ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದಿಷ್ಟು ಮಳೆಗಾಲ, ಮೀನು ಮತ್ತು ಚಿನ್ನು

By Staff
|
Google Oneindia Kannada News


ಹಂಗಾದ್ರೆ ಮೀನು ಏನಾದ್ಲು? ನೀರಿಗೆ ಬಿದ್ದುಹೋದ್ಲಾ? ಗೊತ್ತಾಗ್ಲಿಲ್ಲ ಚಿನ್ನುಗೆ. ಅಮ್ಮ ಅಳುತ್ತಿದ್ದಾಳೆ, ಸಹಸ್ರನಾಮಾರ್ಚನೆ ಮಾಡುತ್ತಿದ್ದಾಳೆ ವಿನಹ ಮೀನುಗೇನಾಯಿತು ಅಂತ ಹೇಳುತ್ತಿಲ್ಲ. ಕಲ್ಪಿಸಿಕೊಳ್ಳಹೊರಟರೆ, ಏನಾಗಿರಬಹುದು ಅಂತ? ಊಹೂಂ.. ಭಯವಾಯ್ತು ಚಿನ್ನುಗೆ. ದಿಕ್ಕುತೋಚದೆ ಚಿನ್ನು ಸುಮ್ಮನಾದಳು!



Rain, Meenu and Chinnu A Kannada short storyಕಮಲನ ಮನೆಯಲ್ಲಿದ್ದ ದೊಡ್ಡ ಕರಿ ಭೂತಬೆಕ್ಕು ಕಳೆದ ಬೇಸಗೆ ಶುರುವಾಗುತ್ತಿದ್ದಂತೆ ಒಂದೇ ಸಲಕ್ಕೆ ಆರು ಮರಿ ಹಾಕಿತ್ತು. ಅಲ್ಲೇ ಇದ್ದ ಪುಟ್ಟಣ್ಣಜ್ಜನ ಮನೆಗೆ ಹಾಲು ತರಲು ಅಮ್ಮನ ಜತೆ ಚಿನ್ನು ಹೋಗಿದ್ದಾಗ ಪುಚ್ಚೆ ಕಿಞ್ಞಿ ದೀತುಂಡು, ತೂಪರಾ ಅಕ್ಕ ಅಂತ ಕಮಲ ಕರೆದಿದ್ದಳು. ಚಿನ್ನುವಿಗೆ ಬೆಕ್ಕೆಂದರೆ ತುಂಬ ಇಷ್ಟವಾದ ಕಾರಣ ಅಮ್ಮನಿಗೂ ಮನೆಗೊಂದು ಬೆಕ್ಕಿನ ಮರಿ ತರೋಣವೆಂದು ಮನಸಿತ್ತು. ಹಾಗೆ ಚಿನ್ನು ಮತ್ತೆ ಅಮ್ಮ ಕಮಲನ ಮನೆಗೆ ಹೋದರು.

ಇನ್ನೂ ಪೂರ್ತಿ ಕಣ್ಣು ಬಿಡದ ಕರಿಯ ಮತ್ತು ಕಪ್ಪು-ಬಿಳಿ ಚುಕ್ಕೆಯಿದ್ದ ಮರಿಗಳ ಜತೆಗೆ ಹಾಲು ಬಣ್ಣದ ಮರಿಯೊಂದಿತ್ತು. ಕಣ್ಣುಗಳು ಅವಾಗಷ್ಟೆ ಚೂರೇ ಚೂರು ಬಿರಿಯುತ್ತ, ತನ್ನ ಗುಲಾಬಿ ಬಣ್ಣದ ತುಟಿಗಳನ್ನು ಅರೆತೆರೆದು ಅದೇನನ್ನೋ ಹುಡುಕುತ್ತಿದ್ದ ಮುದ್ದು ಬಿಳಿ ಮರಿ ಚಿನ್ನುಗೆ ಮೊದಲ ನೋಟಕ್ಕೇ ಆತ್ಮೀಯವಾಗಿಬಿಟ್ಟಿತು. ಚಿನ್ನು ಮೆಲ್ಲನೆ ತನ್ನ ಕಿರಿಬೆರಳು ಅದರ ಬಾಯಿಯ ಹತ್ತಿರ ತಂದರೆ ತುಂಟುಮರಿ ತನ್ನ ಪುಟ್ಟಪುಟ್ಟ ಬಿಳಿಯ ಹಲ್ಲುಗಳಿಂದ ಬೆರಳನ್ನು ಮೆತ್ತಗೆ ಕಚ್ಚಿತು. ಚಿನ್ನುಗೆ ಖುಷಿಯೋ ಖುಷಿ.

