ಅಡವಿಯ ಹುಡುಗಿ

Forest girl, a short story by Prem Shekhar
ನೀರವ ರಾತ್ರಿಯಲ್ಲಿ ಕಾಡಿನ ಮಧ್ಯದಲ್ಲಿ ಬೈಕು ಕೆಟ್ಟು ಹೋಗುತ್ತೆ, ಮೈಗೆ ರಾಚುವ ಪಕ್ಕದ ಕೆರೆಯಿಂದ ಬರುವ ತಂಗಾಳಿ, ಆ ಕಾಡಿನಲ್ಲೊಂದು ಮನೆ, ಮನೆಯಲ್ಲಿ... ಕಥೆ ಓದಿ ಮುಗಿಸುತ್ತಿದ್ದಂತೆ ಮೈ ಜುಂ ಅಂದಿರಬೇಕು, ಬಾಯಿ ಪಸೆ ಆರಿಹೋಗಿರಬೇಕು, ಕೈಬೆರಳ ತುದಿಯಲ್ಲಿ ಸಣ್ಣ ಕಂಪನ, ಬೆರಳ ನಡುವಿನಲ್ಲಿ ಇದ್ದೂ ಇಲ್ಲದಂತಹ ತೆಳ್ಳನೆಯ ಬೆವರಿನ ಪೊರೆ.... ಓದುತ್ತಾ ಓದುತ್ತಾ ಅದರಲ್ಲಿಯ ಒಂದು ಪಾತ್ರವೇ ನಾವಾಗಿರುತ್ತೇವೆ. ಇದು ನವದೆಹಲಿಯ ಪ್ರೇಮ್ ಶೇಖರ್ ಅವರ ಕಥನದ ಶೈಲಿ.

* ಪ್ರೇಮಶೇಖರ, ನವದೆಹಲಿ

ಯಾವುಯಾವುದೋ ಗೋಜಲಿಗೆ ಸಿಕ್ಕಿಕೊಂಡು ಪಾಂಡಿಚೆರಿಯಿಂದ ಹೊರಡುವಾಗಲೇ ತಡವಾಗಿಹೋಗಿತ್ತು. ಚೆಂಗಲ್‌ಪೇಟೆ ಸಮೀಪಿಸುತ್ತಿದ್ದಂತೆ ಕತ್ತಲೆ ದಟ್ಟವಾಗಿ ಅಮರಿಕೊಳ್ಳತೊಡಗಿತ್ತು. ಇಲ್ಲಿಯವರೆಗೇನೋ ಚೆನ್ನಾಗಿ ತಿಳಿದಿದ್ದ ರಸ್ತೆ. ಮುಂದಿನದಂತೂ ನಾನೂ ಎಂದೂ ಕಾಲಿಡದ ಹಾದಿ.

