ಅಡವಿಯ ಹುಡುಗಿ (ಭಾಗ 2)
ಏರುತಿರುವಿನಲ್ಲಿ ನಿಧಾನವಾಗಿ ಮುಂಬರಿದ ವಾಹನ ಅರ್ಧದಷ್ಟಕ್ಕೆ ಸಾಗಿ "ಗಡ್‌ಗಡ್ ಗಡರ್ರ್" ಎನ್ನುತ್ತಾ ನಿಂತುಬಿಟ್ಟಿತು. ಸ್ತಬ್ಧಗೊಂಡ ಎಂಜಿನ್ ಏನು ಮಾಡಿದರೂ ಮತ್ತೆ ಗಂಟಲು ತೆರೆಯಲಿಲ್ಲ. ಪೆಟ್ರೋಲ್ ಖಾಲಿಯಾಗಿರುವುದು ಸಾಧ್ಯವಿಲ್ಲ. ಪಾಂಡಿಚೆರಿ ಬಿಡುವಾಗ ಟ್ಯಾಂಕನ್ನು ಭರ್ತಿ ಮಾಡಿಸಿದ್ದೆ. ಆದರೂ ಒಮ್ಮೆ ನೋಡೋಣವೆಂದುಕೊಂಡು ಮುಚ್ಚಳ ತೆರೆದು ಟಾರ್ಚ್ ಬೆಳಕು ಹಾಯಿಸಿದೆ. ಟ್ಯಾಂಕ್ ಮುಕ್ಕಾಲು ಭಾಗ ತುಂಬಿತ್ತು. ಮುಂದಿನ ಹದಿನೈದು - ಇಪ್ಪತ್ತು ನಿಮಿಷಗಳಲ್ಲಿ ನನಗೆ ಗೊತ್ತಿದ್ದ ಕಸರತ್ತನ್ನೆಲ್ಲಾ ಮಾಡಿದೆ. ಗಾಡಿ ಜಪ್ಪಯ್ಯ ಅನ್ನಲಿಲ್ಲ. ತೊಂದರೆಯೇನೆಂದು ನನಗೆ ಅರ್ಥವಾಗಲೂ ಇಲ್ಲ. ಕೈಸೋತು ನಿಂತೆ. ಅಪರಿಚಿತ ಸ್ಥಳ, ಕತ್ತಲ ರಾತ್ರಿ, ಒಂದು ನರಪಿಳ್ಳೆಯ ಸುಳಿವೂ ಇಲ್ಲ, ಕೈಕೊಟ್ಟ ವಾಹನದ ಮುಂದೆ ನಿಸ್ಸಹಾಯಕನಾಗಿ ನಿಂತ ನಾನು. ಗಾಬರಿಗೊಂಡು ಸುತ್ತಲೂ ನೋಟ ಹೊರಳಾಡಿಸಿದೆ.
ಎಡಕ್ಕೆ ವಿಶಾಲ ಕೆರೆ. ಸುಂಯುಗುಡುತ್ತಿದ್ದ ನಸುಗಾಳಿಗೆ ಮೇಲೆದ್ದು ಮೆಲ್ಲಮೆಲ್ಲಗೆ ದಡದತ್ತ ಸಾಗಿಬರುತ್ತಿದ್ದ ಪುಟ್ಟಪುಟ್ಟ ಅಲೆಗಳು. ಕೆರೆಯಾಚೆ ಕಪ್ಪು ದೈತ್ಯನಂತೆ ನಿಂತಿದ್ದ ಕರೀಗುಡ್ಡ. ಬಲಕ್ಕೆ ಮೇಲುಮೇಲಕ್ಕೆ ಏರಿಹೋಗಿದ್ದ ಬೆಟ್ಟ. ಎಲ್ಲವೂ ನಿರ್ಜನ, ನಿಶ್ಚಲ. ಜೀರುಂಡೆಗಳ "ಝೀ"ಕಾರದ ಹೊರತಾಗಿ ಎಲ್ಲವೂ ನಿಶ್ಶಬ್ಧ. ಹಿಂದಿನಿಂದ ಯಾವುದೋ ವಾಹನದ ಲಘು ಮೊರೆತ ಕೇಳಿಬಂತು. ಛಕ್ಕನೆ ಅತ್ತ ತಿರುಗಿದೆ. ತಿರುವಿನಲ್ಲಿ ಒಮ್ಮೆ ಹರಡಿಕೊಳ್ಳುತ್ತಾ ಒಮ್ಮೆ ಮಾಯವಾಗುತ್ತಿದ್ದ ಬೆಳಕು. ಅತ್ತಲೇ ಕಣ್ಣು ಕೀಲಿಸಿದವನಿಗೆ ಹತ್ತಿರಾದದ್ದು ಒಂದು ಮೋಟಾರ್‌ಬೈಕ್. ಅದರ ಮೇಲೆ ಇಬ್ಬರಿದ್ದರು. ಕೈತೋರಿದೆ. ನಿಧಾನವಾಗಿ ಹತ್ತಿರಾದ ವಾಹನ ನನ್ನನ್ನು ಸಮೀಪಿಸುತ್ತಿದ್ದಂತೇ ಛಕ್ಕನೆ ವೇಗ ಹೆಚ್ಚಿಸಿಕೊಂಡು ಏರಿನಲ್ಲಿ ಸಾಗಿಹೋಯಿತು. ಅದರ ಎಂಜಿನ್‌ನ ಕರ್ಕಶ ಸದ್ದು ನನ್ನ ಕಿವಿಗಳ ತಮಟೆಗಳನ್ನು ಹರಿದುಹಾಕಿಬಿಡುತ್ತದೆನಿಸಿ ನಾನು ಕಿವಿಗಳನ್ನು ಬಿಗಿಯಾಗಿ ಮುಚ್ಚಿಕೊಂಡೆ.
ಆ ನರಕದ ತುತ್ತೂರಿಯಂಥ ಸದ್ದು ದೂರಾಗುತ್ತಿದ್ದಂತೇ ನಡೆದದ್ದೇನೆಂದು ನನ್ನ ಅರಿವಿಗೆ ಬಂತು. ಆ ವಾಹನ ನನ್ನ ಪಕ್ಕ ಸರಿದೋಡುತ್ತಿದ್ದಾಗ ಅದರ ಸವಾರರನ್ನು ನಾನು ಸ್ಪಷ್ಟವಾಗಿ ನೋಡಿದ್ದೆ. ನಾನು ಕಂಡದ್ದೇನು? ಚಾಲಕನ ಮುಖ ಭೂತದರ್ಶನವಾದಂತೆ ಬಿಳಿಚಿಹೋಗಿತ್ತು. ಪಿಲಿಯನ್‌ನಲ್ಲಿದ್ದವ ತನ್ನ ಮುಖವನ್ನು ಚಾಲಕನ ಬೆನ್ನಿಗೆ ಬಲವಾಗಿ ಒತ್ತಿಕೊಂಡಿದ್ದ. ಅವನ ಕೈಗಳು ಚಾಲಕನ ಎರಡೂ ಭುಜಗಳನ್ನು ಅವಚಿ ಹಿಡಿದುಬಿಟ್ಟಿದ್ದವು!
ಇದೇಕೆ ಹೀಗೆ? ನಾನು ಗಾಬರಿಗೊಂಡೆ. ರೋಸಿನಾ, ಫಾದರ್ ಆಲ್ಫೋನ್ಸೋ, ಜೇಸುರತ್ನಂನ ಮುಖಗಳು ಕ್ಷಣದಲ್ಲಿ ಕಣ್ಣೆದುರು ಮೂಡಿದವು. ಸೊಂಟದ ಬೆಳ್ಟ್‌ನಿಂದ ಸೆಲ್‌ಫೋನ್ ತೆಗೆದೆ. ಜೇಸುರತ್ನಂನ ನಂಬರನ್ನು ನೆನಪಿಗೆ ತಂದುಕೊಳ್ಳುತ್ತಾ ಗುಂಡಿಗಳನ್ನು ಆತುರಾತುರವಾಗಿ ಒತ್ತಿ ಕಿವಿಗೆ ಹಿಡಿದೆ.
"ಟಿಣ್ ಟೊಂಯ್ ಟಿಣ್!" ಕಿವಿ ಇರಿದ ಸದ್ದಿಗೆ ಬೆಚ್ಚಿ ಸೆಲ್‌ಫೋನಿನ ಪರದೆಯತ್ತ ಗಾಬರಿಯ ನೋಟ ಹೂಡಿದೆ. ಅಲ್ಲಿ ಕಂಡದ್ದು... "ಕಾಲ್ ಫೈಯಿಲ್ಡ್."
