ಕವಿತಾ : ನನ್ನ ಸ್ಟೈಲೇ ಬೇರೆ ಅದ!

* ಡಾ.ಕೆ.ಎನ್. ದೊಡ್ಡಮನಿ, ಬೆಳಗಾವಿ
ಅಂದು:
ಅವ್ವ ಹಾಕಿದ ಕೈಕಾಲಗಡಗ
ಬಿಚ್ಚಿ ಬಿದ್ದರೂ ಹುಡುಕಿ ತಂದು
ಬಿಗಿಯಾಗಿಸಿಕೊಂಡು ಹೆಜ್ಜೆ ಹಾಕುತಿದ್ದೆ,
ಎಲ್ಲರಿಗೂ ಗುರುತಾಗಲೆಂದು.
ಅಜ್ಜಿ ಕಟ್ಟಿದ ಉಡದಾರ
ಕೊಳೆತು ಹರಿದು ಹೋದರೂ
ಹೊಸದಾರ ಕಟ್ಟಿಸಿಕೊಂಡು
ನಾಡಿ ಇಲ್ಲದ ಚಡ್ಡಿ ಸಿಗಿಸುತಿದ್ದೆ.
ಎಲ್ಲಮ್ಮನ ಜಾತ್ರೆಯಲಿ ತಂದ
ಕೋರೆಹಲ್ಲಿನ ಬಿಳಿತಾಯ್ತದ
ಕೊರಳಿನ ಕರಿದಾರ ಬಾಯಲ್ಲಿ ನೆನೆದರೂ
ಹನುಮಂತನ ಹೊಸ ತಾಯ್ತ ಕಟ್ಟಿ
ಕೊರಳುಬ್ಬಿಸಿ ತಿರುಗುತಿದ್ದೆ
ಯಾವ ದೆವ್ವ ಏನೂ ಮಾಡುವುದಿಲ್ಲ ಎಂದು!
ಇಂದು:
ನಾನು ಸುಧಾರಿಸಿದ್ದೇನೆ.
ಅವಾವೂ ಇಲ್ಲ, ಎಲ್ಲವೂ ಕಳಚಿ ಬಿದ್ದಿವಿಯೋ
ಕಳೆದು ಹೋಗಿವಿಯೋ ನೆನಪಿಲ್ಲ.
ಹಾಗಂತ ಲೊಂಡ ಕೈಯಿ
ಬೋಳ ಸೊಂಟ, ಬತ್ತಲೆ ಕೊರಳಂತ ಭಾವಿಸಬೇಕಾಗಿಲ್ಲ.
ಆಗಲೇ ಹೇಳಿದನಲ್ಲಾ,
ನಾನು ಭಾಳ ಸುಧಾರಿಸಿದ್ದೇನೆಂದು;
ಮಾವ ಕೊಡಿಸಿದ ಕಂಪನಿ ಗಡಿಯಾರ
ಅತ್ತಿ ಕಟ್ಟಿಸಿದ ಬಂಗಾರ ಚೈನ್
ನಡದಾಗ ಬೆಳ್ಳಿ ಉಡದಾರ
ನಾನ ಬೇಡ ಅಂತ ಹೇಳಿದೆ.
ಏಕೆಂದರೆ,
ಮೈತುಂಬಾ ಗುಂಡಿ, ಹುಕ್ಕ ಇರುವ
ಸಫಾರಿ ಡ್ರೆಸ್
ಹೆಂಡತಿಯ ಡ್ಯಾಡಿ ಮಮ್ಮಿನ ಕೊಟ್ಟಾರ!
ಹಿಂಗಾಗಿ, ನನಗ್ಯಾರೂ ಕಾಣಿಸುವುದಿಲ್ಲ
ಕಂಡ್ರೂ ನಾ ನೋಡೋದಿಲ್ಲ.
ನಾನ ಬೇರೆ!
ನನ್ನ ಸ್ಟೈಲೇ ಬೇರೆ!











Click it and Unblock the Notifications