ಹೆಂಡತಿಯನ್ನು ಪಳಗಿಸುವುದು ಹೇಗೆ ಗೊತ್ತಾ?


ಆಗಿನ ಅಜ್ಜಿ ಕತೆಗಳಲ್ಲಿ ಎಂಥಾ ಮುದವಿತ್ತು ಅಲ್ವಾ? ಅವೆಲ್ಲವೂ ಈಗ ಕೇವಲ ನೆನಪುಗಳು. ಮನೆಯಂಗಳಕ್ಕೆ ಟೀವಿಗಳು ವಕ್ಕರಿಸಿದ ಮೇಲೆ, ಕತೆ ಹೇಳಲು ಅಜ್ಜಿಗೆ ಪುರಸೊತ್ತಿಲ್ಲ, ಕತೆಕೇಳಲು ಮಕ್ಕಳಿಗೆ ಆಸಕ್ತಿಯಿಲ್ಲ! ಹೋಗಲಿ ಬಿಡಿ, ಒಂದು ಚೆಂದದ ಮಜಾ ನೀಡೋ ಕತೆಯನ್ನು ನಾವಿಲ್ಲಿ ನೀಡಿದ್ದೇವೆ... ಒಪ್ಪಿಸಿಕೊಳ್ಳಿ -ಸಂಪಾದಕ.

How to tame your wife?ಒಂದು ಊರಿನಲ್ಲಿ ಒಬ್ಬ ಭಟ್ಟನೂ ಅವನ ಹೆಂಡತಿಯೂ ಇದ್ದರು. ಭಟ್ಟನು ಬಹಳ ಬುಧ್ಧಿವಂತನಾಗಿದ್ದನು. ಎಲ್ಲ ತರದ ವಿದ್ಯೆಗಳೂ ಅವನಿಗೆ ಗೊತ್ತಿದ್ದವು. ಆದರೆ ಅವನಿಗೆ ಇರುವೆ ಸಹಿತವಾಗಿ ಎಂಬತ್ತು ಕೋಟಿ ಪ್ರಾಣಿಗಳೂ ಮಾತಾಡುವುದು ಮಾತ್ರ ತನಗೆ ತಿಳಿಯುವುದಿಲ್ಲ ವೆಂದು ಬಹಳ ಬೇಸರವಾಯಿತು. ಅವನು ಆ ವಿದ್ಯೆ ತನಗೆ ತಿಳಿಯದ ಹೊರತು ಅನ್ನ-ನೀರುಗಳನ್ನು ಮುಟ್ಟಬಾರದೆಂದು ಮನಸ್ಸಿನಲ್ಲಿ ಸಂಕಲ್ಪ ಮಾಡಿದನು.

ಅದೇ ವಿಚಾರದಿಂದ ಅವನು ಅರಣ್ಯಕ್ಕೆ ಹೋಗಿ ಕೂತುಬಿಟ್ಟನು. ದೇವರ ಧ್ಯಾನ ಮಾಡುತ್ತ ಹೀಗೆಯೇ 15 ದಿನ ಉಳಿದ ಮೇಲೆ ಒಂದು ದಿನ ಪರಮಾತ್ಮನು ಒಬ್ಬ ಮುದಿ ಬ್ರಾಹ್ಮಣನ ರೂಪದಿಂದ ಅಲ್ಲಿಗೆ ಬಂದನು. ಅವನ ಹತ್ತಿರ ‘ನೀನು ಇಷ್ಟು ದಿವಸ ನೀರು-ಆಹಾರ ಎಲ್ಲಾ ಬಿಟ್ಟು ಕೂರುವುದಕ್ಕೆ ಕಾರಣವೇನು ?’ ಅಂತ ಕೇಳಿದನು.