ಹತ್ತಿರದಲ್ಲೆಲ್ಲೂ ಟವರ್ ಇರುವ ಸಾಧ್ಯತೆ ಇಲ್ಲ ಎನ್ನುವ ಭೀಕರ ಸತ್ಯ ನನ್ನೆದುರು ಅನಾವರಣಗೊಂಡಿತ್ತು. ತಣ್ಣಗೆ ನಿಂತು ಯೋಚಿಸಿದೆ. ಎಂದೂ ಕೈಕೊಡದ ನನ್ನ ಹೀರೋ ಹೋಂಡಾ ಇಂದು ಈ ನಿರ್ಜನ ಪ್ರದೇಶದಲ್ಲಿ ಕೈಕೊಟ್ಟಿದೆ. ನಾನೀಗ ಯಾರನ್ನೂ ಸಂಪರ್ಕಿಸಲು ಸಾಧ್ಯವಿಲ್ಲ. ಈ ದಾರಿಯಲ್ಲಿ ಯಾರಾದರೂ ಬಂದರೂ ಅವರು ನನಗೆ ಸಹಾಯ ನೀಡುವುದಿಲ್ಲ ಎನ್ನುವುದು ನಿಮಿಷದ ಹಿಂದೆಯಷ್ಟೇ ಸಾಬೀತಾಗಿದೆ.
ಇದೆಲ್ಲದರಿಂದ ನಾನು ಧೈರ್ಯಗೆಡುವುದು ಬೇಡ. ಇದೊಂದು ಕೆಟ್ಟ ಅನುಭವವಾಗುವುದರ ಬದಲು ನಾಳೆ ರೋಸಿನಾಳಿಗೆ ಹೇಳಿಕೊಂಡು ನಗುವಂಥ ಒಂದು ಸ್ವಾರಸ್ಯಕರ ಅನುಭವವಾಗಬೇಕು. ಮುಂದಿನ ನಾಲ್ಕು ಕಿಲೋಮೀಟರ್‌ಗಳನ್ನು ನಡೆದುಬಿಟ್ಟರೆ ಹೇಗೆ? ಅದಕ್ಕಿಂತಲೂ ಉತ್ತಮವಾದ ಮಾರ್ಗ ಬೇರೊಂದಿಲ್ಲ.
ಬೈಕನ್ನು ತಳ್ಳಿಕೊಂಡು ಹೋಗಿ ರಸ್ತೆ ಬದಿಯ ದಟ್ಟ ಪೊದೆಯ ಹಿಂದೆ ನಿಲ್ಲಿಸಿ ಲಾಕ್ ಮಾಡಿದ್ದಲ್ಲದೇ ಚಕ್ರಕ್ಕೆ ಚೈನ್ ಸಹಾ ಹಾಕಿ ಬೀಗ ಹಾಕಿದೆ. ತಲೆಯ ಮೇಲೇ ರೆಕ್ಕೆ ಬಡಿಯುತ್ತಾ ಹಾರಿಹೋದ ಹೆಸರಿಲ್ಲದ ಇರುಳ್ವಕ್ಕಿಯನ್ನು ಶಪಿಸಿ ಹೆಗಲಿಗೆ ಚೀಲ ತೂಗುಹಾಕಿಕೊಂಡು ರಸ್ತೆಗಿಳಿದೆ. ಎರಡು ಹೆಜ್ಜೆ ನಡೆಯುವಷ್ಟರಲ್ಲಿ ಹಿಂದಿನಿಂದ ಯಾವುದೋ ವಾಹನದ ಶಬ್ಧ ಕೇಳಿ ನನ್ನ ಹೆಜ್ಜೆಗಳು ತಾವಾಗಿಯೇ ಸ್ಥಗಿತಗೊಂಡವು. ಮರುಕ್ಷಣ ನಿಮಿಷಗಳ ಹಿಂದಿನ ಅನುಭವ ನೆನಪಿಗೆ ಬಂತು. ನೇರವಾಗಿ ಮುಂದಕ್ಕೆ ನೋಡುತ್ತಾ ಏರುಹಾದಿಯಲ್ಲಿ ವೇಗವಾಗಿ ಹೆಜ್ಜೆ ಸರಿಸಿದೆ. ಹಿಂದಿನಿಂದ ಏದುತ್ತಾ ಬಂದ ವಾಹನ ನನ್ನ ನಿರೀಕ್ಷೆಗೆ ವಿರುದ್ಧವಾಗಿ ನನ್ನ ಪಕ್ಕದಲ್ಲೇ ನಿಂತಿತು. ನಿಂತು ಅತ್ತ ತಿರುಗದೇ ವಿಧಿಯಿರಲಿಲ್ಲ. ಅದೊಂದು ಹಳೆಯ ಜೀಪ್. ಚಾಲಕನ ಮೋರೆ ಸರಿಯಾಗಿ ಕಾಣದಿದ್ದರೂ ಅವನ ಹೊರತಾಗಿ ಬೇರಾರೂ ಇಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು.