ಫಾದರ್ ಆಲ್ಫಾನ್ಸೋ ವಾರದಿಂದಲೂ ತಿದಿ ಒತ್ತುವಂತೆ ಒತ್ತಿದ್ದರು. ಮಹಾಬಲಿಪುರಂನ ಸಮೀಪದ ತಿರುವಡಿಸೂಲಂನಲ್ಲಿ ಸುನಾಮಿ ಸಂತ್ರಪ್ತರ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರ ಪರಿಚಯದ ಮನುಷ್ಯನೊಬ್ಬನಿಂದ ಕೆಲವು ವೆರಿ ವೆರಿ ಇಂಪಾರ್ಟೆಂಟ್' ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡು, ಜತೆಗೆ ಒಂದಷ್ಟು ಫೋಟೋಗಳನ್ನೂ ತೆಗೆದುಕೊಂಡು ಬರುವಂತೆ ನನ್ನನ್ನು ನಕ್ಷತ್ರಿಕನಂತೆ ಪೀಡಿಸಿಬಿಟ್ಟಿದ್ದರು. ಆ ಪತ್ರಗಳನ್ನವರು ಆದಷ್ಟು ಬೇಗನೆ ಡೆನ್‌ಮಾರ್ಕ್‌ನ ಒಂದು ಎನ್‌ಜಿಓಗೆ ಕಳುಹಿಸಬೇಕಾಗಿತ್ತಂತೆ. ಯೂನಿವರ್ಸಿಟಿಯಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ಸೆಮಿನಾರ್ ಒಂದರ ಆಯೋಜನೆಯಲ್ಲಿ ತೊಡಗಿಕೊಂಡಿದ್ದ ನನಗಂತೂ ಬಿಡುವೇ ಇರಲಿಲ್ಲ. ಉದ್ಘಾಟನೆಗೆ ಪಾಂಡಿಚೆರಿಯ ಮುಖ್ಯಮಂತ್ರಿ, ಸಮಾರೋಪ ಸಮಾರಂಭಕ್ಕೆ ಕೇಂದ್ರೀಯ ಮಂತ್ರಿಯೊಬ್ಬರು ಬರಲೇಬೇಕೆಂದು ಡೀನ್ ಸಾಹೇಬರು ಪಟ್ಟು ಹಿಡಿದದ್ದರಿಂದ ಹಾಗೂ ಅವರ ತಾಳಕ್ಕೆ ತಕ್ಕಂತೆ ಹೆಚ್‌ಓಡಿ ಮಹಾಶಯ ಕುಣಿಯತೊಡಗಿದಾಗ ನನಗೆ ಸಾಕುಬೇಕಾಗಿಹೋಗಿತ್ತು. ಬರೀ ಪ್ರಾಧ್ಯಾಪಕರು, ವಿದ್ವಾಂಸರುಗಳಿರುವ ಸೆಮಿನಾರ್‌ಗಳನ್ನು ಆಯೋಜಿಸುವುದಾದರೆ ತೊಂದರೆಯಿಲ್ಲ. ಈ ಪುಢಾರಿಗಳನ್ನು ಎಳಕೊಂಡು ಬರುವುದೆಂದರೆ ನಮ್ಮದು ನಾಯಿಪಾಡಾಗಿಬಿಡುತ್ತದೆ. ಸೆಕ್ಯೂರಿಟಿ, ಪ್ರೋಟೋಕಾಲ್ ಎಂದೆಲ್ಲಾ ನೂರೊಂದು ರಗಳೆಗಳಿಗೆ ಸಿಕ್ಕಿಕೊಂಡು ತಲೆ ಚಿಟ್ಟುಹಿಡಿದುಹೋಗುತ್ತದೆ.

ವಿಶ್ವವಿದ್ಯಾಲಯದ ಅಕ್ಯಾಡೆಮಿಕ್ ಸೆಮಿನಾರ್ ಒಂದಕ್ಕೆ ಈ ರಾಜಕೀಯದವರ ಉಪಸ್ಥಿತಿಯ ಅಗತ್ಯ ನನಗಂತೂ ಇಲ್ಲ. ದುರಂತವೆಂದರೆ ಉಳಿದೆಲ್ಲರಿಗೂ ಅವರವರದೇ ಕಾರಣಗಳಿಗಾಗಿ ಅದು ಇದೆ. ಸೆಮಿನಾರ್ ಮುಗಿದದ್ದು ಮೊನ್ನೆ. ಬಂದಿದ್ದವರಲ್ಲಿ ಅರ್ಧಕ್ಕರ್ಧ ಆ ಸಂಜೆಯೇ ಜಾಗ ಖಾಲಿ ಮಾಡಿದರು. ಉಳಿದವರನ್ನು ನಿನ್ನೆ ಆರೋವಿಲ್‌ಗೆ ಕರೆದುಕೊಂಡು ಹೋಗಿದ್ದೆವು. ಈವತ್ತು ದಿನಪೂರ್ತಿ ನನಗೆ ಬಿಲ್ಲುಗಳದೇ ಕೆಲಸ. ಕ್ಯಾಂಟಿನಿನವ, ಟ್ಯಾಕ್ಸಿಯವ, ಜೆರಾಕ್ಸ್ ಅಂಗಡಿಯವ- ಹೀಗೆ ನೂರೊಂದು ಜನರಿಗೆ ಹಣ ಸಂದಾಯ ಮಾಡಿ ಸಮರ್ಪಕ ರಶೀದಿಗಳನ್ನು ಪಡೆದುಕೊಳ್ಳುವುದರಲ್ಲಿ ಹಗಲು ಕಳೆದೇಹೋಯಿತು.

ಇದೆಲ್ಲದರ ನಡುವೆ ಈ ಪಾದರಿ ಮಹಾಶಯ ನನ್ನ ಬೆನ್ನಿಗೆ ಬಿದ್ದಿದ್ದ. ನಾನೇ ಆಗಬೇಕಾ? ಇನ್ಯಾರೂ ಇಲ್ಲವಾ?' ಎಂದು ನಾನು ರೋಸಿನಾಳ ಎದುರು ಅಸಹನೆ ಕಾರಿಕೊಂಡಿದ್ದೆ. ನಿನ್ನ ಮೇಲೆ ಅವರಿಗೆ ತುಂಬಾ ನಂಬಿಕೆ ಇದೆ. ಅದನ್ನು ಕಳೆದುಕೊಳ್ಳಬೇಡ.' ಅವಳದು ತಣ್ಣನೆಯ ಉತ್ತರ.