ಬ್ರಾಹ್ಮ ಣನು, ‘ದೇವರೇ, ನಿನ್ನ ಅನುಗ್ರಹದಿಂದ ನನಗೆ ಎಲ್ಲಾ ವಿದ್ಯೆಗಳು ಸಂಪೂರ್ಣವಾಗಿ ಬರುತ್ತವೆ. ಆದರೆ ಈ ಹಕ್ಕಿ ಪಕ್ಕಿ ಕ್ರಿಮಿ ಕೀಟಾದಿ ಸಕಲ ಪ್ರಾಣಿಗಳೂ ಮಾತಾಡುವ ಭಾಷೆಗಳು ನನಗೆ ತಿಳಿಯುವುದಿಲ್ಲ . ಅದರಿಂದ ನನಗೆ ಜೀವನವೇ ಬೇಡವಾಗಿದೆ. ಏನು ಪ್ರಯೋಜನ ಅಂತ ನಾನು ಬದುಕಬೇಕು. ಆ ವಿದ್ಯೆಯನ್ನು ತಿಳಿಯುವ ಶಕ್ತಿ ಯನ್ನು ನಿನ್ನ ಹತ್ತಿರ ಪಡೆದು ಆಹಾರ ತೆಗೆದುಕೊಳ್ಳಬೇಕು ಎಂದು ಹೀಗೆ ಕೂತಿದ್ದೇನೆ’ ಅಂತ ಹೇಳಿದನು.

ಮುದಿ ಬ್ರಾಹ್ಮ ಣನು ‘ನೀನು ಈ ಹಕ್ಕಿ ಪಕ್ಕಿಗಳ ಮಾತನ್ನು ತಿಳಿಯುವ ವಿದ್ಯೆ ಬಂದರೆ ಬೇರೆಯವರಿಗೆ ತಿಳಿಸದೆ ನಿನ್ನಲ್ಲೇ ಇಟ್ಟು ಕೊಳ್ಳುವೆಯೋ ?’ ಅಂತ ಕೇಳಿದನು. ಭಟ್ಟನು ‘ಹೌದು, ಪರಮಾತ್ಮನ ಅನುಗ್ರಹದಿಂದ ಆ ವಿದ್ಯೆಯನ್ನು ಯಾರಿಗೂ ತಿಳಿಸದೆ ನನ್ನಲ್ಲಿಯೇ ಇಟ್ಟುಕೊಳ್ಳುತ್ತೇನೆ’ ಅಂದನು.

ಪರಮಾತ್ಮ ನು ‘ನಿನಗೆ ಹಕ್ಕಿ ಪಕ್ಕಿಗಳೆಲ್ಲಾ ಮಾತಾಡುವ ಮಾತು ತಿಳಿಯುವಂತೆ ಅನುಗ್ರಹ ಮಾಡುತ್ತೇನೆ. ಆದರೆ ಆ ಸಂಗತಿಯನ್ನು ನೀನು ಯಾವ ದಿವಸ ಬೇರೆಯವರಿಗೆ ಹೇಳುವೆಯೋ ಆಗಲೇ ನಿನ್ನ ಮರಣ’ ಅಂತ ಹೇಳಿ ಅಂತರ್ಧಾನ ಹೊಂದಿದನು.

ಭಟ್ಟನು ಸಂತೋಷದಿಂದ ಮನೆಗೆ ಬಂದನು. ಗಂಡ-ಹೆಂಡತಿ ಸುಖದಿಂದ ಮನೆಯಲ್ಲಿ ಉಳಿದರು. ಒಂದು ದಿನ ಅವರು ಮಂಚದ ಮೇಲೆ ಹಾಸಿಗೆಯಲ್ಲಿ ಮಲಗಿರುವಾಗ ಅವರ ತಲೆಯ ಬದಿಯಲ್ಲಿ ಇರುವೆಗಳ ಒಂದು ದಂಡೇ ಹರಿದು ಹೋಗುತ್ತಿತ್ತು. ಇರುವೆಗಳು ತಮ್ಮ ತಮ್ಮೊಳಗೆ ಹೇಳಾಡಿಕೊಳ್ಳುತ್ತಿದ್ದವು. ‘ಅವರು ಗಂಡ-ಹೆಂಡತಿ ಹಾಸಿಗೆಯಲ್ಲಿ ಸುಖದಲ್ಲಿದ್ದಾರೆ. ನೀವು ಯಾರೂ ಅವರನ್ನು ಕಚ್ಚಬೇಡಿ’. ಭಟ್ಟನು ಎಚ್ಚರವಾಗಿಯೇ ಇದ್ದನು. ಇರುವೆಗಳ ಮಾತು ಕೇಳಿ ಅವನು ನಗೆಯಾಡಿಬಿಟ್ಟನು. ಅವನ ಹೆಂಡತಿಯೂ ಎಚ್ಚರವಾಗಿಯೇ ಇದ್ದಳು. ‘ಯಾಕೆ ನಗೆಯಾಡಿದಿರಿ ? ’ ಅಂತ ಗಂಡನನ್ನು ಕೇಳಿದಳು.