ಆಮೇಲಿನ ದಿನಗಳಲ್ಲಿ ಚಿನ್ನು ದಿನಾ ಸಂಜೆಯಾಗಲು ಕಾಯುತ್ತಿದ್ದಳು. ಅಮ್ಮನ ಜತೆ ಹಾಲಿಗೆಂದು ಹೋಗಿ, ತಾನು ಕಮಲನ ಮನೆಯಲ್ಲುಳಿದು, ಪುಟ್ಟಮರಿಗಳ ಜತೆ ಅಮ್ಮ ಬರುವವರೆಗೆ ಆಡುತ್ತಿದ್ದಳು. ಮರಿಗಳು ಸ್ವಲ್ಪ ದೊಡ್ಡದಾಗತೊಡಗಿದಾಗ ಚಿನ್ನು ಮತ್ತು ಅಮ್ಮ ಹಾಲು ಬಣ್ಣದ ಮರಿಯನ್ನು ಮನೆಗೆ ತಂದರು. ಚುರುಕು ಚುರುಕಾಗಿ ಮೀನಿನಂತೆ ಅತ್ತಿತ್ತ ಓಡಾಡುತ್ತಿದ್ದ ಅದಕ್ಕೆ ಮೀನು ಅಂತ ಹೆಸರಿಟ್ಟರು.

***

ಮೀನು ಬಂದಮೇಲೆ ಚಿನ್ನುವಿನ ದಿನಚರಿಯೇ ಬದಲಾಯಿತು. ಚಿನ್ನು ಬೆಳಿಗ್ಗೆ ಎದ್ದು ಸ್ನಾನಕ್ಕೆ ಹೋದಾಗ ಹಿಂಬಾಲಿಸಿ ಬಚ್ಚಲೊಳಗೆ ಸೇರಿಕೊಳ್ಳುವ ಮೀನು, ಬಚ್ಚಲುಮನೆಯ ಕಟ್ಟೆಯ ಮೇಲೆ ಕುಳಿತು ಕಣ್ಣು ಪಿಳಿಪಿಳಿ ಬಿಡುತ್ತಾ ನೋಡುತ್ತಿದ್ದರೆ, ಚಿನ್ನು ಪ್ರೀತಿಯಿಂದ ಮೀನುಗೆ ಬೈಯುತ್ತಿದ್ದಳು. ಚಿನ್ನು ರಾತ್ರಿ ಮಲಗುವಾಗ ತನ್ನ ಜತೆ ಮೀನುವನ್ನೂ ಮಲಗಿಸಿಕೊಳ್ಳುತ್ತಿದ್ದಳು. ಅದು ಅಮ್ಮನಿಗೆ ಅಷ್ಟು ಇಷ್ಟವಾಗುತ್ತಿರಲಿಲ್ಲ. ಆದರೆ ಅದು ಹೇಗೋ ಅಮ್ಮನ ಕಣ್ಣು ತಪ್ಪಿಸಿ ಚಿನ್ನುವಿನ ಹೊದಿಕೆಯೊಳಗೆ ತೂರಿಕೊಂಡು ಪುರುಗುಡುತ್ತ ಬೆಚ್ಚಗೆ ಮಲಗುತ್ತಿದ್ದಳು ಮೀನು, ಬೆಳಗ್ಗೆ ಅಮ್ಮನಿಗೆ ಗೊತ್ತಾಗದಂತೆ ಚಿನ್ನುವಿನ ಪಕ್ಕದಿಂದ ಜಾರಿಕೊಳ್ಳುತ್ತಿದ್ದಳು. ಇವರ ಕಣ್ಣು ಮುಚ್ಚಾಲೆಯಾಟವನ್ನು ಅಮ್ಮ ನೋಡಿಯೂ ನೋಡದಂತಿರುತ್ತಿದ್ದಳು.

