ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡವಿಯ ಹುಡುಗಿ (ಭಾಗ 3)

By Staff
|
Google Oneindia Kannada News

ಅವನತ್ತ ತಿರುಗಿದೆ. ರಸ್ತೆಯ ಮೇಲೆ ದೃಷ್ಟಿ ನೆಟ್ಟಿದ್ದ ಅವನಿಂದ ಗಂಭೀರ ದನಿಯಲ್ಲಿ ಮಾತು ಬಂತು: "ಅಲ್ಲಿ ಅಚಾನಕ್ ಆಗಿ ಕೆಟ್ಟು ನಿಂತ ವಾಹನ ನಿನ್ನದೊಬ್ಬನದೇ ಅಲ್ಲ." ನಾನು ಬೆಚ್ಚಿದೆ. ಮೈ ಸಣ್ಣಗೆ ಕಂಪಿಸಿತು. "ಹಾಗಂದರೆ...?" ಅವನು ಮಾತಾಡಲಿಲ್ಲ. ಕೈ ಒದರಿದ: "ಅಹ್ ಫರ್‌ಗೆಟ್ ಇಟ್." ಅವನ ಮುಖವನ್ನೇ ದಿಟ್ಟಿಸಿದೆ. ಅವನ ತುಟಿಗಳು ಬಿಗಿದುಕೊಂಡಿದ್ದವು. ತಿರುವಿನಲ್ಲಿ ಸರ್ರನೆ ವಾಹನ ಹೊರಳಿಸಿ ನಿಲುಗಡೆಗೆ ತಂದ. ಹೊರಗೆ ಹಾರಿ ಗೇಟ್ ತೆರೆದು ಮತ್ತೆ ಒಳಸೇರಿ ವೀಲ್ ಹಿಡಿದ. ನಾಲ್ಕು ಮಾರು ಮುಂದೆ ಸಾಗಿ ಬ್ರೇಕ್ ಒತ್ತಿದ. "ಇಳಿ." ನನ್ನತ್ತ ನೋಡದೇ ಹೇಳಿದ. ಕೆಳಗಿಳಿದು ಮುಂಭಾಗದಲ್ಲಿ ಹೆಂಚು ಹೊದಿಸಿದ್ದ ಒಂದಂತಸ್ತಿನ ವಿಶಾಲ ಮನೆಯ ಮುಂದೆ ನಿಂತೆ. "ಒಂದು ನಿಮಿಷ ನಿಲ್ಲು" ಎನ್ನುತ್ತಾ ಜೀಪನ್ನು ಮನೆಯ ಹಿಂಭಾಗಕ್ಕೆ ಕೊಂಡೊಯ್ದ.

ಸುತ್ತಲೂ ನೋಟ ಹರಿಸಿದೆ. ಎಡಕ್ಕೆ ನಾವು ಬಂದ ಹಾದಿ ದಟ್ಟ ವೃಕ್ಷಗಳ ಹಿಂದೆ ಮುಚ್ಚಿಹೋಗಿತ್ತು. ಮನೆಯ ಹಿಂದೆ ಇನ್ನೂ ಮೇಲಕ್ಕೆ ಏರಿಹೋಗಿದ್ದ ಗುಡ್ಡ. ಎದುರಿನ ಇಳಿಜಾರು ಕಪ್ಪು ಕಂಬಳಿಯೊಂದನ್ನು ಹಾಸಿದಂತಿತ್ತು. ಬಲಕ್ಕೆ ಕೆಳಗೆ ಗಿಡಮರಗಳ ನಡುವೆ ಅರೆಬರೆ ಇಣುಕುತ್ತಿದ್ದ ಪೇಯಿ ಕುಳಂ. ನಾವು ಕೆರೆಯನ್ನು ಸುತ್ತಿ ಅದರ ಮತ್ತೊಂದು ಪಾರ್ಶ್ವದ ಗುಡ್ಡವನ್ನು ಅರ್ಧ ಏರಿಬಂದಿರುವುದು ಗಮನಕ್ಕೆ ಬಂತು. ಗಡಿಯಾರವನ್ನು ಮುಖದ ಹತ್ತಿರಕ್ಕೆ ತಂದು ಸಮಯ ನೋಡಿದೆ. ಎಂಟೂವರೆಗೆ ಎರಡು ನಿಮಿಷಗಳಿದ್ದವು. ಗಡಿಯಾರದಿಂದ ತಲೆ ಮೇಲೆತ್ತುತ್ತಿದ್ದಂತೆ ಅವನು ಕಾಣಿಸಿಕೊಂಡ. ನೀಳ ಬೀಗದ ಕೈ ಹೂಡಿ ಮುಂಬಾಗಿಲು ತೆರೆದ. ಒಂದು ಕೈ ಒಳತೂರಿ ಸ್ವಿಚ್ ಒತ್ತಿ ಬೆಳಕು ಮೂಡಿಸಿದ. "ಎರಡು ನಿಮಿಷ ಒಳಗೆ ಕೂರು." ಪ್ರತಿಕ್ರಿಯೆಗೂ ಕಾಯದೇ ನೆಲದ ಮೇಲೆ ಟಾರ್ಚ್‌ನ ಬೆಳಕು ಆಡಿಸುತ್ತಾ ಪೇಯಿ ಕುಳಂ ಕಡೆಗಿನ ಇಳಿಜಾರಿನಲ್ಲಿ ಹಿಂತಿರುಗಿ ನೋಡದೇ ಧಾಪುಗಾಲು ಹಾಕಿದ. ಎರಡು ಕ್ಷಣದಲ್ಲಿ ಮರಗಳ ಹಿಂದೆ ಮರೆಯಾಗಿಹೋದ.