ಅವನು ‘ಏನಿಲ್ಲ’ ಅಂತ ಹೇಳಿದನು. ಅವಳು ಮತ್ತೂ ‘ಯಾಕೆ ನಗೆಯಾಡಿದಿರಿ ? ’ ನನಗೆ ಹೇಳಲೇಬೇಕು ಅಂತ ವರಾತ ಮಾಡಿದಳು. ಅವನು ‘ಇಂದು ಮಧ್ಯಾಹ್ನದ ಮೇಲೆ ನಾನು ನನ್ನ ಗೆಳೆಯರ ಸಂಗಡ ಪೇಟೆಗೆ ಹೋಗಿದ್ದೆ. ಅವರು ಹೇಳಾಡಿದ ಮಾತನ್ನು ನೆನಪು ಮಾಡಿಕೊಂಡು ನನಗೆ ನಗು ಬಂತು’ ಅಂತ ಹೇಳಿದನು. ಅವಳು ‘ಅದು ಸುಳ್ಳು. ನೀವು ನನ್ನದೇ ಏನೋ ಕಳಪೆ (ದೋಷ) ಯನ್ನು ತಿಳಿದುಕೊಂಡು ನಗೆಯಾಡಿರಬೇಕು. ನೀವು ಯಾಕೆ ನಗೆಯಾಡಿದಿರೆಂದು ಹೇಳದಿದ್ದರೆ ನಾನು ಪ್ರಾಣ ಕಳೆದುಕೊಳ್ಳುತ್ತೇನೆ’ ಅಂತ ಅವನ ಹತ್ತಿರ ಹೇಳಿದಳು. ಬೆಳಗಾಗುವವರೆಗೂ ಗಂಡನಿಗೂ ಹೆಂಡತಿಗೂ ವಾದಾಂಕವೇ ಆಯಿತು.

ಅವನು ಎಷ್ಟು ಹೇಳಿದರೂ ಕಾರಣವನ್ನು ಹೇಳಲಿಲ್ಲ . ಅವಳು ‘ಹೇಳದಿದ್ದರೆ ನನ್ನ ನಾಲಿಗೆಯನ್ನು ಹಿಡಿದುಕೊಂಡು ಪ್ರಾಣ ಕಳೆದುಕೊಳ್ಳುತ್ತೇನೆ’ ಅಂದರೂ ಹೇಳಲಿಲ್ಲ. ಅವನು ಬೆಳಿಗ್ಗೆ ಎದ್ದವನು ಒಂದು ದಿಕ್ಕನ್ನು ಹಿಡಿದುಕೊಂಡು ಹೋದನು. ಅಲ್ಲೊಂದು ಕಿರುಹುಲ್ಲಿನ ಜಡ್ಡಿ ಬೆಳೆದ ಹಾಳು ಜಾಗವಿತ್ತು. ಅಲ್ಲಿ ಒಂದು ಗಂಡು ಕುರಿಯೂ ಹೆಣ್ಣು ಕುರಿಯೂ ರಾತ್ರಿ ಮೇಯುತ್ತಿದ್ದವು. ಅಲ್ಲೇ ಸಮೀಪದಲ್ಲಿ ಒಂದು ಹಾಳು ಬಾವಿಯಿತ್ತು.