ಹೌದು, ಫಾದರ್ ಆಲ್ಫೋನ್ಸೋಗೆ ನನ್ನ ಮೇಲೆ ಅಗಾಧ ವಿಶ್ವಾಸ. ಅದನ್ನು ಹಾಗೇ ಉಳಿಸಿಕೊಳ್ಳುವುದರ ಅಗತ್ಯ ನನಗೂ ಇದೆ! ರೋಸಿನಾ ನನ್ನವಳಾಗಬೇಕಾದರೆ ಅದು ಅತ್ಯಗತ್ಯ. ಫಾದರ್ ಆಲ್ಫೋನ್ಸೋ ಅವರ ಅಣ್ಣನ ಮಗಳು ರೋಸಿನಾ. ಚಿಕ್ಕಂದಿನಿಂದಲೂ ಅವರ ರಕ್ಷಣೆ, ಆರೈಕೆಯಲ್ಲೇ ಬೆಳೆದವಳು. ಅವಳ ಮೇಲೆ ಪಾದರಿಯವರ ಋಣ ಅಗಾಧ. ಒಂದೂವರೆ ವರ್ಷಗಳ ಹಿಂದೆ ನನ್ನ - ರೋಸಿನಾಳ ಕಣ್ಣುಗಳು ಸಂಧಿಸಿದಾಗಿನಿಂದ ನಾನೂ ಆ ಋಣಕ್ಕೆ ಸಿಲುಕಿಕೊಂಡಿದ್ದೇನೆ. ಯಾವುದೇ ಕಾರಣದಿಂದ ಫಾದರ್‌ಗೆ ನನ್ನ ಮೇಲಿನ ವಿಶ್ವಾಸ ಕಳೆದುಹೋಯಿತೆಂದರೆ ನಾನು ರೋಸಿನಾಳನ್ನು ಕಳೆದುಕೊಂಡಂತೆಯೇ.

ಯೆಹೋವನ ಟೆನ್ ಕಮ್ಯಾಂಡ್‌ಮೆಂಟ್ಸನ್ನಾದರೂ ಮೀರಿಯೇನು, ಫಾದರ್ ಮಾತನ್ನು ಮೀರುವುದು ಬಹುಷಃ ನನ್ನಿಂದಾಗದು.' ರೋಸಿನಾ ನನ್ನ ಮುಂಗೈ ಹಿಡಿದು ಸಣ್ಣಗೆ ದನಿ ತೆಗೆಯುತ್ತಾಳೆ. ಆವಾಗೆಲ್ಲಾ ಅವಳ ಕಣ್ಣುಗಳು ಅರೆಮುಚ್ಚಿಕೊಳ್ಳುತ್ತವೆ. ರೆಪ್ಪೆಗಳ ನಡುವಿನಿಂದ ಕಣ್ಣೀರು ಜಿನುಗುತ್ತದೆ...

ಫಾದರ್ ಆಲ್ಫೋನ್ಸೋ ಹೇಳಿದ ಕೆಲಸಗಳನ್ನೆಲ್ಲಾ ತಕರಾರಿಲ್ಲದೆ ಮಾಡಿದ್ದೇನೆ, ವಾರಕ್ಕೆ ನಾಲ್ಕು ಗಂಟೆ ಅವರ ಶಾಲೆಯಲ್ಲಿ ಮಕ್ಕಳಿಗೆ ಚಿತ್ರಕಲೆಯ ಕ್ಲಾಸ್ ತೆಗೆದುಕೊಳ್ಳುತ್ತೇನೆ, ತಿಂಗಳಿಗೆರಡು ಸಲವಾದರೂ ಅವರ ವಿದೇಶೀ ಅತಿಥಿಗಳ ನಡುವೆ ಮಹಾರಾಜನಂತೆ ಕುಳಿತು ಶಾಂಪೇನ್ ಚಪ್ಪರಿಸುತ್ತೇನೆ, ಪ್ರತೀ ಶನಿವಾರ ಅವರು ಮೀನು ಬೇಟೆಗೆಂದು ಅಥವಾ ಬೇಟೆಯ ಆಟಕ್ಕೆಂದು ಉಷ್ಟೇರಿ ಲೇಕ್‌ಗೆ ಹೋಗುವಾಗ ಮುಲುಮುಲುಗುಟ್ಟುವ ಮಣ್ಣುಹುಳುಗಳ ಪೊಟ್ಟಣ ಹಿಡಿದು ಅವರ ಹಿಂದೆ ಹೋಗುತ್ತೇನೆ...

