ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲ

By Staff
|
Google Oneindia Kannada News

In search of meaningful poem
ಯಾವ ಪದಗುಚ್ಛಗಳನ್ನು ಕವನ ಎಂದು ಕರೆಯಬಹುದು? ಅರ್ಥಗರ್ಭಿತವಾಗಿರುವುದು, ಅರ್ಥವೇ ಆಗದಿರುವುದು, ಬರೆಯಲೇಬೇಕೆಂದು ಬರೆದದ್ದು, ಸಹಜವಾಗಿ ಹುಟ್ಟಿಕೊಂಡಿದ್ದು, ಸಂವೇದನಾಶೀಲವಾದದ್ದು, ಪ್ರಾಸಬದ್ಧವಾದದ್ದು, ತ್ರಾಸಬದ್ಧವಾದದ್ದು... ಇದಾವುದೂ ಇಲ್ಲದಿದ್ದದ್ದು... ನಿಮಗೆಂಥ ಕವಿತೆ ಬೇಕು?

* ಎಚ್. ಆನಂದರಾಮ ಶಾಸ್ತ್ರೀ

ಅರ್ಥ ಹೊಳೆಯದ ಕವಿತೆ ನನಗೆ ಬೇಕಿಲ್ಲ
ಅರ್ಥಗರ್ಭಿತವಿರಲಿ ಎಷ್ಟೇ ಅದು
ಅರ್ಥೈಸುವೊತ್ತಡಕೆ ಮನ ಮುದುಡಲಲ್ಲ
ಕವಿತೆ ಓದುವುದು ನಾ ಮನ ಅರಳಲೆಂದು.

ಪ್ರೀತಿ ತೋರದ ಕೊಡುಗೆ ನನಗೆ ಬೇಕಿಲ್ಲ
ಧಾರಾಳವಾಗಿರಲಿ ಎಷ್ಟೇ ಅದು
ಪಡೆದು ಅಡಿಯಾಗುವುದು ನನಗಿಷ್ಟವಿಲ್ಲ
ಸರಳ ಪ್ರೇಮದ ಕೊಡುಗೆ ನಾನು ಬಯಸುವುದು.

ಪದವಿಗಂಟಿದ ಘನತೆ ನನಗೆ ಬೇಕಿಲ್ಲ
ಫಲಕಾರಿಯಾಗಿರಲಿ ಎಷ್ಟೇ ಅದು
ಪದವಿ ವ್ಯಕ್ತಿತ್ವವನು ಮರೆಮಾಡಲಲ್ಲ
ಬದಲಾಗಿ ಅದರಿಂದ ತಾ ಮೆರೆಯಲಿಹುದು.

ಶ್ರಮವು ಇಲ್ಲದ ಗಳಿಕೆ ನನಗೆ ಬೇಕಿಲ್ಲ
ಭರ್ಜರಿಯೆ ಆಗಿರಲಿ ಎಷ್ಟೇ ಅದು
ವಿಶ್ರಮಿಸಿ ಜಡವಾಗಿ ಕೊಳೆಯಲೆಂದಲ್ಲ
ದುಡಿದುಂಡು ತೃಪ್ತಿಹೊಂದಲು ನಾನಿರುವುದು.

ನಡತೆ ನೀಡದ ವಿದ್ಯೆ ನನಗೆ ಬೇಕಿಲ್ಲ
ಉನ್ನತವೆ ಆಗಿರಲಿ ಎಷ್ಟೇ ಅದು
ನಡತೆ ತಿಳಿಸದಮೇಲೆ ಅದಕೆ ಬೆಲೆಯಿಲ್ಲ
ಬೆಲೆಯುಳ್ಳ ವಿದ್ಯೆಯದು ನನಗೆ ಬೇಕಿಹುದು.

ಪರರಿಗಾಗದ ಬಾಳು ನನಗೆ ಬೇಕಿಲ್ಲ
ನನಗಾಗಿ "ಸುಖ" ಕೊಡಲಿ ಎಷ್ಟೇ ಅದು
ಪರರಿಗಾಗದ ಬಾಳು ಬಾಳುವೆಯೆ ಅಲ್ಲ
ಬಾಳಲ್ಲದಲ್ಲಿ "ಸುಖ" ಸುಖವು ಹೇಗಹುದು?

ಮುಪ್ಪಿಗಂಟಿಯೆ ಸಾವು ನನಗೆ ಬೇಕಿಲ್ಲ
ಆರಾಮವಾಗಿರಲಿ ಎಷ್ಟೇ ಅದು
ಬದುಕುವುದು ತಡವಾಗಿ ಸಾಯಲೆಂದಲ್ಲ
ಕೃತಕೃತ್ಯನಾಗಿ ದಿನಕೆದುರಾಗಲೆಂದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X