ಅವುಗಳಿಗೆ ಆ ಹುಲ್ಲಿನಿಂದ ಹೊಟ್ಟೆ ತುಂಬಲಿಲ್ಲ. ಬೆಳಿಗ್ಗೆ ಒಂದು ತಾಸು ಹೊತ್ತು ಬಂದರೂ ಅವು ಅಲ್ಲೇ ಇದ್ದವು. ಆಗ ಹೆಣ್ಣು ಕುರಿ ಹೇಳಿತು ‘ಇಲ್ಲಿ ಎಷ್ಟು ಹೊತ್ತು ಮೆಂದರೂ ನಮಗೆ ಹೊಟ್ಟೆ ತುಂಬುವುದಿಲ್ಲ . ಇಲ್ಲೇ ಹಾಳು ಬಾವಿಯಲ್ಲಿ ದೊಡ್ಡ ಹುಲ್ಲು ಬೆಳೆದಿದೆ. ನೀನು ಅದರಲ್ಲಿ ಕೆಳಗೆ ಇಳಿದು ಆ ಹುಲ್ಲನ್ನೆಲ್ಲ ಕಿತ್ತು ಮಡಚಿ ಮೇಲೆ ಕೊಡು. ನಾವು ಅದನ್ನೆಲ್ಲ ರಾಶಿ ಮಾಡಿಟ್ಟುಕೊಂಡು, ಮೆಂದುಕೊಂಡು ಹೊಟ್ಟೆ ತುಂಬಿಸಿಕೊಂಡು ಅಡವಿಯನ್ನು ಸೇರೋಣ’ ಅಂತ ಹೇಳಿತು.

ಆಗ ಗಂಡು ಕುರಿ ಹೆಣ್ಣು ಕುರಿಯ ಹತ್ತಿರ ತಿರುಗಿ ಹೇಳಿತು ‘ಎಲಾ ಮರುಳು ಹೆಣ್ಣೇ , ನೀವು ಎಷ್ಟೆಂದರೂ ಹೆಣ್ಣುಗಳು. ಹೆಣ್ಣುಗಳ ಮಾತನ್ನು ಕೇಳಿಕೊಂಡು ಅದರಂತೆ ನಡೆದರೆ ಗಂಡಸರು ಸತ್ತು ಹೋಗುವುದೇ ಗತಿ. ನಾನು ಈ ಬಾವಿಯಲ್ಲಿಳಿದು ಆ ಹುಲ್ಲನ್ನು ತೆಗೆಯುವಾಗ ಬಿದ್ದು ಸತ್ತರೆ ನೀನು ಮತ್ತೆ ಬೇರೆ ಗಂಡನನ್ನು ಮಾಡಿಕೊಳ್ಳುವೆ. ಇಲ್ಲಿ ಒಬ್ಬ ಭಟ್ಟ ಬಂದಿದ್ದಾ ನೆ ನೋಡು. ಅವನು ತಾನು ಹಕ್ಕಿ ಪಕ್ಕಿಗಳ ಭಾಷೆಯನ್ನು ಬಲ್ಲೆನೆಂದು ಹೆಂಡತಿಗೆ ಹೇಳಿದರೆ ಸಾಯುತ್ತಾನೆ. ಹೇಳದಿದ್ದರೆ ತಾನು ಸಾಯುತ್ತೇನೆ ಅಂತ ಅವಳು ಹೆದರಿಕೆ ಹಾಕಿದ್ದಾಳೆ. ಅದರಿಂದ ಹುಚ್ಚು ಹಿಡಿದ ಹಾಗೆ ಆಗಿ ಅವನು ಇಲ್ಲಿ ತಿರುಗುತ್ತಾ ಬಂದಿದ್ದಾನೆ. ಅವನ ಹಾಗೆ ನಾನು ಹೆಡ್ಡನಲ್ಲ. ಹೆಂಡತಿ ಸಾಯುವಳು ಎಂಬ ಹೆದರಿಕೆಯೂ ಅವನಿಗುಂಟು’ ಅಂದಿತು.