ಅಲ್ಲಿಯವರೆಗೆ ದಿನಾ ಸಂಜೆಹೊತ್ತು ಅಜ್ಜನಿಗೆ ರಾಮಾಯಣ, ಭಾಗವತ, ಜೈಮಿನಿ ಭಾರತ ಓದಿಹೇಳುತ್ತ ಹೆಚ್ಚಿನ ಸಮಯ ಕಳೆಯುತ್ತಿದ್ದ ಚಿನ್ನು ಈಗ ಹೆಚ್ಚಿನ ಸಮಯ ಮೀನುವಿನ ಜತೆ ಆಟದಲ್ಲಿ ಕಳೆಯುತ್ತಿದ್ದಳು. ಅಜ್ಜ ಕಟ್ಟಿಟ್ಟಿದ್ದ ಕನ್ನಡಕವನ್ನು ಮತ್ತೆ ಹಾಕಿಕೊಂಡು ಸಂಜೆಹೊತ್ತು ತಾವೇ ಏನಾದರೂ ಓದುತ್ತ ಕೂರುವುದು ಆರಂಭವಾಯಿತು.

ಚಿನ್ನು ಮೀನು ಹೋದಲ್ಲೆಲ್ಲ ಹೋಗುತ್ತಿದ್ದಳು. ಚಿಟ್ಟೆ ಹಿಡಿಯಲು ನೋಟ ಹಾಕುತ್ತ ಮೀನು ಕೂತಿದ್ದರೆ, ಚಿನ್ನು ಅಲ್ಲಿ ಹೋಗುವಳು. ಅವಳು ಮೆಲ್ಲಮೆಲ್ಲಗೆ ಹೆಜ್ಜೆಯಿಟ್ಟಲ್ಲಿ ಹುಲ್ಲುಗಳು ಮೆಲ್ಲಗೆ ಅಲುಗಾಡಿರೂ ಚಿಟ್ಟೆಗಳಿಗೆ ಯಾರೋ ಬಂದರು ಅಂತ ಗೊತ್ತಾಗಿ ಅಲ್ಲಿಂದ ಎದ್ದು ಹಾರುವವು. ಅಷ್ಟು ಹೊತ್ತು ಸಮಯ ಕಾಯುತ್ತ ನೋಟ ಹಾಕುತ್ತಿದ್ದ ಮೀನುಗೆ ನಿರಾಸೆ. ಮತ್ತೆ ಎದ್ದು ಬಂದು ಪಕ್ಕಕ್ಕೆ ನಿಂದು ಚಿನ್ನುವಿನ ಕಾಲಿಗೆ ಜೋರಾಗಿ ತಲೆ ಉಜ್ಜುತ್ತ ತನ್ನ ಭಾಷೆಯಲ್ಲಿ ಬೈದುಕೊಳ್ಳುತ್ತ ಏನೋ ಹೇಳುತ್ತಿದ್ದಳು. ಚಿನ್ನು ಇನ್ನೆಲ್ಲಿ ಚಿಟ್ಟೆ ಕೂತಿದೆ ಅಂತ ಹುಡುಕುತ್ತಿದ್ದಳು.

ಪ್ರತಿ ವರ್ಷ ಮನೆಯ ಕೆಳಗೆ ಹರಿಯುವ ಪುಟ್ಟ ತೋಡಿಗೆ ಕಟ್ಟ ಕಟ್ಟುತ್ತಾರೆ. ಆ ನೀರಿನಿಂದ ಚಳಿಗಾಲದಲ್ಲಿ ಮತ್ತು ಬೇಸಗೆಯಲ್ಲಿ ತೋಟಕ್ಕೆ ನೀರು ಹಾಯಿಸುತ್ತಾರೆ. ಕಟ್ಟದಲ್ಲಿ ನೀರು ತುಂಬಿದಾಗ ಅದು ಒಂದು ಪುಟ್ಟ ತೂಬಿನ ಮೂಲಕ ಹರಿಯುತ್ತ ಮತ್ತೆ ತೋಡಿಗೆ ಸೇರಿ ತೋಡು ಮುಂದೆ ಹರಿಯುತ್ತದೆ. ಈ ತೋಡಿನ ಆರಂಭದ ಜಾಗದಲ್ಲಿ ಚಿನ್ನು ಯಾವಾಗಲೂ ಹೋಗಿ ಕುಳಿತು ನೀರಿನಲ್ಲಿ ಆಡುತ್ತಿರುತ್ತಾಳೆ.