"ಎಲ್ಲಿಗೆ ಹೋಗ್ತಿದೀಯ?" ಈ ನೆಲದ್ದಲ್ಲದ ಉಚ್ಛಾರಣೆಯ ಇಂಗ್ಲಿಷ್‌ನಲ್ಲಿ ಪ್ರಶ್ನೆ ಬಂತು. ಹೇಳಿದೆ. ಮುಂದಿನ ಪ್ರಶ್ನೆಗೆ ಅವಕಾಶವಿಲ್ಲದಂತೆ ನನ್ನ ಬೈಕ್ ಕೈಕೊಟ್ಟ ಕಥೆಯನ್ನೂ ಚುಟುಕಾಗಿ ವಿವರಿಸಿದೆ. ಅವನೊಮ್ಮೆ ಲೊಚಗುಟ್ಟಿದ. "ಬೈಕ್ ಬಗ್ಗೆ ಈಗೇನೂ ಮಾಡೋಕೆ ಆಗೋಲ್ಲ. ನಾಳೆ ಬೆಳಿಗ್ಗೆ ನನ್ನ ಕೆಲಸದವನನ್ನ ಚೆಂಗಲ್‌ಪೇಟೆಗೆ ಕಳಿಸಿ ಮೆಕ್ಯಾನಿಕ್ ಕರೆಸಬಲ್ಲೆ. ಜೀಪ್ ಹತ್ತು. ನಿನ್ನನ್ನ ತಿರುವಡಿಸೂಲಂಗೆ ತಲುಪಿಸ್ತೀನಿ." ಕೈಚಾಚಿ ಬಾಗಿಲು ತೆರೆದ. ಇದೂ ಒಂದು ಅನುಭವ. ಹತ್ತಿದೆ. ಈಗ ಅವನನ್ನು ಸರಿಯಾಗಿ ನೋಡುವ ಅವಕಾಶ. ಅರವತ್ತು ದಾಟಿದಂತಿದ್ದ ವಿದೇಶೀ ಮುದುಕ. ಜೀಪಿನ ಟಾಪಿಗೆ ತಾಗುತ್ತಿದ್ದ ತಲೆ, ಬೆಳ್ಳನೆಯ ಉಡುಪಿನಲ್ಲಿದ್ದ ಕುಗ್ಗದ ದೇಹ.
"ನಾನು ಹ್ಯಾರಿಸ್... ಹ್ಯಾರಿಸ್ ವಿಲ್ಸನ್." ತನ್ನ ಪರಿಚಯ ಹೇಳಿಕೊಂಡ. "ಹದಿನೈದು ವರ್ಷಗಳಿಂದ ಇಲ್ಲಿ ಸೆಟ್ಲ್ ಆಗಿದ್ದೀನಿ. ನನ್ನ ಮನೆ ಇಲ್ಲಿಂದ ಅರ್ಧ ಕಿಲೋಮೀಟರ್ ದೂರ." ವಾಹನವನ್ನು ಮುಂದಕ್ಕೆ ಚಿಮ್ಮಿಸಿ ಪ್ರಶ್ನೆ ಹಾಕಿದ: "ನಿನ್ನ ಬಗ್ಗೆ ಹೇಳು."