ಪ್ರೇಮ ಮನುಷ್ಯನನ್ನು ಒಮ್ಮೆ ಚಕ್ರವರ್ತಿಯಾಗಿಸಿದರೆ ಮತ್ತೊಮ್ಮೆ ಸಾಕುನಾಯಿಯಾಗಿಸುತ್ತದೆ ಎಂದು ಅದ್ಯಾವನೋ ಪುರಾತನ ರೋಮನ್ ಬುದ್ಧಿವಂತ ಹೇಳಿದ ಮಾತಿನಲ್ಲಿ ನನಗೆ ನಂಬಿಕೆ ಬಂದಿದೆ. ನೇರಕ್ಕೆ ಸಾಗಿದ್ದ ಚೆನ್ನೈ ಹೈವೇ ಬಿಟ್ಟು ಬಲಕ್ಕೆ ಹೊರಳಿ ಫ್ಲೈಓವರ್ ಕೆಳಗೆ ನುಸುಳಿ ಚೆಂಗಲ್‌ಪೇಟೆಯತ್ತ ಸಾಗಿದ್ದ ಕಿರಿದಾದ ರಸ್ತೆಗಿಳಿದೆ. ಎರಡೂ ಕಡೆಯ ಜಲಸಸ್ಯಗಳಿಂದ ತುಂಬಿದ್ದ ಜೌಗುಪ್ರದೇಶದತ್ತ ಒಮ್ಮೆ ಚಕಚಕನೆ ನೋಟ ಹೊರಳಾಡಿಸಿ ನೇರಕ್ಕೆ ನೋಡುತ್ತಾ ವಾಹನದ ವೇಗ ಹೆಚ್ಚಿಸಿದೆ. ಪಟ್ಟಣ ಪ್ರವೇಶಿಸುತ್ತಿದ್ದಂತೇ ಗಡಿಯಾರದತ್ತ ಕಣ್ಣಾಡಿಸಿದೆ. ಏಳೂವರೆಯಾಗುತ್ತಿತ್ತು. ಹಸಿವೆಯೆನಿಸಿತು. ಚೆಂಗಲ್‌ಪೇಟೆಯಲ್ಲೇ ಏನಾದರೂ ತಿಂದು ಮುಂದೆ ಹೋಗುವ ಯೋಚನೆ ಬಂದರೂ ಅದನ್ನು ತಳ್ಳಿಹಾಕಿದೆ. ನಾನು ಪಾಂಡಿಚೆರಿ ಬಿಡುವಾಗಲೇ ಐದೂವರೆ ದಾಟಿದ್ದನ್ನು ನೋಡಿ ರಾತ್ರಿ ತಿರುವಡಿಸೂಲಂನಲ್ಲೇ ಉಳಿಯಲು ಫಾದರ್ ಸೂಚಿಸಿದ್ದರು. ಅಷ್ಟೇ ಅಲ್ಲ, ಅಲ್ಲಿ ನಾನು ಭೇಟಿಯಾಗಬೇಕಾಗಿದ್ದ ಜೇಸುರತ್ನಂ ಎಂಬಾತನಿಗೆ ಫೋನ್ ಮಾಡಿ ನನಗಾಗಿ ಚಿಕನ್‌ನದ್ದೇನಾದರೂ ಅಡಿಗೆ ಮಾಡಬೇಕೆಂದು ತಾಕೀತು ಮಾಡಿ ನನ್ನ ಕೋಳಿಚಪಲದ ಸುದ್ಧಿಯನ್ನು ನನಗಿಂತಲೂ ಮೊದಲೇ ತಿರುವಡಿಸೂಲಂಗೆ ತಲುಪಿಸಿಬಿಟ್ಟಿದ್ದರು.