ಅಲ್ಲಿ ಓಡಾಡುವ ಪುಟ್ಟ ಪುಟ್ಟ ಮೀನುಗಳನ್ನು ನೋಡುವುದು, ಅವಕ್ಕೆ ಅಕ್ಕಿಕಾಳು, ಅನ್ನ, ಅರಳು ಇತ್ಯಾದಿ ಹಾಕುವುದು, ಪಾದದಿಂದ ಸ್ವಲ್ಪವೇ ಮೇಲಕ್ಕೆ ಬರುವ ನೀರಿನಲ್ಲಿ ನಿಂತು, ಮೀನುಗಳಿಂದ ಕಾಲಿಗೆ ಕಚ್ಚಿಸಿಕೊಳ್ಳುವುದು, ಕಚಗುಳಿ ಅನುಭವಿಸುವುದು ಚಿನ್ನುಗೆ ಸಂತೋಷ ಕೊಡುವ ದಿನನಿತ್ಯದ ಆಟ. ಅದರಲ್ಲೂ ಒಂದು ಪುಟ್ಟ ಮರಿಮೀನು, ಸಣ್ಣ ಕೆಂಪು ಚುಕ್ಕೆಯಿರುವ ಮೀನುಮರಿ ಭಯಂಕರ ತುಂಟ. ಚಿನ್ನುವಿನ ಬಿಳೀ ಕಾಲಿಗೆ ಸಿಕ್ಕಾಪಟ್ಟೆ ಕಚ್ಚಿ ಕಚ್ಚಿ ಕಚಗುಳಿಯಿಡುತ್ತದೆ. ಈ ತುಂಟಮೀನನ್ನೂ ಸೇರಿಸಿದಂತೆ ಪುಟ್ಟ ಪುಟ್ಟ ಮೀನುಮರಿಗಳನ್ನು ಕೈಯಲ್ಲೇ ಅಟ್ಟಿಸಿ ಅಟ್ಟಿಸಿ ನೀರು ಸ್ವಲ್ಪ ಕಡಿಮೆಯಿದ್ದಲ್ಲಿಗೆ ತಂದು, ಅವುಗಳ ಸುತ್ತ ಹೊಯಿಗೆಯ ಕೋಟೆ ಕಟ್ಟಿ ಕೂಡಿಹಾಕಿ ಅವುಗಳ ಓಡಾಟ ಹತ್ತಿರದಿಂದ ನೋಡಿ ಮಜಾ ಮಾಡುವುದು ಚಿನ್ನುಗೆ ಅಭ್ಯಾಸ.

ಮೀನು ಬಂದ ಮೇಲೆ ಚಿನ್ನು ಅವಳನ್ನೂ ಜತೆಗೆ ಕರೆದುಕೊಂಡು ಹೋಗತೊಡಗಿದಳು. ಚಿನ್ನು ನೀರಿನಲ್ಲಿ ಆಡುತ್ತಿದ್ದರೆ ಮೊದಮೊದಲು ನೀರಿಗೆ ಹೆದರಿ ದೂರ ನಿಂತು ನೋಡುತ್ತಿದ್ದಳು ಮೀನು. ನಿಧನಿಧಾನವಾಗಿ ತಾನೂ ನೀರಿಗಿಳಿಯದೆ, ಕೈಕಾಲು ಒದ್ದೆ ಮಾಡಿಕೊಳ್ಳದೆ ಗಮ್ಮತ್ತು ಮಾಡತೊಡಗಿದಳು. ಚಿನ್ನು ಹೊಯಿಗೆ ಕೋಟೆ ಕಟ್ಟಿ ಮೀನುಮರಿಗಳನ್ನು ಕೂಡಿಹಾಕುತ್ತ ಸಂಭ್ರಮಿಸಿದರೆ, ಮೀನು ಅದರ ಹತ್ತಿರ ನೀರಿಲ್ಲದ ಜಾಗದಲ್ಲಿ ಕುಳಿತು ಮೀನುಗಳ ಓಡಾಟಕ್ಕೆ ಸರಿಯಾಗಿ ತಾನೂ ತಲೆ ಕುಣಿಸುತ್ತ ಕೂರುತ್ತಿದ್ದಳು.