ನಾನು ಗರಬಡಿದು ನಿಂತೆ. ಒಳಗೆ ಹೋಗುವುದೇ ಬೇಡವೇ? ಯೋಚಿಸಲು ಸಮಯವೇ ಇರಲಿಲ್ಲ. ತಲೆಯ ಮೇಲೆ ತಣ್ಣನೆಯ ಹನಿಯೊಂದು ಬಿತ್ತು. ಮುಂದಿನ ಕ್ಷಣದಲ್ಲಿ ಹತ್ತು ತಣ್ಣನೆಯ ಸೂಜಿಗಳು. ಮನೆಯೊಳಗೆ ಪ್ರವೇಶಿಸಿದೆ. ಇದೂ ಒಂದು ಅನುಭವ. ಎರಡು ಟ್ಯೂಬ್‌ಲೈಟ್‌ಗಳ ಬೆಳಕಿನಲ್ಲಿ ಮೀಯುತ್ತಿದ್ದ ವಿಶಾಲ ಹಜಾರ. ನೆಲಕ್ಕೆ ಹಾಸಿದ್ದ ಮೆತ್ತನೆಯ ರತ್ನಗಂಬಳಿ, ಮೆತ್ತೆ ಹಾಕಿದ್ದ ಬೆತ್ತದ ಸೋಫಾಗಳು, ಕುರ್ಚಿಗಳು, ಗಾಜಿನ ಹೊದಿಕೆಯ ಬೆತ್ತದ್ದೇ ಟೀಪಾಯ್. ಮುಸುಕು ಹೊದ್ದ ಟೀವಿ, ಮತ್ತೊಂದು ಮೂಲೆಯಲ್ಲಿ ಎತ್ತರಕ್ಕೆ ನಿಂತಿದ್ದ ಸ್ಪೀಕರ್‌ಗಳ ನಡುವೆ ನಾಚಿದಂತೆ ಕುಳಿತಿದ್ದ ಮ್ಯೂಸಿಕ್ ಸಿಸ್ಟಮ್, ಅದರ ಒಂದು ಪಕ್ಕದ ಗಾಜಿನ ಗೋಡೆಯ ಹಿಂದೆ ನೂರುಗಟ್ಟಲೆಯಲ್ಲಿದ್ದ ಸಿಡಿಗಳು, ಕ್ಯಾಸೆಟ್‌ಗಳು... ಒಂದುಗೋಡೆಯ ಮೇಲಿದ್ದ ಎರಡು ಪುಟ್ಟ ಪುಟ್ಟ ತೈಲ ಚಿತ್ರಗಳು... ಬೇರೆಲ್ಲೂ ಕಂಡಿರದಿದ್ದ ಸ್ವಚ್ಛತೆ, ಈಗಷ್ಟೇ ಎಲ್ಲವನ್ನೂ ಜೋಡಿಸಿಟ್ಟಂತಹ ಅಚ್ಚುಕಟ್ಟುತನ. ಇದ್ಯಾವುದೋ ಮಾಯಾಲೋಕವಿರಬೇಕೆನಿಸಿತು.

ಹೊರಗೆ ಮಳೆಯ ರಭಸ ಅಧಿಕವಾಯಿತು. ಹಿಂದೆಯೇ ಹುಯ್ಲಿಡುವ ಗಾಳಿ. ಮೆದುಳಿಗೆ ಸೂತಕದಂತಹ ಮುಸುಕು ಕವಿದುಕೊಳ್ಳುತ್ತಿದೆ ಅನಿಸುತ್ತಿದ್ದಂತೇ ಫಕ್ಕನೆ ದೀಪಗಳು ಆರಿಹೋದವು. ಎಲ್ಲೆಡೆ ಗಾಢಾಂಧಕಾರ. ಬೆಚ್ಚಿ ಮೇಲೆದ್ದು ನಿಂತೆ. ಸಾವರಿಸಿಕೊಂಡು ಮತ್ತೆ ಕುಳಿತೆ. ರೋಸಿನಾ ಏಕಾಏಕಿ ನೆನಪಾದಳು. ನನಗೇ ಧೈರ್ಯ ಹೇಳಿಕೊಳ್ಳುವಂತೆ ಅವಳ ನಂಬರ್ ಒತ್ತಿದೆ. ಮತ್ತೆ ಕಾಲ್ ಫೆಯಿಲ್ಡ್!

ಹ್ಯಾರಿಸ್‌ನ ಸುಳಿವಿಲ್ಲ. ಈ ಮಳೆಯಲ್ಲಿ ಅವನು ಹಿಂತಿರುಗಲಾರ. ಬಡಿದ ಸಿಡಿಲಿಗೆ ಇಡೀ ಮನೆ ಅದುರಿತು. ಒಹ್ ಇದೇನಾಗುತ್ತಿದೆ! ನಾನೆಲ್ಲಿದ್ದೇನೆ?