ಹೆಣ್ಣು ಕುರಿ ‘ಹಾಗಾದರೆ ಈ ಪ್ರಸಂಗದಲ್ಲಿ ಅವನು ಏನು ಮಾಡಬೇಕು ?’ ಅಂತ ಕೇಳಿತು. ‘‘ಏನಿಲ್ಲ . ಅವನು ತನ್ನ ಮನೆಗೆ ತಿರುಗಿ ಹೋಗಬೇಕು. ಹೋದ ಕೂಡಲೇ ಅವನ ಹೆಂಡತಿ ತಾನು ನೀನು ನಕ್ಕ ಕಾರಣವನ್ನು ಹೇಳದಿದ್ದರೆ, ನಿನ್ನ ಮುಂದೆ ಈಗಿಂದೀಗ ಜೀವ ಕೊಡುತ್ತೇನೆ ಅಂತ ಹೇಳುತ್ತಾಳೆ. ಆದರೂ ಅವನು ಹೇಳಬಾರದು. ನೀನು ಪ್ರಾಣ ಕೊಡುವುದಾದರೆ ನನ್ನ ಕೈಯಿಂದಲೇ ನಿನ್ನ ಜೀವ ಹೋಗಲಿ ಅಂತ ಹೇಳಿ, ಅವಳ ಸೊಂಟಕ್ಕೆ ಹಗ್ಗ ಹಾಕಿ ಅವಳನ್ನು ಬಾವಿಯಲ್ಲಿ ಬಿಡಬೇಕು. ಅವಳನ್ನು ನೀರಿನಲ್ಲಿ ಮುಳುಗಿಸಿ ಏಳಿಸಬೇಕು. ಆಗ ದಮ್ಮಯ್ಯ, ನೀವು ಹೇಳಿದ ಹಾಗೆಯೇ ಕೇಳುತ್ತೇನೆ. ನೀವು ನಗೆಯಾಡಿದರೂ ಏನು ಮಾಡಿದರೂ ನಿಮ್ಮ ಹತ್ತಿರ ಉತ್ತರ ಕೊಡಿ ಅಂತ ಹಟ ಮಾಡುವುದಿಲ್ಲ ದಮ್ಮಯ್ಯ. ನನ್ನನ್ನು ಮೇಲೆ ಎತ್ತಿ ಬಿಡಿರಿ’ ಅಂತ ಹೇಳುತ್ತಾಳೆ. ಅಷ್ಟು ಹೇಳದ ಹೊರತು ಅವಳನ್ನು ಮೇಲೆ ಏಳಿಸಬಾರದು’’ ಅಂತ ಹೇಳಿತು.

ಆ ಮಾತನ್ನು ಕೇಳಿಸಿಕೊಂಡ ಭಟ್ಟನ ಮನೆಗೆ ಬಂದನು. ಅವನು ಗಂಡು ಕುರಿ ಹೇಳಿದ ಹಾಗೆಯೇ ಅವಳು ನಗೆಯಾಡಿದರ ಕಾರಣ ಹೇಳದಿದ್ದರೆ, ಜೀವ ತೆಗೆದುಕೊಳ್ಳುತ್ತೇನೆ ಅಂತ ಹೇಳಿದಳು. ಅವನು ಅದು ಹೇಳಿದ ಹಾಗೆಯೇ ಅವಳನ್ನು ಬಾವಿಯಲ್ಲಿ ಮುಳುಗಿಸಿ ಏಳಿಸಿ ಅವಳಿಗೆ ಸಾಕುಬೇಕಾಗುವ ಹಾಗೆ ಮಾಡಿದನು. ಅವಳು ‘ದಮ್ಮಯ್ಯ ನನ್ನನ್ನು ಹೀಗೆ ಸಾಯಿಸಬೇಡಿ, ನೀವು ಹೇಳಿದ ಹಾಗೆ ಕೇಳಿಕೊಂಡು ಉಳಿಯುತ್ತೇನೆ. ನೀವು ಏನು ಮಾಡಿದರೂ ಯಾಕೆ ಅಂತ ಕೇಳುವುದಿಲ್ಲ’ ಅಂತ ಹೇಳಿದಳು.

ಕಡೆಗೆ ಅವನು ಅವಳನ್ನು ಮೇಲಕ್ಕೆ ಎಳೆದುಕೊಂಡು ಹಗ್ಗ ಬಿಡಿಸಿದನು. ಕಡೆಗೆ ಗಂಡ ಹೇಳಿದ ಹಾಗೆ ಅವಳು ಕೇಳಿಕೊಂಡು ಅವನ ಸಂಗಡ ಸುಖದಿಂದ ಉಳಿದಳು.

(ಜನಪದ ಕಣಜದಿಂದ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+