ನನ್ನ ಹೆಸರು ಹೇಳಿ, ಪಾಂಡಿಚೆರಿ ವಿಶ್ವವಿದ್ಯಾಲದಲ್ಲಿ ನಾನೊಬ್ಬ ಅಧ್ಯಾಪಕ ಎಂದು ಹೇಳುತ್ತಿದ್ದಂತೆ ಆತ "ಊಹ್ ಊಹ್! ಎಂದು ಉದ್ಗಾರ ತೆಗೆದ. "ಗ್ರೇಟ್" ಎನ್ನುತ್ತಾ ಎಡಗೈಯಿಂದ ನನ್ನ ಭುಜ ತಟ್ಟಿದ. "ನನ್ನ ಮಗ ಸಹಾ ಯೂನಿವರ್ಸಿಟಿ ಪ್ರೊಫೆಸರ್, ಸಿಡ್ನಿಯಲ್ಲಿ." ದನಿಯಲ್ಲಿ ಹೆಮ್ಮೆಯಿತ್ತು. ಮುಂದಿನ ತಿರುವಿನಲ್ಲಿ ಛಕ್ಕನೆ ಬ್ರೇಕ್ ಒತ್ತಿದ.
"ಮಳೆ ಬರೋ ಹಾಗಿದೆ." ಲೊಚಗುಟ್ಟಿದ. "ನನಗೆ ಹತ್ತು ನಿಮಿಷ ಅವಕಾಶ ಕೊಡು. ನನ್ನ ಹೆಂಡತಿಯನ್ನ ಮನೆಗೆ ಕರಕೊಂಡು ಬರೋ ಸಮಯ ಇದು. ಅವಳು ಮನೆ ಸೇರಿದ ತಕ್ಷಣ ನಿನ್ನನ್ನ ನಿನ್ನ ಸ್ಥಳಕ್ಕೆ ಸೇರಿಸ್ತೀನಿ." ಪ್ರತಿಕ್ರಿಯೆಗೂ ಕಾಯದೇ ರಸ್ತೆಯನ್ನು ಬಿಟ್ಟು ಎಡಕ್ಕೆ ಗುಡ್ಡಗಳೆರಡರ ನಡುವೆ ನುಸುಳಿಹೋಗಿದ್ದ ಹಾದಿಗಿಳಿದ. ಮಾತು ಮುಂದುವರೆದಿತ್ತು: "ಇಲ್ಲಿಂದ ಒಂದು ಫರ್ಲಾಂಗ್ ದೂರ ನನ್ನ ಮನೆ. ಗುಡ್ಡದ ಆಚೆ ಕೆಳಗಿರೋ ಪುಟ್ಟ ಹಳ್ಳಿಯ ಕಡೆ ಸರ್ಕಾರದ ಗಮನ ಇಲ್ಲ. ಅಲ್ಲಿನ ಜನರಿಗೆ ನನ್ನ ಹೆಂಡತಿ ದಿನಾ ಸಂಜೆ ಪಾಠ ಹೇಳ್ತಾಳೆ. ಅವರ ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧೋಪಚಾರ ಸಹಾ. ಅಲ್ಲಿಗೆ ಜೀಪ್ ಹೋಗೋದಿಲ್ಲ. ಸಂಜೆ ಐದುಗಂಟೆಗೆ ಅಲ್ಲಿಗೆ ನಡೆದುಹೋಗ್ತಾಳೆ. ಹಿಂದಕ್ಕೆ ಬರೋದು ಎಂಟೂವರೆಗೆ. ನಾನು ಹೋಗಿ ಕರಕೊಂಡು ಬರಬೇಕು. ಕತ್ತಲಲ್ಲಿ ಒಂಟಿಯಾಗಿ ಬರೋದಿಕ್ಕೆ ಅವಳಿಗೆ ಭಯ. ಹಾವುಗಳಿಗೆ ಅವಳು ವಿಪರೀತ ಹೆದರ್ತಾಳೆ." ನಕ್ಕು ಮರುಕ್ಷಣ ದನಿ ತಗ್ಗಿಸಿದ: "ನಿನಗೊಂದು ವಿಷಯ ಹೇಳಬೇಕು. ಆ ಕೆರೆ... ಅದನ್ನ ಪೇಯಿ ಕುಳಂ ಅಂತಾರೆ."
ಪೇಯಿ ಕುಳಂ! ದೆವ್ವದ ಕೊಳ!












Click it and Unblock the Notifications