ಹೆದರಿಕೆ ಹುಟ್ಟಿಸುವಂಥ "ದೆವ್ವದ ಕೊಳ" ಎಂಬ ಹೆಸರಿನ ಕೆರೆ, ಅಲ್ಲಿ ಕೆಟ್ಟು ನಿಂತ ಬೈಕ್, ನನಗೆ ಹೆದರಿ ಓಡಿಹೋದ ಬೈಕ್ ಸವಾರರು, ಸಹಾಯಹಸ್ತ ನೀಡಿ ಇಲ್ಲಿಗೆ ಕರೆತಂದು ಒಂಟಿಯಾಗಿ ಕೂರಿಸಿ ಮಾಯವಾಗಿಹೋದ ವಿದೇಶೀ ಮುದುಕ... ಈ ಸುಡುಗಾಡಿನಲ್ಲಿ ಸುಸಜ್ಜಿತ ವಾಸದ ಮನೆ... ಎಲ್ಲವೂ ಅರ್ಥಕ್ಕೆ ನಿಲುಕದ ಅಸಹಜ ಬಿಡಿಬಿಡಿ ಚಿತ್ರಗಳು. ಇದಾವುದೂ ವಾಸ್ತವವಾಗಿರಲು ಸಾಧ್ಯವಿಲ್ಲ. ಈಗ ನಿಜವಾಗಿಯೂ ನನ್ನೆದೆಯಲ್ಲಿ ಹೆದರಿಕೆ ಮೂಡಿತು. "ಹೀಗೇನು ಮಾಡುವುದು" ಎಂಬ ಪ್ರಶ್ನೆ ಭೂತಾಕಾರವಾಗಿ ಮೇಲೇಳುತ್ತಿದ್ದಂತೇ ಒಳಬಾಗಿಲಲಲ್ಲಿ ಮಸುಕು ಬೆಳಕು ಕಾಣಿಸಿಕೊಂಡಿತು.

ಮನೆಯೊಳಗೆ ಯಾರೋ ಇದ್ದಾರೆ! ನನ್ನ ಕಣ್ಣೆದುರೇ ಹ್ಯಾರಿಸ್ ಬೀಗ ತೆರೆದು ಬೆಳಕು ಮೂಡಿಸುವವರೆಗೆ ಕತ್ತಲಲ್ಲಿ ಮುಳುಗಿದ್ದ ಮನೆಯಲ್ಲಿ...!

ಹಾರತೊಡಗಿದ ಎದೆಯನ್ನು ಒತ್ತಿ ಹಿಡಿದು ಅತ್ತಲೇ ನೋಟ ಕೀಲಿಸಿದೆ. ನಿಧಾನವಾಗಿ ಅಧಿಕಗೊಳ್ಳುತ್ತಿದ್ದ ಬೆಳಕಿನ ಜತೆ ಕಿವಿಗೆ ಸ್ಪಷ್ಟವಾಗಿ ಬಿದ್ದ ಹೆಜ್ಜೆಯ ಸಪ್ಪಳಗಳು. ಮುಂದಿನ ಕ್ಷಣದಲ್ಲಿ ಮೊಂಬತ್ತಿ, ಹಿಂದೆಯೇ ಅನಾವರಣಗೊಂಡ ದೀಪಧಾರಿಣಿ. ದುಂಡನೆಯ ಬಿಳುಪು ಮುಖ. ಸುತ್ತಲಿನ ಕತ್ತಲೆಯೇ ಮೈಗೆ ಮೆತ್ತಿಕೊಂಡಂಥ ಕಪ್ಪು ಗೌನ್‌ನಲ್ಲಿದ್ದ ಮೂವತ್ತರ ಅಸುಪಾಸಿನ ಹೆಂಗಸು. ಬೆಚ್ಚಿ ಗಕ್ಕನೆ ಮೇಲೆದ್ದೆ. ಅವಳು ನನಗಿಂತಲೂ ಅಧಿಕವಾಗಿ ಬೆಚ್ಚಿದಳು! ಗೋಚರವಾಗುವಂತೆ ಕಂಪಿಸಿದ ಅವಳ ದೇಹ. ಮೊಂಬತ್ತಿ ಆರಿಹೋಗುವಷ್ಟು ತೀವ್ರವಾಗಿ ಅಲುಗಿತು.

"ನೀನು... ನೀನು ಯಾರು? ಯಾರು ನೀನು? ಒಳಗೆ ಹೇಗೆ ಬಂದೆ?" ಅತೀವ ಗಾಬರಿಯಲ್ಲಿ ಕೂಗಿದಳು.
ನಾನು ಕಂಗಾಲಾಗಿಹೋದೆ. "ನಾನು... ನಾನು..." ತೊದಲಿದೆ. "ಹ್ಯಾರಿಸ್... ಹ್ಯಾರಿಸ್ ಇಲ್ಲಿ ಕೂರಿಸಿ ಹೋದ."

ಅವಳ ಮುಖ ಬಿಳಿಚಿಕೊಂಡಿತು. ನನ್ನ ಮೇಲೆ ದೃಷ್ಟಿ ನೆಟ್ಟಂತೇ ನಿಧಾನವಾಗಿ ಮುಂದೆ ಬಂದು ಮೊಂಬತ್ತಿಯಿದ್ದ ಕಂಚಿನ ಸ್ಟ್ಯಾಂಡನ್ನು ಟೀಪಾಯ್ ಮೇಲಿಟ್ಟಳು. "ಮತ್ತೊಮ್ಮೆ ಹೇಳು, ಇಲ್ಲಿಗೆ ಹೇಗೆ ಬಂದೆ?" ಕಣ್ಣುಗಳಲ್ಲಿ ಅಗಾಧ ಕೌತುಕ.