***

ಹೀಗೇ ಒಂದು ದಿನ ಚಿನ್ನು ಮತ್ತು ಮೀನು ನೀರಲ್ಲಿ ಆಡುತ್ತಿದ್ದರು. ಹೊಯಿಗೆಕೋಟೆಯೊಳಗೆ ನಾಲ್ಕೈದು ಮೀನು ಮರಿಗಳನ್ನು ಕೂಡಿಹಾಕಿ ಗಮ್ಮತ್ತುಮಾಡುತ್ತಿದ್ದಳು ಚಿನ್ನು. ಮೀನು ಎಂದಿನಂತೆ ಬದಿಯಲ್ಲಿ ಕುಳಿತು ಮೀನುಗಳಾಟವನ್ನು ಗಮನವಿಟ್ಟು ನೋಡುತ್ತಿದ್ದಳು. ಅವಾಗ ಅಕಸ್ಮಾತ್ತಾಗಿ ಆ ಕೆಂಪು ಚುಕ್ಕೆಯ ತುಂಟ ಮೀನಿನ ಮರಿ ಮರಳುಕೋಟೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹಾರಿ, ನೀರಿಲ್ಲದಲ್ಲಿ ಹೊಯಿಗೆಕಲ್ಲುಗಳ ಮೇಲೆ ಬಿದ್ದಿತು. ವಿಲವಿಲನೆ ಒದ್ದಾಡಿ ಎತ್ತರೆತ್ತರಕ್ಕೆ ಹಾರಿತು.

ಅಷ್ಟೇ ಅನಿರೀಕ್ಷಿತವಾಗಿ ಟಪಕ್ಕನೆ ಕೂತಲ್ಲಿಂದ ಜಿಗಿದ ಮೀನು ಆ ಮೀನುಮರಿ ಹಾರಿದಂತೆಲ್ಲ ಹಾರಿ, ಕೊನೆಗೂ ಅದನ್ನು ಹಿಡಿದು, ಹೊಡೆದು, ಬೀಳಿಸಿ, ಕಚ್ಚಿ, ಬಾಯಿಯೊಳಗೆ ಹಾಕಿಕೊಂಡು ಮುರ್ರ್... ಅಂತ ಶಬ್ದ ಮಾಡುತ್ತ, ತುಂಟು ಮೀನಿನ ಮರಿಯನ್ನು ತಿಂದೇ ಬಿಟ್ಟಳು. ಚಿನ್ನುಗೆ ಏನೂ ಯೋಚಿಸುವ ಅವಕಾಶವೇ ಕೊಡದೆ ನಡೆದ ಈ ಎಲ್ಲ ಘಟನೆಗಳನ್ನೆಲ್ಲಾ ನೋಡುತ್ತ ಏನು ಮಾಡಬೇಕೋ ತಿಳಿಯದೆ ಚಿನ್ನು ಸುಮ್ಮನೆ ಕೂತುಬಿಟ್ಳು.

ಮೀನು ತಿಂದಾದಮೇಲೆ ಮೀನು ಹೊಯಿಗೆ ಮೇಲೆ ಕುಕ್ಕರಗಾಲಲ್ಲಿ ಕುಳಿತು ಒಂದು ಕೈ ನೆಲಕ್ಕೂರಿ ಕಣ್ಣುಮುಚ್ಚಿ ಇನ್ನೊಂದು ಕೈಯಲ್ಲಿ ಸುಖವಾಗಿ ಮುಖ ಉಜ್ಜಿಕೊಳ್ಳುತ್ತ ಕೈಯನ್ನು ನೆಕ್ಕತೊಡಗಿದಳು. ಹೀಗೆ ಮೀನು ದಿವ್ಯ ಆನಂದವನ್ನು ಅನುಭವಿಸುತ್ತಿದ್ದರೆ, ಅದೇನೋ ತಪ್ಪುಮಾಡಿದ ಭಾವ ಚಿನ್ನುವಿನಲ್ಲಿ. ಛೆ, ತಾನು ಹೊಯಿಗೆ ಕೋಟೆ ಕಟ್ಟಿ ಆ ತುಂಟುಮೀನನ್ನು ಕೂಡುಹಾಕದಿದ್ದರೆ ಮೀನುಗೆ ಅದನ್ನು ಹಿಡಿದು ತಿನ್ನಲು ಸಿಗುತ್ತಲೇ ಇರಲಿಲ್ಲ, ತಾನು ಹೊಯಿಗೆಕೋಟೆ ಕಟ್ಟಿ ಆಡಬಾರದಿತ್ತೇನೋ ಅನ್ನುವ ಸಂಶಯ. ಜತೆಗೆ ಆ ಪುಟ್ಟ ಮೀನಿನ ಮರಿಗೆ ಅದೆಷ್ಟು ನೋವಾಯಿತೋ, ಕೊಂದು ತಿಂದೇ ಬಿಟ್ಟಳು ರಾಕ್ಷಸಿ ಅಂತ ಮೀನುಳ ಮೇಲೆ ಕೋಪ. ಕೆಂಪು ಚುಕ್ಕೆಯ ತುಂಟು ಮೀನುಮರಿಯಿಂದ ಕಚ್ಚಿಸಿಕೊಳ್ಳುವುದು ಇನ್ನೆಂದಿಗೂ ಇಲ್ಲ ಅಂತ ಸಂಕಟ. ಅಜ್ಜನಿಗೆ ಇದೆಲ್ಲವನ್ನ ಹೇಳಿದರೆ, ಅಜ್ಜ ನಕ್ಕುಬಿಟ್ಟರು.