ಮುಖ್ಯರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ರಸ್ತೆಬದಿಯ ಚಹದಂಗಡಿಯ ಮುಂದೆ ನಿಂತೆ. ಒಂದು ಸ್ಟ್ರಾಂಗ್ ಟೀಗೆ ಹೇಳಿ ತಿರುವಡಿಸೂಲಂಗೆ ಹೋಗುವ ರಸ್ತೆಯ ಬಗ್ಗೆ ಪ್ರಶ್ನಿಸಿದೆ.

"ನೇರಕ್ಕೆ ಹೋಗಿ ಎರಡನೇ ಸರ್ಕಲ್‌ನಲ್ಲಿ ಬಲಕ್ಕೆ ತಿರುಗಿ. ಮಹಾಬಲಿಪುರಂಗೆ ಹೋಗೋ ರಸ್ತೆ ಅದು. ಅದರಲ್ಲಿ ಎರಡು ಕಿಲೋಮೀಟರ್ ಸಾಗಿದ್ರೆ ಎಡಕ್ಕೆ ತಿರುವಡಿಸೂಲಂಗೆ ಹೋಗೋ ರಸ್ತೆ ಸಿಗುತ್ತೆ. ಬೋರ್ಡಿದೆ ಅಲ್ಲಿ." ಉತ್ತರ ಬಂತು. ಜೇಸುರತ್ನಂ ಫೋನಿನಲ್ಲಿ ಹೇಳಿದ್ದ ವಿವರವನ್ನು ಖಚಿತಪಡಿಕೊಂಡದ್ದಾಯಿತು. ಬೈಕಿನ ಮೇಲೆ ಕುಳಿತಂತೇ ಕಣ್ಣುಗಳನ್ನು ಅರೆಮುಚ್ಚಿ ಚಹಾ ಹೀರಿ ಮುಂದೆ ಸಾಗಿದೆ...

ತಿರುವಡಿಸೂಲಂ ರಸ್ತೆ ತುಂಬಾ ಕಿರಿದಾಗಿತ್ತು. ಎರಡೂ ಕಡೆ ದಟ್ಟ ಗಿಡಮರಗಳ ಗೋಡೆ. ರಸ್ತೆ ಬಳುಕಿಬಳುಕಿ ಸಾಗಿತ್ತು. ಒಂದು ಕಿಲೋಮೀಟರ್ ಸಾಗಿದರೂ ಎದುರಿನಿಂದ ಒಂದು ವಾಹನದ ಸುಳಿವೂ ಕಾಣಲಿಲ್ಲ. ಜತೆಗೇ ಮರಗಳ ದಟ್ಟಣೆ ಮತ್ತಷ್ಟು ಅಧಿಕವಾಗಿ ತಲೆಯ ಮೇಲೇ ಕಪ್ಪನೆಯ ಚಪ್ಪರ ಹರಡಿದಂತಾಗಿಬಿಟ್ಟಿತು. ನನಗೆ ಕಗ್ಗತ್ತಲ ಸುರಂಗವೊಂದರಲ್ಲಿ ಪಯಣಿಸುತ್ತಿರುವ ಭ್ರಮೆ. ಸ್ವಲ್ಪ ಅಧೀರತೆಯಲ್ಲಿ ವಾಹನದ ವೇಗ ಕುಗ್ಗಿಸುತ್ತಿದ್ದಂತೇ ಹಿಂದಿನಿಂದ ಬಂದ ಟಾಟಾ ಸುಮೋವೊಂದು ಅಸಡ್ಡೆಯಿಂದ ನೂಕುವಂತೆ ತೀರಾ ಸನಿಹದಲ್ಲೇ ನನ್ನನ್ನು ದಾಟಿ ಮುಂದೆ ಹೋಯಿತು. ಕತ್ತಲ ಸುರಂಗದಿಂದ ಕೊನೆಗೂ ಹೊರಬರುತ್ತಿದ್ದಂತೆ ರಸ್ತೆ ಏರುತ್ತಾ ಬಲಕ್ಕೆ ಹೊರಳಿಕೊಂಡಿತು. ಎಡಕ್ಕೆ ಬೆಳ್ಳಿಯ ತಗಡಿನಂತೆ ಹೊಳೆಯುತ್ತಿದ್ದ ವಿಶಾಲ ಕೆರೆ. ನೆಮ್ಮದಿಯೆನಿಸಿತು. ಜೇಸುರತ್ನಂ ಹೇಳಿದ್ದಂತೆ ತಿರುವಡಿಸೂಲಂಗೆ ಇನ್ನು ನಾಲ್ಕು ಕಿಲೋಮೀಟರ್‌ಗಳಷ್ಟೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+