ನಾನು ಸಾವರಿಸಿಕೊಂಡಿದ್ದೆ. ನನ್ನ ಬೈಕ್ ಕೆಟ್ಟುಹೋಗಿದ್ದರಿಂದ ಹಿಡಿದು ಹ್ಯಾರಿಸ್ ಇಲ್ಲಿಗೆ ಕರೆತಂದದ್ದರವರೆಗೆ ವಿವರವಾಗಿ ಹೇಳಿದೆ. ಎಲ್ಲವನ್ನೂ ಹೇಳಿಬಿಡಬೇಕು, ಅದೊಂದೇ ಈ ನಾಟಕೀಯ ಪ್ರಸಂಗದಿಂದ ಹೊರಬರಲು ನನಗಿರುವ ದಾರಿ ಎಂದು ನನಗನಿಸಿತ್ತು. ಅವಳು ರೆಪ್ಪೆ ಅಲುಗಿಸದೇ ಕೇಳಿದಳು. ನನ್ನ ಮಾತು ಮುಗಿಯುವ ಹೊತ್ತಿಗೆ ಅವಳ ಹಣೆಯ ಮೇಲೆ ಈ ತಂಪು ಹವೆಯಲ್ಲೂ ಬೆವರಹನಿಗಳು ಕಾಣಿಸಿಕೊಂಡಿದ್ದವು. ಹತ್ತಿರದ ಸೋಫಾದಲ್ಲಿ ಕುಸಿದ ಅವಳು ಮೌನವಾಗಿ ನನ್ನನ್ನೇ ನೋಡತೊಡಗಿದಳು. ಹೊರಗೆ ಮಳೆಯ ರಭಸ ಕಡಿಮೆಯಾಗಿತ್ತು.

"ಹ್ಯಾರಿಸ್ ಬಂದ ತಕ್ಷಣ ಹೊರಟುಬಿಡ್ತೀನಿ. ಮಳೆ ನಿಲ್ಲದಿದ್ದರೂ ಪರವಾಗಿಲ್ಲ." ನನಗೇ ಹೇಳಿಕೊಳ್ಳುವಂತೆ ಹೇಳಿದೆ. ಅವಳು ನಿಟ್ಟುಸಿರಿಟ್ಟಳು.
"ಹ್ಯಾರಿಸ್ ಬರೋದಿಲ್ಲ." ಪಿಸುಗಿದಳು.
"ಅಂದ್ರೆ...?" ನಾನು ಹೆಚ್ಚುಕಡಿಮೆ ಚೀರಿದೆ.
"ಹ್ಯಾರಿಸ್ ಸತ್ತುಹೋಗಿದ್ದಾನೆ. ಅವನ ಹೆಂಡತಿಯೂ ಸಹಾ. ಇಂದಿಗೆ ಸರಿಯಾಗಿ ಒಂದು ವರ್ಷ." ಅವಳಿಂದ ಅದೇ ಪಿಸುದನಿಯಲ್ಲಿ ಬಿಡಿಬಿಡಿ ಪದಗಳು ಹೊರಬಂದವು.

ನಾನು ಗರಬಡಿದು ಕುಸಿದೆ. ಅವಳು ಕಣ್ಣುಗಳಿಗೆ ಕರವಸ್ತ್ರ ಒತ್ತಿದಳು. "ನಾನು ಮಾರ್ಥಾ, ಮಾರ್ಥಾ ವಿಲ್ಸನ್. ಹ್ಯಾರಿಸ್ ಮತ್ತು ಸೋಫಿಯಾರ ಮಗಳು... ಇಂದಿಗೆ ಸರಿಯಾಗಿ ಒಂದು ವರ್ಷ... ಡ್ಯಾಡ್‌ದು ಬರ್ತ್‌ಡೇ ಅವತ್ತು. ನಾನು ಸಿಡ್ನಿಯಿಂದ ಬಂದಿದ್ದೆ. ಹೀಗೆ ಮಳೆಯ ರಾತ್ರಿ ಅದು. ಮಹಾಬಲಿಪುರಂನಲ್ಲಿ ಡಿನ್ನರ್ ಮುಗಿಸಿ ಬರ್ತಾ ಇದ್ವಿ. ಅದೇ ಆ ಪೇಯಿ ಕುಳಂ..." ನಿಲ್ಲಿಸಿದಳು. ನಾನು ಬೆರಗುಹತ್ತಿ ಮುಖವನ್ನು ಮುಂದೆ ತರುತ್ತಿದ್ದಂತೇ ಮುಂದುವರೆಸಿದಳು: "ಡ್ರೈವ್ ಮಾಡ್ತಾ ಇದ್ದದ್ದು ನಾನೇ. ತಿರುವಿನಲ್ಲಿ ನಿಯಂತ್ರಣ ಕಳಕೊಂಡು ಜೀಪ್ ಕೆರೆಗೆ ಉರುಳಿಬಿತ್ತು. ನಾನು ಹೊರಗೆ ಹಾರಿ ಬಚಾವಾದೆ. ಆದ್ರೆ... ಮಮ್ ಅಂಡ್ ಡ್ಯಾಡ್... ಮುಳುಗಿಹೋದ್ರು... ಹೋಗಿಬಿಟ್ರು."