ಆದರೆ ಎಷ್ಟು ಬೈದುಕೊಂಡರೂ ತುಂಟು ಮೀನಿನ ಮರಿಯ ಮೇಲೆ ಎಷ್ಟು ಪ್ರೀತಿ ಇತ್ತೋ ಮೀನುಳ ಮೇಲೆ ಅದಕ್ಕಿಂತ ಒಂದು ತೊಲ ಹೆಚ್ಚೇ ಪ್ರೀತಿ ಚಿನ್ನುಗೆ. ಎಷ್ಟಂದರೂ ನನ್ನ ಮೀನು ತಾನೆ ಅಂತ.

ಮರುದಿನ ಚಿನ್ನು ಸುಮ್ಮನೆ ಮನೆಯಲ್ಲಿ ಕುಳಿತುಕೊಂಡಿದ್ದರೆ, ಮೀನು ಪಕ್ಕಕ್ಕೆ ಬಂದು, ಮಡಿಲೇರಿ ನಿಂದು ಅವಳ ಗದ್ದಕ್ಕೆ ತನ್ನ ಮುಖವನ್ನು ತಾಡಿಸುತ್ತ ನೀರಲ್ಲಿ ಆಡಲು ಹೋಗೋಣ ಅಂತ ಹಠ ಮಾಡಿದಳು. ಮೀನಿನ ರುಚಿ ಸಿಕ್ಕಿದೆ ನಿಂಗೆ ರಕ್ಕಸಿ ಅಂತ ಬೈದಳು ಚಿನ್ನು. ಹಾಗೇ ಕೊನೆಗೆ ಮೀನುನ ರಗಳೆ ತಡೆಯದೆ ನೀರಲ್ಲಾಡಲು ಹೋದಳು ಚಿನ್ನು. ಅಲ್ಲಿ ಹೋಗಿ ನೀರಲ್ಲಿ ಕಾಲು ಮುಳುಗಿಸಿ ನಿಂತಳು ಚಿನ್ನು, ಕಾಲಿಗೆ ಮೀನು ಕಚ್ಚತೊಡಗಿದವು. ಹಾಗೇ ನೋಡುತ್ತಾಳೆ, ಬೇರೆಲ್ಲಾ ಮೀನುಗಳ ಜತೆ ಕೆಂಪು ಚುಕ್ಕೆಯ ಎರಡು ಮೀನುಗಳಿವೆ..! ಯಾಕೋ ಚಿನ್ನುಗೆ ತುಂಬ ಸಮಾಧಾನವಾಯಿತು. ಅಜ್ಜನಿಗೆ ಹೇಳಿದರೆ ಅಜ್ಜ ಆ ಸತ್ ಹೋದ ಮೀನು ಸ್ವರ್ಗದಿಂದ ಇನ್ನೆರಡ್ ಮೀನ್ ಕಳ್ಸಿದೆ ಅಂತ ವೀಳ್ಯದೆಲೆ ತಿಂದು ಕೆಂಪಾದ ಬೊಚ್ಚು ಬಾಯಿ ಬಿಟ್ಟು ನಕ್ಕರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X