂದಿಸಿರುವುದೇ ಇಲ್ಲ.. ಜಾಣ, ಮ್ಯಾನೇಜರ್ ಆದ ನಂತರ ಓ.ಟಿ ಮಾಡೇ ಇಲ್ಲ.. ಇವತ್ತು ಮಾಡ್ತಾನೆ.. ಅದ್ಭುತವಾಗಿ.. ಓ.ಟಿ. ರಾತ್ರಿಯೆಲ್ಲಾ..!

***

ಕಳೆದ ಹದಿನಾಲ್ಕು ದಿನದಿಂದ ಅವನ ಆನಂದಕ್ಕೆ ಪಾರವೇ ಇಲ್ಲ.. ಹೆಂಡತಿಯಲ್ಲಿ ದಿನವೂ ಬೇರೆ ಬೇರೆ ಮುಖಗಳು.. ಇನ್ನೇನು ಬೇಕು ಗಂಡಸಿಗೆ..? ಇವತ್ತು ಹೆಂಡತಿ ಬೇಗ ಬರುವಂತೆ ಹೇಳಿದ್ದಾಳೆ. ಏನು ಕಾದಿದೆಯೋ..? ಅವಳು ಕಳಿಸಿದ್ದ ಊಟ ಇತ್ತೀಚೆಗೆ ತುಂಬಾ ರುಚಿಸುತ್ತಿದೆ.. ಯಾಕೋ..?

***

ಗಂಡ ಹೆಂಡತಿ ಹೊರಗೆ ಬಂದಿದ್ದಾರೆ.. ಇವನನ್ನು ಒಂದು ಪ್ರಶ್ನೆ ತುಂಬಾ ಕಾಡ್ತಿದೆ.. ತನ್ನ ಹೆಂಡತಿಯ ಮುಖ ಬದಲಾಗುತ್ತಿರುವುದು ತನಗೆ ಮಾತ್ರ ಗೋಚರಿಸುತ್ತಿದೆಯೋ.. ಅಥವಾ ಅದು ಅವಳಿಗೂ ಗೊತ್ತಿದೆಯೋ..? ಬಹುಶಃ ಗೊತ್ತಿರಲಾರದು.. ಗೊತ್ತಾಗಿದ್ದಿದ್ರೆ ಇಷ್ಟು ಹೊತ್ತಿಗೆ ಪ್ರಸ್ತಾಪ ಮಾಡಿರ್‍ತಿದ್ಳು.. ಮಗಳಾದ್ರೂ ಗುರುತಿಸುತ್ತಿದ್ಳಲ್ಲಾ..?

***

ಕಾರ್ ನಿಲ್ಲಿಸಿ ಮುಚ್ಚಿರೋ ಅಂಗಡಿಯ ಮುಂದಿನ ಮೆಟ್ಟಿಲ ಮೇಲೆ ಇಬ್ಬರೂ ಕೂತಿದ್ದಾರೆ.. ಚುರುಮುರಿ ತಿನ್ನುತ್ತಾ..

'ನಾನು ನಿನಗೆ ಒಂದು ಹೇಳಬೇಕು..'

'ಒಂದಲ್ಲಾ.. ಹತ್ತು ಹೇಳಿ.. ಅಂಗಡಿಯೋರು ಬೆಳಿಗ್ಗೆವರ್‍ಗೂ ಬಾಗಿಲೇನೂ ತೆಗೆಯಲ್ಲಾ..'

'ಒಂದಿನ ನಾನು ದೇವರನ್ನ ಕೇಳ್ಕೊಂಡೆ.. ನಂಗೊಂದು ವರ ಬೇಕೂಂತ.. ಅದನ್ನು ಅವನು ಕೊಟ್ಟ.. ಕ್ಯಾನ್ ಯು ಬಿಲೀವ್ ಇಟ್..? ಅದಕ್ಕೆ ನಾನು ಈ ಹದಿನೈದು ದಿನದಿಂದ ಆನಂದವಾಗಿರೋದು..'

ಅವಳು.. 'ಅದಾ.. ನಾನು ಈ ವಿಚಾರ ನಿಮ್ಮ ಹತ್ರ ಮಾತಾಡಬೇಕೂ ಅಂತಿದ್ದೆ.. ಇವತ್ತು ಟೈಂ ಬಂತು.. ನಾನು ಈ ಹದಿನೈದು ದಿನಗಳಿಂದ ತುಂಬಾ ಆನಂದವಾಗಿರೋದಕ್ಕೂ ಅದೇ ಕಾರಣ.. ನೀವು ದಿನಾ ಬೇರೆ ಬೇರೆ ಮುಖದಲ್ಲಿ ಮನೆಗೆ ಬರೋದು.. ಮೊದಲ ದಿನ ನಿಮ್ಮ ಸ್ನೇಹಿತ ಶೇಖರ್ ಥರಾ ಬಂದ್ರಲ್ಲಾ.. ನನ್ನ ಹಳೆಯ ಕನಸು ಅದು.. ಅವನು ಎಷ್ಟು ನೀಟ್ ಆಗಿದ್ದಾನೆ.. ಯಾವಾಗ್ಲೂ ಘಮ್ ಅಂತಿರ್ತಾನೆ.. ಅವನು ಕುಡಿಯಲ್ಲ.. ಮಲಗೋ ಮುಂಚೆ ಹಲ್ಲು ಉಜ್ಜಿ ಮಲಗ್ತಾನೆ.. ಅದಕ್ಕೇ ನಾನು ಅವತ್ತು ಹಾಗೆ ಸ್ಪಂದಿಸಿದ್ದು..