ದುರಂತಕಥೆಯೊಂದರ ಅನಾವರಣ ನನ್ನನ್ನು ಗಾಢವಾಗಿ ಅಲುಗಿಸಿಬಿಟ್ಟಿತು. ಮಾತು ಹೊರಡಲಿಲ್ಲ. ನಿಮಿಷದ ನಂತರ ಕಷ್ಟಪಟ್ಟು "ಐ ಆಮ್ ಸಾರೀ" ಎಂಬ ಮೂರು ಪದಗಳನ್ನು ಹೊರಡಿಸಿದೆ. ಅವಳು ತುಟಿ ತೆರೆದಳು. ಯಾರಿಗಾದರೂ ಹೇಳಿಕೊಳ್ಳಬೇಕೆಂಬ ತುಡಿತವೋ, ಹೇಳತೊಡಗಿದಳು. ಹತ್ತು - ಹನ್ನೆರಡು ನಿಮಿಷಗಳವರೆಗೆ ಅವ್ಯಾಹತವಾಗಿ ಹರಿದ ಅವಳ ಮಾತುಗಳನ್ನು ನಾನು ಕಣ್ಣವೆ ಅಲುಗಿಸದೇ ಕೇಳಿದೆ. ಹ್ಯಾರಿಸ್ ಮೂಲತಃ ಸ್ಕಾಟ್‌ಲೆಂಡಿನವ. ಹೆಂಡತಿ ಸೋಫಿಯಾ ಆಸ್ಟ್ರೇಲಿಯಾದವಳು. ಮದುವೆಯ ನಂತರ ಹ್ಯಾರಿಸ್ ಆಸ್ಟ್ರೇಲಿಯಾಗೇ ವಲಸೆ ಹೋದ. ದಂಪತಿಗೆ ಇಬ್ಬರು ಮಕ್ಕಳು. ಮಗ ಜೋನಥನ್, ಮಗಳು ಮಾರ್ಥಾ. ಹದಿನೈದು ವರ್ಷಗಳ ಹಿಂದೆ ಹ್ಯಾರಿಸ್ ಹೆಂಡತಿ ಜೊತೆ ಇಂಡಿಯಾಗೆ ಪ್ರವಾಸ ಬಂದ. ಈ ದೇಶ ಅವರಿಬ್ಬರಿಗೂ ತುಂಬಾ ಇಷ್ಟವಾಗಿಬಿಟ್ಟಿತು. ಇಲ್ಲೇ ಸೆಟ್ಲ್ ಆಗೋ ನಿರ್ಧಾರ ಮಾಡಿದ್ರು. ಬ್ರಿಟಿಷ್ ಪಾದ್ರಿಯೊಬ್ಬನಿಗೆ ಸೇರಿದ್ದ ಈ ಮನೆ ಕೊಂಡು ಇಲ್ಲಿ ನೆಲೆಸಿದರು. ಸುತ್ತಲ ಹಳ್ಳಿಗರ ಪ್ರೀತಿವಿಶ್ವಾಸ ಗಳಿಸಿದರು. ಸೋಫಿಯಾ ಹಳ್ಳಿಗರಿಗೆ ಪಾಠ ಹೇಳುವುದಲ್ಲದೇ ಅವರ ಸಣ್ಣಪುಟ್ಟ ಕಾಯಿಲೆಗಳಿಗೆ ಮದ್ದು ಮಾಡುತ್ತಿದ್ದಳು. ಅವಳಿಗೆ ಅದೊಂದು ಹುಚ್ಚೇ ಆಗಿಬಿಟ್ಟಿತು. ಹ್ಯಾರಿಸ್ ಚಿತ್ರವಿಚಿತ್ರ ಗಿಡಗಂಟೆಗಳನ್ನು ಬೆಳೆಸಿಕೊಂಡು ಅವುಗಳ ಆರೈಕೆಯಲ್ಲಿ ಖುಷಿಪಡತೊಡಗಿದ. ಪ್ರತೀ ಸಂಜೆ ಎಂಟೂವರೆಗೆ ಗುಡ್ಡದ ಕೆಳಗಿನ ಹಳ್ಳಿಗೆ ಹೋಗಿ ಹೆಂಡತಿಯನ್ನು ಕರೆದುಕೊಂಡು ಬರುವುದು ಅವನ ದಿನಚರಿಯ ಒಂದು ಭಾಗ. ವಿಲ್ಸನ್ ದಂಪತಿ ಇಲ್ಲಿ ಬದುಕಿದ ಬಗೆ ಇದು. ಮಗ - ಮಗಳು ಸಿಡ್ನಿಯಲ್ಲೇ ಉಳಿದರು. ಜೋನಥನ್ ಈಗ ಅಲ್ಲಿನ ಯೂನಿವರ್ಸಿಟಿಯಲ್ಲಿ ತತ್ವಶಾಸ್ತ್ರ ಬೋಧಿಸುತ್ತಿದ್ದಾನೆ. ಅವನಿಗೆ ಮದುವೆಯಾಗಿದೆ. ನನ್ನೆದುರು ಕೂತ ಮಗಳು ಮಾರ್ಥ ಒಬ್ಬಳು ನನ್. ನ್ಯೂಗಿನಿ, ಸೋಲೋಮನ್ ಐಲ್ಯಾಂಡ್ಸ್, ಸಮೋವಾ ಮುಂತಾದ ಫೆಸಿಫಿಕ್ ದ್ವೀಪಗಳಲ್ಲಿ ಮತಪ್ರಚಾರದ ಸುತ್ತಾಟ ಅವಳಿಗೆ ಇಷ್ಟವಾದ ಕೆಲಸ. ತಾನು ಎಲ್ಲಿದ್ದರೂ ಸರಿ ಪ್ರತಿವರ್ಷ ತಂದೆತಾಯಿಯರ ಹುಟ್ಟಿದ ಹಬ್ಬಗಳಂದು ತಪ್ಪದೇ ಇಲ್ಲಿಗೆ ಬರುತ್ತಾಳೆ. ಕಳೆದ ವರ್ಷವೂ ಬಂದಿದ್ದಳು. ದುರಂತ ಘಟಿಸಿದ್ದು ಆಗಲೇ. ತಂದೆಯ ಹುಟ್ಟಿದ ಹಬ್ಬ ಮತ್ತೆ ಬಂದಿದೆ. ಆದರೆ ತಂದೆ ಈಗ ಇಲ್ಲ. ತಾಯಿ ಸಹಾ. ಆದರೂ ಮಾರ್ಥಾಳಿಗೆ ಇಲ್ಲಿನ ಸೆಳೆತ ತಪ್ಪಲಿಲ್ಲ. ಇಂದು ಬೆಳಿಗ್ಗೆಯಷ್ಟೇ ಇಲ್ಲಿಗೆ ಬಂದಿದ್ದಾಳೆ...

ಕೇಳಿದ ವಿವರಗಳನ್ನು ಅರಗಿಸಿಕೊಳ್ಳುತ್ತಿದ್ದಂತೇ ಅವಳಿಂದ ಮಾತು ಬಂತು: "ನಾನು ಒಂಟಿಯಾಗಿ ಕೂತು ಅಳ್ತಾ ಇದ್ದೆ. ನನ್ನ ದುಃಖ ಹಂಚಿಕೊಳ್ಳೋದಿಕ್ಕೆ ನೀನು ಬಂದಿದ್ದೀಯ."

ವಿಷಾದದ ನಗೆಯೊಂದು ನನ್ನಿಂದ ಹೊರಡುತ್ತಿದ್ದಂತೆ ಅವಳು ಕಣ್ಣುಗಳನ್ನು ಒರೆಸಿಕೊಂಡು ತಲೆಯೆತ್ತಿದಳು: "ಈ ಮನೆಯನ್ನ ಮಾರಿಬಿಡಬೇಕು ಅನ್ನೋ ಯೋಚನೆ ನನಗೆ ಬಂದದ್ದುಂಟು. ಆದರೆ ಕೊಂಡುಕೊಳ್ಳೋಕೆ ಯಾರೂ ಮುಂದೆ ಬರ್ತಾ ಇಲ್ಲ. ಇಲ್ಲಿ ಅಸಹಜ ಘಟನೆಗಳು ನಡೀತಿವೆ ಅಂತ ಹೇಳಿ ಹಳ್ಳಿಯ ಜನರೂ ಇತ್ತ ಬರೋದಿಲ್ಲ. ಮನೆಯನ್ನ ಸ್ವಚ್ಛವಾಗಿಡೋಕೆ, ತೋಟವನ್ನ ನೋಡಿಕೊಳ್ಳೋಕೆ ಒಂದು ಕುಟುಂಬವನ್ನ ಹೆಚ್ಚು ಹಣದಾಸೆ ತೋರಿಸಿ ಕಷ್ಟಪಟ್ಟು ಒಪ್ಪಿಸಿದ್ದೀನಿ. ಆ ಜನರ ಓಡಾಟ ಇಲ್ಲಿ ಹಗಲಲ್ಲಿ ಮಾತ್ರ. ಕತ್ತಲಾದ ಮೇಲೆ ಒಂದು ನರಪಿಳ್ಳೆಯೂ ಇತ್ತ ಸುಳಿಯೋದಿಲ್ಲ. ನಂಗೆ ಒಮ್ಮೊಮ್ಮೆ ಅನ್ಸುತ್ತೆ, ಮಮ್ ಹಾಗೂ ಡ್ಯಾಡ್‌ಗೆ ಇಷ್ಟವಾದ ಈ ಮನೆಯಲ್ಲೇ ಇದ್ದುಬಿಡೋಣ ಅಂತ." ಕಣ್ಣುಗಳನ್ನು ಅರೆಮುಚ್ಚಿದಳು. ತಗ್ಗಿದ ದನಿಯಲ್ಲಿ ಮಾತು ಸಾಗಿತ್ತು: "ಅವರಿಬ್ರೂ ಮಾಡ್ತಾ ಇದ್ದ ಕೆಲಸಾನ್ನ ಮುಂದುವರಿಸ್ಕೊಂಡು, ಇಲ್ಲೇ, ಈ ಕಾಡುಜನರ ನಡುವೆ ಈ ಕಾಡಿನ ಮಗಳಾಗಿ ಇದ್ದುಬಿಡೋಣವಾ ಅಂತ."

"ಕಾಡಿನ ಮಗಳು! ಅಡವಿಯ ಹುಡುಗಿ!" ಸಣ್ಣಗೆ ನಕ್ಕೆ. ಅವಳು ನನ್ನತ್ತ ತಿರುಗಿದಳು. "ಯೆಸ್, ಅದೇ. ಅಡವಿಯ ಹುಡುಗಿ." ಕನಸಿನಲ್ಲೆಂಬಂತೆ ಹೇಳಿಕೊಂಡಳು. ನಾನು ಪ್ರತಿಕ್ರಿಯಿಸುವ ಮೊದಲೇ ಛಕ್ಕನೆ ದನಿಯೆತ್ತರಿಸಿ ಪ್ರಶ್ನಿಸಿದಳು: "ನಿನ್ನ ಯೋಚನೆ ಏನು? ನೀನು ಈಗಲೇ ನಿನ್ನ ದಾರಿ ಹಿಡಿದು ಹೋಗೋದಿಕ್ಕೆ ಬಯಸ್ತೀಯೇನು? ಅಥವಾ ಈ ರಾತ್ರಿ ಇಲ್ಲೇ ಉಳಿಯೋದಿಕ್ಕೆ ನೀನು ಇಷ್ಟಪಟ್ರೆ ಈ ಅಡವಿಯ ಹುಡುಗಿಯ ಅಭ್ಯಂತರ ಇಲ್ಲ." ಸಣ್ಣಗೆ ನಕ್ಕು ಮುಂದುವರೆಸಿದಳು: "ಬೆಳಿಗ್ಗೆ ತಿರುವಡಿಸೂಲಂಗೆ ನಿನ್ನ ಜತೆ ನಾನೂ ನಡೆದು ಬರ್ತೀನಿ. ನನಗೆ ಒಂದು ಬದಲಾವಣೆ ಅದು."