ಮಾರನೆಯ ದಿನ ನಿಮ್ಮ ಸೇಲ್ಸ್ ಟೀಂನ ಸುಧಾಕರನಂತೆ ಬಂದಾಗಲಂತೂ ನನಗೆ ಅಣು ಅಣುವಿನಲ್ಲಿ ಹೂ ಕಂಪನ.. ಇನ್ನೂ ಮದುವೆಯಾಗದ ಹುಡುಗನಲ್ಲಿರಬಹುದಾದ ಎಲ್ಲಾ ಕುತೂಹಲಗಳನ್ನೂ ನೀವು ಅವತ್ತು ಪ್ರದರ್ಶಿಸಿದಿರಿ.. ಥೇಟ್ ಸುಧಾಕರನ ಥರಾ.. ನನಗೆ ಸ್ಪಂದಿಸದೇ ಇರಲು ಆಗುತ್ತ್ಯೇ..? ಒಂದಿನ ಅಂತೂ ನೀವು ನನ್ನನ್ನು ಮುಟ್ಟಲೇ ಇಲ್ಲ.. ಬರೀ ಮಾತಾಡಿದಿರಿ.. ಹಳೆಯ ಘಝಲ್‌ಗಳ ಸಾಲುಗಳನ್ನು ಹಾಡ್ತಾ.. ನಿಮ್ಮ ಸ್ನೇಹಿತ ಅಮರ್ ಥರಾ.. ದಟ್ ವಾಸ್ ದ ಬೆಸ್ಟ್.. ದೂರದಲ್ಲಿದ್ದರೂ ಸುರತಿ ಸಾಧ್ಯ ಅಂತ ಅರ್ಥವಾಗಿದ್ದೇ ಅವತ್ತು.. ಅದು ಬಿಡಿ.. ಮೊನ್ನೆ ಒಂದಿನ ಮಧ್ಯಾಹ್ನ ನಾನು ನಿರೀಕ್ಷಿಸದ ಹೊತ್ತಿನಲ್ಲಿ ನನ್ನನ್ನು ಹಿಂದಿನಿಂದ ಬಂದು ಹಿಡ್ಕೊಂಡು ನನ್ನನ್ನು ಹಿಂಡಿ ಹಿಪ್ಪೆ ಮಾಡಿಬಿಟ್ರಲ್ಲಾ ರಾಕ್ಷಸನ ಥರಾ.. ದಟ್ ವಾಸ್ ದ ಅಲ್ಟಿಮೇಟ್.. ನಿಮ್ಮ ಡ್ರೈವರ್ ಚಂದ್ರನ ಥರಾ.. ಏನು ಸ್ಪೀಡು.. ಏನು ಶಕ್ತಿ.. ವಾಹ್..."

***

ಜಾಣ ದೇವರ ಮುಂದೆ ಕೈ ಮುಗಿದುಕೊಂಡು ನಿಂತಿದ್ದಾನೆ.. ತುಂಬಾ ಗಂಭೀರವಾಗಿ.. ಭಗವಂತಾ.. ನನ್ನ ತಪ್ಪಿನ ಅರಿವಾಗಿದೆ.. ನಾನು ಕೊಟ್ಟಷ್ಟೇ ನನಗೂ ಸಿಗೋದು ಅನ್ನೋ ನೀತಿ.. ನನ್ನಲ್ಲಿನ ತಪ್ಪುಗಳನ್ನು ನಾನು ಗುರುತಿಸದೇ ಅವಳನ್ನು ದೂರುತ್ತಿದ್ದೆ.. ಅದಕ್ಕಾಗಿ ನನ್ನನ್ನು ಕ್ಷಮಿಸು.. ನನ್ನ ಮುಖದಲ್ಲಿ ಯಾರ್‍ಯಾರು ಬಂದು ಹೋಗಿದ್ದಾರೋ.. ಅತಿಥಿಗಳು.. ಭಗವಂತಾ.. ನನಗೆ ಈ ವರ ಬೇಡಾ.. ವಾಪಸ್ ತೊಗೊಂಡು ಬಿಡು.. ಪ್ಲೀಸ್..

***

ದೇವರು ಹಿಂದಿನ ಸಲ ವರ ಕೊಡುವಾಗ ಮಾತಾಡಿರಲಿಲ್ಲ.. ಆದರೆ ಈ ಸಲ ತುಂಬಾ ಸ್ಪಷ್ಟವಾಗಿ ಮಾತಾಡಿದ.. .. 'ಇಲ್ಲ.. ಮಗನೇ.. ನಾನು ಕೊಟ್ಟ ವರ ನಾನು ವಾಪಸ್ ತೊಗೊಳಲ್ಲ.. ಅನುಭವಿಸು..'

***

ಈ ಕಥೆಯನ್ನು ಹೇಳಿದವರಿಗೂ, ಕೇಳಿದವರಿಗೂ, ಓದಿದವರಿಗೂ, ಅರ್ಥೈಸಿಕೊಂಡವರಿಗೂ, ಅಳವಡಿಸಿಕೊಂಡವರಿಗೂ, ಈ ಕಥೆಯನ್ನು ಓದುವಂತೆ ಬೇರೆ ಸ್ನೇಹಿತರಿಗೆ ಹೇಳಿದವರಿಗೂ ಆ ಪ್ರೇಮಮಯಿ ಭಗವಂತ ಸನ್ಮಂಗಳವನ್ನುಂಟುಮಾಡಲಿ..

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
My family Facebook, a Kannada short story by movie director Guruprasad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more