ಕಣ್ಣುಗಳನ್ನು ಅರೆಮುಚ್ಚಿ ಯೋಚಿಸಿದೆ. ಮಳೆ ನಿಂತಿತ್ತು. ನಿರ್ಧಾರಕ್ಕೆ ಬಂದೆ.

"ದಯವಿಟ್ಟು ತಪ್ಪು ತಿಳೀಬೇಡ ಮಾರ್ಥಾ. ನಾನು ಎಷ್ಟೇ ಆದ್ರೂ ಒಬ್ಬ ಅಪರಿಚಿತ. ಇದು ನಿನ್ನ ವೈಯುಕ್ತಿಕ ಕ್ಷಣ. ಇಲ್ಲಿ ನನ್ನ ಅತಿಕ್ರಮಣ ಸೌಜನ್ಯ ಅನ್ನಿಸೋದಿಲ್ಲ. ನಾನು ಈಗ ಹೊರಡ್ತೀನಿ. ನನಗಾಗಿ ಅಲ್ಲಿ ಜೇಸುರತ್ನಂ ಕಾಯ್ತಿದಾನೆ. ಮಳೆ ನಿಂತಿದೆ. ನನ್ನತ್ರ ಟಾರ್ಚ್ ಇದೆ."

ಅವಳು ನಿಟ್ಟುಸಿರಿಟ್ಟಳು. "ಸರಿ, ನಿನ್ನಿಷ್ಟ." ನಿಧಾನವಾಗಿ ಮೇಲೆದ್ದಳು. "ಒಂದು ನಿಮಿಷ ಕೂರು, ನಿನಗೆ ಟೀ ತರ್ತೀನಿ." ಒಳಕೋಣೆಯ ಬಾಗಿಲ ಕತ್ತಲಲ್ಲಿ ಕರಗಿಹೋದಳು. ಬೊಗಸೆಯಲ್ಲಿ ಮುಖವಿಟ್ಟು ಯೋಚನೆಗೆ ಬಿದ್ದೆ. ಇದೆಲ್ಲವೂ ವಾಸ್ತವವೇ? ಅಥವಾ ಕನಸೇ? ನನ್ನನ್ನಿಲ್ಲಿ ಕರೆತಂದದ್ದು ಹ್ಯಾರಿಸ್‌ನ ಪ್ರೇತವೇ? ಯಾಕಾಗಿ? ಹೊರಬಾಗಿಲಲ್ಲಿ ಸದ್ದಾಯಿತು. ತಲೆಯೆತ್ತಿದೆ. ಮಾರ್ಥಾ ಇಟ್ಟುಹೋಗಿದ್ದ ಮೊಂಬತ್ತಿಯ ತಣ್ಣನೆಯ ಬೆಳಕಿನಲ್ಲಿ ಕಂಡದ್ದು...! ರಕ್ತ ಹೆಪ್ಪುಗಟ್ಟಿಸುವ ನೋಟ! ನಖಶಿಖಾಂತ ಬೆವತುಹೋದೆ.

ಅಲ್ಲಿ... ಒದ್ದೆಯಾಗಿಹೋಗಿದ್ದ ಬಟ್ಟೆಗಳನ್ನು ಒದರಿಕೊಳ್ಳುತ್ತಾ ನಿಂತಿದ್ದ... ಹ್ಯಾರಿಸ್! ಅದೇ ಬಿಳಿಯುಡುಗೆ. ಪಕ್ಕದಲ್ಲಿ ಬಿಳಿಯದೇ ಉಡುಪಿನಲ್ಲಿ ಒಬ್ಬಳು ವಯಸ್ಕ ಹೆಂಗಸು. ಚೀರಲೆಂದು ನಾನು ಬಾಯಿ ತೆರೆಯುತ್ತಿದ್ದಂತೇ ಅವನು ನಕ್ಕ. "ಸಾರೀ ಮ್ಯಾನ್. ಈ ಮಳೆಯಿಂದಾಗಿ ನಿನ್ನನ್ನ ಹೆಚ್ಚು ಹೊತ್ತು ಕಾಯಿಸಬೇಕಾಯ್ತು." ಪಕ್ಕದಲ್ಲಿದ್ದ ಹೆಂಗಸಿನತ್ತ ತಿರುಗಿದ: "ನೋಡು ಸೋಫಿ, ಇವನೇ ನಾನು ಹೇಳಿದ ಆ ಬಡಪಾಯಿ."

ಹೆಂಗಸು ನನ್ನತ್ತ ನೋಡಿ ಮುಗುಳ್ನಕ್ಕಳು. ನಾನು ಹತಾಷೆಯಲ್ಲಿ ಒಳಕೋಣೆಯ ಬಾಗಿಲತ್ತ ತಿರುಗಿದೆ. ಮತ್ತೆ ಇತ್ತ ತಿರುಗುವಷ್ಟರಲ್ಲಿ ಹ್ಯಾರಿಸ್ ನನ್ನಿಂದ ಕೇವಲ ಎರಡು ಅಡಿಗಳಷ್ಟು ಹತ್ತಿರದಲ್ಲಿದ್ದ. ಅವನ ಮುಖ ಬೆಳ್ಳಗೆ ಬಿಳಿಚಿಹೋಗಿತ್ತು.

"ಏನಾಯ್ತು? ಯಾಕಿಷ್ಟು ಹೆದರಿದ್ದೀಯ?" ಅವನ ದನಿಯಲ್ಲಿ ಗಾಬರಿಯಿತ್ತು. ನನ್ನ ಭುಜದತ್ತ ಕೈಚಾಚಿದ. ನಾನು ಅತೀವ ಭೀತಿಯಲ್ಲಿ "ಓಹ್ ನೋ" ಎಂದು ಚೀರಿ ಎರಡು ಹೆಜ್ಜೆ ಹಿಂದೆ ಹಾರಿದೆ. "ಮಾರ್ಥಾ, ಪ್ಲೀಸ್ ಬೇಗ ಬಾ." ಭೀತಿಯಲ್ಲಿ ಅರಚಿದೆ.

ನನ್ನತ್ತ ಚಾಚಿದ್ದ ಅವನ ಕೈ ಹಾಗೇ ಗಾಳಿಯಲ್ಲಿ ನಿಶ್ಚಲವಾಗಿ ನಿಂತುಬಿಟ್ಟಿತು. ಬಾಗಿಲಲ್ಲೇ ನಿಂತಿದ್ದ ಅವನ ಹೆಂಡತಿ ಧಾಪುಗಾಲಿಟ್ಟು ನನ್ನತ್ತ ಓಡಿಬಂದಳು. ಅವಳ ಕಣ್ಣುಗಳು ಅಗಲವಾಗಿ ತೆರೆದುಕೊಂಡಿದ್ದವು. ಮುಖ ಶವದಂತೆ ಬಿಳಿಚಿಹೋಗಿತ್ತು. "ಮಾರ್ಥಾ! ಮಾರ್ಥಾ! ಎಲ್ಲಿದ್ದಾಳೆ ಅವಳು?" ಆತುರಾತುರವಾಗಿ ಪ್ರಶ್ನಿಸಿದಳು.

ನನ್ನ ಕೈ ಅಯಾಚಿತವಾಗಿ ಒಳಕೋಣೆಯ ಬಾಗಿಲತ್ತ ಚಾಚಿತು. "ಒಳಗೆ ಹೋದ್ಲು... ಈಗ." ನನ್ನ ದನಿ ನನಗೇ ಅಪರಿಚಿತವಾಗಿತ್ತು. ಇಬ್ಬರೂ ಮುಖ ಮುಖ ನೋಡಿಕೊಂಡರು. "ಸ್ಟ್ರೇಂಜ್!" ಹ್ಯಾರಿಸ್ ಉದ್ಗರಿಸಿದ. "ಮಾರ್ಥಾ ಸತ್ತುಹೋದಳು, ಇಂದಿಗೆ ಸರಿಯಾಗಿ ಒಂದು ವರ್ಷ. ನನ್ನ ಬರ್ತ್‌ಡೇ ಆವತ್ತು. ಆ ದಿನವೇ ನನ್ನ ಮಗಳನ್ನ ಕಳಕೊಂಡೆ."

ನಾನು ಶಿಲೆಯಾಗಿ ನಿಂತೆ. ಅವನ ಮಾತು ಮುಂದುವರೆದಿತ್ತು: "ನನ್ನ ಬರ್ತ್‌ಡೇಗಾಗಿ ಸಿಡ್ನಿಯಿಂದ ಬಂದಿದ್ಲು ಅವಳು. ಮಹಾಬಲಿಪುರಂನಲ್ಲಿ ಡಿನ್ನರ್ ಮುಗಿಸಿ ಬರ್ತಾ ಇದ್ವಿ. ಆ ದಿನವೂ ಇಂಥದೇ ಮಳೆ. ಡ್ರೈವ್ ಮಾಡ್ತಾ ಇದ್ದದ್ದು ಅವಳೇ. ತಿರುವಿನಲ್ಲಿ ನಿಯಂತ್ರಣ ಕಳಕೊಂಡು ಜೀಪ್ ಕೆರೆಗೆ ಉರುಳಿಬಿತ್ತು. ಮುಂಭಾಗ ಪೂರ್ತಿ ನೀರಿನಲ್ಲಿ. ಹಿಂದಿನ ಸೀಟ್‌ನಲ್ಲಿದ್ದ ನಾವಿಬ್ರೂ ಪ್ರಯಾಸದಿಂದ ಹೊರಗೆ ಬಂದ್ವಿ. ಆದ್ರೆ... ಮಾರ್ಥಾ... ಹೋಗಿಬಿಟ್ಲು. ಅವಳಿದ್ದ ಜೀಪಿನ ಮುಂಭಾಗ ನೀರಲ್ಲಿ ಮುಳುಗಿಹೋಗಿತ್ತು. ಅವಳಿಗೆ ಏಟು ಬಿದ್ದಿತ್ತು. ಜತೆಗೇ ಸೀಟಿನಲ್ಲಿ ಸಿಕ್ಕಿಕೊಂಡಿದ್ಲು. ಹೊರಗೆ ಬರೋದಿಕ್ಕೆ ಅವಳಿಗೆ..."

ಅವನು ಹೇಳುತ್ತಲೇ ಇದ್ದ. ನಾನು ಕಾಲುಗಳ ಸ್ವಾಧೀನ ತಪ್ಪಿ ಕೆಳಗೆ ಕುಸಿದೆ.

<strong>« ಕಥೆಯ ಮೊದಲ ಭಾಗ</strong>« ಕಥೆಯ ಮೊದಲ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X